ಚೆನ್ನೈ: ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆಯದೆ 10 ಕಾಯ್ದೆಗಳನ್ನು ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಪ್ರಕಟಿಸಿದ್ದೂ, ರಾಜ್ಯ ಸರ್ಕಾರವೊಂದು ರಾಜ್ಯಪಾಲರ ಅನುಮೋದನೆಯಿಲ್ಲದೆ ಕಾಯ್ದೆಗಳನ್ನು ಪ್ರಕಟಿಸಿರುವುದು ಇದೇ ಮೊದಲು.
ಇದರೊಂದಿಗೆ, ಸ್ಟಾಲಿನ್ ಸರ್ಕಾರವು ರಾಜ್ಯ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕದಲ್ಲಿನ ಎಲ್ಲಾ ಅಡೆತಡೆಗಳನ್ನು ಬಗೆಹರಿಸಿಕೊಂಡಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಅಪ್‌ಲೋಡ್ ಮಾಡಿದ ಒಂದು ದಿನದ ನಂತರ ರಾಜ್ಯ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ.
ಸುಪ್ರೀಂ ಕೋರ್ಟ್ ರಾಜ್ಯಪಾಲರ ವಿಳಂಬ ಧೋರಣೆಯನ್ನು ಖಂಡಿಸಿತ್ತು. ಹಾಗೇ, ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳಿಗೂ 3 ತಿಂಗಳ ಗಡುವನ್ನು ನೀಡಿ ಮಹತ್ವದ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಬೆಂಗಳೂರು| ಕಸ ಸಂಗ್ರಹಣೆ ವೆಚ್ಚ ವಿರುದ್ಧ ಸಹಿ ಅಭಿಯಾನ ಆರಂಭ
‘ಮಾನ್ಯ ಸುಪ್ರೀಂ ಕೋರ್ಟ್, W.P.(C) No.1239/2023ರಲ್ಲಿ ದಿನಾಂಕ 08.04.2025ರಂದು ನೀಡಿದ ಆದೇಶದಲ್ಲಿ ಮೇಲೆ ತಿಳಿಸಲಾದ ಮಸೂದೆಯನ್ನು ಕಾಯ್ದಿರಿಸಿದ ದಿನಾಂಕದ ನಂತರ ಮಾನ್ಯ ರಾಷ್ಟ್ರಪತಿಗಳು ಮಾಡಿದ ಎಲ್ಲಾ ಕ್ರಮಗಳು ಕಾನೂನುಬಾಹಿರ ಮತ್ತು ಮಾನ್ಯ ರಾಜ್ಯಪಾಲರು ಸದರಿ ಮಸೂದೆಯನ್ನು ಒಪ್ಪಿಗೆಗಾಗಿ ಅವರಿಗೆ ಸಲ್ಲಿಸಿದ ದಿನಾಂಕದಂದು ಸಮ್ಮತಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ ಎಂದು ಆದೇಶಿಸಿದೆ.
ಆದ್ದರಿಂದ, 08.04.2025ರಂದು ಮಾನ್ಯ ಭಾರತದ ಸುಪ್ರೀಂ ಕೋರ್ಟ್‌ನ ಮೇಲಿನ ಆದೇಶಗಳ ಪ್ರಕಾರ, 2022ರ 48ರ LA ಮಸೂದೆಯನ್ನು ಮಾನ್ಯ ರಾಜ್ಯಪಾಲರು 18 ನವೆಂಬರ್ 2023ರಂದು ಸಮ್ಮತಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ’ ಎಂದು ತಮಿಳುನಾಡು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಕಾಯ್ದೆಗಳು ರಾಜ್ಯ ಸರ್ಕಾರವು ರಾಜ್ಯ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಲು ಅಧಿಕಾರ ನೀಡಿದೆ. ಕಾನೂನಿನ ನಿಬಂಧನೆಯನ್ನು ಕಾರ್ಯಗತಗೊಳಿಸಲು ಉದ್ದೇಶಪೂರ್ವಕ ಲೋಪದ ಆಧಾರದ ಮೇಲೆ ಕುಲಪತಿಗಳನ್ನು ತೆಗೆದುಹಾಕುವ ಅಧಿಕಾರವನ್ನು ಕಾಯ್ದಿರಿಸಲಾಗಿದೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಈ ಕಾಯ್ದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿದು ನಂತರ ಅವುಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದರು.
ಡಿಎಂಕೆ ಸಂಸದರ ಪ್ರತಿಕ್ರಿಯೆ:
ಡಿಎಂಕೆ ಸಂಸದ ಪಿ. ವಿಲ್ಸನ್ ಅವರು ಈ ನಿರ್ಧಾರದ ಮೂಲಕ ಇತಿಹಾಸವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ. ‘ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರವು ಸರ್ಕಾರಿ ಗೆಜೆಟ್‌ನಲ್ಲಿ 10 ಕಾಯ್ದೆಗಳನ್ನು ಪ್ರಕಟಿಸಿದೆ ಮತ್ತು ಅವು ಜಾರಿಗೆ ಬರುತ್ತವೆ! ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಹಿ ಇಲ್ಲದೆ, ಸುಪ್ರೀಂ ಕೋರ್ಟ್‌ನ ತೀರ್ಪಿನ ಬಲದಿಂದ ಜಾರಿಗೆ ಬಂದ ಭಾರತದ ಶಾಸಕಾಂಗದ ಮೊದಲ ಕಾಯ್ದೆಗಳಾಗಿರುವುದರಿಂದ ಇವು ಇತಿಹಾಸವನ್ನು ನಿರ್ಮಿಸಿವೆ’ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 8ರಂದು, 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವ ನಿರ್ಧಾರಕ್ಕಾಗಿ ಸುಪ್ರೀಂ ಕೋರ್ಟ್ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ನಿರ್ಧಾರವನ್ನು ‘ಕಾನೂನುಬಾಹಿರ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ ತೀರ್ಪು ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದರು.
ಇದನ್ನೂ ನೋಡಿ: ಸಾಮಾನ್ಯರ ಜೇಬಿಗೆ ಕನ್ನ, ಶ್ರೀಮಂತರಿಗೆ ಮೃಷ್ಟಾನ್ನ Janashakthi Media