‘ಅಂತಾರಾಷ್ಟ್ರೀಯ’ ಮಧ್ಯಮ ವರ್ಗದ ಉದಯದ ಪ್ರವೃತಿ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್

ಮೂರನೆಯ ಜಗತ್ತಿನ ಮೂಲದ ವ್ಯಕ್ತಿಗಳು ಮುಂದುವರಿದ ಜಗತ್ತಿನ ದೇಶಗಳಲ್ಲಿ ಉದಯೋನ್ಮುಖ ರಾಜಕಾರಣಿಗಳಾಗಿ ಮತ್ತು ಉದ್ಯಮಿಗಳಾಗಿ ಪ್ರಾಮುಖ್ಯತೆ ಪಡೆಯುತ್ತಿರುವುದೂ ಒಂದು ಹೊಸ ವಿದ್ಯಮಾನವೇ. ಇದು ಮುಂದುವರಿದ ಜಗತ್ತಿನ ದೇಶಗಳು ಮೂರನೆಯ ಜಗತ್ತಿನ ದೇಶಗಳ ಮಧ್ಯಮ ವರ್ಗದ ವ್ಯಕ್ತಿಗಳನ್ನು “ಗೌರವದಿಂದ” ಕಾಣುತ್ತಾರೆ ಎಂಬ ನಂಬಿಕೆಯ ನೆಲೆಯಲ್ಲಿ ಮೂರನೆಯ ಜಗತ್ತಿನ ಮಧ್ಯಮ ವರ್ಗದ ಮನವೊಲಿಸುವ ಪರಿಣಾಮವನ್ನೂ ಸಹ ಹೊಂದಿದೆ. ಒಂದು ಹೊಸ ಮತ್ತು “ನ್ಯಾಯಸಮ್ಮತ” ವಿಶ್ವ ವ್ಯವಸ್ಥೆಯು ಉದಯವಾಗುತ್ತಿದೆ, ಸಾಮ್ರಾಜ್ಯಶಾಹಿಯು ಇನ್ನು ಮುಂದೆ ಒಂದು ವಿದ್ಯಮಾನವಾಗಿ ಉಳಿಯದು ಎಂದು ನಂಬಿರುವ ಒಂದು ಹೊಸ ‘ಅಂತಾರಾಷ್ಟ್ರೀಯ’ಮಧ್ಯಮ ವರ್ಗ ಉದಯವಾಗುತ್ತಿರುವುದನ್ನು ಇದು ಸೂಚಿಸುತ್ತಿದೆಯೇ? ಇದರ ಪರಿಣಾಮಗಳೇನು? ಮುಖ್ಯವಾಗಿ, ದಬ್ಬಾಳಿಕೆಗೊಳಗಾದ ವರ್ಗಗಳೂ ಸಹ ಮಧ್ಯಮ ವರ್ಗದ ಈ ಸೈದ್ಧಾಂತಿಕ ನಿಲುವಿಗೆ ಮೌನವಾಗಿ ಶರಣಾಗಿರುವ ಒಂದು ಅಭೂತಪೂರ್ವ ಸನ್ನಿವೇಶದಲ್ಲಿ…

ಬ್ರಿಟಿಷ್ ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸದ ಪಕ್ಕದಲ್ಲಿಯೇ ಬ್ರಿಟನ್ನಿನ ಹಣಕಾಸು ಸಚಿವ ಭಾರತ ಮೂಲದ ರಿಷಿ ಸುನಕ್ ಅವರ ಅಧಿಕೃತ ನಿವಾಸವೂ ಇದೆ. ಬ್ರಿಟನ್‌ನ ಗೃಹ ಸಚಿವೆ ಪ್ರೀತಿ ಪಟೇಲ್ ಸಹ ಭಾರತ ಮೂಲದವರೇ. ಅಮೆರಿಕದ ಉಪಾಧ್ಯಕ್ಷೆ ಆಗಿರುವ ಕಮಲಾ ಹ್ಯಾರಿಸ್ ಅವರ ತಾಯಿ ಭಾರತದವರು ಮತ್ತು ತಂದೆ ಜಮೈಕಾದವರು. ಹೀಗೆ, ಅಂತಾರಾಷ್ಟ್ರೀಯ ವ್ಯಾಪಾರ-ಉದ್ಯಮ ಜಗತ್ತಿನಲ್ಲಿ ಇಂತಹ “ಯಶೋಗಾಥೆಗಳ” ಅನೇಕ ಗಮನಾರ್ಹ ಉದಾಹರಣೆಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಈ ವ್ಯಕ್ತಿಗಳು ತಮ್ಮ ಮೂಲ-ದೇಶಗಳಿಂದ ಬೇರುಗಳನ್ನು ಪೂರ್ಣವಾಗಿ ಕತ್ತರಿಸಿಕೊಂಡವರಲ್ಲ. ಉದಾಹರಣೆಗೆ, ರಿಷಿ ಸುನಕ್ ಅವರ ಪತ್ನಿ ಭಾರತದ ಪೌರರಾಗಿಯೇ ಇದ್ದಾರೆ. ಅಮೆರಿಕಾದ ವಿದೇಶಾಂಗ ಸಚಿರಾಗಿದ್ದ ಜೆಕ್ ಮೂಲದ ಮ್ಯಾಡೆಲಿನ್ ಆಲ್‌ಬ್ರೈಟ್ ಅವರನ್ನು ಹಿಂದೊಮ್ಮೆ ಜೆಕ್ ಗಣರಾಜ್ಯದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಪ್ರಸ್ತಾಪ ಮಾಡಲಾಗಿತ್ತು.

ಇವು ಅಭೂತಪೂರ್ವ ವಿದ್ಯಮಾನಗಳೇ. ಬೇರೊಂದು ದೇಶದ ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದ ಕೆಲವು ವ್ಯಕ್ತಿಗಳು ತಾವು ನೆಲೆ ಕಂಡುಕೊಂಡ ದೇಶಗಳಲ್ಲಿ ಪ್ರಮುಖ ರಾಜಕೀಯ ಸ್ಥಾನಗಳನ್ನು ಅಲಂಕರಿಸಿರುವುದೂ ನಿಜವೇ. ಒಬ್ಬ ಯಹೂದಿ ಮತ್ತು ಇಟಾಲಿಯನ್ ಭಾಷಿಕ ಹಿನ್ನೆಲೆಯ ಬೆಂಜಮಿನ್ ಡಿಸ್ರೇಲಿ ಅವರು ಬ್ರಿಟನ್ನಿನ ಪ್ರಧಾನಿಯಾಗಿದ್ದರು ಎಂಬುದು ಈ ಮಾತಿಗೆ ಎದ್ದುಕಾಣುವ ಒಂದು ಉದಾಹರಣೆ. ಆದರೆ, ಮೂರನೆಯ ಜಗತ್ತು-ಮೂಲದ ವ್ಯಕ್ತಿಗಳು ಮುಂದುವರಿದ ಜಗತ್ತಿನ ದೇಶಗಳಲ್ಲಿ ಉದಯೋನ್ಮುಖ ರಾಜಕಾರಣಿಗಳಾಗಿ ಮತ್ತು ಉದ್ಯಮಿಗಳಾಗಿ ಪ್ರಾಮುಖ್ಯತೆ ಪಡೆಯುತ್ತಿರುವುದೂ ಒಂದು ಹೊಸ ವಿದ್ಯಮಾನವೇ. ಈ ವಿದ್ಯಮಾನವು ಆತಿಥೇಯ ದೇಶಗಳ “ತಾರತಮ್ಯವಿಲ್ಲದ” ನಡತೆಯನ್ನು ಜಾಹೀರುಪಡಿಸುವುದಷ್ಟೇ ಅಲ್ಲ; ಮುಂದುವರಿದ ಜಗತ್ತಿನ ದೇಶಗಳು ಮೂರನೆಯ ಜಗತ್ತಿನ ದೇಶಗಳ ಮಧ್ಯಮ ವರ್ಗದ ವ್ಯಕ್ತಿಗಳನ್ನು “ಗೌರವದಿಂದ” ಕಾಣುತ್ತಾರೆ ಎಂಬ ನಂಬಿಕೆಯ ನೆಲೆಯಲ್ಲಿ ಮೂರನೆಯ ಜಗತ್ತಿನ ಮಧ್ಯಮ ವರ್ಗದ ಮನವೊಲಿಸುವ ಪರಿಣಾಮವನ್ನೂ ಸಹ ಹೊಂದಿದೆ. ಮತ್ತು, ಒಂದು ಹೊಸ ಮತ್ತು “ನ್ಯಾಯಸಮ್ಮತ” ವಿಶ್ವ ವ್ಯವಸ್ಥೆಯು ಉದಯವಾಗುತ್ತಿದೆ ಮತ್ತು ಈ ಹೊಸ ಜಗತ್ತಿನಲ್ಲಿ ವ್ಯಕ್ತಿಯು ಯಶಸ್ಸನ್ನು ಸಾಧಿಸಲು ಆತನ/ಅವಳ ದೇಶ-ಮೂಲ ಮುಖ್ಯವಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಹಿಂದಿನ ವಸಾಹತುಶಾಹಿ ಆಳ್ವಿಕೆಯ ದಿನಗಳಲ್ಲಿ ಮಧ್ಯಮ ವರ್ಗವು ತಮ್ಮದೇ ದೇಶಗಳಲ್ಲಿ ತಮ್ಮೊಂದಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ನೋವನ್ನು ಹೊಂದಿತ್ತು. ಒಂದು ನಿರ್ದಿಷ್ಟ ಮಟ್ಟದ ಹುದ್ದೆಗಳಿಗಿಂತ ಮೇಲಿನ ಹುದ್ದೆಗಳಿಗೆ ಏರಲು ತಮಗೆ ಅವಕಾಶ ನೀಡಲೇ ಇಲ್ಲ ಎಂಬ ನೋವಿನ ಅನುಭವವು ವಸಾಹತುಶಾಹಿ ನೊಗವನ್ನು ಕಿತ್ತೊಗೆಯುವ ಅಗತ್ಯವನ್ನು ಅವರಿಗೆ ಮನಗಾಣಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಮೂರನೆಯ ಜಗತ್ತಿನ ದೇಶಗಳ ಮಧ್ಯಮ ವರ್ಗದ ಪ್ರಸ್ತುತ ಅನುಭವವು ತಮ್ಮನ್ನು ಮುಂದೆಯೂ “ಗೌರವ”ದಿಂದಲೇ ಕಾಣುತ್ತಾರೆ ಎಂಬ ಭಾವವನ್ನು ಅವರಲ್ಲಿ ಮೂಡಿಸಿದೆ. ಮತ್ತು, ಸಾಮ್ರಾಜ್ಯಶಾಹಿಯು ಇನ್ನು ಮುಂದೆ ಒಂದು ವಿದ್ಯಮಾನವಾಗಿ ಉಳಿಯದು ಎಂದೇ ಈ ಮಧ್ಯಮ ವರ್ಗವು ಎಣಿಸುತ್ತದೆ.

‘ಅನುಸರಿಸಿಕೊಂಡು ಹೋಗುವ’ ಸಿದ್ಧಾಂತದ ಪರಿಣಾಮಗಳು

ಆದರೆ ಈ ಗ್ರಹಿಕೆಯು ಮತ್ತೊಂದು ಗ್ರಹಿಕೆಗೆ ಪುಷ್ಟಿ ನೀಡುತ್ತದೆ. ಇಂದಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಾಮಾಜಿಕ-ಆರ್ಥಿಕ ಪ್ರಗತಿಗೆ ಏನಾದರೂ ಅಡೆ ತಡೆಗಳಿದ್ದರೆ, ಅವು ವ್ಯಕ್ತಿಯ ಹುಟ್ಟಿನ ಮೂಲದಿಂದ ಅಥವಾ ಚರ್ಮದ ಬಣ್ಣದಿಂದ ಉದ್ಭವಿಸುವುದಿಲ್ಲ. ಆದರೆ, “ತೊಂದರೆಯನ್ನಷ್ಟೇ ಉಂಟುಮಾಡುವ” “ಹಳೆಯ-ಶೈಲಿಯ” ಎಡಪಂಥೀಯ ಸೈದ್ಧಾಂತಿಕ ನಂಬಿಕೆಗಳಿಗೆ ಆತುಕೊಳ್ಳುವುದರಿಂದ ಉದ್ಭವಿಸುತ್ತವೆ. ಜಾತಿ ಅಥವಾ ಜನಾಂಗೀಯತೆ ಆಧಾರಿತ ತಾರತಮ್ಯಗಳು ಮರೆಯಾದಂತೆ ತೋರುವುದರಿಂದ, ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಏಳಿಗೆ ಹೊಂದಬೇಕು ಎಂದಾದರೆ, ಇಂತಹ ಸೈದ್ಧಾಂತಿಕ ನಂಬಿಕೆಗಳನ್ನು ತ್ಯಜಿಸಬೇಕು. ಹೇಗಿದ್ದರೂ ಅವು ಸತ್ವಹೀನವಾಗಿವೆ ತಾನೇ. ಈ ರೀತಿಯ ಒಂದು ಗ್ರಹಿಕೆಯು ಮಧ್ಯಮ ವರ್ಗಗಳಲ್ಲಿ ಕಂಡುಬರುವ ಈ ‘ಅನುಸರಿಸಿಕೊಂಡು ಹೋಗುವ’ ಸಿದ್ಧಾಂತದ ತಳದಲ್ಲಿದೆ ಎಂಬುದನ್ನು ಸಮಕಾಲೀನ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯು ಅಸ್ತಿತ್ವದದಲ್ಲಿರುವ ಎಲ್ಲ ದೇಶಗಳಲ್ಲೂ ಕಾಣಬಹುದು. ಈ ಸೈದ್ಧಾಂತಿಕ ಮನೋಭಾವಕ್ಕೆ ಹೊಂದಿಕೊಳ್ಳದಿರುವುದು ಸತ್ವಹೀನವಂತೂ ಆಗಿದೆ, ಅದರಿಂದ ವೃತ್ತಿಜೀವನವೂ ಹಾನಿಗೊಳಗಾಗುತ್ತದೆ ಎಂದು ಭಾವಿಸಲಾಗುತ್ತಿದೆ. ಇದು ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಮೊದಲನೆಯ ಪರಿಣಾಮವೆಂದರೆ, ಮಧ್ಯಮವರ್ಗದ ಈ ಸೈದ್ಧಾಂತಿಕ ಮನೋಭಾವವು, ಸಮಾಜವನ್ನು ಒಂದು ಕ್ರಾಂತಿಕಾರಕವಲ್ಲದ ದಿಕ್ಕಿನಲ್ಲೂ ಸಹ ಬದಲಾಯಿಸುವ ಅದರ ಹುಮ್ಮಸ್ಸನ್ನು ಕುಗ್ಗಿಸುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನವ ಉದಾರವಾದಕ್ಕೆ ಬದ್ಧವಾಗಿರುವುದೇ ಮಧ್ಯಮ ವರ್ಗವನ್ನು ನಿರೂಪಿಸುವ ಈ ಸೈದ್ಧಾಂತಿಕ ಏಕರೂಪತೆಯ ತಿರುಳು. ಬಂಡವಾಳಶಾಹಿ ವ್ಯವಸ್ಥೆಯನ್ನು ಕಾರ್ಮಿಕರಿಗೂ ಹಿಡಿಸುವಂತೆ ಮಾಡುವ ಉದ್ದೇಶದಿಂದ, ಅರ್ಥವ್ಯಸ್ಥೆಯಲ್ಲಿ ಸರ್ಕಾರದ ಮಧ್ಯಪ್ರವೇಶದ ಅಗತ್ಯದ ಬಗ್ಗೆ ಜಾನ್ ಮೇನಾರ್ಡ್ ಕೀನ್ಸ್ ಮತ್ತು ಇತರರು ಪ್ರತಿಪಾದಿಸಿದ “ಹೊಸ ಉದಾರವಾದ”ದ ಬಗ್ಗೆಯೂ ಮಧ್ಯಮ ವರ್ಗವು ಒಲವು ಹೊಂದಿಲ್ಲ. ಅಷ್ಟು ಮಟ್ಟಿನ “ಸಾಮಾಜಿಕ ಎಂಜಿನಿಯರಿಂಗ್” ಸಹ ಈಗ ಉದಯೋನ್ಮುಖವಾಗುತ್ತಿರುವ ಬಹುಪಾಲು ಮಧ್ಯಮ ವರ್ಗಕ್ಕೆ ಅನಗತ್ಯವಾಗಿ ತೋರುತ್ತದೆ. ಎರಡನೆಯ ಪರಿಣಾಮವೆಂದರೆ, ಮಧ್ಯಮ ವರ್ಗವು ಹೊಂದಿರುವ ಸೈದ್ಧಾಂತಿಕ ನಿಲುವಿನ ಏಕರೂಪತೆಗೆ ವ್ಯಕ್ತಿಯ ದೇಶ-ಮೂಲ ಅಥವಾ ನೆಲೆಸಿದ ಸ್ಥಳ ಇವುಗಳು ಅಡಚಣೆಯಾಗದ ನೆಲೆಯಲ್ಲಿ ಈ ಸೈದ್ಧಾಂತಿಕ ಅನುಸರಣೆಯು ಒಂದು “ಅಂತಾರಾಷ್ಟ್ರೀಯ” ಮಧ್ಯಮ ವರ್ಗದ ಉದಯವನ್ನು ಉತ್ತೇಜಿಸುತ್ತದೆ.

‘ಮೌನಸಮ್ಮತಿ’ಯ ಪ್ರಕ್ರಿಯೆ

ಮೂರನೆಯದಾಗಿ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ದಬ್ಬಾಳಿಕೆಗೊಳಗಾದ ವರ್ಗಗಳೂ ಸಹ ಮಧ್ಯಮ ವರ್ಗದ ಈ ಸೈದ್ಧಾಂತಿಕ ನಿಲುವಿಗೆ ಮೌನವಾಗಿ ಶರಣಾಗಿರುವ ಒಂದು ಅಭೂತಪೂರ್ವ ಸನ್ನಿವೇಶವನ್ನು ಕಾಣುತ್ತೇವೆ. ಬೂರ್ಜ್ವಾ ಮತ್ತು ಪುಟ್ಟ ಬೂರ್ಜ್ವಾ ವರ್ಗಗಳ ಶೈಕ್ಷಣಿಕ ವಿಶೇಷಾವಕಾಶ ಪಡೆದ ಮತ್ತು ಸಮಾಜ ಬದಲಾವಣೆಯ ಚಾರಿತ್ರಿಕ ಪ್ರಕ್ರಿಯೆಯನ್ನು ಸಮಗ್ರವಾಗಿ ನೋಡಲಾರಂಬಿಸಿದ ವ್ಯಕ್ತಿಗಳು ತಮ್ಮ ವರ್ಗ ಸವಲತ್ತುಗಳನ್ನು ತ್ಯಜಿಸಿ, ವರ್ಗ-ಮುಕ್ತರಾಗಿ, ಕಾರ್ಮಿಕರು ಮತ್ತು ರೈತರನ್ನು ಸಂಘಟಿಸುವಲ್ಲಿ ಒಂದು ಪ್ರವರ್ತಕ ಪಾತ್ರವನ್ನು ವಹಿಸುತ್ತಾರೆ ಎಂಬುದಾಗಿ ಮಾರ್ಕ್ಸ್ ಮತ್ತು ಎಂಗೆಲ್ಸ್ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋದಲ್ಲಿ ವಾದಿಸಿದ್ದರು. ಈ ಚಿಂತನಾಕ್ರಮವನ್ನು ಅನುಸರಿಸಿಯೇ ಲೆನಿನ್ ಹೀಗೆ ಹೇಳಿದ್ದರು: ವರ್ಗ-ಮುಕ್ತರಾದ ಕೆಲವು ಬುದ್ದಿಜೀವಿಗಳು ಕೇವಲ ಟ್ರೇಡ್ ಯೂನಿಯನ್ ಪ್ರಜ್ಞೆಗಿಂತ ಭಿನ್ನವಾದ ಸಮಾಜವಾದಿ ಪ್ರಜ್ಞೆಯ ಬಗ್ಗೆ ದುಡಿಯುವ ವರ್ಗಕ್ಕೆ ಅರಿವು ಮೂಡಿಸುತ್ತಾರೆ. ಆದರೆ, ಬುದ್ದಿಜೀವಿಗಳು ತಮ್ಮನ್ನು ತಾವು ಎಷ್ಟರಮಟ್ಟಿಗೆ ವರ್ಗ-ಮುಕ್ತಗೊಳಿಸಿಕೊಳ್ಳುತ್ತಾರೆ ಎಂಬುದು ಅವರ ಬೌದ್ಧಿಕ ನಂಬಿಕೆಗಳ ಮೇಲೆ ಅವಲಂಬಿತವಾಗಿಲ್ಲ; ಅದು “ಅನ್ಯಾಯದಿಂದ ಕೂಡಿದ” ವ್ಯವಸ್ಥೆಯು ಅವರ ವೈಯಕ್ತಿಕ ವೃತ್ತಿಜೀವನದಲ್ಲಿ ಎಷ್ಟರಮಟ್ಟಿಗೆ ಅಡಚಣೆಯಾಗಿತ್ತು ಎಂಬುದನ್ನು ಬುದ್ಧಿಜೀವಿಗಳಾಗಿ ಅವರು ಪಡೆದ ಅನುಭವದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ವೈಯಕ್ತಿಕ ಪ್ರಗತಿಗೆ ಎದುರಾಗುವ ಅಡೆ ತಡೆಗಳ ನಿವಾರಣೆಯು ವರ್ಗ-ಮುಕ್ತ ಬುದ್ಧಿಜೀವಿಗಳ ಗುಂಪಿನ ಪ್ರಮಾಣದ ಮೇಲೂ ಪ್ರಭಾವ ಬೀರುತ್ತದೆ, ಆಮೂಲಕ ಕಾರ್ಮಿಕ ವರ್ಗಕ್ಕೆ  ಕ್ರಾಂತಿಕಾರಿ ಸಿದ್ಧಾಂತವನ್ನು ಎಷ್ಟರ ಮಟ್ಟಿಗೆ ತರಲಾಗುತ್ತದೆ ಎಂಬ ಅಂಶದೊಂದಿಗೂ ಸಂಬಂಧ ಹೊಂದಿದೆ. ಇಂದು ಆಗುತ್ತಿರುವುದು ಇದೇ. ಮೈ ಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡದೆಂದು ತೋರುವ ವ್ಯವಸ್ಥೆಯು ‘ನ್ಯಾಯಯುತ’ವಾಗಿದೆ ಎಂದು ಕಾಣಿಸುವರ ಪರಿಣಾಮವಾಗಿ ಅದರ ಬಗ್ಗೆ  ದಬ್ಬಾಳಿಕೆಗೊಳಗಾದವರಲ್ಲಿ ಮೌನಸಮ್ಮತಿಯನ್ನು  ಉತ್ತೇಜಿಸುತ್ತದೆ. ಈ ವಿದ್ಯಮಾನವು ಸಮಕಾಲೀನ ನವ ಉದಾರವಾದಿ ಬಂಡವಾಳಶಾಹಿಯ ಒಂದು ಲಕ್ಷಣವೇ ಆಗಿದೆ ಎಂಬುದನ್ನು ಅನೇಕರು ಗಮನಿಸಿದ್ದಾರೆ.

ಈ ವಿದ್ಯಮಾನವು ನಮ್ಮನ್ನು ಸಮಸ್ಯೆಯ ತಿರುಳಿನತ್ತ ಕೊಂಡೊಯ್ಯುತ್ತದೆ. ನವ-ಉದಾರವಾದವು ಮೂರನೇ ಜಗತ್ತಿನ ರೈತರು ಮತ್ತು ಕಿರು ಉತ್ಪಾದಕರನ್ನು ಸದಾಕಾಲವೂ ದುರವಸ್ಥೆಗೆ ತಳ್ಳುತ್ತದೆ. ಅವರ ಜೀವನ ಮಟ್ಟವನ್ನು ಹದಗೆಡಿಸುತ್ತದೆ. ನವ-ಉದಾರವಾದವು ಕಾರ್ಮಿಕರನ್ನು ಸಂಪೂರ್ಣ ದುರ್ಗತಿಗೆ ತಳ್ಳುತ್ತದೆ: ಕಿರು ಉತ್ಪಾದನೆಯ ಮೇಲಿನ ಆಕ್ರಮಣದಿಂದಾಗಿ ಕಾರ್ಮಿಕರ ಮೀಸಲು ಪಡೆಯ (ಅಂದರೆ, ನಿರುದ್ಯೋಗಿಗಳ) ಹೆಚ್ಚಳವು ಸಕ್ರಿಯ ಉದ್ಯೋಗಿಗಳಿಗೂ ಮತ್ತು ಶ್ರಮ ಮೀಸಲು ಪಡೆಯಲ್ಲಿರುವವರಿಗೂ ನೋವುಂಟು ಮಾಡುತ್ತದೆ. ಬಂಡವಾಳದ ಜಾಗತೀಕರಣವು ಪ್ರತಿಯೊಂದು ದೇಶದ ಕಾರ್ಮಿಕರ ಚೌಕಾಶಿಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವೂ ಸಹ ಇದೇ ರೀತಿಯ ಪರಿಣಾಮವನ್ನು ಉಂಟುಮಾಡುತ್ತದೆ. ಹೀಗೆ, ನವ ಉದಾರವಾದದ ಆಳ್ವಿಕೆಯಲ್ಲಿ ಒಟ್ಟಾರೆಯಾಗಿ ದುಡಿಯುವ ಜನರ ಸ್ಥಿತಿ-ಗತಿಗಳು ಸಂಪೂರ್ಣವಾಗಿ ಹದಗೆಡುತ್ತವೆ. ಆದರೆ, “ಅಂತಾರಾಷ್ಟ್ರೀಯ” ಮಟ್ಟದಲ್ಲಿ ಮಧ್ಯಮ ವರ್ಗವಾಗಿ ಕಾಣಿಸಿಕೊಳ್ಳಬಯಸುವ ಈ ಮಧ್ಯಮ ವರ್ಗವು, ತಾರತಮ್ಯಗಳಿಗೆ ಅಂಜದೆ ವಿದೇಶಗಳಿಗೆ ವಲಸೆ ಹೋಗುವ ತನ್ನ ಸಾಮರ್ಥ್ಯದಿಂದಾಗಿ ಮತ್ತು ಸ್ವದೇಶದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಮುಂದುವರಿದ ದೇಶಗಳ ಉತ್ಪಾದನಾ ಚಟುವಟಿಕೆಗಳ ಸ್ಥಳಾಂತರದಿಂದಾಗಿ, ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದೆ. ಹಾಗಾಗಿ, ಮೂರನೆಯ ಜಗತ್ತಿನ ಬಂಡವಾಳಶಾಹಿ ಸಮಾಜಗಳಲ್ಲಿ ಒಂದು ಬಿರುಕು ಉಂಟಾಗಿದೆ. ಈ ಬಿರುಕು, ನವ ಉದಾರವಾದದಿಂದಾಗಿ ನರಳುತ್ತಿರುವ ದುಡಿಯುವ ಜನರು ಮತ್ತು ದೊಡ್ಡ ದೊಡ್ಡ ಬಂಡವಾಳಗಾರರ ನಡುವೆ ಮಾತ್ರವಲ್ಲ, ಪ್ರವರ್ಧಮಾನಕ್ಕೆ ಬರುತ್ತಿರುವ ಮಧ್ಯಮ ವರ್ಗದೊಂದಿಗೂ ಸಹ ಉಂಟಾಗಿದೆ. ಈ ಸಂಗತಿಯೇ ತುಳಿತಕ್ಕೊಳಗಾದವರು ಇವನ್ನೆಲ್ಲ ಮೌನವಾಗಿ ಒಪ್ಪಿಕೊಳ್ಳುವಂತೆ ಮಾಡುತ್ತದೆ.

ಮಧ್ಯಮ ವರ್ಗದ ಬಗ್ಗೆ ಚರ್ಚಿಸುತ್ತಿರುವ ಈ ಸಂದರ್ಭದಲ್ಲಿ ಮೂರು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಉಚಿತವಾಗುತ್ತದೆ. ಮೊದಲನೆಯದಾಗಿ, ನಾನು ಇಲ್ಲಿ “ಮಧ್ಯಮ ವರ್ಗ” ಎಂಬ ಪದವನ್ನು ಅನೇಕ ವಿಧಗಳನ್ನು ಒಟ್ಟಿಗೇ ತುಂಬಿಡುವ ಬುಟ್ಟಿಯ ರೀತಿಯಲ್ಲಿ ಬಳಸಿದ್ದೇನೆ. “ಮಧ್ಯಮ ವರ್ಗಕ್ಕೆ” ಸೇರಿದವರು ಎಂದು ಸಾಮಾನ್ಯವಾಗಿ ಕರೆಯಬಹುದಾದವರಲಿಯೂ ಸಹ ನವ ಉದಾರವಾದದ ಆಳ್ವಿಕೆಯಲ್ಲಿ ನರಳುತ್ತಿರುವವರು ಅಪಾರ ಸಂಖ್ಯೆಯಲ್ಲಿದ್ದಾರೆ. ಆದಾಗ್ಯೂ, ಮಧ್ಯಮ ವರ್ಗದ ಗಣನೀಯ ಸಂಖ್ಯೆಯ ಜನರು, ಅದರಲ್ಲೂ ವಿಶೇಷವಾಗಿ ಅದರ ಮೇಲಣ ಸ್ತರದವರು, ನವ-ಉದಾರವಾದಿ ಆಳ್ವಿಕೆಯಲ್ಲಿ ಗಮನಾರ್ಹ ಪ್ರಯೋಜನ ಪಡೆಯುತ್ತಾರೆ. ವಿಶಾಲ ಮಧ್ಯಮ ವರ್ಗದ ಒಂದು ಭಾಗವಾಗಿರುವ ಈ ಮೇಲಣ ಸ್ತರದ ಮಂದಿಯನ್ನು ನಿರೂಪಿಸಲು “ಮಧ್ಯಮ ವರ್ಗ” ಎಂಬ ಪದವನ್ನು ನಾನು ಅನುಕೂಲಕ್ಕಾಗಿ ಬಳಸಿದ್ದೇನೆ. ಎರಡನೆಯದಾಗಿ, ಈ ಮೇಲಣ ಸ್ತರದ ಮಂದಿಯ ಗುಂಪಿನಲ್ಲೂ ಸಹ, ಈ ಹಿಂದೆ ಗಮನಿಸಿದ ಸೈದ್ಧಾಂತಿಕ ನಿಲುವಿನ ಏಕರೂಪತೆಯತ್ತ ವಾಲುವ ಪ್ರವೃತ್ತಿಯು ಕೇವಲ ಒಂದು ಪ್ರವೃತ್ತಿಯೇ. ಈ ಪ್ರವೃತ್ತಿಯು ಈ ಗುಂಪಿನ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುವುದಿಲ್ಲ. ಈ ಗುಂಪಿನಲ್ಲೂ ಪ್ರಗತಿಶೀಲ ಸಾಮಾಜಿಕ ಬದಲಾವಣೆಯ ಕಲ್ಪನೆಗೆ ಬದ್ಧರಾಗಿ ಉಳಿಯುವ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಿಜ, ವರ್ಷಗಳ ಹಿಂದಿದ್ದ ಪರಿಸ್ಥಿತಿಗೆ ಹೋಲಿಸಿದರೆ ಅವರ ಸಂಖ್ಯೆ ಕಡಿಮೆಯಾಗಿದೆ. ಮೂರನೆಯದಾಗಿ, ಉಳಿದವರಲ್ಲಿಯೂ ಸಹ ಸೈದ್ಧಾಂತಿಕ ಏಕರೂಪತೆಯನ್ನು ಬೆಳೆಸುವ ಉದ್ದೇಶದ ಬೋಧನೆಯ ಪ್ರವೃತ್ತಿಯು ಒಂದು ಶಾಶ್ವತ ವಿದ್ಯಮಾನವೇನಲ್ಲ. ನವ ಉದಾರವಾದದ ಬಿಕ್ಕಟ್ಟು ಆಳಗೊಳ್ಳುತ್ತಿರುವುದರಿಂದ, ಈ ವಿಭಾಗವೂ ಸಹ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆಯಿದೆ: ಮಾರ್ಕ್ಸ್‌ನ ಭಾಷೆಯನ್ನು ಬಳಸುವುದಾದರೆ, ಆಳಗೊಳ್ಳುತ್ತಿರುವ ಬಿಕ್ಕಟ್ಟು ಅವರ ತಲೆಯಲ್ಲಿ “ದ್ವಂದ್ವಾತ್ಮಕ ನಗಾರಿ” ಬಾರಿಸುತ್ತದೆ. ಆದರೆ, ನವ ಉದಾರೀಕರಣದ ಬಗ್ಗೆ ಮೇಲಣ ಸ್ತರದ ಗುಂಪು ಹೊಂದಿರುವ ಉತ್ಸಾಹವು ಸಧ್ಯಕ್ಕಂತೂ ಕ್ಷೀಣಿಸಿದಂತೆ ಕಾಣುತ್ತಿಲ್ಲ.

ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟದ ರೂಪದಲ್ಲಿ…

“ಮಧ್ಯಮ ವರ್ಗ” ಮತ್ತು ದುಡಿಯುವ ಜನರ ನಡುವಿನ ಬಿರುಕು ನಿರ್ದಿಷ್ಟವಾಗಿ ಪ್ರಕಟಗೊಂಡಿರುವ ಒಂದು ಕ್ಷೇತ್ರವೆಂದರೆ, ತೃತೀಯ ಜಗತ್ತಿನ ದೇಶಗಳ ಮಾಧ್ಯಮಗಳ ಮನೋಭಾವ. ಖಚಿತವಾಗಿ ಹೇಳಬೇಕೆಂದರೆ, ದೊಡ್ಡ ದೊಡ್ಡ ಬಂಡವಾಳಗಾರರ ಒಡೆತನದ ಮತ್ತು ಅವರಿಂದ ನಿಯಂತ್ರಿಸಲ್ಪಡುವ ಮಾಧ್ಯಮಗಳು ತಮ್ಮ ಮಾಲೀಕರ ಸೈದ್ಧಾಂತಿಕ ನಿಲುವನ್ನು ಅಂದರೆ, ನವ-ಉದಾರವಾದವನ್ನು ಗಣನೀಯವಾಗಿ ಪ್ರತಿಬಿಂಬಿಸುತ್ತವೆ. ಈ ಮಾಧ್ಯಮಗಳು ದುಡಿಮೆಗಾರ-ವಿರೋಧಿ ನಿಲುವು ತಳೆಯುತ್ತವೆ. ಮಧ್ಯಮ ವರ್ಗವು ಹೊಂದಿರುವ ನವ ಉದಾರವಾದ-ಪರ ಧೋರಣೆಯೂ ಮಾಧ್ಯಮಗಳ ನಿಲುವಿಗೆ ಪೂರಕವಾಗಿದೆ. ಮಾಧ್ಯಮಗಳ ಕಾರ್ಯ-ನಿರ್ವಹಣೆಗಾಗಿ ಸಿಬ್ಬಂದಿಯನ್ನು ಒದಗಿಸುವ ಈ ಮಧ್ಯಮ ವರ್ಗವು ದುಡಿಯುವ ಜನರ ಪ್ರತಿರೋಧಗಳಿಗೆ ಸಹಾನುಭೂತಿ ವ್ಯಕ್ತಪಡಿಸುವುದಿಲ್ಲ ಮತ್ತು ಮಾಧ್ಯಮಗಳೂ ಸಹ ಅಂತಹ ಪ್ರತಿರೋಧಗಳನ್ನು ವರದಿ ಮಾಡುವುದೂ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಸೌಮ್ಯವಾಗಿ ಹೇಳುವುದಾದರೆ, ಜನಾಂಗೀಯ ಅಥವಾ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೊಡುವ ಕಿರುಕುಳದ ಬಗ್ಗೆ ಮಾಧ್ಯಮಗಳು ಜಾಣ-ಕುರುಡರಾಗುತ್ತವೆ. ಬಿಕ್ಕಟ್ಟಿನಿಂದ ಪೀಡಿತವಾಗಿರುವ ನವ ಉದಾರವಾದವು “ದ್ವೇಷ”ದೊಂದಿಗೆ ಕೈ ಮಿಲಾಯಿಸಿದಾಗಲೂ ಮಧ್ಯಮ ವರ್ಗವು ಅಲ್ಪಸಂಖ್ಯಾತರ ವಿರುದ್ಧ “ಬಹುಸಂಖ್ಯಾತರ ಪಾರಮ್ಯ” ಸಾಧನೆ ಮತ್ತು ದ್ವೇಷದ ವಿರುದ್ಧ ಹೋರಾಡುವುದಿಲ್ಲ.

ಭಾರತದಲ್ಲಿ “ಬಹುಸಂಖ್ಯಾತರ ಪಾರಮ್ಯ” ಮತ್ತು ನವ ಉದಾರವಾದಿ ವ್ಯವಸ್ಥೆಯ ನಡುವಿನ ಒಡನಾಟವು ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟದ ರೂಪವನ್ನು ಪಡೆಯುತ್ತದೆ ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುವುದನ್ನೇ ಒಂದು ಕೆಲಸವಾಗಿ ಮಾಡಿಕೊಳ್ಳುತ್ತದೆ. ಇಡೀ ಸಾಮಾಜಿಕ ಸಂಕಥನವು ಜನರ ಲೌಕಿಕ ಸಮಸ್ಯೆಗಳಾದ ಅನ್ನ, ಬಟ್ಟೆ ಮತ್ತು ವಸತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮರೆಮಾಚುವ ಉದ್ದೇಶದಿಂದ ದುಡಿಯುವ ಜನರನ್ನು “ಕೋಮು” ಆಧಾರದ ಮೇಲೆ ವಿಭಜಿಸುವ ಮೂಲಕ ದೊಡ್ಡ ದೊಡ್ಡ ಬಂಡವಾಳಗಾರರು ದುಡಿಯುವ ಜನರ ಆಕ್ರೋಶಕ್ಕೆ ಗುರಿಯಾಗದಂತೆ ಅವರನ್ನು ರಕ್ಷಿಸುವುದೇ ಈ ಮೈತ್ರಿಕೂಟದ ಉದ್ದೇಶವಾಗಿದೆ. ರೂಪಾಯಿಯ ವಿನಿಮಯ ಮೌಲ್ಯವು ಅಭೂತಪೂರ್ವ ಮಟ್ಟದಲ್ಲಿ ಕುಸಿದಿರುವಾಗ, ಸಗಟು ಬೆಲೆಗಳ ಹಣದುಬ್ಬರವು ಶೇ. 15 ಕ್ಕಿಂತಲೂ ಹೆಚ್ಚಿಗೆ ಇರುವಾಗ, ಗ್ರಾಹಕ ಬೆಲೆ ಹಣದುಬ್ಬರವು ಶೇ. 8ರ ಸಮೀಪದಲ್ಲಿರುವಾಗ, ಮತ್ತು ನಿರುದ್ಯೋಗವು ಸ್ವಾತಂತ್ರ‍್ಯದ ನಂತರ ಎಂದೂ ಕಾಣದಷ್ಟು ಹೆಚ್ಚಿನ ಮಟ್ಟದಲ್ಲಿರುವಾಗ, ಈ ಎಲ್ಲವನ್ನೂ ಬದಿಗೊತ್ತಿದ ಮಾಧ್ಯಮಗಳು, ವಾರಣಾಸಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶಿವಲಿಂಗ ಕಂಡುಬಂತು ಎಂಬುದರ ಬಗ್ಗೆಯೇ ಬಡಬಡಾಯಿಸುತ್ತಿದ್ದವು. ಈ ವಿದ್ಯಮಾನವು ದೇಶದ ಸಾರ್ವಜನಿಕ ಸಂಕಥನದಲ್ಲಿ ಕೋಮುವಾದಿ-ಫ್ಯಾಸಿಸ್ಟ್ ವಿಷವನ್ನು ಎಷ್ಟರಮಟ್ಟಿಗೆ ತುಂಬಲಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ವಿಷ ತುಂಬುವ ದುಷ್ಕಾರ್ಯದಲ್ಲಿ ಪೂರಕವಾಗಿ ಮಧ್ಯಮ ವರ್ಗವು ತನ್ನ ಮೌನದ ಮೂಲಕ ಭಾಗವಹಿಸಿದೆ ಅಥವಾ ಈ ದುಷ್ಕಾರ್ಯದಲ್ಲಿ ಸದ್ದಿಲ್ಲದೆ ಭಾಗವಹಿಸಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಜನರಿಗೆ ಕೋಮುವಾದಿ-ಫ್ಯಾಸಿಸ್ಟ್ ವಿಷ ಉಣಿಸುವ ಈ ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟದ ವಿರುದ್ಧ ಹೊರಾಟ ನೆಡೆಸಬೇಕಾಗುತ್ತದೆ. ಈ ಹೋರಾಟವು ನವ-ಉದಾರವಾದಿ ಕಾರ್ಯಸೂಚಿಯ ಆಚೆಗೂ ದೃಷ್ಟಿ ಹಾಯಿಸಬೇಕಾಗುತ್ತದೆ. ಅದರಾಚೆಗಿನ ಒಂದು ಪರ್ಯಾಯ ಕಾರ್ಯಸೂಚಿಯನ್ನು ದುಡಿಯುವ ಜನರ ಮುಂದಿಟ್ಟು ಅವರನ್ನು ಹೋರಾಡುವಂತೆ ಹುರಿದುಂಬಿಸುವ ಕಾರ್ಯವನ್ನು “ವರ್ಗ-ಮುಕ್ತ”ವಾಗಿ ಉಳಿದಿರುವ ಮಧ್ಯಮ ವರ್ಗದ ಘಟಕಗಳು ಕೈಗೊಳ್ಳಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *