ತಮ್ಮ ಹಕ್ಕುಗಳಿಗಾಗಿ ಹೋರಾಡುವ ದುಡಿಯುವ ಮಹಿಳೆಯರ ಮೇಲೆ ಮೊಕದ್ದಮೆಗಳು ಹೆಚ್ಚುತ್ತಿವೆ: ತಪನ್‌ಸೇನ್‌

ವರದಿ : ಎಚ್. ಎಸ್.‌ ಸುನಂದ

ಕೋಲ್ಕತ್ತಾ: ದುಡಿಯುವ ವರ್ಗ, ಅದರಲ್ಲೂ ಮಹಿಳಾ ವಿಭಾಗವು ದುಡಿಮೆಯನ್ನು ನಂಬಿಕೊಂಡಿರುವವರ ಮೇಲೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಕಷ್ಟು ದಾಳಿಗಳನ್ನು ಎದುರಿಸುತ್ತಿದೆ. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟಗಳನ್ನು ಹಮ್ಮಿಕೊಂಡಾಗಲೂ ದುಡಿಯುವ ಮಹಿಳೆಯರ ಮೇಲೆ ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ದಬ್ಬಾಳಿಕೆಯನ್ನು ನಡೆಸಲಾಗುತ್ತಿದೆ ಎಂದು ತಪನ್‌ ಸೇನ್‌ ಹೇಳಿದರು.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ವತಿಯಿಂದ ಹಮ್ಮಿಕೊಂಡಿರುವ ಅಖಿಲ ಭಾರತ ದುಡಿಯುವ ಮಹಿಳೆಯರ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಿಐಟಿಯು ಸದಸ್ಯತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಸದಸ್ಯತ್ವವೂ ಇದೆ. ಈ ಸಮಾವೇಶ ಚೆನ್ನೈನಲ್ಲಿ ನಡೆದ ಸಿಐಟಿಯು 16ನೇ ಅಧಿವೇಶನ ನಂತರವೇ ಆಗಬೇಕಿತ್ತು. ಆದರೆ ಕೋವಿಡ್‌ ಸಾಂಕ್ರಾಮಿಕತೆಯಿಂದಾಗಿ ನಡೆಸಲು ಆಗಲಿಲ್ಲ. ಕೋವಿಡ್‌ ಸಾಂಕ್ರಮಿಕತೆ ದೇಶದಾದ್ಯಂತ ಧಾವಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಇದೇ ಕೋವಿಡ್‌ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಮನೆಕೆಲಸ, ಕೈಗಾರಿಕೆಗಳಲ್ಲಿ, ಗುತ್ತಿಗೆ ಆಧಾರಿತದಲ್ಲಿ ಕೆಲಸ ಕಳೆದುಕೊಂಡದ್ದರಲ್ಲಿ ಮಹಿಳೆಯರ ಪ್ರಮಾಣವೂ ಹೆಚ್ಚಾಗಿದೆ. ಕಾರ್ಮಿಕ ವರ್ಗದ ಚಳುವಳಿ ಇಂತಹ ಸಂದಭದಲ್ಲೂ ಆಂದೋಲನಗಳನ್ನು ಮುಂದುವರೆಸಿತು. ಕಾಲಕಾಲಕ್ಕೆ ಸರಣಿ ಆಂದೋಲನಗಳು ನಡೆದಿವೆ ಎಂದರು.

ಪ್ರಮುಖವಾಗಿ ದುಡಿಯುವ ರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಬಹುದಾದ ಪ್ರಮುಖವಾದ ಹೋರಾಟಗಳಲ್ಲಿ ಭಾಗವಹಿಸಿದವರು ಈ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಅಂಗನವಾಡಿ, ಆಶಾ, ಎಂಡಿಎಂ ನೌಕರರ ಜಂಟೀ ಹೋರಾಟಗಳು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಸಂದರ್ಭದಲ್ಲಿ ನಡೆದಿದೆ.

ಹೋರಾಟದ ಸಂದರ್ಭದಲ್ಲಿ ಹರಿಯಾಣದ 895 ಕಾರ್ಯಕರ್ತರ ಮೇಲೆ ಮೊಕದ್ದಮೆ ಹಾಕಲಾಗಿದೆ. ಅವರು ಕೆಲಸ ಕಳೆದುಕೊಂಡಿದ್ದಾರೆ. ದೆಹಲಿಯ ಎಎಪಿ ಸರ್ಕಾರ ಹೋರಾಟದ ಹಕ್ಕು ಕಸಿಯುವ ಪ್ರಯತ್ನ ಮಾಡಿ 900 ಜನರಿಗೆ ನೋಟಿಸ್‌ ನೀಡಿದೆ. ಗುಜರಾತ್‌ನಲ್ಲಿ 300 ಜನರ ಮೇಲೆ ಕೇಸ್‌ ಹಾಕಿದೆ. ಮುಖ್ಯಮಂತ್ರಿ ನೀಡಿದ ಭರವಸೆಯನ್ನು ಜಾರಿ ಮಾಡಬೇಕೆಂದು ಹೋರಾಟ ನಡೆಸಿದರೆ ಈ ರೀತಿಯ ದಾಳಿ ನಡೆಯುತ್ತಿವೆ ಎಂದರು.

ಇಂದು ಆಳುವ ವರ್ಗವು ಜನತೆಯ ಗಮನ ಧರ್ಮ, ಸಂಪ್ರದಾಯಗಳ ಕಡೆ ಸೆಳೆದು ದುಡಿಯುವ ಜನರ ಮೇಲೆ, ಕೆಲಸದ ಮೇಲೆ, ಕಾನೂನುಗಳ ಮೇಲೆ ದಾಳಿ ನಡೆಸುತ್ತವೆ. ಬೆಲೆ ಏರಿಕೆ ನಿರಂತರವಾಗಿ ಆಗುತ್ತಿವೆ. ಅದನ್ನು ತಡೆಗಟ್ಟಲು ವಿಫಲವಾದ ಸರ್ಕಾರ ಸಾರ್ವಜನಿಕ ವಲಯ, ರೈಲ್ವೇ ಹಳಿಗಳ ಮಾರಾಟ, ವಿಮೆ ಷೇರುಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿದೆ. ರಾಮನವಮಿ, ಹನುಮ ಜಯಂತಿಗೆ ಹೆಚ್ಚು ವೈಭವೀಕರಿಸಲಾಗುತ್ತಿದೆ. ಅವರದೇ ಸಂಘದವರಿಂದ ವಿವಿಧ ಹೇಳಿಕೆಗಳನ್ನು ಕೊಡಿಸುವ ಮೂಲಕ ಮೂಲ ಸೌಲಭ್ಯಗಳ ಕೊರತೆ ಹಾಗೂ ಸರ್ಕಾರದ ವೈಫಲತ್ಯೆಯನ್ನು ಗುರುತಿಸದಂತೆ ಮರೆ ಮಾಡಲಾಗುತ್ತಿದೆ. ದುಡಿಯುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ದಬ್ಬಾಳಿಕೆ, ಮರ್ಯಾದೆ ಹತ್ಯೆಗಳಂತಹ ದಾಳಿಗಳು ಹೆಚ್ಚಾಗುತ್ತಿವೆ. ಇದರ ವಿರುದ್ಧ ಮಹಿಳೆಯರ ದೊಡ್ಡ ಚಳುವಳಿ ಎದ್ದು ಬರಬೇಕಿದೆ ಎಂದು ತಪನ್‌ ಸೇನ್‌ ಕರೆ ನೀಡಿದರು.

ಮಹಿಳಾ ವಿಭಾಗದ ಸಂಘಟನೆಯನ್ನು ಸಂಘಟಿಸಲು ಹಾಗೂ ಅದನ್ನು ಮುನ್ನಡೆಸಲು ಸಿಐಟಿಯು ತನ್ನ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದನ್ನು ನಿರ್ವಹಿಸದ ಹೊರತು ಟ್ರೇಡ್‌ ಯೂನಿಯನ್‌ ಚಳುವಳಿ ಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ. ಈ ಕಣ್ಣೋಟದಿಂದಲೇ ಎಐಸಿಸಿಡಬ್ಲ್ಯೂಡಬ್ಲ್ಯೂ ರಚನೆ ಆಗಿದೆ. ಸಿಐಟಿಯು ಅಡಿಯಲ್ಲಿ ಮಹಿಳೆಯರನ್ನು ಸಂಘಟಿಸಲು ಸಹಾಯ ಮಾಡಬೇಕು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *