ಕೊಪ್ಪಳ: ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಿಗೆ ಗ್ರಾಮೀಣಾ ಭಾಗದ ಹಳ್ಳಿಯ ಮುಗ್ದಜನರು ಸರ್ಕಾರಿ ಕಚೇರಿಗಳಿಗೆ ತಮ್ಮ ದಾಖಲಾತಿಗಳನ್ನು ಮಾಡಿಸಿಕೊಳ್ಳಲು ಹೋಗುತ್ತಾರೆ. ಅದನ್ನು ನಾವುಗಳು ಕಣ್ಣಾರೆ ಕಂಡಿರುತ್ತೇವೆ. ಅಂತಹವರಿಗೆ ಸಹಾಯ ಕೂಡ ಮಾಡಿ ಬಂದಿರುತ್ತೇವೆ. ಸರ್ಕಾರಿ ಕಚೇರಿಗಳಿಗೆ ಬರುವ ಎಷ್ಟೋ ಹಳ್ಳಿಯ ಜನರಿಗೆ ಓದು ಬರಹ ಗೊತ್ತಿಲ್ಲದೆ ಇರುವುದರಿಂದ ಅವರ ಕೆಲಸಗಳನ್ನು ಯಾರಾದರೂ ಆಯಾ ಸರ್ಕಾರಿ ಕಚೇರಿಗಳ ಪಕ್ಕದಲ್ಲಿ ಕುಳಿತಿರುವ ಓದಿರುವಂತಹ ತಿಳಿದಿರುವಂತವರು ಅವರಿಗೆ ಅರ್ಜಿಯನ್ನು ಬರೆದುಕೊಟ್ಟು ಸಹಾಯ ಮಾಡುತ್ತಾರೆ. ಅರ್ಜಿ
ಅದೇ ರೀತಿಯಲ್ಲಿ ಇಲ್ಲೊಬ್ಬ ಅರ್ಜಿ ಬರೆದು ಕೊಡುವ ವಿಶೇಷ ವ್ಯಕ್ತಿಯನ್ನು ಕಂಡು ಅವರ ಬದುಕಿನ ನೋವುಗಳನ್ನು ಕೊಪ್ಪಳದ ಪತ್ರಕರ್ತರಾದ ಪ್ರಕಾಶ್ ಕಂದಕೂರ ಅವರು ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ನೋಡಿ.
ಇದನ್ನೂ ಓದಿ:ಹರಿದು ಹೋಗಿದೆ ಕೌದಿ ಹೊಲಿಯುವವರ ಬದುಕು
ಇದೊಂದ್ ಪಾರಮ್ ತುಂಬಿ ಕೊಡಪ್ಪಾ, ಪುಣ್ಯ ಬರತೈತಿ ನಿನಗ’ ಎಂದು ದಯನೀಯವಾಗಿ ಕೇಳುವ ಜನರನ್ನು ಸರ್ಕಾರಿ ಕಛೇರಿಗಳಲ್ಲಿ, ಬ್ಯಾಂಕುಗಳಲ್ಲಿ ಬಹುತೇಕರು ನೋಡಿರುತ್ತಾರೆ. ಕೆಲವೊಬ್ಬರು ಅವರಿಗೆ ಸಹಾಯವನ್ನೂ ಮಾಡುತ್ತಾರೆ. ಇನ್ನೂ ಕೆಲವರು ಕೇಳಿಯೂ ಕೇಳದಂತೆ ಸುಮ್ಮನಾಗಿಬಿಡುತ್ತಾರೆ. ಮರುಕಪಟ್ಟುಕೊಂಡು ಯಾರಾದರೂ ಆ ಫಾರಂ ತುಂಬಿಕೊಡುವವರು ಸಿಗುವವರೆಗೂ ಅವರ ಅಂಗಲಾಚುವಿಕೆ ನಡೆದೇ ಇರುತ್ತದೆ. ಬಹುತೇಕ ಅಕ್ಷರ ಬಲ್ಲವರು ಇಂಥವರಿಗೆ ಸಹಾಯ ಮಾಡಲು ಮುಂದೆ ಬರಲೊಲ್ಲರೇಕೆ? ನಾಲ್ಕು ಅಕ್ಷರ ಬರೆದುಕೊಟ್ಟರೆ ಇವರ ಗಂಟೇನಾದರೂ ಹೋದೀತೆ?
ಸಾಮಾನ್ಯವಾಗಿ ಅನಕ್ಷರಸ್ಥರು ಇಂತಹ ಕಛೇರಿಗಳಿಂದ ದೂರವುಳಿಯಲು ಇದು ಪ್ರಮುಖ ಕಾರಣವೆನ್ನಬಹುದೇನೋ? ಇದನ್ನು ತಪ್ಪಿಸುವ ಸಲುವಾಗಿಯೇ ಇತ್ತೀಚೆಗೆ ಅರ್ಜಿ ನಮೂನೆಗಳನ್ನು ಸಲ್ಲಿಸಲು ಆನ್‍ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವಿಧ ಇಲಾಖೆಗಳು, ಹಣ ಪಡೆಯುವ ಮತ್ತು ಜಮಾಮಾಡುವ, ಚೆಕ್ ಜಮಾ ಮಾಡುವ ಮಷೀನ್ ಗಳನ್ನು ಇಡಲಾಗಿದೆ ಎಂದು ಬ್ಯಾಂಕುಗಳು ಹೇಳುತ್ತವೆ. ಆದರೆ ಅಕ್ಷರ ಬರೆಯಲೂ ಬಾರದ ಜನರಿಗೆ ಯಾವ ಅಳುಕಿಲ್ಲದೆ ಇವುಗಳನ್ನು ಬಳಕೆ ಮಾಡಲಾದೀತೇ?
ಇದನ್ನೂ ಓದಿ:ನಮ್ಮ ಆರ್ಥಿಕತೆಯಲ್ಲಿ ಎಷ್ಟು ಉದ್ಯೋಗಗಳ ಸೃಷ್ಟಿ ಆಗಬೇಕು?
ಅಕ್ಷರ ಬರೆಯಲು ಬಾರದವರಿಗೆ ಇಂತಹ ಸ್ಥಳಗಳಲ್ಲಿ ಸಹಾಯ ಮಾಡಲು ಕೆಲವೊಬ್ಬರು ಅಲ್ಲಲ್ಲಿ ಕಾಣಸಿಗುತ್ತಾರೆ. `ಅರ್ಜಿ ಬರೆಯುವವರು’ ಎಂದೇ ಇವರನ್ನು ಜನ ಕರೆಯುತ್ತಾರೆ. ಯಾವ ಇಲಾಖೆ, ಬ್ಯಾಂಕಿಗೆ ಸಂಬಂಧಿಸಿದ ಅರ್ಜಿಯೇ ಇರಲಿ ಅದನ್ನು ಸರಿಯಾಗಿ ತುಂಬಿ ಕೊಟ್ಟು ಅವರ ಕೆಲಸ ಶೀಘ್ರವಾಗುವಲ್ಲಿ ಸಹಕರಿಸುತ್ತಾರೆ. ಅವರು ಕೊಟ್ಟಷ್ಟು ಹಣವನ್ನು ಪಡೆದು ತಮ್ಮ ಜೀವನದ ಬಂಡಿಯನ್ನು ನಡೆಸುತ್ತಿದ್ದಾರೆ.
ಇಂತಹ ಕಾಯಕವನ್ನೇ ನಂಬಿಕೊಂಡಿರುವ ವ್ಯಕ್ತಿ ಬಿಸ್ಮಿಲ್ಲಾ ಗುಡಸಲಮನಿ. ಕೊಪ್ಪಳದ ಸಿರಸಪ್ಪಯ್ಯನಮಠದ ನಿವಾಸಿಯಾಗಿರುವ ಇವರು ಕಳೆದ 30 ವರ್ಷಗಳಿಂದ ಇದೇ ವೃತ್ತಿಯನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ. ಬಿ.ಎ ಪದವೀಧರರಾಗಿರುವ 46 ವರ್ಷದ ಈ ಬಿಸ್ಮಿಲ್ಲಾ ಅವಿವಾಹಿತರು. ಹೈಸ್ಕೂಲು ಓದುವಾಗಲೇ ಅವರಿವರಿಗೆ ಅರ್ಜಿ ಬರೆದುಕೊಡುತ್ತಿದ್ದರಂತೆ. ಅಂದಿನಿಂದಲೂ ಈ ವೃತ್ತಿ ಇವರಿಗೆ ಅನ್ನ ನೀಡುತ್ತಿದೆ.`
ಮೊದಲೆಲ್ಲ ಸರ್ಕಾರಿ ಕಛೇರಿಗಳ ಹೊರಗೆ ಜನ ನಮ್ಮ ಬರುವಿಕೆಯನ್ನ ಕಾಯುತ್ತಿದ್ದರು. ಆಗೆಲ್ಲ ಕೈತುಂಬ ಕೆಲಸ ಇತ್ತು. ಜೀವನವೂ ನೆಮ್ಮದಿಯಾಗಿ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಆನ್‍ಲೈನ್ ಅರ್ಜಿಗಳು ಶುರುವಾದಾಗಿನಿಂದ ಬದುಕು ಸಾಗಿಸುವುದು ದುಸ್ಥರವಾಗಿದೆ’ ಎಂದು ತಮ್ಮ ನೋವು ತೋಡಿಕೊಂಡರು ಬಿಸ್ಮಿಲ್ಲಾ.
ಸರ್ಕಾರ ಇಂತಹವರನ್ನು ಗುರುತಿಸಿ ಅವರಿಗೆ ಬುದುಕು ಸಾಗಿಸುವುದಕ್ಕೆ ನೇರವಾಗಬೇಕು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಅರ್ಜಿ ಬರೆದುಕೊಡುವುದಕ್ಕೆ ವಿಶೇಷವಾಗಿ ಒಬ್ಬರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರ ಮನಸು ಮಾಡಬೇಕಿದೆ.
ವಿಡಿಯೋ ನೋಡಿ:ದೇವದಾಸಿ ಪದ್ದತಿ ಹುಟ್ಟಿದ್ದು ಸನಾತನ ಧರ್ಮದಿಂದ – ಬಿ. ಮಾಳಮ್ಮ Janashakthi Media