ಚೆನ್ನೈ: ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಅಧ್ಯಕ್ಷರೂ ಆಗಿರುವ ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೊಯಮತ್ತೂರು ಅಥವಾ ಚೆನ್ನೈನಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. 2024 ರ ಸಾರ್ವತ್ರಿಕ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಭಾಗವಾಗಲಿರುವ ಕಮಲ್ ಹಾಸನ್ ಅವರ ಎಂಎನ್‌ಎಂ ಈಗಾಗಲೇ ತಮಿಳುನಾಡು ಆಡಳಿತಾರೂಢ ಡಿಎಂಕೆಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದಾರೆ.
ಕಮಲ್ ಹಾಸನ್ ಅವರ ಎಂಎನ್‌ಎಂಗೆ ಇತ್ತೀಚೆಗೆ ಬ್ಯಾಟರಿ ಟಾರ್ಚ್ ಚಿಹ್ನೆಯನ್ನು ಚುನಾವಣಾ ಆಯೋಗ ಮಂಜೂರು ಮಾಡಿದೆ. ಆದರೆ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷವಾ ಸಿಪಿಐ(ಎಂ) ಪ್ರಸ್ತುತ ಕೊಯಮತ್ತೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದೆ. ಉಳಿದಂತೆ ಚೆನ್ನೈ ಉತ್ತರ, ದಕ್ಷಿಣ ಮತ್ತು ಕೇಂದ್ರದ ಕ್ಷೇತ್ರಗಳನ್ನು ಕ್ರಮವಾಗಿ ಡಾ. ಕಲಾನಿಧಿ ವೀರಸ್ವಾಮಿ, ಡಾ. ತಮಿಳಚಿ ತಂಗಪಾಂಡಿಯನ್ ಮತ್ತು ದಯಾನಿಧಿ ಮಾರನ್ ಪ್ರತಿನಿಧಿಸುತ್ತಿದ್ದಾರೆ. ಈ ಮೂವರೂ ಡಿಎಂಕೆ ಪಕ್ಷದವರಾಗಿದ್ದಾರೆ.
ಇದನ್ನೂ ಓದಿ:ಚುನಾವಣಾ ಬಾಂಡ್‌ಗಳು ರದ್ದು | ಯೋಜನೆ ಅಸಂವಿಧಾನಿಕ ಎಂದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಸಿಪಿಐ(ಎಂ)ನ ಕ್ಷೇತ್ರವಾದ ಕೊಯಮತ್ತೂರಿನಿಂದ ಕಮಲ್ ಹಾಸನ್ ಸ್ಪರ್ಧಿಸುವುದಾಗಿದ್ದರೆ ಡಿಎಂಕೆಗೆ ಸಿಪಿಐ(ಎಂ) ನಾಯಕತ್ವದ ಜೊತೆಗೆ ಹಾಗೂ ಇತರ ಮೈತ್ರಿ ಪಕ್ಷಗಳೊಂದಿಗೆ ಹಲವಾರು ಸುತ್ತಿನ ಚರ್ಚೆಗಳು ನಡೆಯಬೇಕಾಗುತ್ತದೆ. ಆದರೆ ಅವರಿಗೆ ಚೆನ್ನೈ(ಉತ್ತರ, ಮಧ್ಯ ಅಥವಾ ದಕ್ಷಿಣ) ಬಿಟ್ಟುಕೊಡುವುದಿದ್ದರೆ ಡಿಎಂಕೆ ಸುಲಭವಾಗಿ ಕ್ಷೇತ್ರವನ್ನು ಬಿಟ್ಟುಕೊಡಬಹುದಾಗಿದೆ.
ಚೆನ್ನೈ ನಗರದ ಮೂರು ಕ್ಷೇತ್ರಗಳು ಡಿಎಂಕೆ ಪ್ರತಿನಿಧಿಸುತ್ತದೆಯಾದರೂ, ಮೂವರೂ ಸಂಸದರೂ ಡಿಎಂಕೆಯ ಪ್ರಮುಖ ವ್ಯಕ್ತಿಗಳಾಗಿದ್ದು, ರಾಜಕೀಯ ಕುಟುಂಬಗಳಿಂದ ಬಂದವರಾಗಿದ್ದಾರೆ. ದಯಾನಿಧಿ ಮಾರನ್ (ಚೆನ್ನೈ ಸೆಂಟ್ರಲ್ ಸಂಸದ) ಅವರು ಪಕ್ಷದ ವರಿಷ್ಠ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಸೋದರಸಂಬಂಧಿಯಾಗಿದ್ದರೆ, ಡಾ ಕಲಾನಿಧಿ ವೀರಸ್ವಾಮಿ (ಚೆನ್ನೈ ಉತ್ತರ ಸಂಸದ) ಮಾಜಿ ಸಚಿವ ಮತ್ತು ಪ್ರಬಲ ನಾಯಕ ಆರ್ಕಾಟ್ ಎನ್.ವೀರಸ್ವಾಮಿ ಅವರ ಪುತ್ರರಾಗಿದ್ದಾರೆ. ಚೆನ್ನೈ ದಕ್ಷಿಣದ ಡಿಎಂಕೆ ಸಂಸದ ಡಾ ತಮಿಳಚಿ ತಂಗಪಾಂಡಿಯನ್ ಅವರ ತಂದೆ ಮಾಜಿ ಶಾಸಕರಾಗಿದ್ದು, ಅವರ ಸಹೋದರ ತಂಗಂ ತೇನರಸು ತಮಿಳುನಾಡಿನ ಸಚಿವರಾಗಿದ್ದಾರೆ.
ಆದಾಗ್ಯೂ, ಕಮಲ್ ಹಾಸನ್ ಅವರು ಕೊಯಮತ್ತೂರು ದಕ್ಷಿಣದಿಂದ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಕೋಯಮುತ್ತೂರಿನಲ್ಲಿ ಗಮನಾರ್ಹ ಮತಗಳನ್ನು ಪಡೆದಿದ್ದರು. ಬಿಜೆಪಿ ಮಹಿಳಾ ವಿಭಾಗದ ನಾಯಕಿ ವಾನದಿ ಶ್ರೀನಿವಾಸನ್ ವಿರುದ್ಧ 1,540 ಮತಗಳಷ್ಟು ಕಡಿಮೆ ಅಂತರದಿಂದ ಅವರು ಸೋತಿದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಎಂಎನ್‌ಎಂ ಅಭ್ಯರ್ಥಿ ಡಾ. ಆರ್. ಮಹೇಂದ್ರನ್ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದರು. ಅಂದು ಚಲಾವಣೆಯಾದ ಒಟ್ಟು ಮತಗಳಲ್ಲಿ 11.6% ದಷ್ಟು ಮತಗಳ ಹಂಚಿಕೆಯೊಂದಿಗೆ 1,45,104 ಮತಗಳನ್ನು ಅವರು ಗಳಿಸಿದ್ದರು.
ಇದನ್ನೂ ಓದಿ:ರೈತ ಹೋರಾಟ 3ನೇ ದಿನಕ್ಕೆ | 3ನೇ ಸುತ್ತಿನ ಮಾತುಕತೆ ನಡೆಸಲಿರುವ ಕೇಂದ್ರ ಸರ್ಕಾರ
ಪ್ರಸ್ತುತ ಜಾರ್ಖಂಡ್‌ನ ರಾಜ್ಯಪಾಲರಾಗಿರುವ ಬಿಜೆಪಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು 2019ರ ಚುನಾವಣೆಯಲ್ಲಿ 3,92,007 ಮತಗಳನ್ನು ಗಳಿಸುವ ಮೂಲಕ 31.34% ಮತಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು. ಚುನಾವಣೆಯಲ್ಲಿ ಗೆದ್ದಿದ್ದ ಸಿಪಿಐ(ಎಂ) ನಾಯಕ ಪಿ.ಆರ್.ನಟರಾಜನ್ ಅವರು 5,77,150 ಮತಗಳನ್ನು ಪಡೆದು 45.66%ದಷ್ಟು ಮತ ಗಳಿಸಿದ್ದರು.
ಡಿಎಂಕೆ ಮೈತ್ರಿ ಪಕ್ಷವಾದ ಸಿಪಿಐ(ಎಂ) ಮತ್ತು ಎಂಎನ್‌ಎಂ ಅಭ್ಯರ್ಥಿ ಡಾ.ಆರ್.ಮಹೇಂದ್ರನ್ ಪಡೆದ ಮತಗಳನ್ನು ಗಮನಿಸಿದರೆ ಕಮಲ್ ಹಾಸನ್ ಕೊಯಮತ್ತೂರಿನಿಂದ ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕ್ಷೇತ್ರವನ್ನು ಸುಲಭವಾಗಿ ಗೆಲ್ಲಬಹುದು. ಆದರೆ ತಮಿಳುನಾಡಿನಿಂದ ಸಿಪಿಐ(ಎಂ) ಗೆದ್ದ ಎರಡು ಸ್ಥಾನಗಳಲ್ಲಿ ಒಂದಾದ ಕೋಯಮುತ್ತೂರನ್ನು ಪಕ್ಷವು ಸುಲಭವಾಗಿ ಒಪ್ಪಿಕೊಳ್ಳುತ್ತದೆ ಎಂಬುವುದು ಇದೀಗ ಪ್ರಶ್ನಾರ್ಹವಾಗಿದೆ. ಸಿಪಿಐ(ಎಂ) ಗೆದ್ದ ಮತ್ತೊಂದು ಕ್ಷೇತ್ರ ಮಧುರೈ ಆಗಿದೆ.
ಕಮಲ್ ಹಾಸನ್ ಅವರ ನಿಕಟ ಮೂಲಗಳ ಪ್ರಕಾರ, ಅವರ ಮೊದಲ ಆಯ್ಕೆ ಕೊಯಮತ್ತೂರು ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚೆನ್ನೈ ಉತ್ತರ, ದಕ್ಷಿಣ ಅಥವಾ ಕೇಂದ್ರ ಕ್ಷೇತ್ರಗಳಿಂದ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ವರದಿ ಉಲ್ಲೇಖಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿ ಕೂಟವು ಗೆಲ್ಲುವ ಜನಪ್ರಿಯ ಮೈತ್ರಿಯಾಗಿದ್ದು, ತಮಿಳುನಾಡಿನ ಪ್ರಮುಖ ನಟರಲ್ಲಿ ಒಬ್ಬರಾದ ಕಮಲ್ ಹಾಸನ್ ಅಂತಿಮವಾಗಿ ಎಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ವಿಡಿಯೊ ನೋಡಿ:ದೆಹಲಿ ಚಲೋ’ : ರೈತರ ಮೇಲೆ ಆಶ್ರುವಾಯು ಪ್ರಯೋಗ – ಫೆ 16 ರಂದು ದೇಶವ್ಯಾಪಿ ಪ್ರತಿಭಟನೆ