-ವಿ.ಆರ್.ಕಾರ್ಪೆಂಟರ್
ʻಪೊಲಿಟಕಲ್ ಪವರ್ ಈಸ್ ದ ಮಾಸ್ಟರ್ ಕೀʼ ಎಂದು ಬಾಬಾಸಾಹೇಬರು ಅಂದೇ ಹೇಳಿಬಿಟ್ಟಿದ್ದಾರೆ. ಈ ಪೊಲಿಟಿಕಲ್ ಪವರ್ ಎಂಥ ಕೆಲಸ ಮಾಡುತ್ತದೆಂದು ಭಾರತದ ರಾಜಕೀಯ ಪರಂಪರೆ ಅಂದಿನಿಂದಲೂ ನಿರೂಪಿಸುತ್ತಲೇ ಇದೆ. ಆ ಪರಂಪರೆಯ ಮುಂದುವರಿಕೆಯಾಗಿ ಮಾರಿ ಸೆಲ್ವರಾಜು ʼ ಮಾಮನ್ನನ್ʼ ಅನ್ನು ತೆರೆದಿಟ್ಟಿದ್ದಾರೆ.
ಪರ್ಶಿಯಾದಿಂದ ಬಂದ ದನವನ್ನು ಗೋವು ಎಂಬ ಹೆಸರಿನಲ್ಲಿ ಪವಿತ್ರವಾಗಿಸಿ, ಪೂಜಿಸುತ್ತಾ, ಈ ನೆಲದ ಮೂಲನಿವಾಸಿ ಪ್ರಾಣಿಯಾದ ಎಮ್ಮೆಯನ್ನು ಕಡೆಗಣಿಸಿದಂತೆ, ಈ ನೆಲದ ಮತ್ತೊಂದು ಮೂಲನಿವಾಸಿ ಪ್ರಾಣಿ ಹಂದಿಯನ್ನು ಕೂಡಾ ತುಚ್ಛವಾಗಿ ಕಾಣಲಾಗುತ್ತಿದೆ. ಅದನ್ನು ಸಾಕುವವರಿಗೆ ಒಂದು ಜಾತಿ ಅಂಟಿಸಲಾಗಿದೆ. ಆ ಜಾತಿ ಈ ವರ್ಗವ್ಯವಸ್ಥೆಯಲ್ಲಿ ಕಡೆಯ ಸಾಲಿನಲ್ಲೇ ನಿಲ್ಲಿಸಲಾಗಿದೆ. ಅದನ್ನು ಎಷ್ಟು ಕಡೆಗೆ ನಿಲ್ಲಿಸಲಾಗಿದೆ ಎಂದರೆ, ಪ್ರಕೃತಿದತ್ತವಾದ ನೀರನ್ನು ಮುಟ್ಟಿದರೂ ಮೇಲ್ವರ್ಗ ಸಹಿಸಿಕೊಳ್ಳಲಾಗದಷ್ಟು ಎತ್ತರಕ್ಕೆ. ಇಲ್ಲದಿದ್ದರೆ ಖುಷಿಯಿಂದ ಬಾವಿಗೆ ಇಳಿದು ಈಜಾಡುವ ಹಂದಿಸಾಕಾಣೆ ಮಾಡುವವರ ಮಕ್ಕಳನ್ನು ಕಲ್ಲು ಹೊಡೆದು ಕೊಲ್ಲುತ್ತಿರಲಿಲ್ಲ. ಇದೇ ತಮಿಳುನಾಡಿನಲ್ಲಿ 60ರ ದಶಕದಲ್ಲೇ ಕೆಳಜಾತಿಯ ಮಕ್ಕಳು ನೀರು ಕುಡಿಯುತ್ತಾರೆಂದು ಬಾವಿಗೆ ಕರೆಂಟ್ ಕೊಟ್ಟು ಎಂಟು ಮಕ್ಕಳನ್ನು ಕೊಂದುಹಾಕಿದ ಭೀಕರ ಘಟನೆ ಕಣ್ಣಿಗೆ ಕಟ್ಟುತ್ತದೆ.
ಕೊಲೆಯಾದ ಮಕ್ಕಳಿಗಾಗಿ ನ್ಯಾಯ ಕೇಳಲು ಬಂದವವನ್ನು ಎಮೋಷನಲ್ ಬ್ಲಾಕ್ಮೇಲ್ ಮಾಡಿ ಕಟ್ಟಿಹಾಕಲಾಗುತ್ತದೆ. ನಾಲ್ಕು ಜನ ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕಾಗಿರುವಾಗ, ಅದು 40 ಕುಟುಂಬಗಳ ಭಾವನೆಗೆ ಧಕ್ಕೆಯಾಗುತ್ತದೆ, ಅವರೊಳಗಿನ ಜಾತಿಪ್ರಜ್ಞೆ ಕೆರಳಿದರೆ, ಅಧಿಕಾರವೇ ಹೋಗಿಬಿಡುತ್ತದೆಂದು ಮಾಮನ್ನನನ್ನು ಎಮೋಷನಲ್ ಬ್ಲಾಕ್ ಮೇಲ್ ಮಾಡಲಾಗುತ್ತದೆ. ಅವರ ಬಾಯಿ ಕಟ್ಟಿಹಾಕಲಾಗುತ್ತದೆ. ಇದಂತೂ ನದಿ ನೀರಿನ ಹಂಚಿಕೆಯ ಸಮಸ್ಯೆಗಾಗಿ ತನ್ನ ರಾಜ್ಯವನ್ನೇ ತೊರೆದು, ನೋವು ನುಂಗಿ ಜಗದ ಏಳಿಗೆಗಾಗಿ ಜ್ಞಾನವನ್ನು ಅರಸಿ ಹೊರಟ ಬುದ್ಧ ನೆನಪಾಗುತ್ತಾನೆ. ಮೇಲ್ನೋಟಕ್ಕೆ ಬುದ್ಧನಂತೆ ಕಾಣಿಸುವ ಮಾಮನ್ನನಲ್ಲಿ ಕೋರೇಗಾವ್ನ ಸಿದ್ದನಾಕನೂ ಎಚ್ಚರದಲ್ಲಿರುತ್ತಾನೆ.
ಒಂದು ಕ್ಷೇತ್ರದ ಪ್ರಭಾವಿ ಹಾಗೂ ವಿನಮ್ರ ಶಾಸಕನಾಗಿದ್ದರೂ, ಮೇಲ್ಜಾತಿಯ ಸಣ್ಣ ಹುಡುಗರ ಮುಂದೆ ನಿಂತೇ ಇರಬೇಕೆಂಬ ಕಟ್ಟಳೆಯನ್ನು ಹೇರಲಾಗಿರುತ್ತದೆ. ಅಂದರೆ, ಕೆಳಜಾತಿಯ ಹಿರಿಯರನ್ನು, ಮೇಲ್ಜಾತಿಯ ಸಣ್ಣ ಹುಡುಗರು ಈಗಲೂ ಹೋಗೋ, ಬಾರೋ ಎಂದೂ, ಅದೇ ಕೆಳಜಾತಿಯ ದೊಡ್ಡವರು ಮೇಲ್ಜಾತಿಯ ಮಕ್ಕಳನ್ನು ʼಬುದ್ದಿ, ಚಿಕ್ಕ ಯಜಮಾನರೇ, ಧಣಿʼ ಅಂತೆಲ್ಲಾ ಕರೆಯುತ್ತಾರಲ್ಲ ಹಾಗೆ. ಕೆಳಜಾತಿಯ ಹಿರಿಯರ ಈ ಗುಲಾಮಿ ಮನಸ್ಥಿತಿಯನ್ನು ಸರಿಮಾಡುವುದು ವಿದ್ಯೆ. ಅಂದರೆ, ಸರಿಯಾದ ಶಿಕ್ಷಣ ಪಡೆದ ಕೆಳಜಾತಿಯ ಹಿರಿಯರ ಮಕ್ಕಳು. ಅದಕ್ಕೆ ಪೂರಕವಾಗಿ ಮಾಮನ್ನನ್ ಹೇಳುವುದು ಹೀಗೆ. ʼನನ್ನ ಹೆಸರು ಮಾಮನ್ನನ್ (ಚಕ್ರವರ್ತಿ) ಅಂತ ನನ್ನಪ್ಪ ಇಟ್ಟ. ಆದರೆ ಊರಿನ ಜನ ನನ್ನನ್ನು ಮಣ್ಣು ಎಂದು ಕರೆಯುತ್ತಿದ್ದರು. ಒಂದುದಿನ ಅಪ್ಪನನ್ನು ಕೇಳಿದೆ, ನನ್ನನ್ಯಾಕೆ ಮಣ್ಣು ಎಂದು ಕರೆಯುತ್ತಾರೆ ಅಂತ. ಅಪ್ಪ ನಗುತ್ತಾ ಹೇಳಿದ ʼಅದು ಪ್ರೀತಿಯಿಂದ ಬಿಡುʼ ಅಂತ. ಆದರೆ ನನ್ನ ಮಗ ವೀರ ಬೆಳೆದ, ವಿದ್ಯೆ ಕಲಿತ. ಯಾರಾದರೂ ನನ್ನನ್ನು ಮಣ್ಣು ಅಂದರೆ ಅವರ ಮೇಲೆ ಜಗಳಕ್ಕೆ ಬೀಳುತ್ತಿದ್ದ. ನನ್ನ ಹೆಸರಿನ ಮಹತ್ವ ತಿಳಿಸಿದ. ಊರಿನ ಜನರ ದೃಷ್ಟಿಯಲ್ಲಿ ಮಣ್ಣು ಆಗಿದ್ದ ನಾನು ನನ್ನ ಮಗನಿಂದ ಇಂದು ನಿಮ್ಮ ಮುಂದೆ ಮಾಮನ್ನನ್ ಆಗಿದ್ದೇನೆʼ.
ಈ ಮಾತುಗಳಲ್ಲಿ ಕೆಳಜಾತಿಗಳ ಪರಂಪರೆಗಳು ತಲೆಮಾರುಗಳು ಪಾಡುಪ್ರಯಾಸ ಪಟ್ಟ ಇತಿಹಾಸವಿದೆ. ಹೊಸತಳಿಯ ನಾಯಿಗಳು ದಾಳಿಯಿಟ್ಟಾಗ ಅದಕ್ಕೆ ಕನಿಷ್ಟ ಪ್ರತಿರೋಧ ತೋರದ ಅಸಹಾಯಕ ದುಃಸ್ಥಿತಿಯ ಚರಿತ್ರೆಯಿದೆ. ಆ ಚರಿತ್ರೆಯನ್ನು, ಇತಿಹಾಸವನ್ನು ಸರಿಪಡಿಸಲು ವಿದ್ಯೆ ಕಲಿತ ಮಗ, ಜಾತಿ ಖೂಳರ ಮುಂದೆ ಗತ್ತಿನಿಂದ ಕುರ್ಚಿಯಲ್ಲಿ ಕೂರು ಎಂದಾಗ ಕೂರಲು ಹೆದರದ ಅಸಂಖ್ಯಾತ ಮಾಮನ್ನನರ ಅಗತ್ಯವಿದೆ. ನಾನೂ ಕೂಡಾ ಕುರ್ಚಿಯಲ್ಲಿ ಕೂರಲು ಅರ್ಹನೆಂದು ನಂಬಿ ಕೂತ ಅಪ್ಪನನ್ನು ಕಾಪಾಡುವಷ್ಟು ಪ್ರತಿರೋಧದ ಶಕ್ತಿ ಮಗನಿಗೂ ಅಗತ್ಯ. ಆ ಪ್ರತಿರೋಧ ಶಕ್ತಿಯ ಅಗತ್ಯವನ್ನೇ ಮಾರಿ ಸೆಲ್ವರಾಜು ಇಂಟರ್ವಲ್ ಬ್ಲಾಕ್ನಲ್ಲಿ ಕಟ್ಟಿಕೊಡುತ್ತಾರೆ.
ʼನಿನಗಿಂತ ಮೇಲಿನವರ ಎದುರು ಬೇಕಾದರೂ ಸೋಲು, ನಿನ್ನ ಜತೆಗಿರುವ ಜನರಿಂದಲಾದರೂ ಸೋತುಬಿಡು. ಆದರೆ ನಿನಗಿಂತ ಕೆಳಗಿನವರ ಕೈಲಿ ಸೋಲಬೇಡ. ಹಾಗೆ ಸೋಲುವುದು ನೀನು ಸಾಯುವುದಕ್ಕೆ ಸಮʼ ಎಂದು ರತ್ನವೇಲುವಿಗೆ ಅವನ ಅಪ್ಪ ತಲೆಗೆ ತುಂಬಿಬಿಟ್ಟಿರುತ್ತಾನೆ. ಇದೇ ಅಲ್ಲವೇ ಶೂದ್ರಜಾತಿಯ ಜನಗಳಿಗೆ ಬ್ರಾಹ್ಮಣ್ಯ ತುಂಬಿರುವ ವಿಷ. ಇದೇ ವಿಷವಲ್ಲವೇ ಕಂಬಾಲಪಲ್ಲಿಯ ದಲಿತರನ್ನು ಸುಟ್ಟದ್ದು. ರತ್ನವೇಲುವಿನ ಎದೆಯೊಳಗೆ ಕೊತಕೊತ ಕುದಿಯುತ್ತಿರುವ ಈ ವಿಷ ತನ್ನನ್ನು ಇನ್ನೇನು ಸುಟ್ಟುಹಾಕುತ್ತದೆ ಎಂದಾಗ ಮಾಮನ್ನನ ಒಳಗಿನ ಸಿದ್ದನಾಕ ಎಚ್ಚರವಾಗುತ್ತಾನೆ. ತನ್ನ ಕೈಗೆ ಬಂದೂಕನ್ನು, ಮಗನ ಕೈಗೆ ಖಡ್ಗವನ್ನು ಕೊಟ್ಟು, ಪ್ರತಿರೋಧ ಹಿಂಸೆಯಲ್ಲ ಅನ್ನುತ್ತಾನೆ.
ಇಷ್ಟರಲ್ಲಾಗಲೇ ರತ್ನವೇಲುವಿಗೆ ಪರಿಸ್ಥಿತಿ ತನ್ನ ಕೈಲಿಲ್ಲ ಎಂಬುದು ಅರಿವಾಗಿ, ಮಾಮನ್ನನ್ನು ರಾಜಕೀಯವಾಗಿ ಕಟ್ಟಿಹಾಕಲು ಕುತಂತ್ರಗಳನ್ನು ರೂಪಿಸುತ್ತಾನೆ. ಮುಂಬೈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಲು ಯಾವ್ಯಾವ ಕುತಂತ್ರಗಳನ್ನು ಹೆಣೆಯಲಾಗಿತ್ತೋ, ಥೇಟ್ ಅಂಥಹುದೇ ಕುತಂತ್ರಗಳನ್ನು ರತ್ನವೇಲು ನೀಟಾಗಿ ಹೆಣೆದು, ಮಾಮನ್ನನ ಒಳಗಿನ ಸಿದ್ದನಾಕನನ್ನು ಕುಗ್ಗಿಸಲು ಯತ್ನಿಸುತ್ತಾನೆ. ಆದರೆ, ಮಾಮನ್ನನ್ ಒಳಗೆ ಸಿದ್ದನಾಕನ ಶಕ್ತಿಯ ಜತೆಗೆ ಬುದ್ಧನ ಜ್ಞಾನವೂ ಇದ್ದ ಕಾರಣ ಚುನಾವಣೆಯನ್ನು ಗೆದ್ದುಬಿಡುತ್ತಾನೆ.
ʼಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ, ಯಾರು ಭಯಪಟ್ಟರು ಎಂಬುದು ಮುಖ್ಯʼ ಎಂದು ಮಾಮನ್ನನ್ನ ಮಗ ವೀರ ಹೇಳಿದ್ದು ಇಲ್ಲಿ ಮುಖ್ಯವಾಗುತ್ತದೆ. ಕುತಂತ್ರಕ್ಕೆ ಬಲಿಯಾದ ತನ್ನದೇ ಸಹಾಯಕ ಎದುರು ಚುನಾವಣೆಯಲ್ಲಿ ಬಾಬಾ ಸಾಹೇಬರು ಸೋತರೂ, ಅವರ ಶಕ್ತಿ ಅರಿತಿದ್ದ ಜನ ಗೆಲ್ಲಿಸಿಕೊಂಡರಲ್ಲ… ಅದೇ ರೀತಿ ಮಾಮನ್ನನ್ ಗೆದ್ದು, ತನ್ನನ್ನು ನಿಲ್ಲಿಸಿಕೊಂಡೇ ಮಾತನಾಡಿದ ಜನರ ಚುನಾಯಿತ ಪ್ರತಿನಿಧಿಗಳ ಬಾಯಲ್ಲಿ ʼಮಾನ್ಯ ಸಭಾಧ್ಯಕ್ಷರೇʼ ಎಂದು ಕರೆಸಿಕೊಳ್ಳುವ ಪದವಿಗೆ ಏರುತ್ತಾನೆ.
ಸಂವಿಧಾನಕ್ಕಿರುವ ಶಕ್ತಿ, ವಿದ್ಯೆಯೊಳಗೆ ಸುಪ್ತವಾಗಿ ಹರಿಯುವ ಅರಿವು, ಅಧಿಕಾರ ರಾಜಕಾರಣಕ್ಕಿರುವ ಅಗಾಧದತೆಯನ್ನು ಮಾಮನ್ನನ್ ಮೂಲಕ ಮಾರಿ ಸೆಲ್ವರಾಜು ನಿರೂಪಿಸಿದ್ದಾರೆ. ವೆಡಿವೇಲು ನಟರಾಜನ್ ಎಂಬ ನಟನನ್ನು ಕೇವಲ ಕಾಮೆಡಿ ಪಾತ್ರಗಳಿಗಷ್ಟೇ ಸೀಮಿತಗೊಳಿಸಿ, ಅವರ ಪ್ರತಿಭೆಯನ್ನು ಕಾಮೆಡಿಗಷ್ಟೇ ಸೀಮಿತಗೊಳಿಸಿದ ಮಣಿರತ್ನಂ, ಶಂಕರ್, ಭಾರತೀರಾಜ ಮುಂತಾದ ನಿರ್ದೇಶಕರು ಪಾಪಪ್ರಜ್ಞೆಯಿಂದ ನರಳಿ ಪಾಠ ಕಲಿಯಲೇಬೇಕಾದ ಚಿತ್ರವನ್ನು ಕಣ್ತುಂಬಿಕೊಳ್ಳಲೇ ಬೇಕಿದೆ.
ಫಸ್ಟ್ ಹಾಫ್ ಚುರುಕಾಗಿಯೂ, ಸೆಕೆಂಡ್ ಹಾಫ್ ತುಸು ಬೋರ್ ಆಗಿಯೂ ಚಿತ್ರಿಸುವುದು ಈಗಿನ ಟ್ರೆಂಡ್. ಅದನ್ನು ಕೂಡಾ ಸಹಿಸಿಕೊಳ್ಳುವಂತೆ ಚಿತ್ರಕಥೆಯನ್ನು ಹೆಣೆಯಲಾಗಿದೆ. ಇಡೀ ಚಿತ್ರವನ್ನು ವೆಡಿವೇಲು ಆವರಿಸಿಕೊಂಡಿದ್ದರೆ, ಫಾಹದ್ ಫಾಸಿಲ್ನ ನಟನೆ ಬೇರೊಂದು ರೀತಿಯಲ್ಲಿ ಆವರಿಸಿಕೊಳ್ಳುತ್ತದೆ; ಈತ ನಿಜಕ್ಕೂ ಮಲಯಾಳಿಯಾ ಎಂಬ ಅನುಮಾನ ಮೂಡುತ್ತದೆ. ಇನ್ನುಳಿದಂತೆ ಬೇರಾವ ಪಾತ್ರಗಳ ಪೋಷಣೆಗೆ ನಿರ್ದೇಶಕರು ತಲೆಕೆಡಿಸಿಕೊಂಡಂತೆ ಕಾಣಿಸಲಿಲ್ಲ. ಮಾಮನ್ನನ್ ಮಗನ ಪಾತ್ರಧಾರಿ ಉದಯನಿಧಿ ಮಾರನ್ ನಟನೆ ಬಿಟ್ಟು ತನಗೆ ಸಿಕ್ಕಿರುವ ಮಂತ್ರಿ ಪದವಿಯನ್ನು ನಿಭಾಯಿಸಬೇಕು. ಎ ಆರ್ ರೆಹಮಾನ್ ಅವರ ಸಂಗೀತದ ಬಗ್ಗೆ ಹೇಳುವುದೇ ಬೇಡ. ಅವರು ಭಾರತೀಯ ಚಿತ್ರರಂಗಕ್ಕೆ ದಕ್ಕಿದ ವಿಶೇಷ ಕೊಡುಗೆ.
ಬುದ್ಧನ ಅರಿವನ್ನೂ, ಸಿದ್ದನಾಕನ ಶಕ್ತಿಯನ್ನು ಬಾಬಾಸಾಹೇಬರ ರಾಜಕೀಯ ಮತ್ತು ಸಾಮಾಜಿಕ ಜ್ಞಾನವನ್ನು ಅತ್ಯಂತ ಸಮರ್ಥವಾಗಿ ಮಾಮನ್ನನ್ ಕಟ್ಟಿಕೊಡುತ್ತದೆ. ಇಂಥಹ ಚಿತ್ರಗಳು ಮಾತ್ರವೇ ಭಾರತದ ನಿಜಸ್ಥಿತಿಗೆ ಕನ್ನಡಿಯಾಗಬಲ್ಲದು. ಇದು ಕೇವಲ ತಮಿಳು ಸಿನಿಮಾವಲ್ಲ; ಈ ನೆಲದಲ್ಲಿ ನೊಂದು, ರಕ್ತ ಬಸಿದು, ನಾಡು ಕಟ್ಟಿದವರ ಕತೆ.