ಬಿಡದಿ ಬಳಿ ಇರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕ ವಿರೋಧಿ ನೀತಿಯನ್ನ ಖಂಡಿಸಿ ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಕಂಪನಿಯ ಮ್ಯಾನೇಜ್ಮೆಂಟ್ ಹಾಗೂ ಕಾರ್ಖಾನೆ ನೌಕರರ ನಡುವೆ ಉಲ್ಬಣಗೊಂಡಿರುವ ಸಮಸ್ಯೆ ತಾರಕಕ್ಕೆರಿದ್ದರೂ ಕೂಡಾ ಸರ್ಕಾರ ಮಾತ್ರ ನಿರಾಸಕ್ತಿ ತೋರುತ್ತಿದ್ದು, ಮುಷ್ಕರವನ್ನು ನಿಷೇಧಿಸಿ ಲಾಕೌಟ್ ತೆರವು ಗೊಳಿಸುವಂತೆ ಡಿಸಿಎಂ ಹೇಳಿಕೆ ನೀಡಿರುವುದು ನೌಕರರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಧರಣಿ 11 ದಿನಗಳವರೆಗೆ ಮುಂದುವರೆಯಲು ಕಾರಣವಾಗಿರುವ ಅಂಶಗಳೇನು? ಕಾರ್ಮಿರ ಜೊತೆ ಈ ಕಂಪನಿ ಯಾವ ರೀತಿ ನಡೆದುಕೊಳ್ಳುತ್ತಿದೆ.? ಮುಷ್ಕರ್ ನಿಷೇದಿಸಲು ಡಿಸಿಎಂ ಮುಂದಾದದ್ದು ಯಾಕೆ ? ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ.
ಟೊಯೊಟೊ ಕಿರ್ಲೋಸ್ಕರ್ ಆಡಳಿತ ಮಂಡಳಿಯ ದೌರ್ಜನ್ಯದ ವಿರುದ್ಧ ಸುಮಾರು 3500 ಕಾರ್ಮಿಕರು ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಕೋವಿಡ್-19 ಆರಂಭದಿಂದಲೂ ಕಂಪನಿ ಕಾರ್ಮಿಕರನ್ನು ಪಶುಗಳಂತೆ ನಡೆಸಿಕೊಳ್ಳುತ್ತಿದೆ. ಕೆಲಸ ಮಾಡಲು ಅಸಾಧ್ಯವಾದ ರೀತಿಯಲ್ಲಿ ಕಾರ್ಮಿಕರ ಮೇಲೆ ಒತ್ತಡ ಹೇರಿ, ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿ ದುಡಿಸಿಕೊಳ್ಳುತ್ತಿದೆ ಎಂದು ಕಾರ್ಮಿಕರು ಆರೋಪವನ್ನು ಮಾಡಿ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾರ್ಮಿಕರ ಬೇಡಿಕೆಗಳು ಈ ರೀತಿ ಇವೆ ಅವೈಜ್ಞಾನಿಕವಾಗಿ ಕೆಲಸವನ್ನು ನಿಗದಿ ಮಾಡುವ ಮೂಲಕ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ. ಕೆಲಸದ ನಿರ್ವಹಣೆಗೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಕೆಲಬಾರಿ 48 ಗಂಟೆಗಳ ಕಾಲ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ನಿದ್ರೆ ಇತ್ಯಾದಿ ಸಮಸ್ಯೆಗಳಿಂದ ಕಾರ್ಮಿಕರು ತಡವಾಗಿ ಬಂದರೆ ಅನಧಿಕೃತ ರಜೆ ಎಂದು ನಮೂದಿಸುತ್ತಿದ್ದಾರೆ. ಆರೋಗ್ಯ ಸೇತು ಆ್ಯಪ್ ಬಳಸದಂತೆ ಆದೇಶ ಹೊರಡಿಸಿದ್ದಾರೆ, ಪ್ರಶ್ನಿಸುವ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾರ್ಮಿಕರು 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಸಾಕಷ್ಟು ಜಟಾಪಟಿ ನಡೆಯುತ್ತಿದೆ. ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸುವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದರು. ಕಂಪನಿ 39 ಕಾರ್ಮಿರನ್ನು ಅಮಾನತ್ತು ಮಾಡಿತ್ತು, ಇದರಿಂದ ಕೆರಳಿದ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ಕಂಪನಿಯು ಆಗ ಲಾಕೌಟ್ ಘೋಷಣೆ ಮಾಡಿತ್ತು. ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಬೇಕು, ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಹಲವು ಕಾರ್ಮಿಕರನ್ನು ಅಮಾನತ್ತು ಮಾಡಲಾಗಿದೆ. ಅಮಾನತ್ತನ್ನು ವಾಪಸ್ಸ ಪಡೆಯಬೇಕು ಹಾಗೂ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಟಿಕೆಎಂಇಯು ನ ಅಧ್ಯಕ್ಷರಾದ ಸಿ.ಎನ್. ಪ್ರಸನ್ ಕುಮಾರ್ ರವರು ಆಗ್ರಹಿಸಿದ್ದಾರೆ.
ಕಾರ್ಖಾನೆ ನೌಕರರ ಹಾಗೂ ಆಡಳಿತ ಮಂಡಳಿಯ ನಡುವೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ನಿನ್ನೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರ ಜೊತೆಯಲ್ಲಿ ಬೆಂಗಳೂರಿನ ವಿಕಾಸಸೌಧದ ಕಛೇರಿಯಲ್ಲಿ ಸಂಧಾನ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲಿ ಕಾರ್ಮಿಕರು ಎದುರಿಸುವ ಸಮಸ್ಯೆಗಳು ಚರ್ಚೆಯಾಗ ಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಇಲ್ಲಿ ಕಾರ್ಮಿಕರ ಸಮಸ್ಯೆಗಳು ಚರ್ಚೆಯಾಗುವ ಬದಲು ಮುಷ್ಕರವನ್ನು ನಿಷೇಧಿಸಿ ಲಾಕ್ ಔಟ್ ತೆರವು ಮಾಡುವಂತೆ ಡಿಸಿಎಂ ನಿರ್ಧಾರವನ್ನು ಮಾಡಿದ್ದಾರೆ.
ಕೈಗಾರಿಕೆಯಲ್ಲಿ ನಾವು ಜಗತ್ತಿಗೆ ಮುಂದೆ ಬರಬೇಕಿದೆ ಹಾಗಾಗಿ ಮುಷ್ಕರದ ಮಾತು ಬೇಡ ಕೂಡಲೆ ಸಂಸ್ಥೆಯ ಉತ್ಪಾದನೆಯ ಚಟುವಟಿಕೆಯಲ್ಲಿ ಕಾರ್ಮಿಕರು ಭಾಗಿಯಾಗಲಿದ್ದಾರೆ, ನೀವು ಲಾಕ್ ಔಟ್ ತೆರವುಗೊಳಿಸಿ ಎಂದು ಆಡಳಿತ ಮಂಡಳಿಗೆ ಸೂಚನೆಯನ್ನು ನೀಡಿದರು.
ಇದನ್ನು ಓದಲು ಲಿಂಕ್ ಕ್ಲಿಕ್ ಮಾಡಿ : 9 ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಧರಣಿ : ಇಂದು ಸರಕಾರದಿಂದ ಸಂಧಾನಸಭೆ?
ಸಚಿವರ ಈ ನಿರ್ಧಾರವನ್ನು ಸಿಐಟಿಯು ಖಂಡಿಸಿದ್ದು, ಮುಷ್ಕರವನ್ನು ನಿಷೇಧಿಸಿರುವ ಬಿಜೆಪಿ ಸರಕಾರ ಕುಖ್ಯಾತ ಟೊಯೊಟ ಉತ್ಪಾದನ ವ್ಯವಸ್ಥೆ, ಟಿಪಿಎಸ್ ಏನಿದೆ, ಇದರ ಬಗ್ಗೆ ಕಾರ್ಮಿಕರ ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡುವ ಕೆಲಸವನ್ನು ಮಾಡಲಿ. ಸ್ವತ: ಡಿಸಿಎಂ ಮತ್ತು ಕಾರ್ಮಿಕ ಸಚಿವರು ಟೊಯೊಟೊ ಕಿರ್ಲಸ್ಕರ್ ಕಂಪನಿಯಲ್ಲಿ ಟಿಪಿಎಸ್ ನಡಿ ಕನಿಷ್ಟ 4 ಗಂಟೆ ಕೆಲಸ ಮಾಡಿ, ನಡುವೆ 10 ನಿಮಿಷ ವಿಶ್ರಾಂತಿ ಪಡೆದು ಬಂದು ಮಾತನಾಡಲಿ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಸವಾಲು ಹಾಕಿದ್ದಾರೆ
ಸಚಿವರ ಜೊತೆ ನಡೆದ ಸಂಧಾನ ಸಭೆ ವಿಫಲಗೊಂಡಿದ್ದು ಕಾರ್ಮಿಕರು ಧರಣಿಯನ್ನು ಮುಂದುವರೆಸಿದ್ದಾರೆ. ಸರಕಾರ ಕಾರ್ಮಿಕರ ಹಿತವನ್ನು ಕಾಪಾಡುವುದಕ್ಕಾಗಿ ಆಡಳಿತ ಮಂಡಳಿಯ ಕಿವಿಯನ್ನು ಹಿಂಡುವ ಮೂಲಕ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕಿದೆ.