ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಐ-ಎಂ) ಪಕ್ಷವೂ ಕಾಂಗ್ರೆಸ್ ಜೊತೆಗಿನ ಉದ್ದೇಶಿತ ಮೈತ್ರಿಯನ್ನು ಹಿಂತೆಗೆದುಕೊಂಡಿದೆ. ರಾಜ್ಯದ 17 ಸ್ಥಾನಗಳಲ್ಲಿ ಪಕ್ಷವೂ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದು, ತಾನು ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಪಕ್ಷವೂ ಒಟ್ಟು 24 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ವರದಿಯಾಗಿದೆ.
ಪಕ್ಷವೂ ಸೂಚಿಸಿದ ಐದು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ನೀಡಲು ಕಾಂಗ್ರೆಸ್ ಒಪ್ಪದ ಕಾರಣ ಸಿಪಿಐ(ಎಂ) ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ನವೆಂಬರ್ 3ರ ಶುಕ್ರವಾರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಕಾಂಗ್ರೆಸ್ ಇನ್ನೂ 19 ಅಭ್ಯರ್ಥಿಗಳನ್ನು ಘೋಷಿಸಲು ಬಾಕಿಯಿದೆ.
ಇದನ್ನೂ ಓದಿ: ಹಣ ದುರುಪಯೋಗ ಪ್ರಕರಣ | ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಜಾಮೀನು ಖಾಯಂಗೊಳಿಸಿದ ಸುಪ್ರೀಂಕೋರ್ಟ್
ಇಷ್ಟೆ ಅಲ್ಲದೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕೂಡ ಇದೇ ರೀತಿಯ ಇಕ್ಕಟ್ಟಿನಲ್ಲಿದ್ದು, ಆದರೆ ಇನ್ನೂ ಔಪಚಾರಿಕ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಸಿಪಿಐ ಇಚ್ಛೆ ಇದ್ದರೆ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಸಿಪಿಐ(ಎಂ) ಮುಖಂಡರು ಹೇಳಿದ್ದಾರೆ. ತೆಲಂಗಾಣ
“ಮೈತ್ರಿ ಬಗ್ಗೆ ಕಾಂಗ್ರೆಸ್ ಗಂಭೀರವಾಗಿಲ್ಲ ಎಂದು ತೋರುತ್ತದೆ. ಎರಡು ದಿನಗಳ ಹಿಂದೆ ಅವರು ನಮ್ಮನ್ನು ಕಾಯಲು ಕೇಳಿದರು, ಆದರೆ ನಮಗೆ ಇಂದೇ ತಿಳಿಸಬೇಕಾಗಿತ್ತು. ಪಕ್ಷವು ಸ್ಪರ್ಧಿಸುವ 17 ಸ್ಥಾನಗಳ ಹೆಸರನ್ನು ನಾವು ಬಿಡುಗಡೆ ಮಾಡಿದ್ದೇವೆ. ಅಭ್ಯರ್ಥಿಗಳ ಹೆಸರುಗಳನ್ನು ನಂತರ ಪ್ರಕಟಿಸಲಾಗುವುದು. ನಾವು ಇನ್ನೂ ಕೆಲವು ಸ್ಥಾನಗಳನ್ನು ಘೋಷಿಸುವ ಸಾಧ್ಯತೆಯಿದೆ. ಸಿಪಿಐ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದರೆ ನಾವು ಸಿದ್ದರಿದ್ದೇವೆ” ಎಂದು ತೆಲಂಗಾಣದ ಹಿರಿಯ ಸಿಪಿಐ(ಎಂ) ನಾಯಕ ನರಸಿಂಗ್ ರಾವ್ ಹೇಳಿದ್ದಾರೆ.
ಸಿಪಿಐ(ಎಂ) ಸ್ಪರ್ಧಿಸಲಿರುವ ಸ್ಥಾನಗಳು:
- ಭದ್ರಾಚಲಂ (ಎಸ್‌ಟಿ)
- ಅಶ್ವರಾವ್‌ಪೇಟೆ
- ಪಲೈರ್
- ಮಧಿರಾ (ಎಸ್‌ಸಿ)
- ವೈರಾ (ಎಸ್‌ಟಿ)
- ಖಮ್ಮ
- ಸಾತುಪಲ್ಲಿ (ಎಸ್‌ಸಿ)
- ಮಿರ್ಯಾಲಗುಡೆಂ
- ನಲ್ಗೋಣ
- ನಕ್ರೇಕಲ್ (ಎಸ್‌ಸಿ)
- ಭುವನಗಿರಿ
- ಹುಜೂರ್‌ನಗರ
- ಕೋಡಾಡ್
- ಜನಗಾಂವ್
- ಇಬ್ರಾಹಿಂಪಟ್ಟಣಂ
- ಪಟಂಚೇರು
- ಮುಶೀರಾಬಾದ್.
ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಜೀವ ಬೆದರಿಕೆ, ಪೊಲೀಸ್ ಕೇಸ್ ದಾಖಲು
ಭದ್ರಾಚಲಂ, ಮಿರ್ಯಾಲ್‌ಗುಡ, ಮಧಿರಾ, ಪಾಲೇರ್ ಮತ್ತು ಹುಸ್ನಾಬಾದ್ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕಾಗಿ ಸಿಪಿಐ(ಎಂ) ಪಕ್ಷವೂ ಕಾಂಗ್ರೆಸ್ ಜೊತೆಗೆ ಕೇಳಿಕೊಂಡಿತ್ತು. ಆದರೆ ಕಾಂಗ್ರೆಸ್ ಈ ಬಗ್ಗೆ ಯಾವುದೆ ತೀರ್ಮಾನ ಕೈಗೊಂಡಿರಲಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಪುಟಿದೇಳುವ ಹಾದಿಯಲ್ಲಿದೆ. ಆದರೆ ರಾಜ್ಯದ ಕೆಲವು ಕ್ಷೇತ್ರದಲ್ಲಿ ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳು ನಿರ್ಣಾಯಕ ಮತಗಳನ್ನು ಹೊಂದಿದೆ.
1978 ರಿಂದ 2004 ರವರೆಗೆ ನಿರಂತರವಾಗಿ ಗೆದ್ದ ಭದ್ರಾಚಲಂ (ಎಸ್‌ಟಿ) ಕ್ಷೇತ್ರವನ್ನು ಬಿಟ್ಟುಕೊಡುವಂತೆ ಸಿಪಿಐ(ಎಂ) ಕಾಂಗ್ರೆಸ್ ಪಕ್ಷಕ್ಕೆ ನಿರ್ದಿಷ್ಟವಾಗಿ ಕೇಳಿಕೊಂಡಿತ್ತು. ಈ ಕ್ಷೇತ್ರವನ್ನು ಸಿಪಿಐ(ಎಂ) 2009 ರ ವಿಧಾನಸಭಾ ಚುನಾವಣೆಯಲ್ಲಿ ಸೋತಿತ್ತು ಹಾಗೂ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಅದಾಗ್ಯೂ 2014 ರಲ್ಲಿ ಕ್ಷೇತ್ರವನ್ನು ಸಿಪಿಐ(ಎಂ) ಮತ್ತೆ ಗೆದ್ದಿತ್ತು. ತೆಲಂಗಾಣ
2014 ರ ವೇಳೆ ಸಿಪಿಐ(ಎಂ) ಗೆದ್ದ ರಾಜ್ಯದ ಏಕೈಕ ಕ್ಷೇತ್ರವಾಗಿತ್ತು ಭದ್ರಾಚಲಂ. ಅದಾಗ್ಯೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಸ್ಥಾನವನ್ನು ಗೆದ್ದುಕೊಂಡಿತ್ತು. ಹೀಗಾಗಿ ಈ ಕ್ಷೇತ್ರವನ್ನು ಬಿಟ್ಟುಕೊಡದಿರುವ ಬಗ್ಗೆ ಕಾಂಗ್ರೆಸ್ ಹಠ ಹಿಡಿದಿದೆ.
ಇದನ್ನೂ ಓದಿ: ಬೆಂಗಳೂರು ಸಬ್ ಅರ್ಬನ್ ರೈಲು ವಿಚಾರದಲ್ಲಿ ರಾಜ್ಯ ಹಿತಾಸಕ್ತಿ ಬಲಿಕೊಟ್ಟಿದ್ದು ಬಿಎಸ್‌ವೈ | ಸಿಎಂ ಸಿದ್ದರಾಮಯ್ಯ ಗರಂ
ರಾಜ್ಯದ ಒಟ್ಟು 119 ವಿಧಾನಸಭೆ ಸ್ಥಾನಗಳಲ್ಲಿ 100 ಸ್ಥಾನಗಳಿಗೆ ಕಾಂಗ್ರೆಸ್ ಈವರೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ಎಲ್ಲಾ ಹಿರಿಯ ನಾಯಕರು ಸೇರಿದಂತೆ, ಇತ್ತೀಚೆಗೆ ಪಕ್ಷ ಸೇರಿದ BRSನ ಮಾಜಿ ನಾಯಕರಿಗೆ ಕೂಡಾ ಟಿಕೆಟ್ ಘೋಷಣೆಯಾಗಿದೆ. ಕಳೆದ ವರ್ಷ ಪಕ್ಷ ತೊರೆದು ಬಿಜೆಪಿ ಸೇರಿದ್ದ ಮುನುಗೋಡು ಮಾಜಿ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಕೂಡ ಮತ್ತೆ ಕಾಂಗ್ರೆಸ್‌ಗೆ ವಾಪಸಾಗಿದ್ದು, ಅವರಿಗೂ ಪಕ್ಷವೂ ಟಿಕೆಟ್ ಘೋಷಿಸಿದೆ.
ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಸಿಪಿಐ(ಎಂ)ಗೆ ಸೀಟು ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು, ಆದರೆ ಅಲ್ಲಿ
ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ವಿರುದ್ಧ ಕಠಿಣ ಹೋರಾಟದ ಕಾರಣಕ್ಕೆ ಪಕ್ಷವೂ ಅದನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ. ಎಐಎಂಐಎಂ 2009 ರಿಂದ ಓಲ್ಡ್ ಸಿಟಿಯ ಚಾರ್ಮಿನಾರ್, ಬಹದ್ದೂರ್‌ಪುರ, ನಾಂಪಲ್ಲಿ, ಮಲಕ್‌ಪೇಟ್, ಚಂದ್ರಾಯನಗುಟ್ಟಾ, ಯಾಕುತ್‌ಪುರ ಮತ್ತು ಬಹದ್ದೂರ್‌ಪುರ ಸ್ಥಾನಗಳನ್ನು ಗೆಲ್ಲುತ್ತಿದೆ.
2018 ರ ಚುನಾವಣೆಯಲ್ಲಿ, ಆಡಳಿತಾರೂಢ ಬಿಆರ್‌ಎಸ್ 119 ಸ್ಥಾನಗಳಲ್ಲಿ 88 ಸ್ಥಾನಗಳನ್ನು ಗೆದ್ದು ಪ್ರತಿಪಕ್ಷಗಳನ್ನು ಕೆಡವಿ ಹಾಕಿತ್ತು. ಆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಮತ್ತು ಇತರ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಆದಾಗ್ಯೂ, ಎರಡು ಪಕ್ಷಗಳು ಕ್ರಮವಾಗಿ 2 ಮತ್ತು 19 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ವೇಳೆ ಯಾವುದೆ ಎಡಪಕ್ಷಗಳಿಗೆ ಸ್ಥಾನ ಗೆಲ್ಲಲಾಗಲಿಲ್ಲ. ತೆಲಂಗಾಣ
ವಿಡಿಯೊ ನೋಡಿ: ‘ತುಘಲಕ್’ ನಾಟಕವನ್ನು ಕಟ್ಟಿ ಕೊಟ್ಟಿದ್ದರ ಹಿಂದೆ ರೋಚಕ ಕಥೆ ಇದೆ – ಡಾ. ಶ್ರೀಪಾಧ್ ಭಟ್