ಹೊಸದಿಲ್ಲಿ: ಕೋವಿಡ್ ಸೋಂಕಿಗೆ ಇನ್ನೂ ಅಂಕುಶ ಬಿದ್ದಿಲ್ಲ. ಎಚ್ಚರಿಕೆ ತಪ್ಪಿ ಅನಾಹುತಕ್ಕೆ ದಾರಿ ಮಾಡಿಕೊಡಬೇಡಿ. ಆದಷ್ಟು ಸೋಂಕು ಹರಡುವಿಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಂಟು ರಾಜ್ಯಗಳಿಗೆ ಕೇಂದ್ರ ಸರಕಾರ ಶುಕ್ರವಾರ ಖಡಕ್ ಎಚ್ಚರಿಕೆ ನೀಡಿದೆ.
ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿರುವ ತಮಿಳುನಾಡು, ಉತ್ತರ ಪ್ರದೇಶ, ಹರಿಯಾಣ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ, ಕರ್ನಾಟಕಕ್ಕೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, “ಕೋವಿಡ್ ಸೋಂಕಿನ ಮೇಲೆ ತೀವ್ರ ನಿಗಾವಹಿಸಿ, ಉಸಿರಾಟದ ತೊಂದರೆ, ಜ್ವರ ಮಾದರಿಯ (ಐಎಲ್‌ಐ) ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸಿ,” ಎಂದು ಸೂಚಿಸಿದ್ದಾರೆ.
ಆಸ್ಪತ್ರೆ ದಾಖಲಾತಿ ಕಡಿಮೆ:
ಪ್ರಸ್ತುತ ಸಂದರ್ಭದಲ್ಲಿಕೋವಿಡ್ ಸೋಂಕು ಅಪಾಯಕಾರಿ ಪರಿಸ್ಥಿತಿಯಲ್ಲಿ ಇಲ್ಲ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಮರಣ ಪ್ರಮಾಣವೂ ಕಡಿಮೆ ಇದೆ. ಆದರೂ, ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪಾಸಿವಿಟಿ ಪ್ರಮಾಣ ಶೇ.10ರ ಗಡಿ ದಾಟಿದೆ. ಹೀಗಾಗಿ ಸೋಂಕು ವ್ಯಾಪಕವಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸದ್ಯಕ್ಕೆ ದೇಶದ 63 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.10ರಷ್ಟಿದೆ. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಿ, ಹೊರಗಿನಿಂದ ಬರುವವರ ಮೇಲೆ ನಿಗಾವಹಿಸಿ, ಮಕ್ಕಳು, ವೃದ್ಧರು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಮೇಲೂ ಕಾಳಜಿ ವಹಿಸುವಂತೆ, ರಾಜ್ಯಗಳ ಆರೋಗ್ಯ ಇಲಾಖೆಗೆ ರಾಜೇಶ್ ಭೂಷಣ್ ನಿರ್ದೇಶನ ನೀಡಿದ್ದಾರೆ.
ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸ್ ಕಳಿಸಿ. ಕ್ಲಸ್ಟರ್ ವಲಯವಾರು ರೋಗಿಗಳನ್ನ ಪತ್ತೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಶುಕ್ರವಾರದ ವರದಿಯಂತೆ ಭಾರತದಲ್ಲಿ 11,692 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಕೇಸ್‌ಗಳ ಸಂಖ್ಯೆ 66,170ಕ್ಕೆ ಹೆಚ್ಚಳವಾಗಿದೆ. ಕೋವಿಡ್-19 ಸೋಂಕು ಇನ್ನೂ ಚಲನಶೀಲವಾಗಿದೆ. ಊಹಿಸಲಾಗದ ರೂಪಾಂತರ ಸ್ಥಿತಿಯಲ್ಲಿದ್ದು, ಕಡಿಮೆಯಾಗುವಂತೆ ಕಂಡರೂ ಹೆಚ್ಚು ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ, ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಕೋವಿಡ್ ಸೋಂಕು ನಿರ್ವಹಣೆಗೆ ಸಜ್ಜಾಗಿರುವಂತೆ ರಾಜ್ಯಗಳಿಗೆ ಕೇಂದ್ರದಿಂದ ಸಲಹೆ
ಕಳೆದೊಂದು ತಿಂಗಳಲ್ಲಿ ವಿಶ್ವದಾದ್ಯಂತ 30 ಲಕ್ಷ ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ23 ಸಾವಿರ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. “ಬಹುತೇಕ ದೇಶಗಳು ಕೋವಿಡ್ ಸೋಂಕಿತರ ಪರೀಕ್ಷೆ ಪ್ರಮಾಣವನ್ನು ತಗ್ಗಿಸಿವೆ. ಹೀಗಾಗಿ ಸೋಂಕು ನಿರ್ಮೂಲನೆಯಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ಸಾವಿನ ಪ್ರಮಾಣ ಹೆಚ್ಚುತ್ತಿರುವುದು, ಬಹಳಷ್ಟು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಅಪಾಯದ ಒಂದು ಭಾಗ,” ಎಂದು ವಿಶ್ವ ಆರೋಗ್ಯ ಸಂಸ್ಥೆ ತುರ್ತು ವಿಭಾಗಗಳ ನಿರ್ದೇಶಕ ಡಾ. ಮೈಕೆಲ್ ರಾರಯನ್ ತಿಳಿಸಿದ್ದಾರೆ.
ಉಸಿರಾಟ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಸಾಂಕ್ರಾಮಿಕ ರೋಗದ ವೈರಸ್‌ಗಳು ಎಂದಿಗೂ ಅಂತ್ಯವಾಗುವುದಿಲ್ಲ. ಬದಲಿಗೆ ತೀವ್ರ ಅಪಾಯ ಉಂಟು ಮಾಡುವ ಸ್ಥಿತಿ ತಲುಪದೇ, ಒಂದು ರೋಗವಾಗಿ ಉಳಿದುಕೊಳ್ಳಲಿದೆ. ಸದ್ಯದ ಸ್ಥಿತಿಯಲ್ಲಿ ಕೋವಿಡ್-19 ಸೋಂಕನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಯಿಂದ ಕೈಬಿಡುವುದಿಲ್ಲ,” ಎಂದು ರಾರಯನ್ ಹೇಳಿದ್ದಾರೆ.