ಬೆಂಗಳೂರು: ದಕ್ಷಿಣ ಭಾರತದ ನದಿಗಳ ಜೋಡಣೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿ, ತಮಿಳುನಾಡಿಗೆ ಲಾಭವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ತಮಿಳುನಾಡಿನವರು, ತವರು ರಾಜ್ಯಕ್ಕೆ ಅನುಕೂಲಕ್ಕಾಗಿ ಈ ಯೋಜನೆಯನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನದಿ ಜೋಡಣೆ ಬಗ್ಗೆ ಪೂರ್ವಭಾವಿಯಾಗಿ ಸಂಬಂಧಿಸಿದ ರಾಜ್ಯಗಳೊಂದಿಗೆ ಚರ್ಚಿಸದೇ ಬಜೆಟ್ಟಿನಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ ನದಿಜೋಡಣೆ ಸಾಧಕ – ಬಾಧಕಗಳ ಬಗ್ಗೆ ವಿವರವಾಗಿ ಚರ್ಚೆ ನಡೆಯಬೇಕು. ಆಯಾ ರಾಜ್ಯಗಳಿಗೆ ದೊರೆಯುವ ನೀರಿನ ಪಾಲಿನ ಬಗ್ಗೆ ಸ್ಪಷ್ಟತೆ ಇರಬೇಕು. ಮೇಲಾಗಿ ರಾಜ್ಯಗಳ ಪೂರ್ವಭಾವಿ ಒಪ್ಪಿಗೆ ಪಡೆಯಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿರುವ ಕೇಂದ್ರ ಬಜೆಟ್‍ನಲ್ಲಿ ನದಿ ಜೋಡಣೆಯನ್ನು ಪ್ರಸ್ತಾಪಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ 46 ಸಾವಿರ ಕೋಟಿ ನಿಗದಿ ಮಾಡಿದ್ದಾರೆ. ಈ ಯೋಜನೆ ಅನುಷ್ಠಾನವಾದರೆ ರಾಜ್ಯಗಳ ನಡುವಿನ ಜಲ ವಿವಾದ ಹೆಚ್ಚಾಗುತ್ತದೆ. ಹೆಚ್ಚುಕಡಿಮೆ ಪಾಲಿನ ಬಗ್ಗೆ ಅಸಮಾಧಾನ ಶುರುವಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿರುವುದು ಸೂಕ್ತವಲ್ಲ ಎಂದರು.
ಈ ಯೋಜನೆಯಿಂದ ತಮಿಳುನಾಡಿಗೆ ಲಾಭವಾಗಲಿದೆಯೇ ಹೊರತು ಕರ್ನಾಟಕಕ್ಕೆ ಅಲ್ಲ. ಕೃಷ್ಣಾ, ಕಾವೇರಿ, ಪೆನ್ನಾರ್, ಗೋದಾವರಿ ನದಿಗಳ ಜೋಡಣೆಯಿಂದ 347 ಟಿಎಂಸಿ ನೀರು ಸಿಗುತ್ತೆ ಎಂದಿದ್ದಾರೆ. ಇದರಿಂದ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ನೀರು ಕೊಡಬಹುದೆಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ರಾಜಸ್ತಾನ ಬಿಟ್ಟರೆ ಹೆಚ್ಚು ಒಣ ಭೂಮಿ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಇಲ್ಲಿ ಶೇಕಡಾ 70ರಷ್ಟು ಹೆಚ್ಚು ಒಣ ಭೂಮಿ ಇದೆ. ಬೇರೆ ರಾಜ್ಯಗಳಲ್ಲಿ ಶೇಕಡಾ 50 ನೀರಾವರಿಯಾಗಿದೆ. ನಮ್ಮಲ್ಲಿ ಶೇಕಡಾ 30 ಮಾತ್ರ ನೀರಾವರಿ ಇದೆ ಎಂದರು.
ಕಾವೇರಿ ನಮ್ಮ ಕೊಡಗಿನಲ್ಲಿ ಹುಟ್ಟುತ್ತದೆ. ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತದೆ. ಬಜೆಟ್‍ನಲ್ಲಿ ದಕ್ಷಿಣ ರಾಜ್ಯಗಳ ನದಿ ಜೋಡಣೆಯನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಮೊದಲು ಉತ್ತರ ಭಾರತದ ನದಿಗಳ ಜೋಡಣೆ ಮಾಡಲಿ. ಎಲ್ಲ ಮಾಹಿತಿಯನ್ನು ಜನರ ಮುಂದಿಡಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಏಕಮುಖವಾಗಿ ನಡೆದುಕೊಳ್ಳುವುದು ಸರಿಯಲ್ಲ. ಅದು ಸರ್ವಾಧಿಕಾರಿ ಧೋರಣೆಯಾಗಲಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ.
ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ. ಕೃಷಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳಲ್ಲೂ ಇದೇ ರೀತಿ ನಡೆದುಕೊಂಡಿದೆ. ರಾಜ್ಯಗಳ ವ್ಯಾಪ್ತಿಗೆ ಒಳಪಡುವ ವಿಷಯಗಳಲ್ಲೂ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ. ನೆಲ, ಜಲ, ಭಾಷೆಯ ಬಗ್ಗೆ ರಾಜಕೀಯ ಬೇಡ. ಈವರೆಗೂ ಯಾವ ಪಕ್ಷಗಳು ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡಬಾರದು ಎಂದು ಸಲಹೆ ನೀಡಿದರು.
ನದಿ ಜೋಡಣೆ ವಿಚಾರ ಹೊಸದೇನಲ್ಲ. ಮುರಾರ್ಜಿ ದೇಸಾಯಿಯವರು ಇದನ್ನು ಚಿಂತಿಸಿದ್ದರು. ಗಂಗಾ-ಕಾವೇರಿ ಜೋಡಣೆ ಬಗ್ಗೆ ಚರ್ಚಿಸಿದ್ದರು. ಗಂಗಾ, ಬ್ರಹ್ಮಪುತ್ರಾ, ಕಾವೇರಿ ಜೋಡಿಸಿದರೆ ಉತ್ತಮ. ಆಗ ಎಲ್ಲ ರಾಜ್ಯಗಳಿಗೆ ಅನುಕೂಲವಾಗಲಿದೆ. ಈಗ ಕೇವಲ ದಕ್ಷಿಣ ರಾಜ್ಯಗಳ ನದಿ ಜೋಡಣೆ ಬಗ್ಗೆ ಮಾತ್ರ ಪ್ರಸ್ತಾಪವಾಗಿದೆ ಎಂದು ಆರೋಪಿಸಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನದಿ ಜೋಡಣೆ ಮಾಡಿ ಎಂದು ನಮ್ಮ ರಾಜ್ಯ ಕೇಳಿದೆಯಾ ?, ಸಂಸದರೇನಾದರೂ ಒತ್ತಾಯ ಮಾಡಿದ್ದಾರಾ ? ಎಂದು ಪ್ರಶ್ನಿಸಿದರು. ನದಿ ಜೋಡಣೆ ಬಗ್ಗೆ ಸಂಸದರು ಮಾತನಾಡಿಲ್ಲ. ಇವರು ಸಂಸದರಾಗಿ ಹೋಗಿರುವುದೇಕೆ? ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು. ರಾಜ್ಯಕ್ಕೆ ಲಾಭವೇ, ನಷ್ಟವೇ ಇದರ ಚರ್ಚೆಯಾಗಬೇಕು. ಲಾಭ ಅಂದರೆ, ಎಷ್ಟು ನೀರು ಸಿಗಲಿದೆ. ನಷ್ಟವಾದರೆ ಅದರ ಬಗ್ಗೆಯೂ ಮಾಹಿತಿ ಸಿಗಬೇಕು. ಆ ನಂತರ ಇದರ ಬಗ್ಗೆ ನಿರ್ಧಾರವಾಗಲಿ ಚರ್ಚೆಯಾಗದೆ ಒಪ್ಪಿಗೆ ಕೊಡುವುದು ಸರಿಯಲ್ಲ ಎಂದು ಹೇಳಿದರು.