ಎನ್.ಚಿನ್ನಸ್ವಾಮಿ ಸೋಸಲೆ
ಭಾರತ ಚರಿತ್ರೆ ನಿಜಾರ್ಥದಲ್ಲಿ ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವ ಮಾದರಿಯ ವರ್ಣ ರಂಜಿತ ಮಾದರಿಯದಾಗಿದೆ ಎಂಬುವುದು ತಿಳಿದಿರುವುದೇ ಆಗಿದೆ. ನಿಜಾರ್ಥದಲ್ಲಿ ಹೇಳಬೇಕೆಂದರೆ ದುಡಿಸಿಕೊಂಡು ಹೊಟ್ಟೆ ತುಂಬಾ ಉಂಡವರೇ ತಮ್ಮ ಊಟದ ವೈಶಿಷ್ಟವನ್ನು ವರ್ಣ ರಂಜಿತವಾಗಿ ಬರೆದುಕೊಂಡು ಅದನ್ನೇ ಭಾರತದ ಚರಿತ್ರೆಯನ್ನಾಗಿಸಿದರು. ಈ ಈ ವರ್ಣ ರಂಜಿತ ಚರಿತ್ರೆ ಪುರಾಣದೊಂದಿಗೆ ಸಮೀಕರಿಸಿಕೊಂಡ ಕಾರಣಕ್ಕಾಗಿ ಜನರಿಗೂ ಉಂಡವರು ದೇವರಂತೆ ಕಂಡರು. ಇಂತಹ ಚರಿತ್ರೆ ಹೆಚ್ಚು ರಂಜಿಸಿತು. ಈ ಪುರಾಣ ಹಾಗೂ ತೀರ್ಥದ ಹಿನ್ನೆಲೆಯ ರಂಜನೆಯನ್ನು ಹೇಳುತ್ತಿರುವ ಜನರೇ ಇಂದಿಗೂ ಸಹ ವಾಸ್ತವದ ಸಂವಿಧಾನವನ್ನು ಧಿಕ್ಕರಿಸಿ ಪುರಾಣದ ಸಂವಿಧಾನವನ್ನೇ ಮಾತನಾಡುತ್ತಿರುವುದು. ಅದನ್ನೇ ಜಾರಿಗೆ ತರಬೇಕೆಂದು ಹಂಬಲಿಸುತ್ತಿರುವುದು. ನಿಜಾರ್ಥದಲ್ಲಿ ಇವರೇ ಅಂದಿನಿಂದ ಇಂದಿನವರೆಗೂ ರಾಷ್ಟ್ರಧ್ರೋಹಿಗಳು. ಇವರು ದೈಹಿಕವಾಗಿ “ಶುದ್ಧವಾಗಿದ್ದಿವಿ” ಎಂದು ಹೇಳಿ ಕೊಳ್ಳಬಹುದು. ಆದರೆ, ಮಾನಸಿಕವಾಗಿ ಮಾತ್ರ ಶತಶತಮಾನಗಳಿಂದಲೂ ಇವರು ಮಾತ್ರ ” ಅಸ್ಪೃಶ್ಯರೇ” . ಇಂತವರ ಮಾನಸಿಕ ಶಾಶ್ವತ ಹಾಗೂ ಪಿತ್ರಾಜಿತ ಅಸ್ಪೃಶ್ಯತೆ ಈ ದೇಶಕ್ಕೆ ಮಾಡಿರುವ ಅನ್ಯಾಯ ಘನಘೋರವಾದದ್ದು. ದೇವಸ್ಥಾನ
ಇಂತಹ ಅಸಂವಿಧಾನಾತ್ಮಕ ಧೋರಣೆಯನ್ನು ಧಿಕ್ಕರಿಸಿ ಭಾರತ ಹಾಗೂ ಭಾರತೀಯತೆಯ ನೆಲ ಮೂಲ ಸಂಸ್ಕೃತಿಯನ್ನು ಅನಾವರಣಗೊಳಿಸುವ ಜನರ ಬೆವರಿನ ಚರಿತ್ರೆ ಇಂದು ವಾಸ್ತವದ ಹಿನ್ನೆಲೆಯಿಂದ ಹೆಚ್ಚು ಹೆಚ್ಚು ದಾಖಲೆ ಸಹಿತ ನಿರ್ಮಾಣವಾಗಬೇಕಾಗಿದೆ. ಆದರೆ ಹಸಿದವರಿಗೆ ತಮ್ಮ ಹಸುವಿನ ಅಂದರೆ, ಬಡತನ ಶೋಷಣೆ ಅಸ್ಪೃಶ್ಯತೆ ಇತ್ಯಾದಿ ಇತ್ಯಾದಿ ಮಾದರಿಯ ಜೀವನದ ಆಕ್ರಂದನಗಳನ್ನು ಕುರಿತು ವಾಸ್ತವತೆಯ ಹಿನ್ನೆಲೆಯಿಂದ ಬರಿಬೇಕಂದರೆ ಅವರಿಗೆ ಪಾರಂಪರಿಕ ಅಜ್ಞಾನಿಗಳು (ನಾವು ಮಾತ್ರ ಶ್ರೇಷ್ಠ ಕುಲದವರು ಎಂದು ಹೇಳಿಕೊಂಡವರು) ಅಕ್ಷರದ ಜ್ಞಾನವನ್ನೇ ಧಾರ್ಮಿಕ ಹಾಗೂ ಸಾಮಾಜಿಕ ಐಡೆಂಟಿಟಿಯ ಹಿನ್ನೆಲೆಯಿಂದ ದಯಪಾಲಿಸಲೇ ಇಲ್ಲ.
ಈ ಹಿನ್ನೆಲೆಯಿಂದ ಎಂದಿಗೂ,ಯಾರೋ, ಏಕಮುಖ ದೃಷ್ಟಿಕೋನದಿಂದ ವರ್ಣ ರಂಜಿತವಾಗಿ ಬದುಕಿದವರು ಹಾಗೂ ಅವರು ಬದುಕಿದ ಮಾದರಿಯಲ್ಲಿಯೇ ಚರಿತ್ರೆ ಬರೆದವರ ಮೇಲೆ ಪ್ರಶ್ನೆ ಮಾಡದ ಹಾಗೆ ಮಾಡಲಾಯಿತು. ಕಾಲಕಾಲಕ್ಕೆ ಕೆಲವು ಪ್ರಗತಿಪರ ಚಿಂತಕರು ಇದನ್ನು ಪ್ರಶ್ನೆ ಮಾಡಲು ಮುಂದಾದಾಗ ಅವೈಜ್ಞಾನಿಕ ಸಿದ್ಧಾಂತದ ದೇವರನ್ನು ಮುಂದೆ ಇಟ್ಟು ತಮ್ಮ ಸ್ವಾರ್ಥ ಸಾಧನೆಗಾಗಿ ಅವರ ಜನಮುಖಿ ಸಿದ್ಧಾಂತಗಳನ್ನು ಸಹ ಮೂಕವನ್ನಾಗಿಸಿದರು.
ಸಂಪ್ರದಾಯ ವಾದಿ ಚರಿತ್ರಕಾರರು ದಾಖಲಿಸಿರುವ ಆಧಾರದಂತೆ ೩೦೦೦ವರ್ಷಗಳಿಂದಲೂ ಇವರೇ ತಮ್ಮ ಸ್ವಾರ್ಥಕ್ಕಾಗಿ ಕಾವ್ಯ ಸೃಷ್ಟಿ ಮಾಡಿದ ಕ್ಷತ್ರಿಯರನ್ನು ಹೊಗಳಿ – ಸಕಲವನ್ನು ಪಡೆದುಕೊಳ್ಳಲು ಅಟ್ಟಕೇರಿಸಿ ಬರೆಸಿದ ಶಾಸನ, ತಮ್ಮ ಸ್ವಾರ್ಥಕ್ಕಾಗಿ ನಿರ್ಮಿಸಿಕೊಂಡ ದೇವಾಲಯ, ತಮ್ಮ ಸ್ವಾರ್ಥಕ್ಕಾಗಿ ಬರೆದುಕೊಂಡ ಹಸ್ತ ಪ್ರತಿಗಳ ಆಧಾರದ ಮೇಲೆ ಕಾಲಕ್ಕೆ ತಕ್ಕಂತೆ ಇನ್ನಷ್ಟು ವರ್ಣ ರಂಜಿತ ಮಸಾಲೆಯನ್ನು ಬೆರೆಸಿ ಚರಿತ್ರೆಯನ್ನು ಬರೆದರೆ ಹೊರತು, ನಿಜವಾದ ಜನ ಜೀವನದ ದಾಖಲೆಗಳನ್ನು ಇಟ್ಟುಕೊಂಡು ಜನ ಸಂಸ್ಕೃತಿಯ ಅನಾವರಣಗೊಳಿಸುವ ಹಿನ್ನೆಲೆಯಿಂದ ಅಕ್ಷರವನ್ನು ಪಾರಂಪರಿಕವಾಗಿ ಸೊತ್ತಾಗಿಸಿಕೊಂಡಿದ್ದರು ಬರೆಯಲೇ ಇಲ್ಲ. ಈ ಹಂತದಲ್ಲಿ ಮಾತ್ರ ಪ್ರಪಂಚದಲ್ಲಿ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಜನರ ಚರಿತ್ರೆ ಮಾತ್ರ ಸಂಪೂರ್ಣ ಗೌಣ . ಇರುವುದೆಲ್ಲವೂ ಸಹ ವೈದೀಕರಣ ಕೇಂದ್ರಿತ ಕ್ಷತ್ರಿಯರ ಚರಿತ್ರೆ.
ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಈ ನೆಲದ ಶ್ರಮಜೀವಿ ವರ್ಗದ ವಾರಸುದರಿಕೆಯ ಜನರನ್ನು ಅಸಂವಿಧಾನಾತ್ಮಕ ಹಿನ್ನೆಲೆಯಿಂದ ನಂಬಿಸಲು ಒಂದು ಸುಳ್ಳನ್ನು ನಿಜ ಮಾಡಲು ಸಾವಿರ ಸುಳ್ಳನ್ನು ಪುರಾಣದ ಹಿನ್ನೆಲೆಯಿಂದ ಹೇಳಿ ನಂಬಿಸಿದರು. ಇದಕ್ಕಾಗಿ ದೇವರನ್ನು ಮುಂದೆ ಇಟ್ಟುಕೊಂಡು ಪಾರಂಪರಿಕವಾಗಿ ಈ ಜನರನ್ನು ಹೊಡೆದಾಳುವ ನೀತಿಯ ಅನುಸಾರ ಬಹುದೊಡ್ಡ ಸಾಂಸ್ಕೃತಿಕ ಕಂದಕವನ್ನೇ ಸೃಷ್ಟಿಸಿದರು. ಈ ಬಹುದೊಡ್ಡ ಕಂದಕ ನಿರ್ಮಾಣದ ಹಿಂದೆ ಇದ್ದ ಬಹುದೊಡ್ಡ ಅಜ್ಞಾನದ ಶಕ್ತಿಯೇ ವೈದಿಕ ಹಾಗೂ ಅದರ ನಿಯಂತ್ರಣದಲ್ಲಿ ಒಳಪಟ್ಟಿದ್ದ ಪ್ರಭುತ್ವ. ಹೀಗೆ ವೈದಿಕಣಗೊಂಡ ಭಾರತ ಚರಿತೆಯಲ್ಲಿ ಜನ ಇಲ್ಲ. ಜನರು ಸೃಷ್ಟಿ ಮಾಡಿಕೊಂಡ ದೇವರುಗಳು ಮಾತ್ರ ಮೆರೆಯುತ್ತಿವೆ. ಈ ದೇವರನ್ನೇ ನಿಯಂತ್ರಿಸುತ್ತಿರುವ ಅಧರ್ಮ ಪ್ರತಿಪಾದನೆಯ ಜನರಿದ್ದಾರೆ.
ಆದರೆ, ನಾನು ಇಲ್ಲಿ ಜನ ಎಂದು ಉಲ್ಲೇಖ ಮಾಡುವುದು ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಅಸ್ಪೃಶ್ಯರಾದವರ ಕುರಿತು. ಈ ಹಿನ್ನೆಲೆಯಿಂದ ಈ ನೆಲದ ವಾರಸುದಾರರಾದರೂ ಸಹ ಮೂಲಭೂತ ಹಕ್ಕುಗಳಿಂದ ವಂಚಿತರಾದ ಜನರ ಕುರಿತು.
ಪ್ರಪಂಚದ ಮಟ್ಟಿಗೆ ನಮ್ಮದು ಬಹು ಬಂಧುತ್ವದ ಜನ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ. ಆದರೆ ಈ ರಾಷ್ಟ್ರ ತನ್ನ ಒಡಲಾಳದಲ್ಲಿ ಬಹುದೊಡ್ಡ ಅಸಮಾನತೆಯನ್ನು ಹೊಂದಿರುವ ರಾಷ್ಟ್ರವೆಂದು ಘಂಟಾಘೋಷವಾಗಿ ಹೇಳಿಕೊಳ್ಳಲು ದಾಖಲೆಗಾಗಿ ಯಾವ ಕನ್ನಡಿಯನ್ನು ಹುಡುಕಬೇಕಾಗಿಲ್ಲ. (ಅಂಗೈನ ಉಣ್ಣನ್ನು ನೋಡಿಕೊಳ್ಳಲು ಕನ್ನಡಿ ಬೇಕೆ ಎಂಬ ಗಾದೆಗೆ ಇದು ಉತ್ತಮ ನಿದರ್ಶನ ).ಇಂದು ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಿರುವ ದಲಿತರು ನಿಜ ಜೀವನದಲ್ಲಿ ತಮ್ಮ ದುಡಿಮೆ ಹಾಗೂ ಶ್ರಮ ಸಿದ್ಧಾಂತದ ಮೂಲಕ ಈ ನೆಲದಲ್ಲಿ ನಿಜ “ಸ್ಪೃಶ್ಯ” ರು. ಇವರು ಸ್ಪೃಶ್ಯರಾದರೂ ಸಹ ಮಾಡುವ ಕಸುಬು – ಕಸುಬಿನ ಆಧಾರದ ಮೇಲಿನ ಜಾತಿ- ಸೇವಿಸುವ ಆಹಾರ-ವಾಸಿಸುವ ಸ್ಥಳ- ಪೂಜಿಸುವ ದೇವರು- ದೇವರ ಹೆಸರಿನಲ್ಲಿ ಆಚರಣೆ ಮಾಡುವ ಅಮಾನವೀಯ ಆಚರಣೆಗಳ ಆಧಾರದ ಮೇಲೆ ದೇವರ ಹೆಸರಿನಲ್ಲಿ ಶ್ರೇಷ್ಠತೆಯನ್ನು ಬಯಸಿಕೊಂಡು ಬದುಕಲು ಅಪೇಕ್ಷೆ ಪಡುತ್ತಿರುವ ಜನರಿಂದ “ಅಸ್ಪೃಶ್ಯರು” ಎಂದು ಕರೆಸಿಕೊಂಡವರು ಎಂಬುದನ್ನು ಚಾರಿತ್ರಿಕ ದೃಷ್ಟಿಕೋನದಿಂದ ಸ್ಪಷ್ಟವಾಗಿ ಅರಿಯಬೇಕಾಗಿದೆ.
ಅಂದರೆ, ಇಂದು ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಿರುವವರು ಮೂಲತಃ ಅಸ್ಪೃಶ್ಯರಲ್ಲ. ಬದಲಿಗೆ ಮಾನಸಿಕವಾಗಿ ಶತಶತಮಾನಗಳಿಂದಲೂ ಪಿತ್ರಾರ್ಜಿತವಾಗಿ ಮಾನಸಿಕ ಅಸ್ಪೃಶ್ಯತೆಗೆ ಒಳಗಾದವರಿಂದ ದೈಹಿಕ ಹಿನ್ನೆಲೆಯಿಂದ ಮಾತ್ರ ಅಸ್ಪೃಶ್ಯರೆಂದು ಕರೆಸಿಕೊಂಡವರು ಎಂಬುವುದು ಸ್ಪಷ್ಟ.
ಹೀಗೆ, ದೈಹಿಕ ಅಸ್ಪೃಶ್ಯತೆಗೆ ಒಳಗಾದ ಈ ಜನವರ್ಗಕ್ಕೆ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಅನೇಕ ಅಮಾನವೀಯ ಪದ್ಧತಿಯ ಕಟ್ಟುನಿಟ್ಟಿನ ಜಾರಿಯ ಹಿನ್ನೆಲೆಯಿಂದ ಅವರ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಹರಣ ಮಾಡಲಾಯಿತು. ಮನುಷ್ಯ ಈ ಭೂಮಿ ಮೇಲೆ ಜೀವಿಸಲು ಇರಬೇಕಾದ ಕೆಲವೇ ಕೆಲವು ಮೂಲಭೂತ ಹಕ್ಕುಗಳನ್ನು ದೇವರು ಹಾಗೂ ದೇವಾಲಯದ ಹೆಸರಿನ ಬಂಡವಾಳದಿಂದ ನಿರ್ಬಂಧಕ್ಕೆ ಒಳಪಡಿಸಲಾಯಿತು. ಕುಡಿಯುವ ನೀರು, ಸೇವಿಸುವ ಆಹಾರ, ವಾಸಿಸುವ ಮನೆಗಳು ಸಹ ಅಸ್ಪೃಶ್ಯತೆಯ ಹಿನ್ನೆಲೆಯಿಂದ ಸಾಂಸ್ಕೃತಿಕ ದಿಗ್ಬಂಧನಕ್ಕೆ ಒಳಗಾದವು. ಈ ದಿಗ್ಬಂದನದಲ್ಲಿ ಪ್ರಮುಖವಾದದ್ದು ಶತಶತಮಾನಗಳಿಂದಲೂ ದಲಿತರನ್ನು “ಊರಿನಲ್ಲಿ” ನಿರ್ಮಾಣಗೊಳ್ಳುವ – ಗೊಂಡಿರುವ ದೇವಾಲಯಗಳಿಗೆ ಪ್ರವೇಶ ನಿರಾಕರಣೆಯು ಒಂದು. ಊರು ಎಂದರೆ “ಸ್ಪೃಶ್ಯರು” ವಾಸಿಸುವ ಸ್ಥಳ- ಕೇರಿ ಎಂದರೆ “ಅಸ್ಪೃಶ್ಯರು” ವಾಸಿಸುವ ಸ್ಥಳ.
ನಾನು ಮೇಲೆ ಉಲ್ಲೇಖಿಸಿದ ಮಾದರಿಯವರು ಬರೆದುಕೊಂಡ ಪ್ರಶ್ನೆ ಮಾಡಿದ ಚರಿತ್ರೆಯಲ್ಲಿ ಊರಿನ ದೇವಾಲಯಗಳಿಗೆ ಪ್ರಮುಖ ಸ್ಥಾನವಿದೆ. ಈ ಊರಿನ ದೇವಾಲಯಗಳ ರಚನೆಯ ಚರಿತ್ರೆಯಲ್ಲಿ ದೇವಾಲಯ ಮಾತ್ರ ಇದೆ -ಆದರೆ, ಜನ ಇಲ್ಲ.
ಊರಿನ ದೇವಾಲಯವೆಂದರೆ ಅಗ್ರಜರು ವಾಸ ಮಾಡುವ ಸ್ಥಳ ಅಗ್ರಹಾರ ಹಾಗೂ ಅಗ್ರಹಾರದ ಸುತ್ತ ಇರುವಂತಹ ಸವರ್ಣಿಯ ಜನ ವರ್ಗ ವಾಸಿಸುವ ಸ್ಥಳದಲ್ಲಿ ಇರುವುದು. ಈ ಸ್ಥಳದವರು ತಮ್ಮ ವೈಭವವನ್ನು ಕೇಂದ್ರೀಕರಿಸಿ ಬರೆದ ಚರಿತ್ರೆಯಲ್ಲಿ ಭಾರತ ದೇವಾಲಯಗಳ ನಾಡು ಎಂದು ಕರೆಸಿಕೊಳ್ಳುತ್ತದೆ. ಆದರೆ ಈ ದೇವಾಲಯಗಳ ನಾಡಿನಲ್ಲಿ ಸಾಮಾನ್ಯವಾಗಿ ದಲಿತ ಜನರ ಮೂಲಭೂತ ಹಕ್ಕುಗಳ ವಿರೋಧಿ ನೀತಿ ಹೆಗ್ಗಿಲ್ಲದೆ ನಡೆದ – ನಡೆಯುತ್ತಿರುವ ಹಾಗೂ ಯಾವುದೇ ಬದಲಾವಣೆಯನ್ನು ಬಯಸದೆ ಹೀಗೆ ನಡೆಯಬೇಕು ಎಂದು ಹಂಬಲಿಸುತ್ತಿರುವ ಜನರ ಅಮಾನವೀಯ ಮನಸ್ಸಿನ ಚರಿತ್ರೆ ಇಂದು ಸಂವಿಧಾನಾತ್ಮಕ ಹಿನ್ನೆಲೆಯಿಂದ ರಚನೆಯಾಗಬೇಕಾಗಿದೆ .
ಊರಿನ ದೇವಾಲಯಗಳಿಗೆ ದಲಿತರನ್ನು ಪ್ರವೇಶ ಮಾಡಿಸುವುದಿಲ್ಲ, ಆದರೆ ತಮ್ಮ ಸ್ವಾರ್ಥಕ್ಕಾಗಿ ಈ ಊರಿನ ದೇವತೆಗಳಿಗೆ ಮಾಡುವ ಅಮಾನವೀಯ ಪದ್ಧತಿಗಳಿಗೆ ಮಾತ್ರ ಕೇರಿಯ ಜನರೇ ಬೇಕು. ಕೇರಿಯ ಜನರು ಊರಿನ ದೇವಾಲಯದ ಬಹು ದೂರದಲ್ಲಿ ನಿಂತು ಭಕ್ತಿಯಿಂದ ನಮಸ್ಕರಿಸಿ ಅಮಾನವೀಯ ಪದ್ಧತಿಯನ್ನು ಚಾಚೂ ತಪ್ಪದೇ ಆಚರಣೆ ಮಾಡಬೇಕು. ಈ ಹಂತದಲ್ಲಿ ಕಾಡುವ ಪ್ರಶ್ನೆಯೆಂದರೆ
“ಈ ಸವರ್ಣಿಯತೆಯನ್ನು ಬಯಸುವ ಮನುಷ್ಯ ದೇವರಿಗಿಂತ ಶ್ರೇಷ್ಠನೋ- ಅಥವಾ- ದೇವರು ಈ ಸವರ್ಣೀಯ ಮನುಷ್ಯನಗಿಂತ ಕನಿಷ್ಠವೋ ” ಎಂಬ ಪ್ರಶ್ನೆ ಕಾಡುತ್ತದೆ.
ಇದಕ್ಕೆ ಉತ್ತರವೂ ಸ್ಪಷ್ಟವಾಗಿದೆ. ಈ ಅಜ್ಞಾನಿ ಸವರ್ಣಿಯರ ಅಸದ್ಬದ್ಧವಾದ ತತ್ವ ಸಿದ್ಧಾಂತದ ವೈಜ್ಞಾನಿಕ ವಾದದ ಮುಂದೆ ಸತ್ಯ ಹಾಗೂ ಸಾಕ್ಷಾತ್ಕಾರದ ಹಿನ್ನೆಲೆಯಿಂದ ಸಮಸ್ಕೃತಿಯನ್ನು ಪ್ರತಿಪಾದನೆ ಮಾಡುವ ” ನಂಬಿಕೆ ” ಎಂಬ ದೇವರೂ ಸಹ ಕನಿಷ್ಠವೇ ಆಗಿದೆ. ಇಲ್ಲಿ ದೇವರು ಕೇವಲ ವ್ಯಾಪಾರದ ಸರಕಾಗಿದೆ ಎಂಬುದು ಸತ್ಯ .
ದೇವರು ಹಾಗೂ ದೇವರ ಹಿನ್ನೆಲೆಯ ಧರ್ಮವನ್ನು ಕುರಿತು ಇಂಥ ಕೆಲವೇ ಕೆಲವರ ಅವೈಜ್ಞಾನಿಕ ತತ್ವ ಸಿದ್ಧಾಂತಗಳನ್ನು ಬುದ್ಧನಿಂದ ಮೊದಲುಗೊಂಡು ಬಸವಾದಿ ಶರಣ-ಶರಣೆಯರು, ಕನಕಾದಿ ಕೀರ್ತನೆಕಾರರು, ಸೂಫಿ-ಸಂತರು, ಆಧುನಿಕ ಭಾರತದ ಬಹುದೊಡ್ಡ ಅನುಭಾವಿ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಅವರ ತತ್ವ ಸಿದ್ಧಾಂತದಿಂದಲೇ ಹುಟ್ಟಿಕೊಂಡ ಆಧುನಿಕ ಕಾಲದ ದಲಿತ ಸಾಹಿತಿಗಳು ಸಂಪೂರ್ಣವಾಗಿ ವಿರೋಧಿಸಿದರು. ಇವರು ಅಜ್ಞಾನದ “ಭೌತಿಕ” ದೇವಾಲಯಗಳನ್ನು ಧಿಕ್ಕರಿಸಿ – ತಮ್ಮ ಮನದ ಒಳಗೆ ನಿರ್ಮಾಣಗೊಂಡಿರುವ ಜ್ಞಾನದ “ಬೌದ್ಧಿಕ” ದೇಗುಲಗಳ ಸಿದ್ಧಾಂತಗಳನ್ನು ಪ್ರತಿಪಾದನೆ ಮಾಡಿದರು.
ಸಮಾನತೆ ಬಯಸುವ ಮನುಷ್ಯ ಜನ್ಮವೇ ದೇಗುಲ ಎಂದು ನಮ್ಮನ್ನು ನಾವು ಮೊದಲು ಅರ್ಥಮಾಡಿಕೊಳ್ಳುವ ಮಾದರಿಯಲ್ಲಿ ತಿಳಿಹೇಳಿದರು. ಇವರ ಈ ವಾಸ್ತವದ ಮಾತುಗಳು ಅಸಾಮಾಜಿಕ ಪ್ರಜ್ಞೆ , ಅಧಾರ್ಮಿಕ ಅಂಧಕಾರದಲ್ಲಿ ಸೃಷ್ಟಿಸಿಕೊಂಡಿರುವ ದೇವಾಲಯದ ಹಾಗೂ ಸ್ವ-ಪ್ರತಿಷ್ಠೆಯ ದೇವರ ವಾರಸುದಾರರಿಗೆ ಅಂದಿನಿಂದ ಇಂದಿನವರೆಗೂ ಕಿಂಚಿತ್ತಾದರೂ ತಿಳಿಯಲೇ ಇಲ್ಲ. ಈ ಹಿನ್ನೆಲೆಯಿಂದ ನಾವು ಅನುಸರಿಸುತ್ತಿರುವ ನೀತಿ ತಪ್ಪು ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಸ್ವಾರ್ಥಕ್ಕಾಗಿ ಮುಂದುವರಿಸಿದ ಕಾರಣಕ್ಕಾಗಿ ನಿಜ ಭಾರತದ ಬಹುದೊಡ್ಡ ಜನ ಹಾಗೂ ಹೊಡೆದಾಳ್ವಿಕೆಗೆ ಒಳಗಾದ ಜನರ ಚರಿತ್ರೆ ನಿಜಾರ್ಥದಲ್ಲಿ ಅಸ್ಪೃಶ್ಯತೆಗೆ ಶಾಶ್ವತವಾಗಿ ಒಳಗಾಯಿತು .
ಇದಕ್ಕೆ ಕಾರಣ, ಇಂದಿಗೂ ಜನ ತಮ್ಮ ಪಾರಂಪರೀಕ ವಾರಸುದಾರಿಕೆಯನ್ನು ಹೊಂದಿರುವ ದೇವರು ಎಂಬ ತನ್ನೊಳಗೆ ಅಂಧಕಾರವನ್ನು ಬೆಸೆದ ” ಮಾತನಾಡದ ದೇವರನ್ನು ಇದು ನಮ್ಮನ್ನು ಮಾತನಾಡಿಸುತಿದೆ – ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ – ನಮ್ಮ ಜೀವನದ ಬಂಡಿಯನ್ನು ಇದೆ ಮುನ್ನಡೆಸುತ್ತಿದೆ ” ಎಂದು ಅಜ್ಞಾನದಿಂದ ನಂಬಿರುವಷ್ಟು ಜನರು ಧರ್ಮದ ಹಿನ್ನೆಲೆಯ ಮೌಢ್ಯವನ್ನೇ ವಾಸ್ತುವೆಂದು ಪ್ರತಿಪಾದನೆ ಮಾಡಿದರು.
ಆದರೆ ಜನರನ್ನು ವೈಜ್ಞಾನಿಕವಾಗಿ ಮಾತನಾಡಿಸಿದ, ಮಾತನಾಡುವುದನ್ನು ಕಲಿಸಿದ, ನಿಜ ಧರ್ಮದ ಸಾರದ ಹಿನ್ನೆಲೆಯಿಂದ ಸಮ ಸಮಾಜವನ್ನು ಬಯಸಿದ ಸಮಾಜ ಸುಧಾರಕನನ್ನು ಧಾರ್ಮಿಕ ಅಂಧಕಾರದಲ್ಲಿ ಮುಳುಗಿರುವ ಜನ ಅರ್ಥ ಮಾಡಿಕೊಳ್ಳಲಿಲ್ಲ ಹಾಗೂ ಅವರ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳಲೇ ಇಲ್ಲ. ಏಕೆಂದರೆ ಇವರ ಸಿದ್ಧಾಂತ ಜನರಲ್ಲಿ ಪ್ರಗತಿಪರತೆಯ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ್ದೆ ಆಗಿದೆ. ನಮ್ಮ ವಾಸ್ತವದ ಲಿಖಿತ ಸಂವಿಧಾನವನ್ನು ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಸಹ ಮನಸಾರ ಒಪ್ಪಿಕೊಳ್ಳದೆ ದ್ವಂದ್ವ ಸ್ಥಿತಿಯಲ್ಲಿ ಇರುವುದಕ್ಕೂ ಇದೇ ಕಾರಣ. ಇದಕ್ಕೆ ಪ್ರಮುಖ ಕಾರಣ ಪಾರಂಪರಿಕ ಅಜ್ಞಾನ.
ಸ್ವತಂತ್ರ ಪೂರ್ವದಲ್ಲಿ ಅಸ್ಪೃಶ್ಯತೆ ಮೌನವಾಗಿ ತಾಂಡವವಾಡುತ್ತಿತ್ತು. ಬಡವನ ಕೋಪ ದವಡೆಗೆ ಮೂಲ ಎನ್ನುವ ಮಾದರಿಯಲ್ಲಿ ಮೂಕ ವೇದನೆಯನ್ನು ಅನುಭವಿಸುತ್ತಿತ್ತು. ಇಂತಹ ಅಮಾನವೀಯ ಅಸ್ಪೃಶ್ಯತೆ ಹಿನ್ನೆಲೆಯಿಂದ ಕೇರಿ ಜನರು ತಮ್ಮ ಬದುಕಿನ ಉಜ್ವಲವನ್ನು ಹಂಬಲಿಸಲು ತಮ್ಮ ಕೇರಿಗೆ ಸಂಬಂಧಿಸಿದಂತೆ ಮಾರಿ- ಮಸಣಿಗಳನ್ನು ಪ್ರಕೃತಿ ಹಾಗು ವಾಸ್ತವದ ಹಿನ್ನೆಲೆಯಿಂದ ಸೃಷ್ಟಿಸಿಕೊಂಡು ಪೂಜೆ ಪುನಸ್ಕಾರಗಳನ್ನು ಮಾಡಿ ತಮ್ಮ ಧಾರ್ಮಿಕ ಪದ್ಧತಿಯನ್ನು ಪ್ರದರ್ಶಿಸುತ್ತಿದ್ದರು. ತಮ್ಮ ಬದುಕಿನ ಪಾರಂಪರಿಕ ಆಹಾರ ಪದ್ಧತಿಯನ್ನು ಅಲ್ಲಿ ಸಾಮೂಹಿಕವಾಗಿ ಸೇರಿ ಸಿದ್ಧಪಡಿಸಿ ಸೇವಿಸುತ್ತಿದ್ದರು. ದೇವರ ಹೆಸರಿನಲ್ಲಿ ಹಬ್ಬ ಮಾಡಿ ಬಂದುತ್ವವನ್ನು ಬೆಸೆಯುತಿದ್ದರು. ಹಾಗೆಯೇ ಕೇವಲ ಕೇರಿಯಲ್ಲಿ ವಾಸಮಾಡುವ ತಮಗೆ ಮಾತ್ರ ಒಳ್ಳೆಯದನ್ನು ಬಯಸಿಕೊಳ್ಳದೆ ಸಮಸ್ತ ಊರಿನ ಜನರಿಗೆ ಒಳ್ಳೆಯದಾಗಲಿ ಎಂದು ತನ್ನ ಕೇರಿಯ ದೇವರಲ್ಲಿ ಹರಸುತ್ತಾ ಜನರ ಕಲ್ಯಾಣದ ಬದುಕಿಗಾಗಿ ತಮ್ಮ ಪ್ರಾಣ ಮಾನವನ್ನೇ ಮುಡುಪಿಟ್ಟು ಅಮಾನವೀಯ ಪದ್ಧತಿಗಳನ್ನು ಪಾಲಿಸುತ್ತಿದ್ದರು.
ಇದನ್ನೂ ಓದಿ : ನಾಗರಿಕ ಹಕ್ಕುಗಳೂ ಪ್ರಜಾತಂತ್ರ ಮೌಲ್ಯಗಳೂ – ಭಾರತದಲ್ಲಿ ಮಾನವ ಹಕ್ಕುಗಳ ಪ್ರಜ್ಞೆಗೆ ಜಾತಿ-ಪಿತೃಪ್ರಧಾನತೆಯೇ ಬಹುದೊಡ್ಡ ತೊಡಕಾಗಿದೆ
ಇವುಗಳಿಗೆ ಸ್ಥಳೀಯ ಬಂಡವಾಳಶಾಹಿಗಳು ಹಾಗೂ ಊಳಿಗಮಾನ್ಯಶಾಹಿಗಳ ಸ್ವಪ್ರತಿಷ್ಠೆ ಕೇಂದ್ರಿತ ಆಜ್ಞೆಯೂ ಇತ್ತು. ಈ ಸಂದರ್ಭದಲ್ಲಿ ಕೇರಿಯ ಜನರು ಊರಿನಲ್ಲಿದ್ದ ವರ್ಣರಂಜಿತ ದೇವಾಲಯಗಳಿಗೂ ನಾವು ಪ್ರವೇಶ ಮಾಡಬೇಕೆಂಬ ಮೂಲಭೂತ ಹಕ್ಕನ್ನು ಮಂಡಿಸಿ ಹೋರಾಟ ಮಾಡಿರುವುದರ ಕುರಿತು ಸ್ವಾತಂತ್ರ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ಬಂದ 20 ವರ್ಷಗಳ ನಂತರದವರೆಗೂ ಯಾವ ದಾಖಲೆಯೂ ಇಲ್ಲ. ಕರ್ನಾಟಕದಲ್ಲಿ ವಚನ ಹಾಗೂ ಕೀರ್ತನ ಚಳುವಳಿಯ ನಂತರ ಕೇರಿಯ ಜನರು ಊರಿನ ದೇವಾಲಯಗಳಿಗೆ ಪ್ರವೇಶ ಮಾಡಲು ಇಚ್ಚಿಸಿ ನಡೆದಿರುವ ಅನೇಕ ಘಟನೆಗಳಿಗೆ ವಚನಾಧಾರಿತ – ಕೀರ್ತನಾಧಾರಿತ ದಾಖಲೆ ಇದ್ದರೂ ಸಹ ಶಾಸನ ಹಾಗೂ ಅಸ್ತಪ್ರತಿಗಳನ್ನು ಬರೆದು ಪಂಡಿತ ಪಾಮರ ರಾದವರು ತಮ್ಮ ಪಾರಂಪರಿಕ ಅಸ್ಪೃಶ್ಯತೆಯ ಮನಸ್ಸನ್ನು ಹೊಂದಿರುವ ಕಾರಣಕ್ಕಾಗಿ ದಾಖಲಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.
ಸ್ವತಂತ್ರ ಪೂರ್ವದಲ್ಲಿ ಒಂದಷ್ಟು ಕೇರಿಯ ಜನ (ಅಸ್ಪೃಶ್ಯರು) ಊರಿನ ದೇವಾಲಯಗಳಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ಬ್ರಿಟಿಷ್ ಆಳ್ವಿಕೆ ಹಾಗೂ ಇವರ ಆಳ್ವಿಕೆಯಲ್ಲಿ ಜಾರಿಗೆ ತಂದ ಒಂದಷ್ಟು ಜನಮುಖಿ ಸಂಸ್ಕೃತಿ ಭಾರತಕ್ಕೆ ಪ್ರವೇಶ ಮಾಡಿದ ನಂತರವೇ ಎಂಬುವುದು ಸ್ಪಷ್ಟ. ಇವರ ಪ್ರಜಾಪ್ರಭುತ್ವ ಮಾದರಿಯ ಆಳ್ವಿಕೆ ಸಿದ್ಧಾಂತದ ಒಂದಷ್ಟು ಸ್ವಾರ್ಥಪರ ಆಳ್ವಿಕೆಯಲ್ಲಿ ಭಾರತದಲ್ಲಿ ಎರಡುವರೆ ಸಾವಿರ ವರ್ಷಗಳಿಂದ ಚಲಿಸದೆ ಜಡ್ಡುಗಟ್ಟಿ ನಿಂತಲ್ಲೇ ನಿಂತಿದ್ದ ಚಿಂತನೆಗಳು ವಿಮರ್ಶೆಗೆ ಒಳಪಟ್ಟು ಚಲನೆಗೆ ಮುಂದಾದವು. ಇಂತಹ ನವ ಚಿಂತನೆ ಹಾಗೂ ನವ ಚಿಂತನಾಕಾರರು ಭಾರತಕ್ಕೆ ಪ್ರವೇಶ ಆದ ನಂತರವೇ ಭಾರತದಲ್ಲಿ ಸರ್ವರಿಗೂ ಶಿಕ್ಷಣ ಹಾಗೂ ಸರ್ವರಿಗೂ ದೇವರು- ಧರ್ಮದ ಜನ ಮುಖಿ ಬೇಡಿಕೆಯ ಸಿದ್ಧಾಂತ ಚಲನೆಗೆ ಬಂತು.
ಈ ಹಿನ್ನಲೆಯ ನಂತರ ಭಾರತದ ಸ್ಥಳೀಯ ಅರಸರಾದ ಕೊಲ್ಲಾಪುರದ ಶಾವು ಮಹಾರಾಜ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಬರೋಡ ಸಂಸ್ಥಾನದ ಸಂಯೋಜಿರಾವ್ ಗಾಯಕ್ವಾಡ್ ಇವರ ಜನಮುಖ್ಯ ಪ್ರಭುತ್ವದ ಹಿನ್ನೆಲೆಯಿಂದ ದಲಿತರು ಊರಿನ ದೇವಾಲಯಗಳಿಗೂ ಪ್ರವೇಶ ಮಾಡುವ ಕಾನೂನಾತ್ಮಕ ಅಧಿಕಾರವನ್ನು ಭಾರತದ ನೆಲದಲ್ಲಿ ಪ್ರಪ್ರಥಮವಾಗಿ ನೀಡಲಾಯಿತು. ಆದರೆ ಆರಂಭದ ಈ ಪ್ರಗತಿಪರ ಚಿಂತನೆ ಎಷ್ಟರಮಟ್ಟಿಗೆ ಜಾರಿಗೆ ಬಂತು ಎಂಬುದು ಚರ್ಚೆಯ ವಿಷಯ. ಇವರೆಲ್ಲರ ವಾರಸುದಾರರಾಗಿ ಭಾರತದ ನೆಲದಲ್ಲಿ ಪ್ರಬಲವಾಗಿ ದಲಿತರನ್ನು ಈ ನೆಲದ ವಾರಸುದಾರರನ್ನಾಗಿಸಿ ಈ ನೆಲದಲ್ಲಿ ಇರುವ ಊರಿನ ದೇವಾಲಯ ಹಾಗೂ ದೇವಾಲಯಗಳಿಗೆ ಮುಕ್ತ ಪ್ರವೇಶಕ್ಕೆ ಹೋರಾಟ ನಡೆದದ್ದು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು.
ಅಂಬೇಡ್ಕರ್ ಅವರು 1930ರಲ್ಲಿ ನಾಸಿಕ್ ಎಂಬ ಸವರ್ಣಿಯರು ವಾಸಿಸುವ ಊರಿನಲ್ಲಿ ಕೇಂದ್ರೀಕೃತವಾಗಿದ್ದ ಕಾಲರಾಂಪುರ ದೇವಾಲಯಕ್ಕೆ ಪ್ರವೇಶ ಮಾಡಲು ಬೌದ್ಧಿಕ ಹೋರಾಟವನ್ನು ಹಮ್ಮಿಕೊಂಡ ಸಂದರ್ಭ ಐತಿಹಾಸಿಕವಾಗಿ ಭಾರತದ ಚರಿತ್ರೆಯಲ್ಲಿ ಮೊದಲನೆಯದು. ನಿಜಾರ್ಥದಲ್ಲಿ ಎರಡು ಹಾಗೂ ಮೂರು ಸಾವಿರ ವರ್ಷಗಳ ಭವ್ಯ ಸಂಸ್ಕೃತಿ ಚರಿತ್ರೆ ಹೊಂದಿರುವ ನಮ್ಮ ದೇಶ ಭಾರತ ಎಂದು ಹೇಳಿಕೊಳ್ಳುವ – ಪ್ರಪಂಚಕ್ಕೆ ಭಾರತ ಸಂಸ್ಕೃತಿ ವಿಶಿಷ್ಟವಾದದ್ದು ಅಮೋಘವಾದುದು ಎಂದು ಹೊಗಳಿಕೊಳ್ಳುವ ಭಾರತದಲ್ಲಿ ಭಾರತದ ಮೂಲ ನಿವಾಸಿಗಳಾದ ದಲಿತರು ಊರಿನ ದೇವಾಲಯ ಪ್ರವೇಶಕ್ಕೆ ಮುನ್ನುಡಿ ಬರೆದವರು 20ನೇ ಶತಮಾನದ ಈ ನೆಲದ ಯುಗಪುರುಷ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು.
ಇವರಿಗೂ ಮುಂಚೆ ಕೇರಳದ ಅಯ್ಯನ್ ಕಾಳಿ, ಮಹಾರಾಷ್ಟ್ರದ ಜ್ಯೋತಿಬಾಪುಲೆ ದಂಪತಿಗಳು ಹಾಗೂ ಗಾಡಿಗೆ ಬಾಬಾ , ತಮಿಳುನಾಡಿನ ಅಯೋತಿದಾಸ್, ಅಂಬೇಡ್ಕರ್ ಅವರ ಸಮಕಾಲಿನರಾಗಿದ್ದ ಪಿರಿಯಡ್ ಅವರು ದಲಿತರು ಊರಿನ ದೇವಾಲಯಗಳಿಗೆ ಪ್ರವೇಶ ಮಾಡಲು ಪ್ರಜ್ಞಾಪೂರ್ವಕವಾಗಿ ಹೋರಾಡಿದರು. ಆದರೆ ರಾಜಪ್ರಭುತ್ವದ ಕಾನೂನುಗಳ ಸುಲಿಗೆ ಸಿಲುಕಿ ಜಯ ಗಳಿಸಲು ಸಾಧ್ಯವಾಗದೆ ಸೋತಿದ್ದರು. ಆದರೆ ಅಂಬೇಡ್ಕರ್ ಅವರ ಶಾಸನ ಬದ್ಧ ಹೋರಾಟ ಎರಡುವರೆ ಸಾವಿರ ವರ್ಷಗಳ ಸಾಂಪ್ರದಾಯಕ ಚರಿತ್ರೆಗೆ ಪ್ರಗತಿದಾಯಕ ಹಿನ್ನೆಲೆಯ ಮುನ್ನುಡಿ ಬರೆದಂತಾಗಿತ್ತು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ದಲಿತರು ದೇವಾಲಯ ಪ್ರವೇಶ ಮಾಡುವುದು ಎಂದರೆ ಈ ನೆಲದ ಮೂಲನಿವಾಸಿಗಳಾಗಿ ಇಲ್ಲಿನ ಸಕಲ ದೇವರು ಹಾಗೂ ದೇವಸ್ಥಾನಗಳಿಗೂ ನಾವು ಕಾನೂನಾತ್ಮಕವಾಗಿ ವಾರಸುದಾರರು ಎನ್ನುವ ಅಚಲವಾದ ನಂಬಿಕೆಯ ರೂಪದ್ದಾಗಿತ್ತೆ ಹೊರೆತು- ಭಕ್ತಿ ಭಾವದಿಂದ ತಲೆತಗ್ಗಿಸುವ ರೂಪದ್ದಾಗಿರಲಿಲ್ಲ.
ಅಂಬೇಡ್ಕರ್ ಅವರು ಈ ದೇವಾಲಯವನ್ನು ತಾವು ಮತ್ತು ತಮ್ಮ ತಂಡದೊಂದಿಗೆ ಪ್ರವೇಶ ಮಾಡಲು ಹಂಬಲಿಸಿದ್ದು ” ಭಕ್ತಿ ಅಥವಾ ಅಜ್ಞಾನದ ಅಂಧಕಾರದ ಮಾದರಿಯಿಂದಲ್ಲ. ಬದಲಿಗೆ ಈ ನೆಲದ ವಾರಸುದರಿಕೆಯ ಸಂವಿಧಾನ ಬದ್ಧ ಹಕ್ಕನ್ನ ಚಲಾಯಿಸಲು ” ಎಂಬುವುದನ್ನು ಮರೆಯಬಾರದು.
ಈ ಮಾದರಿಗಿಂತಲೇ ದಲಿತರು ಗ್ರಾಮೀಣ ಭಾಗದಲ್ಲಿ ತಮ್ಮ ಕೇರಿಯಲ್ಲಿ ವಾಸಿಸುವ ದಲಿತ ಜನಾಂಗ- ಊರಿನಲ್ಲಿ ವಾಸಿಸುವ ಜನರು ಅಸ್ಪೃಶ್ಯತೆ ಹಿನ್ನೆಲೆಯಿಂದಲೇ ಬೇದಭಾವ ಮಾಡಿದರು ಸಹ ಶತಶತಮಾನಗಳಿಂದ ಊರಿನ ದೇವರಿಗೂ ಕೇರಿಯ ದೇವರಿಗೂ ಬೆಸಿದುಕೊಂಡಿರುವ ಕರುಳು ಬಳ್ಳಿಯ ಸಂಬಂಧವನ್ನು ಪ್ರತಿಪಾದನೆ ಮಾಡುತ್ತಾ ದೇವಾಲಯಗಳ ಪ್ರವೇಶವನ್ನು ಭಾರತದ ಸಂವಿಧಾನಾತ್ಮಕ ಹಿನ್ನೆಲೆಯಿಂದ ಪ್ರವೇಶ ಮಾಡಲು ಹಕ್ಕು ಮಡಿಸುತ್ತಿರುವುದು ಇಂದಿನ ವಾಸ್ತವವೇ ಆಗಿದೆ . ಈ ಹಂತದಲ್ಲಿ ದಲಿತರ ಬೇಡಿಕೆ ಸಂವಿಧಾನಾತ್ಮಕವಾಗಿ ಸತ್ಯವಾಗಿದೆ. ಸಂವಿಧಾನವನ್ನು ಕಿಂಚಿತ್ತೂ ಒಪ್ಪಿಕೊಳ್ಳದವರು – ಪಾರಂಪರಿಕ ಅಸಂವಿಧಾನವನ್ನೇ ಪ್ರತಿಪಾದನೆ ಮಾಡುವವರು ದಲಿತರು ಊರಿನ ದೇವಾಲಯಗಳಿಗೆ ಪ್ರವೇಶ ಬಯಸುವುದನ್ನು ಅಜ್ಞಾನದ ಮೂಲಕ ತಡೆಯುತ್ತಿದ್ದಾರೆ. ಈ ವಿಷಯದಲ್ಲಿ ಮಾತ್ರ ಮಾನಸಿಕವಾಗಿ ಶತಶತಮಾನಗಳಿಂದಲೂ ಶಾಶ್ವತ ಅಸ್ಪೃಶ್ಯರು ಎಂದರೆ ಇವರೇ. ದಿನನಿತ್ಯ ಮಡಿ ಸ್ನಾನ ಮಾಡಿ ಇವರ ದೈಹಿಕತೆ ಶುದ್ಧವಾಗಿರಬಹುದು- ಆದರೆ ಶತಶತಮಾನಗಳಿಂದಲೂ ಮಾನಸಿಕವಾಗಿ ಸ್ನಾನ ಮಾಡದೆ ಇರುವ ಕಾರಣ ಅದು ಚಲನೆ ಇಲ್ಲದೆ ಜಡ್ಡುಗಟ್ಟಿ ನಿಂತಿದೆ.
೧೯೪೭ರಲ್ಲಿ ಭಾರತಕ್ಕೆ ಸ್ವತಂತ್ರ ಬಂತು. ೧೯೫೦ರ ಜನವರಿ ೨೬ ಭಾರತ ಸಮ ಸಮಾಜವನ್ನು ಬಯಸಿದ ಸಂವಿಧಾನ ಜಾರಿಗೆ ಬಂತು. ಭಾರತ ಸಂವಿಧಾನ ಸಮಸ್ತ ಭಾರತ ಪ್ರತಿಯೊಬ್ಬ ಪ್ರಜೆಗೂ ತನ್ನ ಮೂಲಭೂತ ಹಕ್ಕುಗಳನ್ನು ಕಾಪಾಡಿಕೊಳ್ಳುವ – ರಕ್ಷಿಸಿಕೊಳ್ಳುವ ಅಧಿಕಾರವನ್ನು ನೀಡಿತು. ಈ ಹಿನ್ನಲೆಯಿಂದ ನಾವೆಲ್ಲರೂ ಸಂವಿಧಾನಾತ್ಮಕವಾಗಿ ಒಕ್ಕೊರಳಿನಿಂದ ಜಾತ್ಯಾತೀತತೆಯನ್ನು ಹಂಬಲಿಸಿದ, ಧರ್ಮ ನಿರಪೇಕ್ಷತೆಯನ್ನು ಸಾರಿ ಹೇಳುವ ಸಂವಿಧಾನವನ್ನು ನಾವೆಲ್ಲರೂ ಒಪ್ಪಿ ಜಾರಿಗೊಳಿಸಿಕೊಂಡೆವು.
ನಮ್ಮ ಸಂವಿಧಾನ ಒದಗಿಸಿದ ಸಮಸ್ತ ಮಾನವನ ಮೂಲಭೂತ ಹಕ್ಕುಗಳ ನೀಡಿಕೆ ಹಾಗೂ ಸಂರಕ್ಷಣೆಯ ಹಿನ್ನೆಲೆಯಿಂದ ದಲಿತರು ತನ್ನ ಕೇರಿಯ ದೇವರನ್ನು ಶತಾಶತಮಾನಗಳಿಂದಲೂ ಊರಿನ ದೇವರೊಂದಿಗೆ ಬೆಸೆದುಕೊಂಡಿದ್ದ ಸಹೋದರ – ಸಹೋದರಿಯತ್ವದ ಬಂಧುತ್ವದೊಂದಿಗೆ ಸಾಂಸ್ಕೃತಿಕ ಬಂದನಕ್ಕೆ ಒಳಪಡಿಸಿಕೊಂಡಿದ್ದರೂ ಸಹ ಕೇರಿಯ ದೇವತೆ ಊರಿನ ದೇವತೆ ಜೊತೆ ಎಂದಿಗೂ ಜಾತಿ ಹಾಗೂ ಅಸ್ಪೃಶ್ಯತೆ ಹಿನ್ನೆಲೆಯಿಂದ ಮುಖಾಮುಖಿಯಾಗಿರಲೇ ಇಲ್ಲ. ಈ ಹಿನ್ನಲೆಯಿಂದ ಆ ಬೆಸುಗೆಯನ್ನು ಬೆಸೆಯಲು ಮುಂದಾದರು. ಈ ಹಂತದಲ್ಲಿ ಶಾಶ್ವತವಾಗಿ ದಿನ ನಿತ್ಯ ನಡೆಯುತ್ತಿರುವುದೇ ಊರಿನ ದೇವಾಲಯಗಳಿಗೆ ಕೀರಿಯ ಜನರ ಪ್ರವೇಶದ ನಿರಾಕರಣೆ ಹಾಗೂ ಈ ಬೇಡಿಕೆಯನ್ನು ಮುಂದಿಟ್ಟು ಸಂವಿಧಾನಾತ್ಮಕವಾಗಿ ಹೋರಾಟ ಮಾಡುವವರಿಗೆ ಅಸಂವಿಧಾನಾತ್ಮಕವಾಗಿನ ಅಮಾನವೀಯ ದೌರ್ಜನ್ಯ. ಇದು ಭಾರತದ ಸಂಸ್ಕೃತಿಯ ಲಕ್ಷಣವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಕೇರಿಯ ಜನರು ಸಂವಿಧಾನದ ಹಿನ್ನೆಲೆಯಿಂದ ಊರಿನ ದೇವತೆ ಹಾಗೂ ದೇವಸ್ಥಾನವನ್ನು ಪ್ರವೇಶ ಮಾಡುವ – ಶತಶತಮಾನಗಳಿಂದ ಊರಿನವರೇ ಆಗಿದ್ದರು ಸಹ ಊರಿನ ದೇವರನ್ನೇ ನೋಡದೆ ಇರುವ ಕಾರಣಕ್ಕಾಗಿ ಮುಂದಾದರು. ಹೀಗೆ ಕಾನೂನಾತ್ಮಕವಾಗಿ ಪ್ರವೇಶ ಮಾಡುವ ಹಕ್ಕನ್ನು ದಲಿತರು ಪ್ರತಿಪಾದನೆ ಮಾಡಿದ್ದೆ ಪಾರಂಪರೀಕ ಅಜ್ಞಾನದ ಅಲಿಖಿತ ಸಂವಿಧಾನ ಮತ್ತೆ ಅಪ್ರಜ್ಞೆಯನ್ನು ಹೆಚ್ಚಿಸಿಕೊಂಡು ಪ್ರಜ್ಞಾವಂತ ಜ್ಞಾನದ ಲಿಖಿತ ಸಂವಿಧಾನದ ವಿರುದ್ಧ , ಹಾಗೂ ಈ ಸಂವಿಧಾನವನ್ನು ರಚಿಸಿದವರ ವಿರುದ್ಧ ಬೀದಿಯಲ್ಲಿ ನಿಂತು ಅವೈಜ್ಞಾನಿಕ ಹೋರಾಟ ಮಾಡಲು ಆರಂಭಿಸಿತು.
ಅಜ್ಞಾನದ ದೇವರ ಮೂರ್ತಿಗಳನ್ನು ಭಕ್ತಿಯಿಂದ ಪೂಜಿಸಿ ಜ್ಞಾನವನ್ನೇ ಬೋಧಿಸಿದ ಅಂಬೇಡ್ಕರ್ ಮೂರ್ತಿಗಳನ್ನು ಹೊಡೆದು ಅಪಮಾನಗೊಳಿಸಿದರು. ಈ ಹಿನ್ನಲೆಯಲ್ಲಿ ಇಂದಿಗೂ ಸಹ ಊರಿನ ಜನರಿಗೆ “ಯಾವುದು ಜ್ಞಾನದ ಮೂರ್ತಿ- ಯಾವುದು ಅಜ್ಞಾನದ ಮೂರ್ತಿ” ಎಂಬ ಪರಿಜ್ಞಾನವೇ ತಿಳಿದಿಲ್ಲ. ಜಾತಿಯ ಸ್ವಪ್ರತಿಷ್ಠೆ ಹಾಗೂ ಅಜ್ಞಾನದ ಧರ್ಮದ ಒಳಗೆ ಶಾಶ್ವತವಾಗಿ ಮುಳುಗಿರುವ ಇವರಿಗೆ ಇದು ಅರ್ಥವಾಗುವ ಹಾಗೆಯೂ ಕಾಣುತ್ತಿಲ್ಲ.ಈ ಅಜ್ಞಾನದ ಹೋರಾಟಕ್ಕೆ ೨೫೦೦ ವರ್ಷಗಳ ಅಜ್ಞಾನದ ಮೂಲಭೂತ ವ್ಯಾಘ್ರ ಪೈಚಾಚಿಕ ರೂಪ ಪಡೆದು ಊರು ಕೇರಿಗಳಲ್ಲಿ ತಾಂಡವ ನೃತ್ಯ ಮಾಡುತ್ತಿದೆ. ಸಂವಿಧಾನ ರಾಜಿ ಸಿದ್ಧಾಂತಕ್ಕೆ ಒಳಗಾಗಿ ಮಂಕಾಗುತ್ತಿದೆ. ಲಿಖಿತ ಸಂವಿಧಾನದ ಆಧಾರದ ಮೇಲೆ ರಾಜಿ ಮಾಡಿಕೊಳ್ಳಬೇಕಾದ ಅಲಿಖಿತ ಸಂವಿಧಾನವೇ ಅಜ್ಞಾನದಿಂದ ತಲೆಯೆತ್ತಿ – ಎದೆ ಉಬ್ಬಿಸಿ – ಹಣೆಗೆ ಹಾಗೂ ಕೊರಳಿಗೆ ಬಣ್ಣ ಬಣ್ಣದ ಬಟ್ಟಿಯನ್ನು ಕಟ್ಟಿಕೊಂಡು ಮೆರೆಯುತ್ತಿದೆ. ಮೆರೆಯುತ್ತಿದೆ
ಇಂದಿಗೆ ಸ್ವತಂತ್ರ ಬಂದು ೭೭ ವರ್ಷಗಳಾಯಿತು, ಸಂವಿಧಾನ ಬಂದು ೭೫ ವರ್ಷಗಳಾದರೂ ಸಹ ಸಂವಿಧಾನದ ಹಿನ್ನೆಲೆಯ ಸಮಾನತೆಯನ್ನು ಬಯಸದ ಅಸಂವಿಧಾನದ ನೀತಿಯನ್ನೇ ಬಯಸುವ ಜನರು ದೇವರು ಹಾಗೂ ಧರ್ಮದ ಕಿಂಚಿತ್ತು ಪರಿಜ್ಞಾನವೇ ಇಲ್ಲದೆ ಕೇವಲ ಸಮಾಜದ ಹಿನ್ನೆಲೆಯಿಂದಲೇ ಸ್ವಾರ್ಥಪರ ದೌರ್ಜನ್ಯವನ್ನು ಎಸೆಗುತ್ತಿರುವುದು ಭಾರತಕ್ಕೆ ಅಂಟಿರುವ ಬಹುದೊಡ್ಡ ದುರಂತ. ದೇಶ ಪ್ರತಿದಿನ ಪ್ರತಿಕ್ಷಣ ಹೆಚ್ಚು ಹೆಚ್ಚು ಸಂಕುಚಿತ ಗೊಳ್ಳುತ್ತಿರುವುದು ಈ ಹಿನ್ನಲೆಯಿಂದಲೇ. ಈ ಸಂಕುಚಿತತೆ ಹೆಚ್ಚು ಆಗುತ್ತಿರುವ ಸಂದರ್ಭವೇ ಭಾರತ ಪ್ರಪಂಚ ಮಟ್ಟದಲ್ಲಿ ತನ್ನ ಜನರ ಸಾಂಸ್ಕೃತಿಕ ಬದುಕಿನ ಐಡೆಂಟಿಟಿಯನ್ನು ಕಳೆದುಕೊಳ್ಳುತ್ತಿರುವುದಕ್ಕೂ ಕಾರಣವಾಗಿದೆ.
ಮೇಲಿನ ಅಂಶಗಳಿಗೆ ನಿದರ್ಶನವೆಂದರೆ ಗ್ರಾಮೀಣ ಭಾಗದಲ್ಲಿ ಇನ್ನೂ ಅಚ್ಚ ಹಸಿರಾಗಿಯೇ ಇರುವ ಕೇರಿಯ ಜನ ಕಾನೂನಾತ್ಮಕ ಹಿನ್ನೆಲೆಯಿಂದ ಊರಿನ ಬೀದಿಗಳಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳಿಗೆ ಪ್ರವೇಶ ಮಾಡಲು ಮುಂದಾದರೆ “ಸ್ವ ಘೋಷಿತ” ಊರಿನ ಜನ “ಊರು ಹೊಲಗೇರಿ ಒಂದು ಮಾಡಲು ಸಾಧ್ಯವೇ” ” ಊರಿಂದ ಆಚೆ ಹೊಲಗೇರಿ ಇರಬೇಕು ” ” ಊರು ಇದ್ದಮೇಲೆ ಹೊಲಗೇರಿ ಇರಲೇಬೇಕು” ಎಂಬ ಅಸಂವಿಧಾನಾತ್ಮಕ ನೀತಿಗಳನ್ನೆ ಮುಂದೆ ಮಾಡಿಕೊಂಡು ಕೇರಿಯವರು ಊರಿನ ದೇವಾಲಯಗಳಿಗೆ ಪ್ರವೇಶ ಮಾಡಲು ಹಾಗೂ ಊರಿನ ದೇವರ ಉತ್ಸವವನ್ನು ಕೇರಿಗೂ ಬರಮಾಡಿಕೊಳ್ಳಲು ಮುಂದಾದುದ್ದೆ ಊರಿನ ದೇವಾಲಯದೊಳಗೆ ಶತಶತಮಾನಗಳಿಂದಲೂ ಕುಳಿತಿದ್ದ ದೇವರ ಮೂರ್ತಿಯನ್ನೇ ಬಹಿರಂಗವಾಗಿ ಬೇರೆಡೆಗೆ ಕೊಂಡೊಯ್ಯುವ ಅಜ್ಞಾನದ ಪರಮಾಧಿಕಾರವನ್ನು ಮಾಡಿರುವುದು ಹಾಗೂ ಮಾಡುತ್ತಿರುವದು ಭಾರತದ ಸಂಕುಚಿತಗೊಂಡಿರುವ ಸಂಸ್ಕೃತಿಗೆ ಹಿಡಿದ ಕೈಗಡಿಯಾಗಿದೆ.
ಇನ್ನು ದೇವಾಲಯಗಳಿಗೆ ದಲಿತರು ಪ್ರವೇಶ ಮಾಡುತ್ತಾರೆ ಅಥವಾ ಸರ್ಕಾರವೇ ಮಾಡಿಸಲು ಮುಂದಾಗುತ್ತದೆ ಎಂಬ ವಿಷಯ ಕೇಳಿ ಊರಿನ ದೇವರ ವಾರಸುದಾರರು ಸಾಮೂಹಿಕ ಆತ್ಮಹತ್ಯೆಗೂ ಮುಂದಾಗುತ್ತೇವೆ ಎಂದು ಬಹುದೊಡ್ಡ ಬಿದರಿಕೆಯನ್ನೇ ಒಡ್ಡಿದ್ದು ಧಾರ್ಮಿಕ ದುರಂತವೇ ಸರಿ.
ಭಾರತದ ಸಂವಿಧಾನ ಹೇಳುವ ” ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ” ಎಂಬ ತತ್ವ ಸಿದ್ಧಾಂತದ ಹಿನ್ನೆಲೆಯಿಂದ ದಲಿತರು ಸಂವಿಧಾನಾತ್ಮಕವಾಗಿ ಯಾವ ಮೂಲಭೂತ ಹಕ್ಕುಗಳನ್ನು ಇಂದಿಗೂ ಸಹ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಇಂತಹ ನಿದರ್ಶನಗಳು ಸಾವಿರಾರು ಇವೆ. ಸಾರ್ವಜನಿಕರಿಗಾಗಿ ನಿರ್ಮಾಣಗೊಂಡಿರುವ ಊರಿನಲ್ಲಿ ಇರುವ ಕೆರೆ, ಬಾವಿ, ಕಲ್ಯಾಣಿ , ಬೋರ್ವೆಲ್, ನೀರಿನ ಅರವಟ್ಟಿಗೆ ಇತ್ಯಾದಿ ಸಾರ್ವಜನಿಕ ಉಪಯೋಗಿ ಸ್ಥಳ ಊರಿನಲ್ಲಿ ನೆಲೆ ಕಂಡಿಕೊಂಡಿದ್ದರು ಸಹ ಅವುಗಳನ್ನು ಕೇರಿಯಾ ಜನ ಯಾವ ಕಾರಣಕ್ಕೂ ಮುಟ್ಟುವ ಹಾಗಿಲ್ಲ. ಆದರೆ ಇದು ತಪ್ಪು ಎಂದು ಹೇಳುವ ಕಾನೂನು ಸಹ ಸ್ಥಳೀಯ ಆಡಳಿತದ ಹಿನ್ನೆಲೆಯಲ್ಲಿ ಸೋತು ರಾಜಿ ಹಿನ್ನೆಲೆಯಿಂದ ಮತ್ತೆ ತಲೆತಗ್ಗಿಸಿ ಆಳ್ವಿಕೆ ಮಾಡಲು ಮುಂದಾಗುತ್ತಿರುವುದು ಸಂವಿಧಾನಾತ್ಮಕ ಸೋಲೆ ಸರಿ.
ಅಂದರೆ ಬ್ರಿಟಿಷರಿಂದ ಆಡಳಿತಾತ್ಮಕ ಸ್ವಾತಂತ್ರ್ಯವನ್ನು ಬಯಸಿದ ಊರಿನ ಜನ- ಹಿರಿಯ ಜನ ಬಯಸಿದ ಸ್ವಾತಂತ್ರ್ಯವನ್ನು ಕಿಂಚಿತ್ತು ಬಯಸಲಿಲ್ಲ ಹಾಗೂ ನೀಡಲಿಲ್ಲ ಎಂಬುದು ಸ್ಪಷ್ಟ. ಇದೆ ಅಂಬೇಡ್ಕರ್ ಅವರ ಸ್ವಾತಂತ್ರ್ಯ ಹೋರಾಟಕ್ಕೂ – ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟಕ್ಕೂ ಇರುವ ವ್ಯತ್ಯಾಸ.
ದುರಂತವಾದರೂ ಇದು ವಾಸ್ತವ, ವಾದೇನೆಂದರೆ…
“ಊರಿನ ಜನ ಪಾರಂಪರಿಕವಾಗಿ ಅಜ್ಞಾನದಿಂದ ತಮ್ಮ ಸ್ವಾರ್ಥಕ್ಕಾಗಿ ಬೆಸೆದುಕೊಂಡಿರುವ ಅಲಿಖಿತ ಸಂವಿಧಾನದ ನೀತಿಯಂತೆ ದಲಿತರು ಊರಿನ ದೇವಸ್ಥಾನಗಳಿಗೆ ಪ್ರವೇಶ ಮಾಡುವುದನ್ನು ವಿರೋಧಿಸುತ್ತಿದ್ದಾರೆ .
ಆದರೆ
ಅದೇ ದೇವರ ಹೆಸರಿನಲ್ಲಿ ದಲಿತರು ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿರುವ ಅಮಾನವ್ಯ ಪದ್ಧತಿಗಳನ್ನು ಕಾನೂನಾತ್ಮಕವಾಗಿ ನಿರ್ಮೂಲನೆ ಮಾಡಿರುವ “ಲಿಖಿತ ಸಂವಿಧಾನ” ವಿರೋಧಿಸುವ ಅಮಾನವೀಯ ಪದ್ಧತಿಗಳನ್ನು ತಮ್ಮ ಪಾರಂಪರಿಕ ಅಜ್ಞಾನದ ಅಲಿಖಿತ ಸಂವಿಧಾನದ ಮಾದರಿಯಲ್ಲಿ ಕಿಂಚಿತ್ತು ಬದಲಾವಣೆಯನ್ನು ಬಯಸಿಕೊಳ್ಳದೆ ಮಾಡುತ್ತಲೇ ಇದ್ದಾರೆ. ಇವೆರಡೂ ಸಹ ವಾಸ್ತವದ ದುರಂತಗಳು ಸರಿ.
ಕೇರಿಯ ಜನರು ಊರಿನ ದೇವತೆಗಾಗಿ ಅಂದರೆ, ಊರಿನ ಶ್ರೇಷ್ಠತೆ ಬಯಸುವ ದೇವತೆಯ ವಾರಸುದಾರರು ಕೇರಿಯ ಜನರಿಂದ ಕನಿಷ್ಠತೆಯನ್ನು ಅಪೇಕ್ಷಿಸುವ ಅವೈಜ್ಞಾನಿಕ ಅಮಾನುಸ್ಯ ಪದ್ಧತಿಗಳಾದ ದೇವದಾಸಿ , ಗೆಜ್ಜೆಪೂಜೆ, ಬೆತ್ತಲೆ ಸೇವೆ, ಬೇವಿನ ಉಡುಗೆ, ಮುತ್ತು ಕಟ್ಟುವುದು, ಸಿಡಿ ಆಚರಣೆ, ಬಾಯಿ ಬೇಗ, ಬೆಂಕಿಯ ಮೇಲೆ ನಡೆಯುವುದು,ಎಂಜಲ ಎಲೆಯ ಮೇಲೆ ಉರುಳು ಸೇವೆ ಮಾದರಿಯ ಮಡಸ್ಥಾನ ಮಾಡಿಸುವುದು…. ಇತ್ಯಾದಿ ಇತ್ಯಾದಿ.. ಪದ್ಧತಿಗಳನ್ನು ಮಾತ್ರ ಕಟ್ಟುನಿಟ್ಟಾಗಿ ಪಾಲಿಸಲು ಇವರ ವಿಶ್ವಾಸವನ್ನು ತೆಗೆದುಕೊಳ್ಳುತ್ತದೆ. ಈ ವಿಶ್ವಾಸ ನಮ್ಮ ಪಾರಂಪರಿಕ ಹಕ್ಕು ಎಂದು ತಿಳಿದುಕೊಂಡು ದಲಿತರು ಸಹ ಅಜ್ಞಾನದಿಂದ ಆಚರಿಸುತಲೆ ಇದ್ದಾರೆ. ಇಂಥ ಅಜ್ಞಾನದ ಪಾರಂಪರಿಕ ಹಕ್ಕನ್ನು ಶತಶತಮಾನಗಳಿಂದಲೂ ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದರೂ ಸಹ ಇವರಿಗೆ ಮಾತ್ರ ಊರಿನ ದೇವಾಲಯದ ಪ್ರವೇಶವಿರಲಿ, ದೇವಾಲಯದ ಪ್ರಾಂಗಣಕ್ಕೂ ಹೋಗುವ ಅಧಿಕಾರ ಮಾತ್ರ ಇಲ್ಲ.
ಇವರ ಬೆವರನ್ನೇ ತೀರ್ಥವನ್ನಾಗಿಸಿಕೊಂಡು ಉಂಡು- ತಿಂದು- ಕುಡಿದು ಮೆರೆದ ಊರಿನ ಜನರಿಗೆ ಇಂದು ಈ ಕೇರಿಯ ಜನ ಸಂವಿಧಾನಬದ್ಧವಾಗಿ ತನ್ವೂರಿನ ದೇವಾಲಯದ ಪ್ರವೇಶದ ಹಕ್ಕನ್ನು ಕೇಳುವ ವಾಸ್ತವದ ಬೇಡಿಕೆಯನ್ನು ಅಸಂವಿಧಾನಾತ್ಮಕ ಹಿನ್ನೆಲೆಯಿಂದಲೇ ಅಮಾನವೀಯ ದೌರ್ಜನ್ಯಗಳ ಮೂಲಕ ನಿರಾಕರಿಸುತ್ತಿದ್ದಾರೆ. ಇದಕ್ಕೆ ಕಾರಣ ಬುದ್ಧನಿಂದ, ಬಸವಣ್ಣ ನಿಂದ ಹಾಗೂ ಅಂಬೇಡ್ಕರ್ ವರೆಗೂ
“ಕೇರಿಯ ಜನ ಬದಲಾವಣೆಯನ್ನು ಬಯಸಿದರೆ ಹೊರತು -ಊರಿನ ಜನ ಕಿಂಚಿತ್ತೋ ಬದಲಾವಣೆಯನ್ನು ಬಯಸಲೇ ಇಲ್ಲ ” ಎಂಬುದುಸ್ಪಷ್ಟವಾಗುತ್ತದೆ.
ವಾಸ್ತವದಲ್ಲಿ ಬುದ್ಧನ ಕಾಲದಿಂದ ಅಂಬೇಡ್ಕರ್ ಕಾಲದವರೆಗೂ ಕೇರಿಯ ಜನರೇ ಈ ಭಾರತದ ನೆಲದಲ್ಲಿ ವಾಸ್ತವ ಹಿನ್ನೆಲೆಯಿಂದ ಬದಲಾವಣೆಯನ್ನು ತಂದವರು ಹಾಗೂ ಬದಲಾವಣೆಯನ್ನು ತರುವವರು. ಬಸವಾದಿ ಶರಣ ಶರಣೀಯರ ತತ್ವ ಸಿದ್ಧಾಂತದ ಕ್ರಾಂತಿಯೇ ಕಾರಣ ಹಾಗೂ ದಲಿತ ಸಾಹಿತ್ಯ ಹಾಗೂ ದಲಿತ ಚಳುವಳಿಯ ಮೂಲ ಧಾತುವೆ ಕಾರಣ.
ಆದರೆ ಬುದ್ಧನ ಪೂರ್ವದಿಂದ ಮೊದಲ್ಗೊಂಡು ಹಿಂದಿನವರೆಗೂ ಬದಲಾವಣೆಯನ್ನು ಬಯಸದೆ ಇರುವ ಏಕೈಕ ವರ್ಗವೆಂದರೆ ಅದು ಊರಲ್ಲಿ ವಾಸ ಮಾಡುವ ಜನವರ್ಗ. ಇವರು ನಾವು “ಧರ್ಮ ಹಾಗೂ ಜಾತಿಯ ಹಿನ್ನೆಲೆಯಿಂದ ಶ್ರೇಷ್ಠರು ಎಂಬ ಪಾರಂಪರಿಕ ಅಜ್ಞಾನದ ಅಸ್ಪೃಶ್ಯತೆಯನ್ನು ತಮ್ಮ ತಲೆಯಲ್ಲಿ ತುಂಬಿ ಕೊಂಡಿರುವ ಕಾರಣ ಆ ಪಾರಂಪರಿಕ ಗುಂಗಿನಲ್ಲಿಯೇ ಹೊರಬರದೆ ನಿಂತಲ್ಲಿ ನಿಂತು ಶಾಶ್ವತವಾಗಿ ತಟಸ್ಥವಾಗಿದ್ದಾರೆ ” ಇವರು ಈ ವಿಷಯದಲ್ಲಿ ಮಾತ್ರ ಯಾವ ಬದಲಾವಣೆಯನ್ನು ಬಯಸುವುದಿಲ್ಲ.
ಆದರೆ “ಕೇರಿಯ ಜನ ಧಾರ್ಮಿಕ ಹಿನ್ನೆಲೆಯ ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ತಳವರ್ಗದಲ್ಲಿ ಇರುವ ಕಾರಣಕ್ಕಾಗಿ ಸಹಜವಾಗಿ ಮೇಲೆ ಹತ್ತುವ ಬಯಕೆ ವ್ಯಕ್ತಪಡಿಸುವ ಕಾರಣ ಸಾಂಸ್ಕೃತಿಕವಾಗಿ ಶತಶತಮಾನಗಳಿಂದಲೂ ಬದಲಾವಣೆಗೆ ಮುಂದಾಗುತ್ತಿದ್ದಾರೆ, ಮೂಲಕ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ “.
ಬದಲಾವಣೆಯ ಭಾರತದಲ್ಲಿ ಕೃಷಿಯಿಂದ ಮೊದಲುಗೊಂಡು ಕೈಗಾರಿಕೆ ಹಾಗೂ ಗೃಹ ಕೈಗಾರಿಕೆಯ ವಸ್ತುಗಳನ್ನು ತಯಾರಿಸುವ ಮೂಲಕ ಅನೇಕ ಹೊಸ ಹೊಸ ಆವಿಷ್ಕಾರಗಳನ್ನು ನಿರ್ಮಾಣ ಮಾಡಿದವರು ಭಾರತದ ಕೇರಿಯ ಜನರೇ ಹೊರತು ಊರಿನ ಜನರಲ್ಲ ಎಂಬುವುದು ಈ ಹಂತದಲ್ಲಿ ಸ್ಪಷ್ಟವಾದದ್ದು.
ಭಾರತದಲ್ಲಿ ಏಕೆ.. ಪ್ರಪಂಚಕ್ಕೆ ಸಮಸೃಷ್ಟಿಯನ್ನು ಪ್ರತಿಪಾದನೆ ಮಾಡಲು ಕನ್ನಡ ನೆಲದಲ್ಲಿ ಶತಮಾನದಲ್ಲಿ ಹುಟ್ಟಿಕೊಂಡ “ವಚನ ಚಳವಳಿ” ಸಹ ಕನ್ನಡ ನೆಲದ ಕೇರಿಯ ಜನದಿಂದಲೇ ಎಂಬುದನ್ನು ಮರೆಯಬಾರದು . ಈ ಚಳುವಳಿ ಹುಟ್ಟಿಕೊಂಡಿದ್ದೇ ಊರಿನ ಜನರ ಸಂಪ್ರದಾಯ ನೀತಿ-ರೀತಿಗಳ ವಿರುದ್ಧ ಹೊರೆತು ಬೇರೇನೂ ಅಲ್ಲ.
ಇಂತಹ ಪ್ರಗತಿಯನ್ನು ಬಯಸುವ ಕೇರಿಯ ಜನ ಹಾಗೂ ಅವಜ್ಞಾನಿಕ ಹಿನ್ನೆಲೆಯ ಪಾರಂಪರೆಯನ್ನು ಬಯಸುವ ಊರಿನ ಜನರ ನಡುವೆ ಅಂಬೇಡ್ಕರ್ ಅವರು ರೂಪಿಸಿದ ಲಿಖಿತ ಸಂವಿಧಾನ ಸಿಲುಕಿ ” ಅಲ್ಲಿರಲ್ಲೂ ಆಗದೆ- ಅಲ್ಲಿಂದ ಹೊರಬಂದು ಕಾನೂನಾತ್ಮಕವಾಗಿ ನೀತಿ ರೀತಿಗಳನ್ನು ರೂಪಿಸಲೂ ಆಗದೆ ನರಲಾಡುತ್ತಿದೆ ” . ಇದಕ್ಕೆ ಸಂವಿಧಾನ ಬದ್ಧವಾಗಿ ನಮ್ಮಿಂದ ಆಯ್ಕೆಯಾಗಿ ಆಳ್ವಿಕೆ ಮಾಡುತ್ತಿರುವ ಪ್ರಭುತ್ವವೂ ಕಾರಣವಾಗಿದೆ. ಅಸಂವಿಧಾನಾತ್ಮಕ ಮೂಲಭೂತವಾದ ಹಕ್ಕುಗಳನ್ನು ನೀಡುವ ಮೂಲಕ ನಮ್ಮೆಲ್ಲರನ್ನ ಮಾತನಾಡಿಸುವ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಜ್ಞಾನವಂತ ಲಿಖಿತ ಸಂವಿಧಾನ ಇಂದು ಊರಿನ ಜನರ ಸ್ವಾರ್ಥಪರ ದರ್ಪದ ಅಜ್ಞಾನಕ್ಕೆ ಸಿಲುಕಿ ಸಂಕುಚಿತಗೊಳ್ಳುತ್ತಿದೆ . ಜ್ಞಾನದ ಸಂವಿಧಾನದ ಮುಂದೆ ಸಂಕುಚಿತಗೊಳ್ಳಬೇಕಾದ ಅಜ್ಞಾನದ ಸಂವಿಧಾನ ಬಂಡತನ ಪ್ರದರ್ಶನ ಮಾಡಿ ಮೆರೆಯುತ್ತಿದೆ.
ಈ ಹಂತದಲ್ಲಿ ಅಸ್ಪೃಶ್ಯತೆಗೆ ಒಳಗಾಗಿರುವವರು ಹಾಗೂ ಅಸ್ಪೃಶ್ಯತೆಯನ್ನ ಕಟ್ಟುನಿಟ್ಟಾಗಿ ಆಚರಣೆ ಮಾಡುವವರೆಗೂ ಸ್ವತಂತ್ರ ಭಾರತ ಹಾಗೂ ಅದನ್ನು ಸ್ವಾತಂತ್ರ ಸಮಾನತೆ ಹಾಗೂ ಭಾದ್ರುತ್ವ ಆಧಾರದ ಮೇಲೆ ನಿರ್ಮಾಣಗೊಂಡಿರುವ ಸಂವಿಧಾನದ ಅರಿವಿಲ್ಲ. ಇವರು ಸಂವಿಧಾನದ ನೀತಿಯನ್ನು ಧಿಕ್ಕರಿಸಿ ಶತಶತಮಾನಗಳಿಂದ ತಾವು ಆಚರಿಸಿಕೊಂಡು ಬರುತ್ತಿರುವ ಸರ್ವ ಜನರಿಗೂ ಅಸ್ವಾತಂತ್ರ್ಯ – ಅಸಮಾನತೆ – ಅಬಾದ್ರೂತ್ವ ಪದ್ಧತಿಗಳನ್ನು ಜಾರಿಗೊಳಿಸುವಲ್ಲಿ ಕಿಂಚಿತ್ತು ಬದಲಾವಣೆಯನ್ನು ಮಾಡಿಕೊಂಡಿಲ್ಲ. ದಲಿತರು ಶಿಕ್ಷಣ ಮಂತ್ರಿ ಆಗುತ್ತಿದ್ದಾರೆ ಸಂಘಟಿತರಾಗುತ್ತಿದ್ದಾರೆ ಆದರೆ ಸಾಮೂಹಿಕ ಹೋರಾಟದಲ್ಲಿ ಸೋಲುತ್ತಿದ್ದಾರೆ. ಅಥವಾ ಸಾಮೂಹಿಕ ಹೋರಾಟಕ್ಕೆ ಹೊಡೆದಾಳುವ ನೀತಿ ಅನುಸರಿಸುವವರಿಗೆ ರಾಜಕೀಯದ ಕಾರಣದಿಂದಾಗಿ ದಾಳವಾಗುತ್ತಿದ್ದಾರೆ.
ಈ ಹಿನ್ನೆಲೆಯಿಂದ ಊರಿನ ದೇವಾಲಯಗಳಿಗೆ ಪ್ರವೇಶ ಮಾಡಬೇಕು ಎಂದು ಪ್ರಬಲ ಹಕ್ಕನ್ನು ಮಂಡಿಸುವ ಕೇರಿಯ ಜನರಿಗೂ ಸಂವಿಧಾನದ ಸ್ಪಷ್ಟ ಅರಿವು ಇಲ್ಲ. ಇವರಿಗೆ ಕಾನೂನುಗಳು ಹಾಗೂ ಕಾನೂನನ್ನು ರೂಪಿಸಿದ ಧೀಮಂತ ವ್ಯಕ್ತಿ ಅಂಬೇಡ್ಕರ್ ಅವರು ದೇವರಾಗಿ ಪರಿವರ್ತನೆ ಆಗಿದ್ದಾರೆ. ಯಾವಾಗ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ದೇವರ ರೂಪವನ್ನು ಪಡೆದುಕೊಳ್ಳುತ್ತವೆಯೋ ಅಲ್ಲಿ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಸಿದ್ದಾಂತ ಸೋತಿತ್ತು ಎಂದರ್ಥ. ಈ ಸಿದ್ಧಾಂತವನ್ನು ಕೇರಿಯ ಜನರ ಮೇಲೆ ಪ್ರತಿಪಾದನೆ ಮಾಡಲು ಊರಿನ ಜನ ತುದಿಗಾಲಲ್ಲಿ ಪ್ರಜಾಪ್ರಭುತ್ವ ಭಾರತದಲ್ಲಿ ನಿಂತಿದ್ದಾರೆ .
ಈ ಸಂದರ್ಭದಲ್ಲಿ ” ಊರಿನ ದೇವತೆ ನೋಡುವ ಭಾಗ್ಯ ಕೇರಿಯ ಜನರಿಗೆ ಒಂದಷ್ಟು ದೂರದಿಂದ ದೊರಕಲೂ ಬಹುದು. ಅದು ಸಮಯ ಸಾಧಕತನದ ವರೆಗೆ ಮಾತ್ರ” .
ಇಂತಹ ಊರಿನ ಹಾಗೂ ಕೇರಿಯ ಜನರಿಬ್ಬರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡುವಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಪಾತ್ರ ಮಹತ್ವದಾಗಿದೆ. ಇವುಗಳ ಜೊತೆಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕೇವಲ ಪಾಠ ಮಾಡುವುದಲ್ಲ ಬದಲಿಗೆ ಪಾಠ ಮಾಡಲು ಬೇಕಾದ (ಸೋರ್ಸ್ ಗಳನ್ನು) ದಾಖಲೆಗಳನ್ನು, ಇಂತಹ ಅಸಂವಿಧಾನಾತ್ಮಕ ನೀತಿಯನ್ನು ಜಾರಿಗೊಳಿಸುತ್ತಿರುವ ಊರು ಮತ್ತು ಸಂವಿಧಾನಾತ್ಮಕವಾಗಿ ಬದಲಾವಣೆಯನ್ನು ಕೇಳುತ್ತಿರುವ ಕೇರಿಗಳಿಂದ ವಸ್ತುನಿಷ್ಠವಾಗಿ ಮಾಹಿತಿಯನ್ನು ಸಂಗ್ರಹಿಸಿ ಕಾನೂನಿನ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಊರು ಮತ್ತು ಕೇರಿಯ ಜನರನ್ನ ಕಾನೂನಿನ ಪರಿಮಿತಿಗೆ ಒಳಪಡಿಸಿ ಸಮಸ್ತ ಜನರಿಗೂ ಸಂವಿಧಾನಾತ್ಮಕ ನ್ಯಾಯವನ್ನು ಒದಗಿಸುವುದು ಪ್ರಮುಖ ಆದ್ಯತೆಯಾಗಬೇಕಾಗಿದೆ .
ಬಹು ಮುಖ್ಯವಾಗಿ ಸಂವಿಧಾನದ ಅರಿವನ್ನು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ಹಂತದಲ್ಲಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುವ ಸಂದರ್ಭ ನಮ್ಮ ಮುಂದಿದೆ. ಇದಕ್ಕೆ ಪೂರಕವಾಗಿ ಆರಂಭದಿಂದಲೇ ಪ್ರಜ್ಞಾವಂತ ಶಿಕ್ಷಣ ಹಾಗೂ ಬೌದ್ಧಿಕತೆಯ ಅನಾವರಣದ ಅವಶ್ಯಕತೆ ಹೆಚ್ಚು ಹೆಚ್ಚು ಆಗಬೇಕಿದೆ. ಹಾಗದಾಗ ಮಾತ್ರ ” ದೈಹಿಕ ದೇವಾಲಯವನ್ನು ಮುಚ್ಚಿ – ಬೌದ್ಧಿಕ ದೇವಾಲಯದ ಬಾಗಿಲನ್ನು ಪ್ರಜ್ಞಾಪೂರ್ವಕವಾಗಿ ತೆರೆಯಬಹುದಾಗಿದೆ “. ಈ ಮಾದರಿಯದ್ದು ಮಾತ್ರ ಸಂವಿಧಾನ ಬದ್ಧ ದಲಿತರ ದೇವಾಲಯ ಪ್ರವೇಶದ ಆಶಯ. ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಯಸಿದ ಭಾರತದ ಒಡಲಾಳದ ಕೇರಿಯ ಜನರು ಊರಿನ ದೇವಾಲಯ ಪ್ರವೇಶದ ಆಶಯ.
ಇದನ್ನೂ ನೋಡಿ : ಅಗ್ಘಣಿ ಮೀಸಲಾಗಬೇಕೆಂಬುದು ಶೀಲವೆ ? Janashakthi Media
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]