ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಿತು. ಭಾರತದ ಎಲ್ಲಾ ಪ್ರಮುಖ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ಎದುರು ಸುಲಭವಾಗಿ ಶರಣಾದರು. ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಆಡುತ್ತಿದ್ದ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ದೃಢವಾಗಿ ನಿಂತು 48 ಎಸೆತಗಳಲ್ಲಿ 67 ರನ್ ಗಳಿಸಿದರು ಮತ್ತು ಕೊನೆಯ ಓವರ್ನಲ್ಲಿ ಔಟಾದರು.
ಭಾರತ ನೀಡಿದ 125 ರನ್ಗಳ ಅಲ್ಪ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 15.3 ಓವರ್‌ಗಳಲ್ಲಿ ಗೆಲುವಿನ ಗಡಿ ತಲುಪಿತು. ಇಂಗ್ಲೆಂಡ್ ಪರ ಅಬ್ಬರಿಸಿದ ಜೇಸನ್ ರಾಯ್ ಸ್ಪೋಟಕ 49 ರನ್ ಸಿಡಿಸಿದರು. ಇವರ ಈ ಆಟದಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ್ದವು. ನಂತರ ಬಂದ ಡೇವಿಡ್ ಮಲನ್ ಹಾಗೂ ಬೈರ್ಸ್ಟೋವ್ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.
ಯಶಸ್ವಿಯಾದ ಇಂಗ್ಲೆಂಡ್ ಲೆಕ್ಕಾಚಾರ : ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್ ತನ್ನ ನಿರ್ಧಾರವನ್ನು ಬಹಳ ಬೇಗನೇ ಸಮರ್ಥಿಸಿಕೊಂಡಿತು. 5 ಓವರ್‌ಗಳಲ್ಲಿ ಕೇವಲ 20 ರನ್ ಆಗುವಷ್ಟರಲ್ಲಿ ಭಾರತದ 3 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿತು. ಆರ್ಚರ್ ತಮ್ಮ ದ್ವಿತೀಯ ಎಸೆತದಲ್ಲೇ ಕೆ.ಎಲ್. ರಾಹುಲ್ (1) ಅವರನ್ನು ಬೌಲ್ಡ್ ಮಾಡಿ ಕುಸಿತಕ್ಕೆ ಮುಹೂರ್ತವಿರಿಸಿದರು. ಮುಂದಿನ ಓವರಿನಲ್ಲಿ ರಶೀದ್ ಕ್ಯಾಪ್ಟನ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಮರಳಿಸಿದರು. ಮಾರ್ಕ್ ವುಡ್ ತಮ್ಮ ಮೊದಲ ಓವರಿನಲ್ಲಿ ಶಿಖರ್ ಧವನ್‌ಗೆ ಬಲೆ ಬೀಸಿದರು. ರೋಹಿತ್ ಗೈರಲ್ಲಿ ಅವಕಾಶ ಪಡೆದ ಧವನ್ ಗಳಿಕೆ ಕೇವಲ 4 ರನ್.
ನಾಲ್ಕನೇ ಆಟಗಾರನಾಗಿ ಭಡ್ತಿ ಪಡೆದು ಬಂದ ರಿಷಭ್ ಪಂತ್ ಹೊಡಿಬಡಿ ಆಟದ ಸೂಚನೆ ನೀಡಿದರು. ಆರ್ಚರ್ ಎಸೆತವೊಂದನ್ನು ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್‌ಗೆ ಬಡಿದಟ್ಟಿದ ರೀತಿ ಅತ್ಯಾಕರ್ಷಕವಾಗಿತ್ತು. ಆದರೆ ಪಂತ್ ಇನ್ನಿಂಗ್ಸ್ ಬೆಳೆಸಲು ವಿಫಲರಾದರು. 23 ಎಸೆತಗಳಿಂದ 21 ರನ್ ಮಾಡಿ ವಾಪಸಾದರು (2 ಬೌಂಡರಿ, 1 ಸಿಕ್ಸರ್). ಸರಿಯಾಗಿ ಅರ್ಧ ಹಾದಿ ಕ್ರಮಿಸುವ ವೇಳೆ ಸ್ಟೋಕ್ಸ್ ಈ ವಿಕೆಟ್ ಹಾರಿಸಿದರು. 10 ಓವರ್ ಮುಕ್ತಾಯಕ್ಕೆ ಭಾರತದ ಸ್ಕೋರ್ 4 ವಿಕೆಟಿಗೆ ಕೇವಲ 48 ರನ್ ಆಗಿತ್ತು. ಮೊದಲ 10 ಓವರ್ ವೇಳೆ 6 ಮಂದಿ ಬೌಲಿಂಗಿಗೆ ಇಳಿದದ್ದು ಆಂಗ್ಲರ ಬೌಲಿಂಗ್ ಆಳಕ್ಕೆ ಉತ್ತಮ ನಿದರ್ಶನವಾಗಿತ್ತು.
ಸ್ಕೋರ್ ಪಟ್ಟಿ
ಭಾರತ
ಶಿಖರ್ ಧವನ್ ಬಿ ವುಡ್ 4
ಕೆ.ಎಲ್. ರಾಹುಲ್ ಬಿ ಆರ್ಚರ್ 1
ವಿರಾಟ್ ಕೊಹ್ಲಿ ಸಿ ಜೋರ್ಡನ್ ಬಿ ರಶೀದ್ 0
ರಿಷಭ್ ಪಂತ್ ಸಿ ಬೇರ್‌ಸ್ಟೊ ಬಿ ಸ್ಟೋಕ್ಸ್ 21
ಶ್ರೇಯಸ್ ಅಯ್ಯರ್ ಸಿ ಮಾಲನ್ ಬಿ ಜೋರ್ಡನ್ 67
ಹಾರ್ದಿಕ್ ಪಾಂಡ್ಯ ಸಿ ಜೋರ್ಡನ್ ಬಿ ಆರ್ಚರ್ 19
ಶಾರ್ದೂಲ್ ಠಾಕೂರ್ ಸಿ ಮಾಲನ್ ಬಿ ಆರ್ಚರ್ 0
ವಾಷಿಂಗ್ಟನ್ ಸುಂದರ್ ಔಟಾಗದೆ 3
ಅಕ್ಷರ್ ಪಟೇಲ್ ಔಟಾಗದೆ 7
ಇತರ 2
ಒಟ್ಟು (7 ವಿಕೆಟಿಗೆ) 124
ವಿಕೆಟ್ ಪತನ: 1-2, 2-3, 3-20, 4-48, 5-102, 6-102, 7-117.
ಬೌಲಿಂಗ್; ಆದಿಲ್ ರಶೀದ್ 3-0-14-1
ಜೋಫ್ರ ಆರ್ಚರ್ 4-1-23-3
ಮಾರ್ಕ್ ವುಡ್ 4-0-20-1
ಕ್ರಿಸ್ ಜೋರ್ಡನ್ 4-0-27-1
ಬೆನ್ ಸ್ಟೋಕ್ಸ್ 3-0-25-1
ಸ್ಯಾಮ್ ಕರನ್ 2-0-15-0
ಇಂಗ್ಲೆಂಡ್
ಜಾಸನ್ ರಾಯ್ ಎಲ್‌ಬಿಡಬ್ಲ್ಯು ಸುಂದರ್ 49
ಜಾಸ್ ಬಟ್ಲರ್ ಎಲ್‌ಬಿಡಬ್ಲ್ಯು ಚಹಲ್ 28
ಡೇವಿಡ್ ಮಾಲನ್ ಔಟಾಗದೆ 24
ಜಾನಿ ಬೇರ್‌ಸ್ಟೊ ಔಟಾಗದೆ 26
ಇತರ 3
ಒಟ್ಟು (15.3 ಓವರ್‌ಗಳಲ್ಲಿ 2 ವಿಕೆಟಿಗೆ) 130
ವಿಕೆಟ್ ಪತನ: 1-72, 2-89.
ಬೌಲಿಂಗ್: ಅಕ್ಷರ್ ಪಟೇಲ್ 3-0-24-0
ಭುವನೇಶ್ವರ್ ಕುಮಾರ್ 2-0-15-0
ಯಜುವೇಂದ್ರ ಚಹಲ್ 4-0-44-1
ಶಾರ್ದೂಲ್ ಠಾಕೂರ್ 2-0-16-0
ಹಾರ್ದಿಕ್ ಪಾಂಡ್ಯ 2-0-13-0
ವಾಷಿಂಗ್ಟನ್ ಸುಂದರ್ 2.3-0-18-1
ಪಂದ್ಯಶ್ರೇಷ್ಠ: ಜೋಫ್ರ ಆರ್ಚರ್