ಚೆನ್ನೈ: ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ 200 ಕ್ಷೇತ್ರಗಳ ಪೈಕಿ 146 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತ ರೂಢ ಡಿಎಂಕೆ ಮೈತ್ರಿಕೂಟ ಅಧಿಪತ್ಯ ಸಾಧಿಸಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟವು ಎಲ್ಲಾ 21 ಪಾಲಿಕೆಗಳಲ್ಲಿ ಬಹುಮತವನ್ನು ಪಡೆದುಕೊಂಡಿದೆ.
ಫೆಬ್ರವರಿ 19 ರಂದು ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್, ಪುರ ಸಭೆ ಮತ್ತು ಪಟ್ಟಣ ಪಂಚಾಯತ್‍ಗಳಿಗೆ ಚುನಾವಣೆ ನಡೆದಿತ್ತು. 138 ಪುರಸಭೆಗಳು, 489 ಪಟ್ಟಣ ಪಂಚಾಯಿತಿಗಳು, 21 ಪಾಲಿಕೆಗಳಿಗೆ ಚುನಾವಣೆ ನಡೆದಿತ್ತು. ರಾಜಧಾನಿ ಚೆನ್ನೈ ಸೇರಿದಂತೆ 21 ನಗರ ಪಾಲಿಕೆಗಳು, ಪುರಸಭೆಗಳು, ಪಟ್ಟಣ ಪಂಚಾಯತ್‌ಗಳು 12,000 ಕ್ಕೂ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡುತ್ತವೆ.
ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್‍ಗಳ ಪೈಕಿ 200 ವಾರ್ಡ್‍ಗಳಲ್ಲಿ ಡಿಎಂಕೆ 146 ಸ್ಥಾನಗಳನ್ನು ಗೆದ್ದುಗೊಂಡಿದೆ. ಇನ್ನುಳಿದಂತೆ ಎಐಡಿಎಂಕೆ 15, ಕಾಂಗ್ರೆಸ್ 13, 5 ಪಕ್ಷೇತರ ಅಭ್ಯರ್ಥಿಗಳು, ಸಿಪಿಐ(ಎಂ) ಪಕ್ಷ 4, ವಿಸಿಕೆ 3, ಎಂಡಿಎಂಕೆ 2 ಮತ್ತು ಸಿಪಿಐ, ಐಯುಎಮ್‍ಎಲ್, ಎಎಮ್‍ಎಮ್‍ಕೆ, ಬಿಜೆಪಿ ತಲಾ 1 ಸ್ಥಾನ ಗೆದ್ದುಕೊಂಡಿದೆ.
21 ಪಾಲಿಕೆಗಳ 1,373 ವಾರ್ಡ್‌ಗಳ ಪೈಕಿ ಡಿಎಂಕೆ ಮೈತ್ರಿಕೂಟ 1,100 ವಾರ್ಡ್‌ಗಳಲ್ಲಿ ಜಯಗಳಿಸಿದರೆ, ಎಐಎಡಿಎಂಕೆ 164 ರಲ್ಲಿ ಗೆದ್ದಿದೆ. 138 ಪುರಸಭೆಗಳಾದ್ಯಂತ 3824 ವಾರ್ಡ್‌ಗಳಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು 2,666 ಅಥವಾ ಶೇಕಡಾ 70ರಷ್ಟು ವಾರ್ಡ್‌ಗಳನ್ನು ಪಡೆದುಕೊಂಡಿದೆ. 110 ರಿಂದ 120 ಅಧ್ಯಕ್ಷ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಡಿಎಂಕೆ ವರಿಷ್ಠ ಎಂ ಕೆ ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಡಿಎಂಕೆ ಪಕ್ಷ ಸತತ ನಾಲ್ಕನೇ ಬಾರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವಿನ ರುಚಿ ಕಾಣುತ್ತಿದೆ. ಸತತ ಮೂರು ಚುನಾವಣಾ ಸೋಲಿನ ನಂತರ ಎಐಎಡಿಎಂಕೆ ಈ ಬಾರಿಯೂ ಭಾರೀ ಹಿನ್ನಡೆಯನ್ನು ಅನುಭವಿಸಿದೆ.
ಡಿಎಂಕೆ ಮೈತ್ರಿಕೂಟವು ತೂತುಕುಡಿಯಲ್ಲಿ 60 ವಾರ್ಡ್‌ಗಳ ಪೈಕಿ 50 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ತೇಣಿ ಜಿಲ್ಲೆಯ ಆರು ಪುರಸಭೆಗಳನ್ನು ವಶಪಡಿಸಿಕೊಂಡಿದ್ದು, ಎಐಎಡಿಎಂಕೆ ಭದ್ರಕೋಟೆ ಕೊಯಮತ್ತೂರಿನಲ್ಲಿಯೂ ಡಿಎಂಕೆ ಗೆಲುವು ಸಾಧಿಸಿದೆ.
ಬಿಜೆಪಿ ಪಕ್ಷವು 16 ಪಾಲಿಕೆ ವಾರ್ಡ್‌ಗಳು, 56 ಪುರಸಭೆ ವಾರ್ಡ್‌ಗಳು ಮತ್ತು 230 ಪಟ್ಟಣ ಪಂಚಾಯಿತಿ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಅದೇ ರೀತಿ ನಗರಸಭೆಯಲ್ಲಿ 12 ಹಾಗೂ ಪಟ್ಟಣ ಪಂಚಾಯಿತಿಯಲ್ಲಿ 23 ವಾರ್ಡ್ ಸದಸ್ಯ ಸ್ಥಾನಗಳನ್ನು ಡಿಎಂಡಿಕೆ ಗೆದ್ದುಕೊಂಡಿದೆ. ಎನ್‌ಟಿಕೆ 6 ಪಟ್ಟಣ ಪಂಚಾಯಿತಿ ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಟ ಕಮಲ್ ಹಾಸನ್ ನೇತೃತ್ವದ ಎಂಎನ್‌ಎಂ ಯಾವುದೇ ವಾರ್ಡ್‌ನಲ್ಲಿ ಗೆಲ್ಲಲು ವಿಫಲವಾಗಿದೆ.
165 ಸ್ಥಾನಗಳಲ್ಲಿ ಸಿಪಿಐ(ಎಂ) ಗೆಲುವು
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಒಟ್ಟು 165 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲಿ, 23 ಕಾರ್ಪೊರೇಷನ್ ವಾರ್ಡುಗಳಲ್ಲಿ, 41 ಮುನಿಸಿಪಾಲಿಟಿ ವಾರ್ಡುಗಳಲ್ಲಿ, 101 ಪಟ್ಟಣ ಪಂಚಾಯತಿ ವಾರ್ಡುಗಳಲ್ಲಿ ಗೆಲುವು ಸಾಧಿಸಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐ ಒಟ್ಟು 57 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 12 ಕಾರ್ಪೊರೇಷನ್ ವಾರ್ಡುಗಳಲ್ಲಿ, 19 ಮುನಿಸಿಪಾಲಿಟಿ ವಾರ್ಡುಗಳಲ್ಲಿ, 26 ಪಟ್ಟಣ ಪಂಚಾಯತಿ ವಾರ್ಡುಗಳಲ್ಲಿ ಗೆಲುವು ಸಾಧಿಸಿದೆ.
Left Emerges Victorious in Many Wards in Tamilnadu Urban Local Body Elections. CPI(M) Congratulates Comrades for Their Victory.
CPI(M) Wins 165 Wards
(23 Corporation Wards, 41 Municipality Wards, 101 Town Panchayat Wards)CPI Wins 57 wards pic.twitter.com/KJOAFRYdlC
— CPI (M) (@cpimspeak) February 22, 2022
ಬಿಜೆಪಿ ಅಭ್ಯರ್ಥಿಗೆ ಕೇವಲ ʻಒಂದುʼ ಓಟು
ಈರೋಡ್ ನ ಭವಾನಿಸಾಗರದಲ್ಲಿ 11ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ನರೇಂದ್ರನ್ ಅವರು ಕೇವಲ ಒಂದು ಮತವನ್ನು ಪಡೆದ ಘಟನೆ ನಡೆದಿದೆ. ಮತ ಎಣಿಕೆ ಮುಗಿದಾಗ, ನರೇಂದ್ರನ್ ಅವರನ್ನು ಹೊರತುಪಡಿಸಿ, ಅವರ ಸ್ನೇಹಿತರು, ಕುಟುಂಬ ಮತ್ತು ಪಕ್ಷದ ಕಾರ್ಯಕರ್ತರು ಸೇರಿದಂತೆ ಯಾರೂ ಅವರಿಗೆ ಮತ ಹಾಕಿಲ್ಲ ಎಂದು ತಿಳಿದುಬಂದಿದೆ.
22 ವರ್ಷದ ಡಿಎಂಕೆ ಅಭ್ಯರ್ಥಿ ಗೆಲುವು
ಚೆನ್ನೈನ 136ನೇ ವಾರ್ಡ್‌ನಲ್ಲಿ ಡಿಎಂಕೆ ಅಭ್ಯರ್ಥಿ ನಿಲವರಸಿ ಸೆಲ್ವರಾಜ್ ಚುನಾವಣೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚುನಾವಣೆ ಗೆದ್ದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. 22 ವರ್ಷದ ನಿಲವರಸಿ ಸ್ವತಂತ್ರ ಅಭ್ಯರ್ಥಿ ಗುಣಶೇಖರ್ ವಿರುದ್ಧ 500 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.
ವಾರ್ಡ್ 188 ರಲ್ಲಿ ಡಿಎಂಕೆ ಅಭ್ಯರ್ಥಿ ಸಮೀನಾ ಸೆಲ್ವಂ ಅವರು ಗೆಲುವು ಸಾಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಪತಿ ಸೆಲ್ವಂ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಥಾನ ಪಡೆದ ನಂತರ ಅವರ ಪತಿ ಸೆಲ್ವಂ ಅವರನ್ನು ಹತ್ಯೆ ಮಾಡಲಾಗಿತು. ಬಳಿಕ ಪಕ್ಷ ಅವರ ಪತ್ನಿಯನ್ನು ಕಣಕ್ಕೆ ಇಳಿಸಿತ್ತು. ಈ ಹತ್ಯೆ ಪ್ರಕರಣ ಕುರಿತು ಪೊಲೀಸ್ ಡಿಎಂಕೆ ದೂರು ಕೂಡ ದಾಖಲಿಸಿದೆ.
ತಮಿಳುನಾಡು ನಗರ ಸ್ಥಳೀಯ ಚುನಾವಣೆಯಲ್ಲಿ ವೆಲ್ಲೂರು ಮುನ್ಸಿಪಲ್ ಕಾರ್ಪೊರೇಶನ್ ವಾರ್ಡ್ 37ರಲ್ಲಿ ತೃತೀಯಲಿಂಗಿ 49 ವರ್ಷದ ಗಂಗಾ ನಾಯಕ್, ಡಿಎಂಕೆಯಿಂದ ಸ್ಪರ್ಧೆ ಮಾಡಿದ್ದು, 2,131 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ದಿನಗೂಲಿ ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಗಂಗಾ ನಾಯಕ್ ಅವರು ತಮ್ಮ ಸಾಮಾಜಿಕ ಕೆಲಸ ಮತ್ತು ಸಮುದಾಯದ ಸೇವೆ ಮಾಡುತ್ತಾ ಮನ್ನಣೆ ಗಳಿಸಿದ್ದಾರೆ. 30 ತೃತೀಯಲಿಂಗಿಗಳು ಇರುವ ಇವರ ನಾಟಕ ತಂಡವೊಂದಿದೆ. ತಮಿಳುನಾಡಿನ ಇತರ ಜಿಲ್ಲೆಗಳಲ್ಲಿ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿದ್ದಾರೆ.