ರಾಜಕಾಲುವೆ ಅತಿಕ್ರಮಣದಾರರ ಪ್ರಭಾವಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

ಬೆಂಗಳೂರು: ನಗರದಲ್ಲಿ ಮಳೆ ಹಾನಿಯಿಂದಾಗುತ್ತಿರುವ ಅವಾಂತರ ಒಂದು ಕಡೆಯಾದರೆ, ಮಳೆ ನೀರು ಹರಿಯುವ ರಾಜಕಾಲುವೆಗಳನ್ನೇ ಗುಳುಂ ಮಾಡಿಕೊಂಡಿರುವವರ ಪಟ್ಟಿಯೂ ದೊಡ್ಡದಿದೆ. ಇದರಿಂದಾಗಿ ನಗರದ ಸಾಮಾನ್ಯ ಜನತೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅತಿಕ್ರಮಣದಾರರನ್ನು ತೆರವುಗೊಳಿಸುತ್ತಿರುವುದು ಒಂದು ಕಡೆ ನಡೆಯುತ್ತಿದೆ. ಇದರ ನಡುವೆ, ಮಹಾನಗರ ಪಾಲಿಕೆ ಅಧಿಕಾರಿಗಳು ಶ್ರೀಮಂತರು ಮತ್ತು ಶಕ್ತಿಶಾಲಿಗಳ ಬಗ್ಗೆ ಮೃಧು ಧೋರಣೆ ತೋರುತ್ತಿದ್ದಾರೆ ಎಂಬ ಆರೋಪ ಗಾಢವಾಗಿ ಕೇಳಿಬಂದಿದೆ. ಇದೀಗ ದೊಡ್ಡ ಕುಳಗಳ ಪಟ್ಟಿ ಬಿಡುಗಡೆಯಾಗಿದೆ.

ಬೆಂಗಳೂರಿನ ರೇನ್‌ಬೋ ಡ್ರೈವ್ ಲೇಔಟ್‌ನಲ್ಲಿ ಪ್ರಮುಖ ಟೆಕ್ ಪಾರ್ಕ್‌ಗಳು, ಐಷಾರಾಮಿ ವಿಲ್ಲಾಗಳು ಹೆಚ್ಚು ಹಾನಿಗೊಳಗಾಗಿದೆ. ಅಲ್ಲಿ ನಿವಾಸಿಗಳನ್ನು ರಕ್ಷಿಸಲು ದೋಣಿಗಳು ಬಳಸಿ ರಕ್ಷಣೆ ಮಾಡಲಾಗಿತ್ತು. ಮಾರ್ಕ್ಯೂ ಟೆಕ್ ಪಾರ್ಕ್‌ಗಳು ಮತ್ತು ಪ್ಲಶ್ ಗೇಟೆಡ್ ಸಮುದಾಯಗಳು ವಾಸಿಸುವ ಬೆಂಗಳೂರಿನ ಐಟಿ ಹಬ್‌ನಲ್ಲಿ ಮಳೆ ನೀರಿನ ಚರಂಡಿಗಳು, ರಾಜ ಕಾಲುವೆ ಅತಿಕ್ರಮಣದಾರರಲ್ಲಿ ಪ್ರಮುಖವಾಗಿವೆ.

ಒಂದೇ ಸಂಸ್ಥೆಯಿಂದ 10 ಗುಂಟೆಯಿಂದ 50 ಗುಂಟೆಗಳವರೆಗೂ ಅತಿಕ್ರಮಣ ನಡೆದಿದ್ದು, ಇವರಲ್ಲಿ ಕೆಲವರು 13 ವಿವಿಧ ಸರ್ವೆ ನಂಬರ್‌ಗಳಲ್ಲಿನ ರಾಜಕಾಲುವೆ ಮತ್ತು ಮಳೆನೀರು ಚರಂಡಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಬಿಡುಗಡೆಗೊಳಿಸಿರುವ ಪಟ್ಟಿಯಂತೆ ಬಾಗ್ಮನೆ ಟೆಕ್ ಪಾರ್ಕ್, ಪೂರ್ವ ಸ್ವರ್ಗ, ರೇನ್‌ಬೋ ಡ್ರೈವ್, ವಿಪ್ರೋ, ಆರ್‌ಎಂಝಡ್‌ ಇಕೋಸ್ಪೇಸ್, ​​ಗೋಪಾಲನ್ ಎಂಟರ್‌ ಪ್ರೈಸಸ್, ದಿವ್ಯಾ ಸ್ಕೂಲ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ನ್ಯೂ ಹೊರೈಜನ್ ಕಾಲೇಜ್, ಆದರ್ಶ್ ಡೆವಲಪರ್ಸ್, ಎಪ್ಸಿಲಾನ್, ದಿವ್ಯಶ್ರೀ 77, ಪ್ರೆಸ್ಟೀಜ್ ಗ್ರೂಪ್, ಸಲಾರ್ಪುರಿಯಾ ಗ್ರೂಪ್ ಮತ್ತು ನಲಪಾಡ್ ಸಂಸ್ಥೆ ಪ್ರಮುಖವಾಗಿವೆ.

ಒಂದು ಕಾಲದಲ್ಲಿ ಮಳೆನೀರು ಚರಂಡಿ ಕಾಲುವೆಗಳಾಗಿದ್ದ ಜಮೀನುಗಳು ಇದೀಗ ವಿಲ್ಲಾ, ಅಪಾರ್ಟ್​​ಮೆಂಟ್​, ಆಫೀಸ್​, ಐಟಿ ಕಂಪನಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಈ ಸಂಸ್ಥೆಗಳು ಮಹದೇವಪುರ, ಜುನ್ನಸಂದ್ರ, ದೊಡ್ಡಕನ್ನಹಳ್ಳಿ, ಹೂಡಿ, ಬೆಳ್ಳಂದೂರು, ಸೊಣ್ಣೆಹಳ್ಳಿ, ಆರ್ ನಾರಾಯಣಪುರ, ರಾಮಗೊಂಡನಹಳ್ಳಿ, ಕಾಡುಬೀಸನಹಳ್ಳಿ, ದೇವರಬೇಸನಹಳ್ಳಿ, ಯಮಲೂರು, ಮಾರತ್ತಹಳ್ಳಿ ಮತ್ತು ಚಲ್ಲಘಟ್ಟ ಮುಂತಾದ ಕಡೆಗಳಲ್ಲಿ ಅತಿಕ್ರಮಿಸಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ ಬಿಬಿಎಂಪಿಯು ಖಾಲಿ ಇರುವ ಜಾಗಗಳು ಅಥವಾ ತಾತ್ಕಾಲಿಕ ಕಟ್ಟಡಗಳು ಬಂದಿರುವ ಸ್ಥಳಗಳಲ್ಲಿ ದೊಡ್ಡ ದೊಡ್ಡ ರಾಜಕಾಲುವೆಗಳನ್ನು ಮರುನಿರ್ಮಾಣ ಮಾಡುವುದಾಗಿ ಹೇಳಿದೆ. ಇದೇ ವೇಳೆ ಬಿಬಿಎಂಪಿಗೆ ಸೇರಿದ ಜಾಗಗಳಲ್ಲಿ ವಾಸ ಮಾಡಿರುವವರನ್ನು ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 104 (ಅನಧಿಕೃತವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿರುವ ಜಾಗ ತೆರವು) ಅಡಿಯಲ್ಲಿ ಜ್ಞಾಪನಾ ಪತ್ರ ನೀಡುವಂತೆ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ.

1904 ರ ನಕ್ಷೆಯನ್ನು ಆಧರಿಸಿದ ಡ್ರೈನ್ ಸ್ಕೆಚ್ ಬಗ್ಗೆ ಗೊಂದಲದಿಂದಾಗಿ ಬಿಬಿಎಂಪಿ ಇದುವರೆಗೆ ದೊಡ್ಡ ಬಿಲ್ಡರ್‌ಗಳ ಬಗ್ಗೆ ಮೃದುವಾಗಿದೆ. ʻʻಕೆಲವು ಬಿಲ್ಡರ್‌ಗಳು ಮತ್ತು ಟೆಕ್ ಪಾರ್ಕ್‌ಗಳು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಚರಂಡಿಗಳ ಉದ್ದಕ್ಕೂ ಇರುವ ಭೂಮಿಯನ್ನು ಪಡೆದಿದ್ದರಿಂದ ಅಲ್ಲಿ ಸ್ಪಷ್ಟತೆಯ ಕೊರತೆ ಇತ್ತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಿಬಿಎಂಪಿಗೆ ತಡೆಯಾಗಿರುವ ಎಲ್ಲಾ ಅತಿಕ್ರಮಣಗಳನ್ನು ತೆಗೆದುಹಾಕಲು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಈ ಮಧ್ಯೆ, ತಮ್ಮ ಕಂಪನಿಗೆ ಬಿಬಿಎಂಪಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ವಿಪ್ರೋ ವಕ್ತಾರರು ತಿಳಿಸಿದ್ದಾರೆ. “ಬಿಬಿಎಂಪಿಯ ಪ್ರತಿಯೊಂದು ಕಾನೂನಿಗೂ ವಿಪ್ರೋ ಬದ್ಧವಾಗಿದೆ, ಎಲ್ಲಾ ವಿಪ್ರೋ ಕಟ್ಟಡಗಳು ಪೂರ್ವ ಅನುಮೋದಿತ ಯೋಜನೆಗಳ ಪ್ರಕಾರವೇ ಇದೆʼʼ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *