ಚೆನ್ನೈ: ನೀಟ್ನಿಂದ ಶಾಶ್ವತವಾಗಿ ವಿನಾಯಿತಿ ನೀಡಬೇಕು. 12ನೇ ತರಗತಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸಬೇಕೆಂಬ ಅಂಶಗಳನ್ನು ಒಳಗೊಂಡಿರುವ ಮಸೂದೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಡಿಸಿದರು.
ಭಾನುವಾರದಂದು ನೀಟ್ ಪರೀಕ್ಷೆಗಳು ಜರುಗಿದ್ದವು. ಇದೇ ಸಂದರ್ಭದಲ್ಲಿ ಪರೀಕ್ಷೆ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ನೀಟ್ ಪರೀಕ್ಷೆ ಆರಂಭವಾಗುವುದಕ್ಕಿಂತ ಕೆಲವೇ ಗಂಟೆಗಳ ಮೊದಲು 20 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣರಾದರು. ಈ ವಿಚಾರವು ಇಂದು ತಮಿಳುನಾಡು ವಿಧಾನಸಭಾ ಸದನದಲ್ಲಿಯೂ ಪ್ರತಿಧ್ವನಿಸಿದವು.
ಇದನ್ನು ಓದಿ: ಯುಪಿಎಸ್ಸಿ, ನೀಟ್ ಆಯ್ತು, ಈಗ ಬ್ಯಾಂಕಿಂಗ್ ಪರೀಕ್ಷೆಗೂ ಕನ್ನಡವಿಲ್ಲ
ವಿಧಾನಸಭೆಯಲ್ಲಿ ಮಾತನಾಡಿರುವ ಸ್ಟಾಲಿನ್ ಅವರು, ಇಂದು ನಾನು ನೀಟ್ ವಿರುದ್ಧ ನಿರ್ಣಯವನ್ನು ಮಂಡಿಸಿದ್ದೇನೆ. ನೀವು (ಎಐಎಡಿಎಂಕೆ) ಕೂಡ ಈ ನಿರ್ಣಯವನ್ನು ತಂದಿದ್ದೀರಿ. ಈ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ವಿಸ್ತರಿಸಲು ನಾನು ವಿರೋಧ ಪಕ್ಷಗಳನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
‘ಡಿಎಂಕೆ ಪಕ್ಷ, ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಗೊಂಡಿರಲಿಲ್ಲ’ ಎಂದು ಪಳನಿಸ್ವಾಮಿ ಆರೋಪಿಸಿದರು. ಮೃತರ ಕುಟುಂಬಕ್ಕೆ ನಗದು ಪರಿಹಾರ ನೀಡುವ ಜತೆಗೆ, ಸದಸ್ಯರೊಬ್ಬರಿಗೆ ಕೆಲಸ ಕೊಡಬೇಕೆಂದು ಒತ್ತಾಯಿಸಿದರು. ನಂತರ ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಬಂದಿದ್ದ ವಿರೋಧ ಪಕ್ಷದ ಸದಸ್ಯರು ಪಳನಿಸ್ವಾಮಿ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.
ಮುಖ್ಯಮಂತ್ರಿ ಸ್ಟಾಲಿನ್, ‘ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಟ್ ಪರೀಕ್ಷೆ ನಡೆದಿರಲಿಲ್ಲ. ಆದರೆ, ಅವರದೇ ಪಕ್ಷದ ಕೆ.ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನಲ್ಲಿ ಮೊದಲ ಬಾರಿಗೆ ‘ನೀಟ್‘ ಪರೀಕ್ಷೆ ನಡೆದಿತ್ತು. ನೀಟ್ ಪರೀಕ್ಷೆ ವಿಷಯವಾಗಿ ಸಾಯುವಂತಹ ದುಡುಕಿನ ನಿರ್ಧಾರ ತೆಗೆದುಕೊಂಡ ವಿದ್ಯಾರ್ಥಿ ಧನುಷ್ ಎರಡು ಬಾರಿ ಪರೀಕ್ಷೆಯಲ್ಲಿ ಫೇಲ್ ಆದಾಗಲೂ ತಮಿಳುನಾಡಿನಲ್ಲಿ ಎಐಎಡಿಎಂಕೆ ಸರ್ಕಾರವೇ ಅಧಿಕಾರದಲ್ಲಿತ್ತು’ ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿರುಗೇಟು ನೀಡಿದರು.
ಗದ್ದಲದ ನಡುವೆಯೇ ಸ್ಟಾಲಿನ್ ಅವರು, ‘ನೀಟ್’ ತೆಗೆದು ಹಾಕುವ ಮಸೂದೆಯನ್ನು ಮಂಡಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಈ ಮಸೂದೆಯನ್ನು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು. ಈ ಉಪಕ್ರಮವು ಹಿಂದಿನ ಎಐಎಡಿಎಂಕೆ ಆಡಳಿತದ ಅವಧಿಯಲ್ಲಿ ಕೈಗೊಂಡ ಕ್ರಮಕ್ಕಿಂತ ಭಿನ್ನವಾಗಿದೆ’ ಎಂದು ಹೇಳಿದರು.
ಈ ನಿರ್ಣಯವು ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತದೆ, ಸಮಾನತೆ ಮತ್ತು ಸಮಾನ ಅವಕಾಶವನ್ನು ಎತ್ತಿಹಿಡಿಯುತ್ತದೆ, ಎಲ್ಲಾ ದುರ್ಬಲ ವಿದ್ಯಾರ್ಥಿ ಸಮುದಾಯಗಳನ್ನು ತಾರತಮ್ಯದಿಂದ ರಕ್ಷಿಸುತ್ತದೆ. ಅಲ್ಲದೆ, ಅವರನ್ನು ವೈದ್ಯಕೀಯ ಮತ್ತು ದಂತ ಶಿಕ್ಷಣದ ಮುಖ್ಯವಾಹಿನಿಗೆ ತರುತ್ತದೆ. ರಾಜ್ಯಾದ್ಯಂತ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಮಸೂದೆಯು ಪಿಯುಸಿ ಅಥವಾ ತತ್ಸಮಾನ ಅರ್ಹತಾ ಪರೀಕ್ಷೆಗಳ ಆಧಾರದಲ್ಲೇ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತದೆ ಹಾಗೂ ಮುಖ್ಯವಾಗಿ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ದೇಶಾದ್ಯಂತ 201ಕ್ಕೂ ಹೆಚ್ಚು ನಗರಗಳಲ್ಲಿ ನೀಟ್ ಪರೀಕ್ಷೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಸ್ಟಾಲಿನ್ ಪ್ರತಿನಿಧಿಸುವ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ), ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಗೂ ಮುನ್ನ ನೀಟ್ ಅನ್ನು ರದ್ದುಗೊಳಿಸುವ ಭರವಸೆ ನೀಡಿತ್ತು.