ಒಂದು ಕಿ.ಮೀ.ಗೆ 24 ರೂ. ದರ ನಿಗದಿಗೆ ಚಾಲಕರ ಆಗ್ರಹ
ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಪ್ರಾಧಿಕಾರದ ಚಾಲಕ ಮಂಗಳವಾರ ಸಂಜೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದು ಬುಧವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಇತರೆ ಟ್ಯಾಕ್ಸಿ ಚಾಲಕರು ಇಂದು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಕೆಎಸ್‌ಟಿಡಿಸಿ) ಗುತ್ತಿಗೆ ಅಡಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದ ರಾಮನಗರ ತಾಲೂಕಿನ ಪ್ರತಾಪ್, ಮಂಗಳವಾರ ಸಂಜೆ ಕೆಐಎ ಆಗಮನ ಪಿಕ್‌ಅಪ್ ಪಾಯಿಂಟ್‌ನಲ್ಲಿ ಟ್ಯಾಕ್ಸಿಯೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ತಕ್ಷವೇ ಕೆಐಎ ಭದ್ರತಾ ಸಿಬ್ಬಂದಿ, ಪ್ರತಾಪ್‌ನನ್ನು ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಒಂದು ಕಿ.ಮೀ.ಗೆ 24 ರೂ. ದರ ನಿಗದಿ ಮಾಡಿ ಚಾಲಕರ ಜೀವ ಉಳಿಸಿ ಎಂದು ಒತ್ತಾಯಿಸಿ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಚಾಲಕನ ಆತ್ಮಹತ್ಯೆ ವಿಷಾದನೀಯ ಎಂದಿರುವ ರಾಷ್ಟ್ರೀಯ ಚಾಲಕರ ಒಕ್ಕೂಟ, ಮೃತನ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದೆ.
ಕೊರೋನಾದಿಂದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಚಾಲಕ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಗಳು, ಮನವಿಗಳು, ಮಾಡಿದ್ದರೂ ಸಹ ಸಾರಿಗೆ ಇಲಾಖೆಯ ನಿರ್ಲಕ್ಷ ಧೋರಣೆಯಿಂದ ಚಾಲಕರು ಆತ್ಮಹತ್ಯೆಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಚಾಲಕರ ಬೇಡಿಕೆಗಳಿಗೆ ಸ್ಪಂದಿಸಿದಲ್ಲಿ ಸಾವಿನ ಸಂಖ್ಯೆ ದಿನೇದಿನೇ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಚಾಲಕರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು. ಬ್ಯಾಂಕುಗಳಿಗೆ ಕಂತು ಕಟ್ಟುವ ವಿಷಯದಲ್ಲಿ ದಬ್ಬಾಳಿಕೆ ಮಾಡದಂತೆ ಓಲಾ ಉಬರ್ ಸಂಸ್ಥೆಯಲ್ಲಿ ಚಾಲಕರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು. ಸರ್ಕಾರ ಹಳದಿ ಬೋರ್ಡ್ ವಾಹನಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಆಗುತ್ತಿರುವ ದೌರ್ಜನ್ಯ ತಪ್ಪಿಸಬೇಕು ಎಂದು ಬೆಂಗಳೂರು ಟ್ಯಾಕ್ಸಿಚಾಲಕರ ಸಂಘ ಒತ್ತಾಯಿಸಿದೆ.
ಸತತ ಲಾಕ್ ಡೌನ್ ನಿಂದ ಖಾಸಗಿ ಫೈನಾನ್ಸ್ ರ್ ಗಳ ಕಿರುಕುಳದಿಂದ ಸಾಕಷ್ಟು ಚಾಲಕರು ತೊಂದರೆಗೀಡಾಗಿದ್ದಾರೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದೇ ರೀತಿ ಚಾಲಕರ ಮೇಲಿನ ಬೇಜವಾಬ್ದಾರಿತನ ಮುಂದುವರೆದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು CITU ನೇತೃತ್ವದ ಅಟೋ ರೀಕ್ಷಾ ಚಾಲಕರ ಸಂಘಟನೆ(ARDU) ಎಚ್ಚರಿಕೆಯನ್ನು ನೀಡಿದೆ.