ಅತಿದೊಡ್ಡ ಸಂಚಾರ ಉಲ್ಲಂಘನೆ ಮಾಡುವವರು ದ್ವಿ ಚಕ್ರ ವಾಹನ ಸವಾರರಲ್ಲ ; ಸರ್ಕಾರಗಳು ಮತ್ತು ಭ್ರಷ್ಟ ರಸ್ತೆ ನಿರ್ಮಾಣದ ಕಂಪನಿಗಳು

ಟಿ ಯಶವಂತ

ತುರ್ತು ಚಿಕಿತ್ಸೆ ಅಗತ್ಯವಿದ್ದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದಾರೆ ಎಂದು ಚಲಿಸುತ್ತಿದ್ದ ಬೈಕ್ ಅನ್ನು ತಡೆದ ನಿಲ್ಲಿಸುವಾಗ ಆಯತಪ್ಪಿ ಹೆಂಡತಿ ಮತ್ತು ಮಗು ಕೆಳಗೆ ಬಿದ್ದು ಮಗು ಮರಣ ಅಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ಮಂಡ್ಯದಲ್ಲಿ ನಡೆದಿದೆ. ಸಂಚಾರ

ಚಲಿಸುತ್ತಿರುವ ದ್ವಿಚಕ್ರ ವಾಹನಕ್ಕೆ ಅಡ್ಡ ನಿಂತ ಕಾರಣ ಅಲ್ಲಲ್ಲಿ ಅಪಘಾತ ನಡೆದ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಚಲಿಸುತ್ತಿರುವ ವಾಹನ ತಡೆದು ವಾಹನ ದಾಖಲೆಗಳು ಹಾಗೂ ಇನ್ನಿತರ ಸಂಚಾರ ಉಲ್ಲಂಘನೆ ಗಳನ್ನು ತಪಾಸಣೆ ಮಾಡಬಾರದು ಎಂದು ಸ್ಪಷ್ಟ ಆದೇಶ ಇದ್ದರೂ ಪೊಲೀಸರು ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ಇದರಿಂದ ಆನಾಹುತಗಳು ಆಗುತ್ತಲೇ ಇವೆ.

ಇದನ್ನು ಓದಿ :-ಹೊಸ ತೆರಿಗೆ: ತ್ಯಾಜ್ಯ ವಿಲೇವಾರಿ ಸೇವೆಗಳಿಗೂ ‘ಸೇವಾ ಶುಲ್ಕ’

ಹೆಲ್ಮೆಟ್, ಕಡ್ಡಾಯ ವಿಮೆ ಮುಂತಾದ ಸಂಚಾರ ನಿಯಮಗಳನ್ನು ಪರಿಶೀಲಿಸಲು ಚಲಿಸುತ್ತಿರುವ ವಾಹನವನ್ನು ತಡೆಯಲೇ ಬೇಕಾಗಿಲ್ಲ. ತಪಾಸಣೆ ನಡೆಸಿ ದಂಡ ವಿಧಿಸಲು ಪೇದೆಗಳಿಗೆ ಅಧಿಕಾರವನ್ನು ಕೂಡ ನೀಡಿಲ್ಲ.

ಹೆಲ್ಮೆಟ್ ಹಾಕದೇ ಇರುವ ಕಾರಣಕ್ಕಾಗಿ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವುಕ್ಕಿಂತ ಹೆಚ್ಚಿನ ಜನರು ರಸ್ತೆಯಲ್ಲಿ ಅಳವಡಿಸಿರುವ ಅವೈಜ್ಞಾನಿಕ ಹಂಪ್ಸ್ , ರಸ್ತೆಯಲ್ಲಿ ಗುಂಡಿ ಬಿದ್ದರೂ ಮುಚ್ಚಿ ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣಕ್ಕಾಗಿ, ವಾಹನಗಳ ದಟ್ಟಣೆಗೆ ಅನುಗುಣವಾಗಿ ರಸ್ತೆ ಇಲ್ಲದೇ ಇರುವ ಕಾರಣಗಳಿಂದಾಗಿ ಹಾಗೂ ರಸ್ತೆಗಳ ಕಳಪೆ ನಿರ್ಮಾಣದಿಂದಾಗಿ ಹೆಚ್ಚಿನ ಜನರು ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಪ್ರಾಣ ಕಳೆದುಕೊಳ್ಳುವವರಲ್ಲಿ ಹೆಚ್ಚಿನ ಜನರು ದ್ವಿ ಚಕ್ರ ವಾಹನ ಸವಾರರು, ಸೈಕಲ್ ಸವಾರರು ಹಾಗೂ ಸಣ್ಣ ಮತ್ತು ಅತಿ ಸಣ್ಣ ಕಾರುಗಳಲ್ಲಿ ಒಡಾಟ ನಡೆಸುವವರೇ ಆಗಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಸಂಚಾರ ಉಲ್ಲಂಘನೆಗಾಗಿ ಅತಿ ಹೆಚ್ಚು ಶಿಕ್ಷೆ, ದಂಡನೆಗೆ ಗುರಿಯಾಗಬೇಕಾಗಿದ್ದವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ,ಲೋಕೋಪಯೋಗಿ ಇಲಾಖೆ, ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮತ್ತು ರಸ್ತೆಗಳನ್ನು ಕಳಪೆಯಾಗಿ ನಿರ್ವಹಿಸಿರುವ ನಿರ್ಮಾಣ ಕಂಪನಿಗಳು ಮತ್ತು ಗುತ್ತಿಗೆದಾರ ಸಂಸ್ಥೆಗಳು .ಆದರೆ ಎಲ್ಲಾ ಅನಿಷ್ಢಗಳಿಗೆ ಶನಿಶ್ವರನೇ ಕಾರಣ ಎಂಬಂತೆ ಸಂಚಾರ ಪೊಲೀಸರು ಅತಿ ಹೆಚ್ಚು ದಂಡನೆಗೆ ,ಶಿಕ್ಷೆಗೆ ಒಳಪಡಿಸುವುದು ಮಾತ್ರ ದ್ವಿ ಚಕ್ರ ಸವಾರರನ್ನು .

ಇದನ್ನು ಓದಿ :-ಸಂವಿಧಾನದಿಂದಾಚೆಗಿನ ಸಮಾಜದತ್ತ ನೋಡಬೇಕಿದೆ

ಸಂಚಾರ ಪೊಲೀಸರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಇದ್ದಂತೆ ಯಾರಿಗೂ ಗೊತ್ತಾಗದಂತೆ ಕದ್ದು ಮುಚ್ಚಿ ಲಂಚ ಪಡೆಯುತ್ತಿಲ್ಲ. ಲಂಚ ಪಡೆಯುವುದು ಅಥವಾ ಸಂಚಾರ ಉಲ್ಲಂಘನೆ ಕಾರಣಕ್ಕಾಗಿ ದುಬಾರಿ ದಂಡ ವಿಧಿಸುವ ಭಯ ಹುಟ್ಟಿಸಿ ಹಣ ವಸೂಲಿ ಮಾಡುವುದು ದಿನ ನಿತ್ಯದ ಕರ್ತವ್ಯ ಎಂದೇ ತಿಳಿಯುತ್ತಿದ್ದಾರೆ ಮತ್ತು ಈ ರೀತಿ ಸಂಗ್ರಹ ಆದ ಹಣ ಕೆಳಗಿನಿಂದ ಮೇಲಿನ ತನಕ ಹಂಚಿಕೆಯಾಗುವುದಲ್ಲದೇ ಬಹಳಷ್ಟು ಕಡೆ ಆಯಾ ಕ್ಷೇತ್ರದ ಜನ ಪ್ರತಿನಿಧಿಗಳಿಗೂ ತಿಂಗಳಿಗೆ ಇಷ್ಟು ಎಂದು ತಲುಪಿಸುವ ವ್ಯವಸ್ಥೆ ರೂಪಿತವಾಗಿ ಸಾಂಸ್ಥೀಕರಣಗೊಂಡಿದೆ. ಈ ವ್ಯವಸ್ಥೆ ಕಡೆ ಬೊಟ್ಟು ಮಾಡಿದಾಗಲೆಲ್ಲಾ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಹಣದ ಕಡೆಗೆ ಆರೋಪಿಸಿ ಈ ವ್ಯವಸ್ಥೆಗೆ ಸಾಮಾನ್ಯ ಜನರನ್ನೇ ದೂಷಿಸಲಾಗುತ್ತದೆ. ಬಲಿಪಶುಗಳನ್ನೇ ಫಲಾನುಭವಿ ಎಂದು ವರ್ಣಿಸಿ ನಿಜವಾದ ಫಲಾನುಭವಿಗಳು ಬಲಿಪಶುಗಳ ಬಲಿ ಪಡೆಯುತ್ತಿದ್ದಾರೆ. ಇಂತಹ ಒಂದು ಬಲಿ ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಮೂರು ವರ್ಷದ ದುರದೃಷ್ಟ ಹೆಣ್ಣು ಮಗು ಹೃತಿಕ್ಷಾ .

ಈ ದುರ್ಘಟನೆ ಮತ್ತೆಂದೂ ಮರುಕಳಿಸದಂತೆ ಕಟ್ಟು ನಿಟ್ಟಾಗಿ ರಸ್ತೆ ಬದಿಯಲ್ಲಿ ನಿಂತು ,ತಿರುವುಗಳಲ್ಲಿ ಕಾಣದಂತೆ ನಿಂತು ವಾಹನ ಸವಾರರನ್ನು ಯಾಮಾರಿಸಿ ಕೈ ಅಡ್ಡ ಇಟ್ಟು ,ವಾಹನ ನಿಲ್ಲಿಸಿದ ತಕ್ಷಣ ವಾಹನ ಕೀಲಿಯನ್ನು ಪಟಕ್ಕನೇ ಕಿತ್ತುಕೊಂಡು ರಸ್ತೆಯಲ್ಲೇ ಕಿರುಕುಳ ಹಾಗೂ ಮಾನವ ಘನತೆಗೆ ವಿರುದ್ಧವಾಗಿ ವರ್ತಿಸುವುದು, ಕೆಲವು ಕಡೆ ಲಾಠಿಯಲ್ಲಿ ಹೊಡೆದು ದುರ್ವರ್ತನೆ ತೋರಿ ಭಯ ಹುಟ್ಟಿಸಿ ಹಣ ಕೀಳುವುದು ಮುಂತಾದ ದೌರ್ಜನ್ಯಗಳಿಗೆ ಕೊನೆಯಾಗಬೇಕಿದೆ. ರಸ್ತೆ ತೆರಿಗೆ,ವಾಹನ ತೆರಿಗೆ ಅಲ್ಲದೇ ಟೋಲ್ ತೆರಿಗೆ ಹೀಗೆ ಒಂದೇ ಉದ್ದೇಶಕ್ಕೆ ಮೂರು ನಾಲ್ಕು ತೆರಿಗೆ ಪಾವತಿಸಿಯೂ ಅವಮಾನ ಅನುಭವಿಸಿ ಒತ್ತಡದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ಕೊನೆಗಾಣಿಸಲು ಎಲ್ಲರೂ ಪ್ರಯತ್ನಿಸಬೇಕಾಗಿರುವ ತುರ್ತನ್ನು ಈ ದುರ್ಘಟನೆ ನೆನಪಿಸಿದೆ.‌

ಇದನ್ನೂ ನೋಡಿ : ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ Janashakthi Media

 

Donate Janashakthi Media

Leave a Reply

Your email address will not be published. Required fields are marked *