ವಿವೇಕಾನಂದ ಹೆಚ್. ಕೆ.
ಸರ್ಕಾರದ ತೆರಿಗೆ ಆದಾಯದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಜಿಎಸ್ಟಿ ಸಂಗ್ರಹ ದೇಶದಲ್ಲೇ ಅತಿಹೆಚ್ಚು ಎನ್ನಲಾಗುತ್ತಿವೆ. ಇದರ ಕಾರಣಗಳು ಮತ್ತು ಎರಡು ಮುಖಗಳ ನಿಜವಾದ ವಾಸ್ತವವನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
ಒಂದು ಮುಖ,
ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತಿರುವುದು, ಡಿಜಿಟಲೀಕರಣದ ಪರಿಣಾಮ ಸಾಕಷ್ಟು ಜನ ತೆರಿಗೆ ವ್ಯಾಪ್ತಿಗೆ ಸೇರಿರುವುದು, ಮೊಬೈಲ್ ಬ್ಯಾಂಕಿಂಗ್ ಪಾವತಿ ಹೆಚ್ಚಾಗಿರುವುದು, ತೆರಿಗೆ ಸೋರಿಕೆ ಪ್ರಮಾಣ ಕಡಿಮೆಯಾಗಿರುವುದು, ಅಧಿಕಾರಿಗಳ ದಕ್ಷತೆ ಹೆಚ್ಚಾಗಿರುವುದು, ತೆರಿಗೆ ವಂಚನೆಗೆ ಕಡಿವಾಣ ಹಾಕಿರುವುದು, ಸರ್ಕಾರದ ಅಭಿವೃದ್ಧಿ ನೀತಿಗಳು ಉತ್ತಮ ಫಲಿತಾಂಶ ನೀಡುತ್ತಿರುವುದು ಹೀಗೆ ಹಲವು ಕಾರಣಗಳು ಇರಬಹುದು. ಅದಕ್ಕಾಗಿ ಹೆಮ್ಮೆ ಪಡಬಹುದು.
ಎರಡನೆಯ ಮುಖ,
ತೀರಾ ಜೀವನಾವಶ್ಯಕ ವಸ್ತುಗಳಿಗೂ ಕೂಡ ಅನಾವಶ್ಯಕ ಜಿಎಸ್ಟಿ ತೆರಿಗೆ ವಿಧಿಸಿರುವುದು, ಬೆಲೆಗಳನ್ನು ನಿಯಂತ್ರಿಸದೆ ಅವು ಸಿಕ್ಕಾಪಟ್ಟೆ ಜಾಸ್ತಿಯಾಗಿರುವುದು, ಮುಖ್ಯವಾಗಿ ಡೀಸೆಲ್ ಪೆಟ್ರೋಲ್ ಅಡುಗಿ ಅನಿಲದ ಬೆಲೆ ಹೆಚ್ಚಳದಿಂದ ಇತರ ಎಲ್ಲಾ ವಸ್ತುಗಳ ಬೆಲೆ ಏರಿಕೆ, ವಿಶ್ವದ ಕೆಲವು ದೇಶಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಮತ್ತು ಮುಂದೆ ವಿಶ್ವದಲ್ಲಿ ಮತ್ತೊಮ್ಮೆ ಆರ್ಥಿಕ ಕುಸಿತ ಉಂಟಾಗಬಹುದು ಎಂಬ ಅತಿಯಾದ ಭಯದಿಂದ ಸರ್ಕಾರ ಹೆಚ್ಚು ಹಣ ಸಂಗ್ರಹಣೆಯಲ್ಲಿ ತೊಡಗಿರುವುದು, ಕೋವಿಡ್ ನಂತರ ಆರ್ಥಿಕ ಚಟುವಟಿಕೆಗಳು ಸಹಜವಾಗಿ ಹೆಚ್ಚಾದ ಕಾರಣ ಅದನ್ನು ಮರೆ ಮಾಚಿ ಆರ್ಥಿಕ ನೀತಿಗಳ ಸಮರ್ಥನೆಗಾಗಿ ಅಂಕಿ ಅಂಶಗಳ ವೈಭವೀಕರಣ ಹೀಗೆ ಹಲವು ಕಾರಣಗಳು ಇರಬಹುದು. ಅದಕ್ಕಾಗಿ ನೋವು ಮತ್ತು ಬೇಸರವೂ ಪಡಬಹುದು.
ಇವುಗಳ ಮಧ್ಯೆ ಸತ್ಯ ಮತ್ತು ವಾಸ್ತವವನ್ನು ಜನ ಮತ್ತು ದೇಶದ ಹಿತದೃಷ್ಟಿಯಿಂದ ನೋಡಬೇಕಿದೆ. ಒಂದು ಕಡೆ ಶ್ರೀಮಂತರು ಮತ್ತು ಶ್ರೀಮಂತಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ ಅನೇಕ ಮದ್ಯಮ ವರ್ಗದವರು ಬಡತನಕ್ಕೆ ಜಾರುತ್ತಿದ್ದಾರೆ.
ಗ್ರಾಹಕ ಸಂಸ್ಕೃತಿ ವ್ಯಾಪಕವಾಗಿ ಹರಡಿ ಕೊನೆಗೆ ರೋಗಿಗಳು, ವಿದ್ಯಾರ್ಥಿಗಳು, ಭಕ್ತರು, ವೀಕ್ಷಕರು ಸಹ ಆಯಾ ಕ್ಷೇತ್ರದ ಗ್ರಾಹಕರೇ ಎಂದು ಭಾವಿಸುವಷ್ಟು ವ್ಯಾಪರೀಕರಣವಾಗಿದೆ. ರಾಜಕೀಯವು ವ್ಯಾಪಾರವಾಗಿ ಸೇವೆ ಎಂಬುದು ಸಂಪೂರ್ಣ ಮರೆಯಾಗಿದೆ.
ಹಣ ಕೇಂದ್ರೀಕೃತ ಅಭಿವೃದ್ಧಿಯನ್ನು ಜಿಎಸ್ಟಿ ಸಂಗ್ರಹದ ಆಧಾರದ ಮೇಲೆ ಅಳೆಯಲಾಗುತ್ತಿದೆ. ಪರಿಸರ ಮಾಲಿನ್ಯ, ಗಾಳಿಯ ದೂಳು, ನೀರಿನಲ್ಲಿ ಬೆರೆತ ರಸಾಯನಿಕ, ಆಹಾರದ ಕಲಬೆರಕೆ, ಕ್ಯಾನ್ಸರ್ ರೋಗಿಗಳ ಸಂಖ್ಯೆ, ನಿದ್ರಾಹೀನತೆಯ ಸಮಸ್ಯೆ, ನೆಮ್ಮದಿಯ ಗುಣಮಟ್ಟ ಕುಸಿತ, ಶೈಕ್ಷಣಿಕ ಭ್ರಷ್ಟಾಚಾರ, ಚುನಾವಣಾ ಅಕ್ರಮ, ಮಾನವೀಯ ಮೌಲ್ಯಗಳ ಕುಸಿತ ಇವು ಯಾವುದನ್ನು ಪರಿಗಣಿಸದೆ ತೆರಿಗೆ ಸಂಗ್ರಹದ ಹೆಚ್ಚಳವನ್ನೇ ಸಾಧನೆ ಎಂದು ಹೆಮ್ಮೆ ಪಡುವ ಹಂತಕ್ಕೆ ನಾವು ತಲುಪಿದ್ದೇವೆ.