ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮತಿ(ಟಿಆರ್‌ಎಸ್) ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿ ವೈಎಸ್‌ಆರ್‌ಟಿಪಿ ನಾಯಕಿ ವೈಎಸ್ ಶರ್ಮಿಳಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸರು ತಂದ ಕ್ರೇನ್ ಮೂಲಕ ಕಾರನ್ನು ಎಳೆದೊಯ್ದ ಘಟನೆ ಹೈದರಾಬಾದ್ ಆರ್ಟಿರಿಯಲ್ ರಸ್ತೆ ಬಳಿ ನಡೆದಿದೆ.
ನಿನ್ನೆ ನಡೆದ ಘರ್ಷಣೆಯಲ್ಲಿ ಹಾನಿಗೊಳಗಾದ ಕಾರಿನಲ್ಲಿಯೇ ಚಾಲಕನ ಸೀಟಿನಲ್ಲಿ ಇಂದು ಬೆಳಿಗ್ಗೆ ಕುಳಿತು ಶರ್ಮಿಳಾ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಹೊರಟಿದರು. ಶರ್ಮಿಳಾ ಅವರು ಕಾರಿನೊಳಗೆ ಕುಳಿತಿದ್ದರೂ ಸಹ ಅದನ್ನು ಲೆಕ್ಕಿಸದ ಪೊಲೀಸರು ಕ್ರೇನ್ ಮೂಲಕ ಕಾರನ್ನು ಎಳೆದೊಯ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಡಾಡಿದೆ.
ಸೋಮಾಜಿಗುಡದ ಯಶೋದಾ ಆಸ್ಪತ್ರೆ ಬಳಿ ಜನನಿಬಿಡ ರಸ್ತೆಯಲ್ಲಿ ಪ್ರಗತಿ ಭವನದತ್ತ ಕಾರನ್ನು ಚಲಾಯಿಸುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಇದರಿಂದ ಸೋಮಾಜಿಗುಡ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಮುಖ್ಯಮಂತ್ರಿ ಕಛೇರಿಗೆ ತೆರಳಲು ಪೊಲೀಸರು ತಡೆಯೊಡ್ಡಿದ್ದರು, ಕಾರಿನಿಂದ ಇಳಿಯಲು ಶರ್ಮಿಳಾ ನಿರಾಕರಿಸಿದ್ದರಿಂದ ಹೈದರಾಬಾದ್ ಪೊಲೀಸರು ಆಕೆ ಕಾರಿನಲ್ಲಿ ಕುಳಿತಿದ್ದರೂ ಕ್ರೇನ್ ಅನ್ನು ಬಳಸಿ ವಾಹನವನ್ನು ಎಳೆದೊಯ್ದಿದ್ದಾರೆ. ವೈಎಸ್‌ಆರ್ ತೆಲಂಗಾಣ ಪಕ್ಷದ ಕೆಲವು ನಾಯಕರು ಕೂಡ ಕಾರಿನಲ್ಲಿದ್ದರು. ಕಾರನ್ನು ಎಸ್‌ಆರ್‌ನಗರ ಸಂಚಾರ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಶರ್ಮಿಳಾ ತಮ್ಮ ಕಾರನ್ನು ಲಾಕ್ ಮಾಡಿ ಕಾರಿನಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪೊಲೀಸರು ಅವರೊಂದಿಗೆ ಮಾತನಾಡಲು ಮತ್ತು ವಾಹನದಿಂದ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸಹೋದರಿ ಹಾಗೂ ವೈಎಸ್‌ಆರ್‌ಟಿಪಿ ತೆಲಂಗಾಣ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಅವರ ಬೆಂಬಲಿಗರು ಮತ್ತು ವಾರಂಗಲ್‌ನಲ್ಲಿ ಆಡಳಿತಾರೂಢ ಟಿಆರ್‌ಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಟಿಆರ್‌ಎಸ್ ಬೆಂಬಲಿಗರು ತಮ್ಮ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಶರ್ಮಿಳಾ ಆರೋಪಿಸಿದ್ದರು.
ನಿನ್ನೆ ವಾರಂಗಲ್ ಜಿಲ್ಲೆಯಲ್ಲಿ ಪಾದಯಾತ್ರೆ ವೇಳೆ ಟಿಆರ್‌ಎಸ್ ಗೂಂಡಾಗಳು ತಮ್ಮ ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ತೆಲಂಗಾಣ ಮುಖ್ಯಮಂತ್ರಿ ನಿವಾಸದೆಡೆಗೆ ಹೊರಟಿದ್ದರು.
ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಿದ್ದಾಗ ತನ್ನನ್ನು ಏಕೆ ತಡೆಯುತ್ತಿದ್ದಿರಿ ಎಂದು ಶರ್ಮಿಳಾ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತನ್ನ ಕಾರಿನ ಮೇಲೆ ಟಿಆರ್‌ಎಸ್ ನಾಯಕರು ದಾಳಿ ನಡೆಸಿದಾಗ ಯಾರೂ ತಡೆಯಲಿಲ್ಲ, ಆದರೆ ಮುಖ್ಯಮಂತ್ರಿ ನಿವಾಸ ಕಚೇರಿಗೆ ಪ್ರತಿಭಟನೆಗೆ ಬರದಂತೆ ತಡೆದರು ಎಂದು ವೈ.ಎಸ್. ಶರ್ಮಿಳಾ ಕಾರಿನಲ್ಲಿದ್ದ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಕ್ಟೋಬರ್‌ನಿಂದ ಶರ್ಮಿಳಾ ತಮ್ಮ ಬೆಂಬಲಿಗರೊಂದಿಗೆ 3500 ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದಾರೆ. ಭಾನುವಾರ ನರಸಂಪೇಟೆಯಲ್ಲಿದ್ದ ಅವರು ಸ್ಥಳೀಯ ಟಿಆರ್‌ಎಸ್ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದರು. ಈ ಟೀಕೆ ಟಿಆರ್‌ಎಸ್ ಪಕ್ಷದ ಕಾರ್ಯಕರ್ತರನ್ನು ಕೆರಳಿಸಿದ್ದು, ಶರ್ಮಿಳಾ ಅವರ ‘ಪಾದಯಾತ್ರೆ’ ಸಮಯದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾಳಿ ಮಾಡಿ ವಾಹನಕ್ಕೆ ಬೆಂಕಿ ಹಚ್ಚಿದರು. ಇದು ಶರ್ಮಿಳಾ ಅವರ ಬೆಂಬಲಿಗರನ್ನು ಕೆರಳಿಸಿದ್ದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.