ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದು, ಕಾಂಗ್ರೆಸ್ ಸರ್ಕಾರವಿದ್ದಿದ್ದರೇ ಬೀದಿಯಲ್ಲಿ ಕಲ್ಲು ಹೊಡೆಯಬಹುದಿತ್ತು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರದ್ದು ಎನ್ನಲಾದ ಮೊಬೈಲ್ ಸಂಭಾಷಣೆ ಭಾರೀ ವೈರಲ್ ಆಗಿದೆ.
ಸಂಸದ ತೇಜಸ್ವಿ ಸೂರ್ಯ ಹಾಗೂ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಅರವಿನಂಗಡಿ ನಡುವೆ ನಡೆದ ಮೊಬೈಲ್ ಸಂಭಾಷಣೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಯುವ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ತಣಿಸಲು ತೇಜಸ್ವಿ ಸೂರ್ಯ ಅವರದ್ದು ಎನ್ನಲಾದ ಆಡಿಯೋದಲ್ಲಿ ‘ನಿಮ್ಮಷ್ಟೇ ನಮಗೂ ಹತ್ಯೆ ವಿಚಾರದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಕೋಪವೂ ಇದೆ. ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂದು ನಿಮ್ಮಂತೆ ನಮಗೂ ಅನಿಸುತ್ತದೆ. ಆದರೆ, ಅಧಿಕಾರದಲ್ಲಿರೋದು ನಮ್ಮದೇ ಸರಕಾರ. ಕಾಂಗ್ರೆಸ್ ಸರಕಾರ ಇದ್ದಿದ್ದರೆ, ರಸ್ತೆಗೆ ಇಳಿದು ಕಲ್ಲು ಹೊಡೆಯಬಹುದಿತ್ತು’ ಎಂದು ಹೇಳಲಾಗಿದೆ.
ಆದರೇನು ಮಾಡೋಣ, ನಮ್ಮದೇ ಸರಕಾರ ಇದ್ದಾಗ ಹಾಗೆ ಮಾಡಲು ಬರುವುದಿಲ್ಲ. ನಾನೇ ಮಂಗಳೂರಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ. ಎಲ್ಲರೂ ಕೂಡಿಕೊಂಡು ಮುಖ್ಯಮಂತ್ರಿಯನ್ನು ಭೇಟಿ ಮಾಡೋಣ. ಅಲ್ಲಿ ನಮ್ಮ ಬೇಡಿಕೆ ಇಟ್ಟು ನ್ಯಾಯ ಕೇಳೋಣ. ಎನ್‍ಐಎ ತನಿಖೆಗೂ ಆಗ್ರಹಿಸೋಣ. ಹಾಗೆಯೇ ನೆಟ್ಟಾರು ಮನೆಗೆ ಎಲ್ಲ ಜಿಲ್ಲೆಗಳ ಅಧ್ಯಕ್ಷರು ತೆರಳಿ ಅವರ ಕುಟುಂಬಕ್ಕೆ ಅಗತ್ಯ ಆರ್ಥಿಕ ನೆರವನ್ನೂ ಮಾಡಿಸಿಕೊಡೋಣ. ಇದೆಲ್ಲವನ್ನು ಮಾಡಬೇಕು ಎಂದರೆ ನೀವು ರಾಜೀನಾಮೆ ಹಿಂಪಡೆಯಬೇಕು ಎಂದು ಹೇಳಲಾಗಿದೆ.
ತೇಜಸ್ವಿ ಸೂರ್ಯ ಆಡಿಯೋಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸರಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ದೇಶದಲ್ಲಿ ಕಲ್ಲು ಹೊಡೆಯುವವರ ಹಿಂದಿನ ಕುಮ್ಮಕ್ಕು ಅನಾವರಣವಾಗಿದೆ. ಗಲಭೆ, ದೊಂಬಿಗಳ ಕೈವಾಡ ಬಿಜೆಪಿಯದ್ದೇ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಯಾವಾಗ ತೇಜಸ್ವಿ ಸೂರ್ಯನ ಮನೆಗೆ ಬುಲ್ಡೋಜರ್ ನುಗ್ಗಿಸುವಿರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.