ತಾತ್ಕಾಲಿಕ ಸೇತುವೆ ಸಂಪರ್ಕದಲ್ಲಿ ಕೋಪಟ್ಟಿ ಗ್ರಾಮದ ಜನತೆ

ಮಡಿಕೇರಿ: ಜಿಲ್ಲೆಯ ಎಷ್ಟೋ ಗ್ರಾಮೀಣ ಪ್ರದೇಶದ ಜನರಿಗೆ ಇಂದಿಗೂ ಸರಿಯಾದ ಸಂಪರ್ಕ ರಸ್ತೆಗಳಿಲ್ಲದೆ ಬದುಕು ಸಾಗಿಸುತ್ತಿರುವುದು ಕಾಣಬಹುದು. ಅದರಲ್ಲಿ, ಮಡಿಕೇರಿ ತಾಲ್ಲೂಕಿನ ಕೋಪಟ್ಟಿ ಗ್ರಾಮದ ನಿವಾಸಿಗಳೂ ಸಹ ಕಾಲು ಸಂಕ ಅಥವಾ ಪಾಲೇ ಸಂಪರ್ಕ ಸೇತುವೆ ಮೂಲಕವೇ ಓಡಾಡುತ್ತಿದ್ದಾರೆ.

45 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುವ ಕೋಪಟ್ಟಿ ಬೆಟ್ಟದಿಂದ ಹರಿಯುವ ಹೊಳೆ ನೀರು ಸುತ್ತುವರೆದಿರುವುದು ಕಾಣಬಹುದು.

ಗ್ರಾಮದ ಮಕ್ಕಳು ಅಂಗನವಾಡಿ, ಶಾಲೆ ಮತ್ತು ಆಸ್ಪತ್ರೆಗೆ ಹೋಗಬೇಕೆಂದರೆ ಹೊಳೆಯನ್ನು ದಾಟಿಯೇ ಹೋಗಬೇಕಾಗಿದೆ. ಮಳೆ ಬಂದರಂತೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಈ ಸಂದರ್ಭದಲ್ಲಿ ಹೊಳೆಯು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಕೊನೆಯವರೆಗೂ ಅಂದರೆ ನಾಲ್ಕು ತಿಂಗಳ ಕಾಲ ತುಂಬಿ ಹರಿಯುತ್ತದೆ. ಇಲ್ಲಿನ ಜನರಂತೂ ಕೃಷಿ ಚಟುವಟಿಕೆ ಸೇರಿದಂತೆ ಯಾವುದೇ ಕೆಲಸ ಕಾರ್ಯಗಳಿಗೆ ಈ ಹೊಳೆಯನ್ನು ದಾಟಿಯೇ ಬರಬೇಕು. ಅದರಲ್ಲೂ ಹೆಂಗಸರು, ಮಕ್ಕಳು ಮತ್ತು ವೃದ್ಧರ ಓಡಾಟಕ್ಕೆ ಮತ್ತಷ್ಟು ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಅವರು ವಾಪಸ್ ಬರುವುದಕ್ಕೆ ಮುಂಚಿತವಾಗಿ ಮನೆಯ ಗಂಡಸರು ಸೇತುವೆ ಬಳಿ ಹೋಗಿ ಕಾದು ಕುಳಿತುಕೊಳ್ಳಬೇಕು.

ಹೊಳೆ ದಾಟಿ ಹೋದವರು ಮರಳಿ ಬರುವುದು ಅರ್ಧಗಂಟೆ ತಡವಾದರೂ ಏನೋ ಅನಾಹುತವಾಗಿದೆ ಎಂಬ ಆತಂಕವಂತೂ ಎದುರಾಗುತ್ತದೆ ಎಂದು ಪಂಚಾಯಿತಿ ಸದಸ್ಯರಾದ ದಿನೇಶ್ ಅವರ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಮಳೆಗಾಲ ಆರಂಭವಾಯಿತ್ತೆಂದರೆ ಗ್ರಾಮದವರೇ ಪ್ರತೀ ವರ್ಷ ಮರದ ದಿಮ್ಮಿಗಳನ್ನಿಟ್ಟು ಪಾಲು ಸಿದ್ದ ಮಾಡುತ್ತೇವೆ. ಆದರೆ ಹೊಳೆಯಲ್ಲಿ ನೀರಿನ ಪ್ರಮಾಣ ಮಿತಿ ಮೀರಿದಾಗ ಮರದಿಮ್ಮಿಗಳೇ ಕೊಚ್ಚಿಹೋಗುತ್ತವೆ.

ಸ್ಥಳೀಯರಾದ ನೀಲಕಂಠ ಅವರು ʻʻಒಮ್ಮೆ ತುಂಬಿ ಹರಿವ ಹೊಳೆ ದಾಟಲುಹೋಗಿ ನಮ್ಮ ಅಣ್ಣನೇ ತೇಲಿ ಹೋಗಿ ಪ್ರಾಣ ಕಳೆದುಕೊಂಡರುʼʼ ಎಂದು ಅಳಲು ನೋವು ಕೊಂಡರು. ಹಾಗಾಗಿ ಶಾಶ್ವತವಾದ ಸೇತುವೆ ನಿರ್ಮಿಸುವಂತೆ ನಾಲ್ಕೈದು ದಶಕಗಳಿಂದಲೂ ಮನವಿ ಮಾಡುತ್ತಿದ್ದರೂ ಶಾಸಕರು, ಯಾವುದೇ ಜನಪ್ರತಿನಿಧಿಗಳು ಗಮನಹರಿಲ್ಲ ಎನ್ನೋದು ಇಲ್ಲಿನವರ ಆರೋಪವಾಗಿದೆ.

ಒಟ್ಟಿನಲ್ಲಿ ಮಳೆಗಾಲ ಬಂತೆಂದರೆ ನಾಲ್ಕೈದು ತಿಂಗಳು ಸಂಪರ್ಕ ಕಳೆದುಕೊಂಡು ಪರದಾಡುವ ಗ್ರಾಮಕ್ಕೆ ಇನ್ನಾದರೂ ಸೇತುವೆ ನಿರ್ಮಿಸಿ ಬವಣೆ ನೀಗಿಸಬೇಕು ಎನ್ನೋದು ಜನರ ಆಗ್ರಹವಾಗಿದೆ.

Donate Janashakthi Media

Leave a Reply

Your email address will not be published. Required fields are marked *