ವಿಕ್ರಮ್ ಸಿಂಗ್
‘ಎರಡು ಹೊತ್ತಿನ ಅನ್ನ, ತಲೆ ಮೇಲೊಂದು ಸೂರು’ ಬದುಕಲು ಬೇಕಾದ ಕನಿಷ್ಠ ಅಗತ್ಯಗಳು, ಆದರೆ ನಮ್ಮ ಭಾರತದಲ್ಲಿ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಮಾಡುತ್ತಿರುವಾಗ, ಭಾರತದ ಜನರು ಕನಿಷ್ಠ ಅಗತ್ಯಗಳಿಗಾಗಿ ಇನ್ನೂ ಹೋರಾಡುತ್ತಲೇ ಇದ್ದಾರೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನದಲ್ಲಿದೆ; ಭಾರತದ ಆಹಾರ ನಿಗಮವು ಅಗತ್ಯಕ್ಕಿಂತ ಎರಡು ಪಟ್ಟು ಆಹಾರ ಧಾನ್ಯಗಳನ್ನು ಶೇಖರಿಸಿಟ್ಟಿರುವಾಗ ಲಕ್ಷಾಂತರ ಜನರು ಹಸಿವಿನಿಂದ ತೊಳಲಾಡುತ್ತಿದ್ದಾರೆ; ಅದೇ ರೀತಿಯಲ್ಲಿ, ಜಮೀನಿನ ಲಭ್ಯತೆ ಇರುವಾಗಲೂ ಸ್ವಂತ ಮನೆ ಹೊಂದುವ ಲಕ್ಷಾಂತರ ಜನರ ಕನಸು ಇನ್ನೂ ನನಸಾಗುತ್ತಿಲ್ಲ. ಸಂಪನ್ಮೂಲಗಳ ಕೊರತೆಯಿಂದಲ್ಲ, ಕಾರ್ಪೊರೇಟ್-ಭೂಮಾಲಕರ ನಿಯಂತ್ರಣದಲ್ಲಿರುವ ಸರ್ಕಾರಗಳ ನೀತಿಗಳಿಂದಾಗಿ ಜನರ ಕನಸು ನುಚ್ಚುನೂರಾಗುತ್ತಿವೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ಚೋಟಾಹಿ ಹಳ್ಳಿಯ ಕೆರೆಯ ಬಳಿ ಕೊನೇ ಪಕ್ಷ 50 ಜನರು ಆತಂಕದಿಂದ ಸೇರಿದ್ದರು. ಬಿಹಾರ ಸರ್ಕಾರ ‘ಜಲ ಜೀವನ್ ಹರ್ಯಾಲಿ’ ಯೋಜನೆಯಡಿ ಅವರು ವಾಸವಿದ್ದ ಪ್ರದೇಶವನ್ನು ‘ಹಸಿರು ವಲಯ’ ಎಂದು ಗುರುತಿಸಿತ್ತು; ಅಲ್ಲಿ ಕಟ್ಟಲಾಗಿರುವ ಮನೆಗಳನ್ನು ಅಕ್ರಮ ಎಂದು ಘೋಷಿಸಿತ್ತು.
ಅವರ ಮನೆಗಳು ಜೇಡಿಮಣ್ಣಿನಿಂದ ಕಟ್ಟಿದ್ದಾಗಿವೆ ಮತ್ತು ಅವರು ಹತ್ತಾರು ದಶಕಗಳಿಂದಲೂ ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರ ಮನೆಗಳನ್ನು ಈಗ ಬಲವಂತದಿಂದ ಕಸಿದುಕೊಳ್ಳಲಾಗುತ್ತದೆ. ಅವರಲ್ಲಿ ಬಹಳ ಜನರು ಪರಿಶಿಷ್ಟ ಜಾತಿಯ ಹಾಗೂ ಆರ್ಥಿಕವಾಗಿ ವಂಚಿತರಾದ ಕೃಷಿ ಕೂಲಿಕಾರರಾಗಿದ್ದಾರೆ.
ಇಂತಹ ಕತೆಗಳು ನಮ್ಮ ದೇಶದಲ್ಲಿ ಅಪರೂಪವೇನಲ್ಲ. ಭಾರತದ ಲಕ್ಷಾಂತರ ಭೂಹೀನ ಜನರಿಗೆ ತಮ್ಮ ತಲೆಯ ಮೇಲೊಂದು ಸೂರು ಕಟ್ಟಿಕೊಳ್ಳಲು ಅವರದೇ ಆದ ಚಿಕ್ಕ ತುಂಡು ಭೂಮಿಯೂ ಇಲ್ಲ.
2011ರ ಜನಸಂಖ್ಯಾ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಭಾರತದ ಒಬ್ಬ ವ್ಯಕ್ತಿ ಸರಾಸರಿ 40.03 ಚದರಡಿ ಜಾಗವನ್ನು ಬಳಸುತ್ತಾನೆ, ಅದೇ ನಗರ ಪ್ರದೇಶಗಳಲ್ಲಿ 39.20 ಚದರಡಿ ಜಾಗವನ್ನು ಬಳಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿನ ದೊಡ್ಡ ಮನೆಯಲ್ಲಿ 5 ಜನರ ಕುಟುಂಬ ವಾಸಿಸುತ್ತದೆ. ಆದರೆ ಈ ವ್ಯತ್ಯಾಸ ನಗಣ್ಯ. ಗ್ರಾಮೀಣ ಜನರು ಅಷ್ಟು ಚಿಕ್ಕ ಮನೆಗಳಲ್ಲಿ ವಾಸಿಸುತ್ತಿರುವುದಕ್ಕೆ ಭೂಮಿಯ ಕೊರತೆ ಕಾರಣವಲ್ಲ, ಬದಲಿಗೆ ಬಡಜನರಿಗೆ ಭೂಮಿಯ ಅಸಮಾನ ವಿತರಣೆ ಹಾಗೂ ಸಂಪನ್ಮೂಲಗಳ ಕೊರತೆಯೇ ಕಾರಣ.
ಅಚ್ಚರಿಯ ಸಂಗತಿಯೆಂದರೆ, ಭಾರತದಲ್ಲಿ ಮನೆಯಿಲ್ಲದವರ ಸರಿಯಾದ ದತ್ತಾಂಶಗಳೇ ಇಲ್ಲ. ಕಳೆದ 2011ರ ಸಮೀಕ್ಷೆಯ ಅಂದಾಜಿನ ಪ್ರಕಾರ 1.77 ಲಕ್ಷ ಜನರು ವಸತಿಹೀನರಾಗಿದ್ದಾರೆ. ಈ ಸಂಖ್ಯೆಯು ಕಳೆದ ಒಂದು ದಶಕದಲ್ಲಿ ನಿಸ್ಸಂದೇಹವಾಗಿಯೂ ಹೆಚ್ಚಾಗಿರಬೇಕು, ಏಕೆಂದರೆ ಸರ್ಕಾರದ ಯೋಜನೆಗಳಿಗೆ ಮತ್ತು ಕಾರ್ಪೊರೇಟುಗಳ ಭೂಗಳ್ಳತನ ಮುಂತಾದ ಜಮೀನು ಕಸಿಯುವ ಕಾರಣಗಳಿಂದ ಅಸಂಖ್ಯಾತ ಜನರು ಭೂವಂಚಿತರಾಗಿದ್ದಾರೆ.
ನಿಜ ಹೇಳಬೇಕೆಂದರೆ, ಕನಿಷ್ಠ ವಸತಿಯನ್ನು ಪಡೆಯುವುದು ಮಾನವ ಹಕ್ಕುಗಳಲ್ಲಿ ಒಂದು ಮತ್ತು ಎಲ್ಲರಿಗೂ ಮನೆ ಸೌಲಭ್ಯ ಒದಗಿಸುವ ಹೊಣೆಗಾರಿಕೆ ಎಲ್ಲಾ ಸರ್ಕಾರಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಅಂದರೆ ಏನು ಎನ್ನುವುದನ್ನು ತಿಳಿಯುವ ಅಗತ್ಯವಿದೆ. ಮನೆ ಅಂದ ಕೂಡಲೇ ನಾಲ್ಕು ಗೋಡೆ ಮತ್ತು ಅದಕ್ಕೊಂದು ಸೂರು ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಅದೊಂದು ಸರಕು ಎಂದೂ ತಿಳಿಯುತ್ತೇವೆ. ಆದರೆ, ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಿತಿಯ 1991ರ ವರದಿಯ ಪ್ರಕಾರ “ಬದುಕುವ ಹಕ್ಕು ಎಂದರೆ ಶಾಂತಿ ಹಾಗೂ ಘನತೆಯಿಂದ ಎಲ್ಲಿಯಾದರೂ ಸುರಕ್ಷಿತವಾಗಿ ಬದುಕುವುದು.”
ಈ ಆಶಯಗಳಿಗೂ ಮತ್ತು ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಒಂದು ಮನೆಯಂತಹ ಕಟ್ಟಡವನ್ನು ಒದಗಿಸುವುದು ‘ಇಂದಿರಾ ಆವಾಸ್ ಯೋಜನಾ’ದ ಆಶಯವಾಗಿತ್ತು. 2015ರ ‘ಪ್ರಧಾನ ಮಂತ್ರಿ ಆವಾಸ್ ಯೋಜನಾ -ಗ್ರಾಮೀಣ’ ದ ಪ್ರಕಾರ 2022 ರ ವೇಳೆಗೆ ಗ್ರಾಮೀಣ ಬಡವರಿಗೆ 3 ಕೋಟಿ ಮನೆಗಳನ್ನು ಒದಗಿಸುವುದೆಂದು ನಿರ್ಧರಿಸಲಾಗಿತ್ತು.
ಇತ್ತೀಚೆಗೆ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ಈ ಯೋಜನೆಯಡಿಯಲ್ಲಿ ಈಗಾಗಲೇ ಗ್ರಾಮೀಣ ಭಾಗದ 1 ಕೋಟಿ ಕುಟುಂಬಗಳಿಗೆ ಮನೆಗಳನ್ನು ನೀಡಲಾಗಿದೆ” ಎಂದು ಪ್ರಕಟಿಸಿದ್ದರು. ಆದರೆ, ಈ ಯೋಜನೆಯನ್ನು ಆರಂಭಿಸಿದ್ದೇ 2015ರಲ್ಲಿಯಾದ್ದರಿಂದ ಆ ನಂತರ ನಿರ್ಮಾಣವಾದ ಒಟ್ಟು ಮನೆಗಳ ಸಂಖ್ಯೆಯೇ ಕೇವಲ 70 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೆ.
ಈಗಿರುವ ಯಾವ ವಸತಿ ಯೋಜನೆಯೂ ದೇಶದ ವಸತಿ ಸಮಸ್ಯೆಯನ್ನು ಪರಿಹರಿಸಲಾರದು. ಅವು ಯಾವ ಭೂಹೀನರಿಗೂ ಮನೆ ಒದಗಿಸುವುದಿಲ್ಲ. ಏಕೆಂದರೆ, ಈ ಯೋಜನೆಗಳಡಿ ಹಣಕಾಸಿನ ಅನುದಾನ ಪಡೆಯಬೇಕಾದರೆ ಅವರು ಭೂಮಿಯ ಶಾಸನಬದ್ಧ ಒಡೆಯರಾಗಿರಬೇಕು.
ಗ್ರಾಮೀಣ ಭೂಹೀನರಿಗೆ ಭೂಮಿ ಒದಗಿಸಲು ಸಾಕಷ್ಟು ಅವಕಾಶಗಳು ಸರ್ಕಾರಿ ದಾಖಲೆಗಳಲ್ಲಿವೆ; ಭೂಹೀನರಿಗೆ ಅದರಲ್ಲೂ ಆದ್ಯತೆಯ ಮೇರೆಗೆ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಕುಟುಂಬಗಳಿಗೆ ಗ್ರಾಮದ ಸರ್ವರಿಗೂ ಸೇರಿದ ಜಮೀನನ್ನು ವಿತರಿಸಲು ನಿಬಂಧನೆಗಳಿವೆ. ಆದರೆ ಇವ್ಯಾವ ನಿಬಂಧನೆಗಳನ್ನೂ ಯಾವುದೇ ಜನ ಚಳುವಳಿಗಳಿಲ್ಲದೇ ಅಥವಾ ಸಂವೇದನಾಶೀಲ ಸರ್ಕಾರಿ ಅಧಿಕಾರಿಗಳಿಲ್ಲದೇ ಬಳಸಲಾಗಿಲ್ಲ.
ಇದು ಸಮಸ್ಯೆಯ ಒಂದು ಮುಖವಷ್ಟೆ. ಅವರದ್ದೇ ಮನೆಗಳಿದ್ದೂ ಜಮೀನು ಅವರದ್ದಲ್ಲದ ಭೂಹೀನರೂ ಇದ್ದಾರೆ. ಸರ್ಕಾರ ಅಥವಾ ಭೂಮಾಲೀಕ ಅವರನ್ನು ಒಕ್ಕಲೆಬ್ಬಿಸುವ ಅಪಾಯ ಸದಾ ಇದ್ದೇ ಇದೆ. ಆದಿವಾಸಿ ಜನಗಳ ಒಂದು ದೊಡ್ಡ ವಿಭಾಗವನ್ನು ಅವರ ಮೂಲ ಸ್ಥಳಗಳಿಂದ ಓಡಿಸಲಾಗುತ್ತಿದೆ. ಕಿರುಕುಳ ಹಾಗೂ ಅವಮಾನಕ್ಕೆ ಅವರನ್ನು ಒಳಪಡಿಸಲಾಗುತ್ತಿದೆ.
ಪಂಜಾಬಿನ ಪಠಾನ್‌ಕೋಟ್ ಜಿಲ್ಲೆಯ ಸುಜನ್‌ಪುರ ಪ್ರದೇಶದ ಚೊಟ್ಟಾಪನೋಲ್ ಹಳ್ಳಿಯಲ್ಲಿ ದೊಡ್ಡ ಭೂಮಾಲಿಕನ ಜಮೀನಿನಲ್ಲಿ ಕಟ್ಟಿದ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಯಾವಾಗಲಾದರೂ ಸ್ಥಳೀಯ ಜನರ ಅಥವಾ ಕಾರ್ಮಿಕರ ಅಥವಾ ಭೂಮಾಲಿಕರ ಕುಟುಂಬದ ಸದಸ್ಯರ ನಡುವೆ ತಿಕ್ಕಾಟಗಳು ಉಂಟಾದರೆ, ಈ ಬಸ್ತಿಯ ಹಾದಿಯನ್ನು ಮುಚ್ಚಲಾಗುತ್ತದೆ. ಇನ್ನು ಕೆಲವು ಬಾರಿ, ಯಾವುದಾದರೂ ಕುಟುಂಬ ಮನೆಯನ್ನು ನವೀಕರಿಸಲು ಅಥವಾ ಹಳೆ ಮನೆಯ ಬದಲು ಹೊಸ ಮನೆ ನಿರ್ಮಾಣ ಮಾಡಲು ಬಯಸಿದರೆ, ಆ ಜಮೀನಿನ ಭೂಮಾಲಿಕ ಅವರನ್ನು ಕೋರ್ಟಿಗೆ ಎಳೆಯುತ್ತಾನೆ. ತಮ್ಮದಲ್ಲದ ಜಮೀನಿನಲ್ಲಿ ಮನೆ ಕಟ್ಟಿಕೊಂಡವರ ಅಳಲಲ್ಲಿ ಇದು ಒಂದು ನಿದರ್ಶನವಷ್ಟೆ, ಇನ್ನೂ ವಿಧ ವಿಧವಾದ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ.
ಭಾರತದಲ್ಲಿ ಭೂಹೀನತೆ ಬಹು ದೊಡ್ಡ ತೊಡಕಾಗಿ ಪರಿಣಮಿಸಿದೆ ಮತ್ತು ಅದು ವಸತಿಗೆ ನೇರವಾಗಿ ಸಂಬಂಧಿಸಿದೆ. 2016 ರ ‘ಇಂಡಿಯಾ ಸ್ಪೆಂಡ್ ರಿಪೋರ್ಟ್’ ಪ್ರಕಾರ ಭಾರತದ ಕೃಷಿಭೂಮಿಯ ಮೂರನೇ ಒಂದು ಭಾಗದಷ್ಟು ಜಮೀನು ಜನಸಂಖ್ಯೆಯ ಶೇಕಡಾ 4.9 ರಷ್ಟು ಜನರ ವಶದಲ್ಲಿದೆ, ಮತ್ತು ಒಬ್ಬ ದೊಡ್ಡ ಭೂಮಾಲೀಕ ಸಾಮಾನ್ಯವಾಗಿ ಒಬ್ಬ ಸಾಮಾನ್ಯ ರೈತನಿಗಿಂತ 45 ಪಟ್ಟು ಹೆಚ್ಚು ಜಮೀನನ್ನು ಹೊಂದಿರುತ್ತಾನೆ.
ಭೂಸುಧಾರಣೆ ಮತ್ತು ಜಮೀನು ವಿತರಣೆಯ ಕಾರ್ಯಸೂಚಿಯು ಪ್ರಮುಖ ರಾಜಕೀಯ ವಿಷಯವಾಗಿ ಹೊರಹೊಮ್ಮಿದೆ. ಭೂಸುಧಾರಣೆಯ ಸಾಧ್ಯತೆಗಳ ಕಾಲ ಮುಗಿದುಹೋಗಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಹೂಡಿಕೆಯೊಂದೇ ಭವಿಷ್ಯದ ಬೆಳವಣಿಗೆಗೆ ಸಹಾಯಕಾರಿ ಎಂದು ಕೆಲವು ರಾಜಕೀಯ ಪಕ್ಷಗಳು ಹೇಳುತ್ತಿವೆ. ಎನ್.ಎಸ್.ಎಸ್.ಒ.(ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ)ದ 43ನೇ ಸುತ್ತಿನ (1987-88) ಸಮೀಕ್ಷೆ ಮತ್ತು 68ನೇ ಸುತ್ತಿನ (2011-12) ಸಮೀಕ್ಷೆಯ ನಡುವಿನ ಅಂಕಿಅಂಶಗಳನ್ನು ಹೋಲಿಕೆ ಮಾಡಿದಾಗ, ನವ-ಉದಾರವಾದಿ ನೀತಿಗಳ ಜಾರಿಯ ನಂತರ, ಭೂಸುಧಾರಣೆಯ ಮಾತುಗಳು ಹಿಂದಕ್ಕೆ ಸರಿದಿರುವ ಮತ್ತು ಅಪಾಯಕಾರಿ ಮಟ್ಟದಲ್ಲಿ ಭೂನಷ್ಟವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಗ್ರಾಮೀಣ ಭಾಗದ ಭೂಹೀನ ಕುಟುಂಬಗಳ (0.01 ಹೆಕ್ಟೇರ್ ಜಮೀನಿಗಿಂತ ಕಡಿಮೆ ಇರುವವರು) ಸಂಖ್ಯೆ ಈ ಅವಧಿಯಲ್ಲಿ ಶೇಕಡಾ 35 ರಿಂದ ಶೇಕಡಾ 49 ಕ್ಕೆ ಏರಿದೆ.
ಒಂದು ಕಡೆಯಲ್ಲಿ, ಭಾರತ ಸರ್ಕಾರ ತಾನು ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸುವುದಾಗಿ ಹೇಳುತ್ತಿರುವಾಗಲೇ, ಮತ್ತೊಂದೆಡೆ ಅದರ ಆ ನೀತಿಗಳೆಲ್ಲಾ ಕೇವಲ ಕೆಲವೇ ಯೋಜನೆಗಳಿಗೆ ಸೀಮಿತವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹಿಂದಿನ ಯುಪಿಎ ಹಾಗೂ ಈಗಿನ ಎನ್.ಡಿ.ಎ. ಸರ್ಕಾರಗಳು ಅನುಸರಿಸುತ್ತಿರುವ ಹೊಸ ಆರ್ಥಿಕ ನೀತಿಗಳೇ ಜನರನ್ನು ಅವರ ಜಮೀನುಗಳಿಂದ ಹೊರತಳ್ಳುತ್ತಿವೆ. ಆದಿವಾಸಿಗಳಿಗೆ ಮತ್ತು ಪಾರಂಪರಿಕ ಅರಣ್ಯವಾಸಿಗಳಿಗೆ ಅವರ ಭೂಮಿಹಕ್ಕುಗಳನ್ನು ನೀಡುವ ಸಲುವಾಗಿ ತಂದಿರುವ ಅರಣ್ಯ ಹಕ್ಕುಗಳ ಕಾಯಿದೆಯನ್ನು ಬಳಸಿ ಲಕ್ಷಾಂತರ ಆದಿವಾಸಿಗಳನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರಿಂದ ಸಾವಿರಾರು ಎಕರೆಗಳ ಕೃಷಿ ಭೂಮಿಯನ್ನು ಕೂಡ ಕಸಿದುಕೊಂಡು ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ.
ಭಾರತದಲ್ಲಿ ಬಲವಂತದಿಂದ ಒಕ್ಕಲೆಬ್ಬಿಸುವ ಕುರಿತು ವಸತಿ ಮತ್ತು ಭೂ ಹಕ್ಕುಗಳ ಜಾಲವು (ಹೆಚ್.ಎಲ್.ಆರ್.ಎನ್.) ನಡೆಸಿದ ಸಮೀಕ್ಷೆಯ ವರದಿ ಪ್ರಕಾರ 2017, 2018 ಮತ್ತು 2019 ರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 1,77,700 ಮನೆಗಳನ್ನು ಧ್ವಂಸ್ವ ಮಾಡಿವೆ: ಅಂದರೆ ಪ್ರತಿದಿನ 519 ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ; ಪ್ರತಿ ಗಂಟೆಗೆ 5 ಮನೆಗಳು ನಾಶವಾಗಿವೆ; ಪ್ರತಿ ಗಂಟೆಗೆ 22 ಜನರು ಮನೆ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಮುಂದುವರಿದು, ಪ್ರಸ್ತುತ ಭಾರತದಾದ್ಯಂತ ಸರಿಸುಮಾರು 1 ಕೋಟಿ 50 ಲಕ್ಷ ಜನರು ಸ್ಥಾನಪಲ್ಲಟಗೊಳ್ಳುವ ಅಪಾಯದಲ್ಲಿದ್ದಾರೆ. ಈ ಅಂಕಿಸಂಖ್ಯೆಗಳು ನಮ್ಮನ್ನು ಗಾಬರಿಗೊಳಿಸುತ್ತವಾದರೂ ಇವು ನಿಜವಾದ ಪರಿಸ್ಥಿತಿಯನ್ನು ಪ್ರತಿಫಲಿಸುವುದಿಲ್ಲ. ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಕೋವಿಡ್-19 ರ ಸಮಯದಲ್ಲಿ (2020 ರ ಮಾರ್ಚ್ 16 ಮತ್ತು ಜುಲೈ 31 ರ ನಡುವೆ) ಭಾರತದಲ್ಲಿ ಸರ್ಕಾರಿ ಸಂಸ್ಥೆಗಳೇ 20,000 ಜನರನ್ನು ಅವರ ಮನೆಗಳಿಂದ ಹೊರಹಾಕಿವೆ (ಹೆಚ್.ಎಲ್.ಆರ್.ಎನ್. ವರದಿ).
‘ಎರಡು ಹೊತ್ತಿನ ಅನ್ನ, ತಲೆ ಮೇಲೊಂದು ಸೂರು’ ಬದುಕಲು ಬೇಕಾದ ಕನಿಷ್ಠ ಅಗತ್ಯಗಳು, ಆದರೆ ನಮ್ಮ ಭಾರತದಲ್ಲಿ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುತ್ತಿರುವಾಗ, ಭಾರತದ ಜನರು ಕನಿಷ್ಠ ಅಗತ್ಯಗಳಿಗಾಗಿ ಇನ್ನೂ ಹೋರಾಡುತ್ತಲೇ ಇದ್ದಾರೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 101ನೇ ಸ್ಥಾನದಲ್ಲಿದೆ; ಭಾರತದ ಆಹಾರ ನಿಗಮವು ಅಗತ್ಯಕ್ಕಿಂತ ಎರಡು ಪಟ್ಟು ಆಹಾರ ಧಾನ್ಯಗಳನ್ನು ಶೇಖರಿಸಿಟ್ಟಿರುವಾಗ ಲಕ್ಷಾಂತರ ಜನರು ಹಸಿವಿನಿಂದ ತೊಳಲಾಡುತ್ತಿದ್ದಾರೆ; ಅದೇ ರೀತಿಯಲ್ಲಿ, ಜಮೀನಿನ ಲಭ್ಯತೆ ಇರುವಾಗಲೂ ಸ್ವಂತ ಮನೆ ಹೊಂದುವ ಲಕ್ಷಾಂತರ ಜನರ ಕನಸು ಇನ್ನೂ ನನಸಾಗುತ್ತಿಲ್ಲ. ಸಂಪನ್ಮೂಲಗಳ ಕೊರತೆಯಿಂದಲ್ಲ, ಕಾರ್ಪೊರೇಟ್-ಭೂಮಾಲಕರ ನಿಯಂತ್ರಣದಲ್ಲಿರುವ ಸರ್ಕಾರಗಳ ನೀತಿಗಳಿಂದಾಗಿ ಜನರ ಕನಸು ನುಚ್ಚುನೂರಾಗುತ್ತಿವೆ. ಭಾರತ ಶ್ರೀಮಂತವಾಗಿದೆ, ಆದರೆ ಭಾರತೀಯರು ಬಡವರು, ಏಕೆಂದರೆ ಸರ್ಕಾರಗಳು ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿಗಳು ಬಹು ಸಂಖ್ಯಾಂತರನ್ನು ವಂಚಿಸುತ್ತಿವೆ, ಕೆಲವೇ ಕೆಲವರಿಗೆ ಅನುಕೂಲ ಮಾಡಿಕೊಡುತ್ತಿವೆ.
ಅನು: ಟಿ. ಸುರೇಂದ್ರ ರಾವ್