ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿನ ಶಾಲೆಯಲ್ಲಿನ ದಲಿತ ಮಕ್ಕಳು ಬಿಸಿಯೂಟ ಮಾಡಿದ್ದ ತಟ್ಟೆಗಳನ್ನು ತೊಳೆಯಲು ನಿರಾಕರಿಸಿದ್ದ, ಅಡುಗೆ ಸಹಾಯಕಿಯರ ವರ್ತನೆಯಿಂದಾಗಿ, ಮಧ್ಯಾಹ್ನದ ಬಿಸಿಯೂಟವೇ ಸ್ಥಗಿತಗೊಂಡು, ಮಕ್ಕಳು ಉಪ್ಪಿಟ್ಟು ರಾಗೀಗಂಜಿ ಕುಡಿದು ಮನೆಗೆ ಮರಳುತ್ತಿರುವ ಪ್ರಕರಣ ವರದಿಯಾಗಿದೆ. ಯಾದಗಿರಿ
ಮಾಧ್ಯಮಗಳ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ, ತತ್‌ಕ್ಷಣವೇ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಘಟನೆಯ ವರದಿ ತರಿಸಿಕೊಂಡು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಾದರು.
ಇದನ್ನೂ ಓದಿ: ಭಾಲ್ಕಿ ಸ್ವಾಮಿಗಳ ನಡೆಯು ಕರ್ಮಸಿದ್ಧಾಂತದ ಕಡೆ ಸಾಗುತ್ತಿದೆಯೇ?
ಸುರಪುರ ಡಿವೈಎಸ್ಪಿ ಜಾವೀದ್ ಇನಾಂದಾರ್, ಸರ್ಕಲ್ ಇನ್ಸಪೆಕ್ಟರ್ ಶರಣಗೌಡ ನ್ಯಾಮಣ್ಣೋರ್, ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳು ಹಾಗೂ ಅಲ್ಲಿನವರ ತೊಂದರೆಗಳನ್ನು ಆಲಿಸಿದರು.
ನಿರಾಕರಿಸಿದ ಅಡುಗೆ ಸಹಾಯಕಿಯರನ್ನು ತಕ್ಷಣವೇ ಬದಲಾಯಿಸಿ, ತಾತ್ಕಾಲಿಕವಾಗಿ ಅಲ್ಲಿ ಅಡುಗೆ ಮಾಡಲಿಕ್ಕಿದ್ದ ಸಿಬ್ಬಂದಿಗಳನ್ನೇ ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸೋಮವಾರ, ಯಾವುದೇ ತೊಂದರೆಯಿಲ್ಲದಂತೆ ಎಲ್ಲ ಮಕ್ಕಳೂ ಬಿಸಿಯೂಟ ಮಾಡಿದ್ದಾರೆ ಎಂದು ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ ನಡೆದ ದೌರ್ಜನ್ಯ ನಿಯಂತ್ರಣ ಸಭೆಯಲ್ಲಿಯೂ ಈ ಕುರಿತು ಚರ್ಚೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆನ್ನಲಾಗಿದ್ದು, ಕ್ರಮಕ್ಕೆ ಸೂಚಿಸಿದ್ದಾರೆ.
ಇದನ್ನೂ ನೋಡಿ: ಸುಳ್ಳು ಪ್ರಕರಣವನ್ನು ದಾಖಲಿಸುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ #bdayananda |Commissioner of Police,