ಕಾರ್ಪೊರೇಟ್ ಜಗತ್ತನ್ನು ಬೆಚ್ಚಿಬೀಳಿಸಿದ 37 ದಿನಗಳು ಸ್ಯಾಮ್ ಸಂಗ್ ಇಂಡಿಯಾ ಕಾರ್ಮಿಕರ ಐತಿಹಾಸಿಕ ಹೋರಾಟಕ್ಕೆ ಜಯ

ಸಂಘ ಕಟ್ಟುವ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಅದಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಬೇಕಾಗಿಲ್ಲ. ಇಂದು ನಾವು ಅನುಭವಿಸುತ್ತಿರುವ ಎಂಟು ಗಂಟೆಗಳ ಕೆಲಸದ ದಿನಗಳು, ರಜಾದಿನಗಳು ಮತ್ತು ವಿಶೇಷ ಸವಲತ್ತುಗಳು ಕಾರ್ಮಿಕ ವರ್ಗದ ಹೋರಾಟ ಮತ್ತು ಅವರು ಚೆಲ್ಲಿದ ರಕ್ತದಿಂದ ಬಂದಿದೆ. ಅದನ್ನು ಎಂದಿಗೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂಬುದನ್ನು ಸ್ಯಾಮ್ಸಂಗ್ ಕಾರ್ಮಿಕರು ತಮ್ಮ ಹೋರಾಟದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮಿಳುನಾಡಿನ ಕಾಂಚೀಪುರಂನಲ್ಲಿರುವ ಸ್ಯಾಮ್‌ಸಂಗ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಯುವ ಕಾರ್ಮಿಕರ ದೃಢ ಸಂಕಲ್ಪ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಎಲ್ಲಾ ಕೋನಗಳಿಂದಲೂ ಬಿಕ್ಕಟ್ಟುಗಳನ್ನು ಎದುರಿಸಿ ಕಬ್ಬಿಣದಂತೆ ದೃಢವಾಗಿ ನಿಂತು, ಸತತ 37 ದಿನಗಳ ಐತಿಹಾಸಿಕ ಮುಷ್ಕರ ನಡೆಸಿ ವಿಜಯದೊಂದಿಗೆ ಕೆಲಸಕ್ಕೆ ಮರಳಿದ್ದಾರೆ.

ಸಂಘ ರಚಿಸಿಕೊಳ್ಳುವ ಹಕ್ಕು ಮತ್ತು ಸಾಮೂಹಿಕ ಚೌಕಾಸಿ ಹಕ್ಕುಗಳಿಗಾಗಿನ ತಮ್ಮ ಬೇಡಿಕೆಗಳನ್ನು ಅಂಗೀಕರಿಸಿದ ನಂತರ, ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿರುವ ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ಕಂಪನಿ ‘ಸ್ಯಾಮ್‌ ಸಂಗ್ ಇಂಡಿಯಾ’ ಕಾರ್ಮಿಕರು ಅಕ್ಟೋಬರ್ 17ರಿಂದ ಕೆಲಸಕ್ಕೆ ಮರಳಿದ್ದಾರೆ. ಕಂಪನಿ ಆಡಳಿತವು ಸೌಹಾರ್ಧಯುತವಾಗಿ ಸಮಸ್ಯೆ ಬಗೆಹರಿಸುವ ಬದಲು ಮುಷ್ಕರವನ್ನು ಹತ್ತಿಕ್ಕಲು ಪ್ರಯತ್ನಿಸಿತು. ಪೊಲೀಸರು ಆಡಳಿತಕ್ಕೆ ಆಸರೆಯಾಗಿ ಕಾರ್ಯನಿರ್ವಹಿಸಿದರು. ಸಮಸ್ಯೆಗಳ ಪರಿಹಾರಕ್ಕೆ ಕಾರ್ಮಿಕ ಇಲಾಖೆ ಯಾವುದೇ ಪ್ರಯತ್ನ ಮಾಡಲಿಲ್ಲ.

ಇವೆಲ್ಲವನ್ನೂ ಎದುರಿಸಿ, ಸತತ 37 ದಿನಗಳ ದಿಟ್ಟವಾಗಿ ಮುಷ್ಕರ ನಡೆಸಿದ ಕಾರ್ಮಿಕರು ಐತಿಹಾಸಿಕ ವಿಜಯದೊಂದಿಗೆ ಕೆಲಸಕ್ಕೆ ಮರಳಿದ್ದಾರೆ. ಅಕ್ಟೋಬರ್ 14 ಮತ್ತು 15 ರಂದು ಚೆನ್ನೈನ ಮುಖ್ಯಮಂತ್ರಿಗಳ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ನಡೆದ ತ್ರಿಪಕ್ಷೀಯ ಮಾತುಕತೆಯ ನಂತರ ಸ್ಯಾಮ್ ಸಂಗ್ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಸಂಘದಿಂದ ಒಪ್ಪಂದಕ್ಕೆ ಸಹಿ ಹಾಕಲಾಯಿತು.  ಇದರಲ್ಲಿ ತಮಿಳುನಾಡಿನ ನಾಲ್ವರು ಸಚಿವರು ಭಾಗವಹಿಸಿದ್ದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: 

ಇದರ ನಂತರ ಈ ಬಗ್ಗೆ ಚರ್ಚಿಸಲು ಅಕ್ಟೋಬರ್ 16ರಂದು ಸ್ಯಾಮ್‌ಸಂಗ್ ಇಂಡಿಯಾ ಲೇಬರ್ ಯೂನಿಯನ್ ಕೌನ್ಸಿಲ್ ಸಭೆ ನಡೆಯಿತು. ಸಭೆಯಲ್ಲಿ ತ್ರಿಪಕ್ಷೀಯ ಮಾತುಕತೆಯ ಶಿಫಾರಸುಗಳನ್ನು ಕಾರ್ಮಿಕರ ಮುಂದೆ ಇಡಲಾಯಿತು. ಚರ್ಚೆಯ ನಂತರ ಒಪ್ಪಂದವನ್ನು ಅಂಗೀಕರಿಸಲಾಯಿತು ಮತ್ತು ಮುಷ್ಕರವನ್ನು ಕೊನೆಗೊಳಿಸಿ ಮರುದಿನ (ಅಕ್ಟೋಬರ್ 17) ಕೆಲಸಕ್ಕೆ ಮರಳಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಸ್ಯಾಮ್ ಸಂಗ್ ನಿಂದ ಕಾರ್ಮಿಕರ ತೀವ್ರ ಶೋಷಣೆ

ಇತ್ತೀಚಿನ ವರ್ಷಗಳಲ್ಲಿ ಗೃಹಬಳಕೆಯ ಮತ್ತು ಮೊಬೈಲ್ ಫೋನ್ ಗಳಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೇಡಿಕೆಯ ಹೆಚ್ಚಳದಿಂದಾಗಿ ಟೆಕ್ ವಲಯವನ್ನು ಭಾರತದ ಆರ್ಥಿಕತೆಯ ಪ್ರಮುಖ ಸ್ತಂಭಗಳಲ್ಲಿ ಒಂದನ್ನಾಗಿ ಮಾಡಿದೆ. ದೇಶಾದ್ಯಂತ 2.5 ಕೋಟಿ ಜನರು ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಚೀನಾದ ನಂತರ ಭಾರತವು ಈಗ ಮೊಬೈಲ್ ಫೋನ್ ಗಳ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. ಈ ವಲಯದಿಂದ ಉತ್ಪತ್ತಿಯಾಗುವ ಬೃಹತ್ ಬೆಳವಣಿಗೆ ಮತ್ತು ಅಪಾರ ಲಾಭವು ಕಾರ್ಮಿಕರ ತೀವ್ರ ಶೋಷಣೆಯನ್ನು ಆಧರಿಸಿದೆ.

ಚೆನ್ನೈನ ಹೊರಭಾಗದಲ್ಲಿರುವ, ಕಾಂಚಿಪುರಂ ಜಿಲ್ಲೆಗೆ ಸೇರಿರುವ ಶ್ರೀಪೆರಂಬದೂರಿನಲ್ಲಿ 2007ರಲ್ಲಿ ಸ್ಥಾಪನೆಯಾಗಿರುವ ಸ್ಯಾಮ್ಸಂಗ್ ಬೃಹತ್ ಸ್ಥಾವರವು ಇದಕ್ಕೆ ಹೊರತಾಗಿಲ್ಲ. ಇಲ್ಲಿಯೂ ಲಾಭದ ಕೊನೆಯ ಹನಿಗಳಿಗೆ ಕಾರ್ಮಿಕರನ್ನು ಹಿಂಡಲಾಗುತ್ತದೆ. ಅವರು ವೇತನವಿಲ್ಲದೆ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಲ್ಪಡುತ್ತಾರೆ. ಏರುತ್ತಿರುವ ಹಣದುಬ್ಬರ ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಹೊರತಾಗಿಯೂ ಇಲ್ಲಿನ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಿಲ್ಲ ಮತ್ತು ಅಸುರಕ್ಷಿತ ಪರಿಸ್ಥಿತಿಗಳಲ್ಲಿ ಶ್ರಮಿಸಲು ಒತ್ತಾಯಿಸಲಾಗುತ್ತದೆ.

ಇದನ್ನೂ ಓದಿ: ಅರಣ್ಯ ಹಕ್ಕು ಕಾಯ್ದೆ 2006 ಸಮರ್ಪಕ ಜಾರಿಯಾಗಲಿ – ಟಿ ಯಶವಂತ್

17 ವರ್ಷಗಳ ನಂತರ ಹೊರಹೊಮ್ಮಿದ ಸಂಘ

ಸ್ಯಾಮ್ಸಂಗ್ ಕಂಪನಿಯ ಲಾಭ ವರ್ಷ ವರ್ಷವೂ ಹೆಚ್ಚುತ್ತಿದೆ. ಅದರ ಜತೆಗೆ ಕಾರ್ಮಿಕರ ಸಮಸ್ಯೆಗಳು ಕೂಡಾ ಹೆಚ್ಚುತ್ತಿವೆ. 10 ವರ್ಷ ಮೇಲ್ಪಟ್ಟು ಕೆಲಸ ಮಾಡಿದ ಕೆಲ ನೌಕರರು ಇನ್ನೂ ತಿಂಗಳಿಗೆ 25 ಸಾವಿರ ರೂ.ಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಆಡಳಿತ ಮಂಡಳಿ ಇತ್ತಕಡೆ ಗಮನ ಕೊಡಲಿಲ್ಲ. 9 ಗಂಟೆಗಳ ಪಾಳಿಗಳನ್ನು ಮೀರಿ ಕಾರ್ಮಿಕರು ಕೆಲಸ ಮಾಡುವಂತೆ ಮಾಡಲಾಗಿದೆ. ಹಗಲಿನಲ್ಲಿ 10-15 ನಿಮಿಷಗಳ ವಿರಾಮ ಪಡೆಯಲೂ ಅವಕಾಶ ಕೊಡುವುದಿಲ್ಲ. ಇದು ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ.

ಈ ವೇಳೆ ಕಾರ್ಮಿಕರು ಸಿಐಟಿಯು ಜಿಲ್ಲಾ ಮುಖಂಡರನ್ನು ಸಂಪರ್ಕಿಸಿದರು. ಜೂನ್ 16, 2024 ರಂದು ನಡೆದ ಕಾರ್ಮಿಕರ ಕೌನ್ಸಿಲ್ ಸಭೆಯಲ್ಲಿ ಸಂಘವನ್ನು ರಚಿಸಲಾಯಿತು. ಅದೇ ತಿಂಗಳ 26ರಂದು ಸಂಘದ ನೊಂದಣಿಗಾಗಿ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅದರ ಮರುದಿನವೇ ಸಂಘದ ಪದಾದಿಕಾರಿಗಳು ಮತ್ತು ನಿರ್ವಾಹಕರ ಬಗ್ಗೆ ಪರಿಚಯ ಪತ್ರವನ್ನು ಆಡಳಿತಕ್ಕೆ ಕಳುಹಿಸಲಾಗಿದೆ. ಆ ನಂತರ ಜುಲೈ 11 ರಂದು ವೇತನ ಹೆಚ್ಚಳ ಮತ್ತು ಸಾಮಾನ್ಯ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಆಡಳಿತಕ್ಕೆ ಕಳುಹಿಸಲಾಗಿದೆ.

ಇದರ ನಂತರ ಕಂಪನಿಯ ಆಡಳಿತದ ಕಾರ್ಮಿಕ ವಿರೋಧಿ, ಸಂಘ-ವಿರೋಧಿ ಚಟುವಟಿಕೆಗಳು ಮತ್ತು ಬೆದರಿಕೆ ಹೆಚ್ಚಾಯಿತು.  ಪೊಲೀಸರಿಗೆ ದೂರು ನೀಡಿದರೆ ದೂರು ನೀಡಿದವರನ್ನು ಠಾಣೆಯಲ್ಲೇ ಕೂರಿಸುತ್ತಾರೆ. ಕಾರ್ಮಿಕ ಇಲಾಖೆ ನಿರ್ಣಾಯಕವಾಗಿ ಮಧ್ಯಪ್ರವೇಶಿಸಲಿಲ್ಲ. ಕಾರ್ಮಿಕರ ರಕ್ಷಣೆಗೆ ಬೇರೆ ದಾರಿಯಿಲ್ಲದೆ ಕಾರ್ಮಿಕರು ಮುಷ್ಕರಕ್ಕಿಳಿದರು.

ಉತ್ತಮ ವೇತನ ಮತ್ತು ಕೆಲಸದ ಪರಿಸ್ಥಿತಿಗಳಿಗೆ ಒತ್ತಾಯಿಸಿ ಮತ್ತು ಹೊಸದಾಗಿ ರಚಿಸಲಾದ ತಮ್ಮ ಕಾರ್ಮಿಕ ಸಂಘಟನೆ ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ (SIWU) ಮಾನ್ಯತೆಗಾಗಿ, ಸ್ಯಾಮ್‌ಸಂಗ್‌ ನ 1,000 ಕ್ಕೂ ಹೆಚ್ಚು ಕಾರ್ಮಿಕರು CITU (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಬ್ಯಾನರ್ ಅಡಿಯಲ್ಲಿ ಸೆಪ್ಟೆಂಬರ್ 9ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿದರು. ಈ ಸಂಘವು ಈ ಸಂಸ್ಥೆಯ ಶೇ. 75 ರಷ್ಟು ಕಾರ್ಮಿಕರನ್ನು ಪ್ರತಿನಿಧಿಸುತ್ತಿದೆ.

ಕಾರ್ಮಿಕರ ಒಗ್ಗಟ್ಟು, ಸಂಕಲ್ಪ

ನವ ಉದಾರೀಕರಣ ನೀತಿ ಜಾರಿ ಪ್ರಪಂಚದಾದ್ಯಂತ ಶೋಷಣೆಯ ಹೊಸ ರೂಪಗಳನ್ನು ಸೃಷ್ಟಿಸುತ್ತಿದೆ. ವಿಶೇಷವಾಗಿ ಕಾರ್ಪೊರೇಟ್ ಬಂಡವಾಳವು ಪರಭಕ್ಷಕ ಲಾಭದ ಏಕೈಕ ಗುರಿಯೊಂದಿಗೆ ಬೇಟೆಯಾಡುತ್ತಿದೆ. ಇಂತಹ ಶೋಷಣೆ ಮತ್ತು ದಬ್ಬಾಳಿಕೆಗಳು ದುಡಿಯುವ ವರ್ಗದ ಉದಯವನ್ನು ಗುಣಿಸುತ್ತವೆ ಎಂಬುದು ಇತಿಹಾಸ. ಸ್ಯಾಮ್‌ಸಂಗ್ ಇಂಡಿಯಾದಲ್ಲಿಯೂ ಇದೇ ಆಯಿತು.

ಸ್ಯಾಮ್ಸಂಗ್ ನೌಕರರು ಮುಷ್ಕರ ನಡೆಸಿದರೆ, ಅಲ್ಲಿ ಯೂನಿಯನ್ ಬಂದರೆ ತಮಿಳುನಾಡು ರಾಜ್ಯಕ್ಕೆ ಬಂಡವಾಳ ಬರುವುದಿಲ್ಲ; ಉದ್ಯೋಗಗಳ ಬೆಳವಣಿಗೆ ಇರುವುದಿಲ್ಲ; ಇದರಿಂದಾಗಿ ಕಾರ್ಮಿಕರಿಗೆ ಕೆಲಸ ಇರುವುದಿಲ್ಲ ಎಂಬ ಸುಳ್ಳನ್ನು ಹಬ್ಬಿಸಿದರು. ಬಿರುಗಾಳಿಯಂತೆ ಬಂದ ಸುಳ್ಳುಗಳು ಅಷ್ಟೇ ಬೇಗ ಮಾಯವಾದವು. ಕಳೆದ 25 ವರ್ಷಗಳಲ್ಲಿ ಕಾರ್ಮಿಕ ಸಂಘಟನೆಗಳ ಹೋರಾಟಗಳಿಂದ ಒಂದೇ ಒಂದು ಕಾರ್ಖಾನೆ ಮುಚ್ಚಿಲ್ಲ. ಅದೇ ಕೈಗಾರಿಕಾ ಪ್ರದೇಶದಲ್ಲಿನ ಹಲವು ಕಾರ್ಖಾನೆಗಳಲ್ಲಿ ಸಿಐಟಿಯು ನೇತೃತ್ವದ ಸಂಘಟನೆಗಳು ಹಲವು ವರ್ಷಗಳಿಂದ ಇವೆ. ಸಂಘ ರಚಿಸಿಕೊಂಡ ಕಾರಣಕ್ಕೆ ಅವ್ಯಾವುವೂ ಮುಚ್ಚಿಹೋಗಲಿಲ್ಲ. ಆದರೆ ಕಾರ್ಮಿಕರ ಒಗ್ಗಟ್ಟು, ಸಂಕಲ್ಪ ಕ್ಷೇತ್ರದಲ್ಲಿ ಸಾಬೀತಾಗಿದೆ.

ಮುಷ್ಕರವನ್ನು ಹತ್ತಿಕ್ಕಲು ಹಲವು ತಂತ್ರಗಳು

ಬಂಡವಾಳಗಾರರು ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕಲು ಹೇಗೆಲ್ಲಾ ತಂತ್ರಗಳನ್ನು, ದಾಳಿ ದಬ್ಬಾಳಿಕೆಗಳನ್ನು, ಕಿರುಕುಳ, ಬೆದರಿಕೆಗಳನ್ನು ಮಾಡುತ್ತಾರೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಮುಷ್ಕರವನ್ನು ಹತ್ತಿಕ್ಕಲು ಸ್ಯಾಮ್ ಸಂಗ್ ಆಡಳಿತ ಮಂಡಳಿಯೂ ಇಂಥದೇ ತಂತ್ರಗಳನ್ನು ಹೂಡಿ ಕಾರ್ಮಿಕರನ್ನು ಬೆದರಿಸಲು ಆರಂಭಿಸಿತು.

ಇದನ್ನೂ ಓದಿ: ಕೋವಿಡ್‌ ಹೆಸರಿನಲ್ಲಿ ವಂಚಿಸಿದ್ದ ಆರೋಗ್ಯಾಧಿಕಾರಿ ಡಾ.ಸವಿತಾ ವಿರುದ್ಧ ಕ್ರಮ ಸಾಧ್ಯತೆ

ಆಡಳಿತದ ಅಧಿಕಾರಿಗಳು ಕಾರ್ಮಿಕರ ಮನೆ ಮನೆಗೆ ತೆರಳಿ, ಕುಟುಂಬದ ಮಹಿಳೆಯರಿಗೆ ನಿಮ್ಮ ಪತಿಗೆ ಸಂಘವನ್ನು ತೊರೆಯುವಂತೆ ಹೇಳಿ ಇಲ್ಲದಿದ್ದರೆ ಅವರನ್ನು ಕೆಲಸದಿಂದ ವಜಾಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಕಂಪನಿ ಸಮೀಪ ಇರುವ ಚಂದವೇಲ್ಲೂರು, ತಿರುಮಂಗಲಂ, ಎಳಚೂರು ಪಂಚಾಯಿತಿ ಮುಖಂಡರನ್ನು ಕಂಪನಿ ಆಡಳಿತಾಧಿಕಾರಿಗಳು ಭೇಟಿ ಮಾಡಿ, ಕಾರ್ಮಿಕರನ್ನು ಸಂಘದಿಂದ ದೂರ ಸರಿಯುವಂತೆ ಮಾಡಲು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರೂ.40 ಲಕ್ಷ ನೀಡುತ್ತೇವೆ; ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.

ಆಡಳಿತ ಮಂಡಳಿಯ ಪರವಾಗಿ ಸಂಘದ ರಚನೆ

ಒಂದು ದಿನ ಕಾರ್ಮಿಕರು ಕೆಲಸ ಮುಗಿಸಿ ಕಾರ್ಖಾನೆ ಆವರಣದಿಂದ ಹೊರ ಹೋಗುತ್ತಿದ್ದಾಗ ಆಡಳಿತಾಧಿಕಾರಿಗಳು ಅವರನ್ನು ಕರೆದು, ಸಿಐಟಿಯು ಯೂನಿಯನ್‌ ಗೆ ನೀವ್ಯಾರೂ ಸೇರಬೇಡಿ, ಹೊರಗಿನಿಂದ ಯಾವುದೇ ಯೂನಿಯನ್‌ ಸದಸ್ಯರು ಬರಬೇಡಿ ಎಂದು ಬೆದರಿಕೆ ಹಾಕಿದರು. ಇನ್ನೊಂದು ಬಾರಿ ಆಡಳಿತ ಮಂಡಳಿಯವರು ಕಾರ್ಮಿಕರನ್ನು ಕರೆದು ಸಭೆ ನಡೆಸಲು ಮುಂದಾದಾಗ ಕಾರ್ಮಿಕರೆಲ್ಲರೂ ಅವರನ್ನು ನಿರ್ಲಕ್ಷಿಸಿ ಹೊರ ನಡೆದರು.

ಮೂರನೇ ಬಾರಿಗೆ ಆಡಳಿತ ಮಂಡಳಿಯ ಪರವಾಗಿ ಒಂದು ಸಂಘದ ರಚಿಸಿ, ಈ ಸಮಿತಿಯು ಕಾರ್ಮಿಕರ ಸಮಸ್ಯೆ ಬಗೆಹರಿಸುವುದಾಗಿ ಘೋಷಿಸಿ ಕಾರ್ಮಿಕರ ಸಹಿ ಕೇಳಿದರು. ಕಾರ್ಮಿಕರು ಸಹಿ ಹಾಕಲು ನಿರಾಕರಿಸಿದರು. ನಂತರ ಆಡಳಿತದ ಕಡೆಯಿಂದ ಬೆದರಿಕೆಗಳು ಬರತೊಡಗಿದವು. ಸಿಐಟಿಯು ಯೂನಿಯನ್ ಕಾರ್ಯಕಾರಿಣಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ರಾಜೀನಾಮೆ ನೀಡುವಂತೆ ಬೆದರಿಕೆ ಹಾಕಲಾಯಿತು. ಯೂನಿಯನ್‌ ಗೆ ರಾಜೀನಾಮೆ ನೀಡದಿದ್ದರೆ, ಆರ್ಮ್‌ಸ್ಟ್ರಾಂಗ್ (ಹತ್ಯೆಯಾದ ಬಹುಜನ ಸಮಾಜದ ಮುಖಂಡ) ದಂತೆಯೇ ನಿನಗೂ ಆಗಲಿದೆ ಎಂದು ಆಡಳಿತ ಮಂಡಳಿಯ ಅಧಿಕಾರಿಗಳು ದೂರವಾಣಿ ಮೂಲಕ ಬೆದರಿಕೆ ಹಾಕಿದರು.

ಕಾರ್ಖಾನೆ ಸುತ್ತ ನಿಷೇದಾಜ್ಞೆ

ಕಾರ್ಖಾನೆ ಬಳಿ ಮುಷ್ಕರ ನಡೆಸಲು ಸ್ಯಾಮ್ ಸಂಗ್ ನ ಆಡಳಿತ ಮಂಡಳಿ ಅವಕಾಶ ಕೊಡಲಿಲ್ಲ. ಪೊಲೀಸರು ಅಲ್ಲಿ ನಿಷೇದಾಜ್ಞೆ ಹೇರಿದರು. ಕಾರ್ಖಾನೆಯಿಂದ 2 ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಮಾಲೀಕತ್ವದ ಸ್ಥಳದಲ್ಲಿ ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಆದರೆ ಈ ಸ್ಥಳದಲ್ಲೂ ಪ್ರತಿಭಟನೆ ನಡೆಸಲು ಕಾಂಚೀಪುರಂ ಜಿಲ್ಲಾ ಪೊಲೀಸರು ಅವಕಾಶ ನೀಡಲಿಲ್ಲ. ಎಲ್ಲ ಹೋರಾಟಗಾರರನ್ನು ಬಂಧಿಸುತ್ತೇವೆ ಎಂದು ಬೆದರಿಸಿದರು. ಇದರಿಂದ ಕಾರ್ಮಿಕರು ತೀವ್ರ ಘೋಷಣೆ ಕೂಗಿದರು. ಅಲ್ಲದೆ, ಅಲ್ಲಿ ದೊಡ್ಡ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದೇ ವೇಳೆ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಸಿಐಟಿಯು ರಾಜ್ಯಾಧ್ಯಕ್ಷ ಎ. ಸೌಂದರರಸನ್, ಸ್ಯಾಮ್ಸಂಗ್ ಇಂಡಸ್ಟ್ರಿ ಅಸೋಸಿಯೇಷನ್ ​​ಅಧ್ಯಕ್ಷ ಮುತ್ತುಕುಮಾರ್ ಮಾತನಾಡಿದರು. ಬಳಿಕ ಕಾರ್ಮಿಕರೊಂದಿಗೆ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ಸಂಘದ ನೋಂದಣಿ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ

ಸ್ಯಾಮ್ ಸಂಗ್ ಸಂಸ್ಥೆಯು ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ ಗೆ ಮಾನ್ಯತೆ ನೀಡಲು ಒಪ್ಪಲಿಲ್ಲ. ಸಿಐಟಿಯು ಬೆಂಬಲಿಸುವವರೆಗೆ ಯೂನಿಯನ್‌ ನೊಂದಿಗೆ ಮತ್ತು ಹೊರಗಿನ ನಾಯಕರೊಂದಿಗೆ ಮಾತನಾಡಲು ಸಿದ್ಧರಿಲ್ಲ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಹೇಳಿತು. ಸಿಐಟಿಯುಗೆ ಸಂಯೋಜಿತವಾದ ಸ್ಯಾಮ್‌ಸಂಗ್ ಇಂಡಿಯಾ ಲೇಬರ್ ಯೂನಿಯನ್ (SIWU) ಹೆಸರಿನಲ್ಲಿ ಕಾರ್ಮಿಕ ಸಂಘವನ್ನು ಪ್ರಾರಂಭಿಸಲು ಕಾರ್ಮಿಕ ಸಂಘಟನೆಗಳ ರಿಜಿಸ್ಟ್ರಾರ್ ಮತ್ತು ಕಾರ್ಮಿಕ ಕಲ್ಯಾಣ ಉಪ ಆಯುಕ್ತರಿಗೆ ಕಾರ್ಮಿಕರು ಅರ್ಜಿ ಸಲ್ಲಿಸಿದರು. ಕಾನೂನಿನ ಪ್ರಕಾರ, ಸರ್ಕಾರವು 45 ದಿನಗಳಲ್ಲಿ ವಿನಂತಿಯನ್ನು ಪ್ರಕ್ರಿಯೆಗೊಳಿಸಬೇಕು. ಕಂಪನಿಯ ಹೆಸರನ್ನು ಸಂಘಕ್ಕೆ ಬಳಸಬಾರದು ಎಂದು ಸ್ಯಾಮ್‌ಸಂಗ್ ಹೇಳಿದ್ದರಿಂದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಂಘವನ್ನು ನೋಂದಾಯಿಸಲಿಲ್ಲ.

SIWU ಹೆಸರಿನಲ್ಲಿ ಟ್ರೇಡ್ ಯೂನಿಯನ್ ಅನ್ನು ನೋಂದಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಿಐಟಿಯು ಪ್ರಕರಣ ದಾಖಲಿಸಿತು. ತಮ್ಮ ಅರ್ಜಿಯನ್ನು ಪರಿಗಣಿಸಿ ಕಾರ್ಮಿಕ ಸಂಘಟನೆಯನ್ನು ನೋಂದಣಿ ಮಾಡಿಸಿ ಪ್ರಮಾಣ ಪತ್ರ ನೀಡುವಂತೆ, ಕಾರ್ಮಿಕ ಸಂಘಟನೆಗಳ ನೋಂದಣಾಧಿಕಾರಿ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆಯ ಉಪ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಆ ಮನವಿಯಲ್ಲಿ ಕೋರಲಾಗಿದೆ. ಅಕ್ಟೋಬರ್ 1ರಂದು ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ, ಕಾರ್ಮಿಕ ಆಯುಕ್ತರನ್ನು ಪ್ರತಿನಿಧಿಸುವ ತಮಿಳುನಾಡು ರಾಜ್ಯದ ವಕೀಲರು, SIWU ನ ಸಂಪೂರ್ಣ ರೂಪದಲ್ಲಿ 'Samsung' ಎಂಬ ಹೆಸರು ಟ್ರೇಡ್ ಮಾರ್ಕ್ ಉಲ್ಲಂಘನೆಯಾಗಿದೆ ಎಂಬ ಆಧಾರದ ಮೇಲೆ SIWU ನ ನೋಂದಣಿಗೆ Samsung ಆಡಳಿತವು ಆಕ್ಷೇಪಿಸಿದೆ ಎಂದು ಹೇಳಿದರು. ಇದನ್ನು ಸಿಐಟಿಯು ಒಪ್ಪಲಿಲ್ಲ.

ಸೆಪ್ಟೆಂಬರ್ ಆರಂಭದಲ್ಲಿ ಪ್ರತಿಭಟನೆಗಳು ಪ್ರಾರಂಭವಾದರೂ, ತಮಿಳುನಾಡು ಸರ್ಕಾರವು ಅಕ್ಟೋಬರ್ 7ರಂದು ಸ್ಯಾಮ್‌ಸಂಗ್‌ ನೊಂದಿಗೆ ಮಾತುಕತೆ ನಡೆಸಲು ತನ್ನ ಮೊದಲ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿತು. ಕಾರ್ಮಿಕ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ), ಕೈಗಾರಿಕೆಗಳ ಸಚಿವಾಲಯಗಳನ್ನು ಪ್ರತಿನಿಧಿಸುವ ಮೂವರು ಹಿರಿಯ ಮಂತ್ರಿಗಳು ಸಂಘದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿತು. ಅಂದು ವೇತನ ಹೆಚ್ಚಳ ಮತ್ತು ಹೆಚ್ಚುವರಿ ಪ್ರಯೋಜನಗಳಿಗೆ ಒಪ್ಪಿಗೆ ನೀಡಿತಾದರೂ, ಪ್ರಮುಖ ವಿಷಯವಾದ ಸಂಘಕ್ಕೆ ಮಾನ್ಯತೆ ನೀಡುವ ವಿಷಯ ಹಾಗೆಯೇ ಉಳಿಯಿತು. ಅಕ್ಟೋಬರ್ 8 ರಂದು, ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್‌.ಬಿ. ರಾಜಾ ಅವರು ಮುಷ್ಕರ ನಿರತ ಕಾರ್ಮಿಕರನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದರು. ರಾಜ್ಯದ ಯುವಕರಿಗೆ ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ರಕ್ಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ರಾಜ್ಯ ಸರ್ಕಾರದ 'ಉದಾಸೀನ' ಪ್ರತಿಕ್ರಿಯೆಯನ್ನು ಪ್ರಶ್ನಿಸಿದ ಸಿಐಟಿಯು ಮತ್ತು ಎಸ್‌ಐಡಬ್ಲ್ಯೂಯು ಸಂಘಟನೆಗಳು, ಸ್ಯಾಮ್‌ಸಂಗ್ ಮ್ಯಾನೇಜ್‌ಮೆಂಟ್‌ನೊಂದಿಗೆ ರಾಜ್ಯ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿತು. ಅಕ್ಟೋಬರ್ 9ರಂದು ರಾತ್ರಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು, ಸಿಐಟಿಯು ಮುಖಂಡರೂ ಸೇರಿದಂತೆ ಹಲವು ಕಾರ್ಮಿಕ ಮುಖಂಡರನ್ನು ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 625 ಸ್ಯಾಮ್ಸಂಗ್ ಕಾರ್ಮಿಕರ ವಿರುದ್ಧ 2 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ, ಪ್ರತಿಭಟನಾಕಾರರು ಹಾಕಿದ್ದ ಪೆಂಡಾಲನ್ನು ಕಿತ್ತುಹಾಕಿದ ಪೊಲೀಸರು, ಪ್ರತಿಭಟನಾ ಬ್ಯಾನರ್ ಗಳನ್ನು ಕಿತ್ತೆಸೆದರು.

ಮರು ದಿನ ಬೆಳಗ್ಗೆ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ ಸ್ಯಾಮ್ಸಂಗ್ ಕಾರ್ಮಿಕರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರೆಸಿದರು. ಸುರಿಯುತ್ತಿದ್ದ ಮಳೆಯ ನಡುವೆಯೂ ನಿಷೇದಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮುಂದುವರಿಸಿದ ಸಿಐಟಿಯು ಮುಖಂಡ ಸೌಂದರರಾಜನ್ ಸೇರಿದಂತೆ ಎಲ್ಲ ಪ್ರತಿಭಟನಾಕಾರರನ್ನು ಬಂಧಿಸಿ ಪ್ರಕರಣ ದಾಖಲಿಸಿದರು. ಸ್ಯಾಮ್ ಸಂಗ್ ಇಂಡಿಯಾ ಲೇಬರ್ ಯೂನಿಯನ್ ನ ಕಾರ್ಯಾಕಾರಿ ಸದಸ್ಯರ ಮನೆಗಳನ್ನು ರಾತ್ರಿ ವೇಳೆ ಶೋಧಿಸಿ ಅವರನ್ನು ಅರಾಜಕವಾಗಿ ಬಂಧಿಸಿದರು ಮತ್ತು 10 ಪದಾಧಿಕಾರಿಗಳನ್ನು ಬಂಧಿಸಿ ಅಕ್ರಮ ಬಂಧನದಲ್ಲಿಟ್ಟರು. ಪೊಲೀಸರ ಈ ಕ್ರಮ ಅಲ್ಲಿನ ಕೈಗಾರಿಕಾ ಪ್ರದೇಶದ ಇತರ ವಲಯಗಳ ಮೇಲೆ ತರಂಗ ಪರಿಣಾಮಗಳನ್ನು ಬೀರಿತು. ಅಕ್ಟೋಬರ್ 21 ರಂದು ಉತ್ತರ ಕೈಗಾರಿಕಾ ಪ್ರದೇಶದಾದ್ಯಂತ ಒಂದು ದಿನದ ಮುಷ್ಕರವನ್ನು ಆಯೋಜಿಸುವುದಾಗಿ ಸಿಐಟಿಯು ಘೋಷಿಸಿತು.

ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಕೈಗಾರಿಕೆಗಳಲ್ಲಿ ಸಿಐಟಿಯು ಸಂಘಟನೆ ಇದೆ. ತಮಿಳುನಾಡನ್ನು ಹೂಡಿಕೆದಾರರ ಸ್ನೇಹಿ ರಾಜ್ಯವೆಂದು ಪರಿಗಣಿಸಲಾಗಿದೆ ಮತ್ತು ಚೆನ್ನೈನಲ್ಲಿ ನಡೆಯುತ್ತಿರುವ ಕಾರ್ಮಿಕರ ಮುಷ್ಕರವು ಡಿಎಂಕೆ ಮೈತ್ರಿಯನ್ನು ಪರೀಕ್ಷಿಸಬಹುದಾದ ರಾಜಕೀಯ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂಬ ಆತಂಕವನ್ನು ಬಂಡವಾಳಶಾಹಿ ಮಾಧ್ಯಮಗಳು ಹುಟ್ಟುಹಾಕಿದವು. ಬಂಡವಾಳಶಾಹಿಗಳ ಇವೆಲ್ಲಾ ಅಪಪ್ರಚಾರಗಳ ನಡುವೆಯೂ, ಆಡಳಿತದ ಮತ್ತು ಪೊಲೀಸರ ದಾಳಿಗಳನ್ನು ಒಗ್ಗಟ್ಟಿನಿಂದ ಎದುರಿಸಿ ನಿಂತ ಸ್ಯಾಮ್ ಸಂಗ್ ಕಾರ್ಮಿಕರು ಐತಿಹಾಸಿಕ ಜಯದೊಂದಿಗೆ ಕೆಲಸಕ್ಕೆ ಮರಳಿದ್ದಾರೆ.

ಇದನ್ನೂ ನೋಡಿ: ಪಿಎಂಎಲ್‌ಎ ಮತ್ತು ಯುಎಪಿಎ – ಎರಡು ಕರಾಳು ಶಾಸನಗಳ ಆಳ ಅಗಲ Janashakthi Media

 

Donate Janashakthi Media

Leave a Reply

Your email address will not be published. Required fields are marked *