ಸ್ವತಂತ್ರ ಭಾರತದ ಗುರಿಯನ್ನು ಸಾಧಿಸಲು ಕಾರ್ಮಿಕ ವರ್ಗ ತಮ್ಮ ದ್ವನಿಯೆತ್ತಬೇಕು

ದೇಶದ 75ನೇ ವರ್ಷದ ಸ್ವಾತಂತ್ರೋತ್ಸವ ಮತ್ತು ಕಾರ್ಮಿಕ ವರ್ಗ

ಡಾ. ಕೆ. ಹೇಮಲತಾ

 

ಪ್ರಸ್ತುತ ಬಿಜೆಪಿಯ ಪೂರ್ವಜ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ, ಮತ್ತು ಆಗಿನ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿಯವರು 1948ರಲ್ಲಿ, ಕೈಗಾರಿಕಾ ನೀತಿ ಹೇಳಿಕೆಯನ್ನು ಸಂವಿಧಾನ ಸಭೆಯ ಮುಂದೆ ಮಂಡಿಸಿದರು. ಅದು ಬಹುತೇಕ ಆ ಕಾಲದ ಕೈಗಾರಿಕೋದ್ಯಮಿಗಳು. 1944 ರಲ್ಲಿ ಪ್ರಮುಖವಾಗಿ ಪ್ರಕಟಿಸಿದ ಬಾಂಬೆ ಯೋಜನೆಯಲ್ಲಿ ಮಾಡಿದ ಸಲಹೆಗಳಿಗೆ ಹೆಚ್ಚು ಅನುಗುಣವಾಗಿತ್ತು. 1956 ರ ಕೈಗಾರಿಕಾ ನೀತಿಯು ಸಂಸತ್ತು, ಸಮಾಜವಾದಿ ಮಾದರಿಯನ್ನು ಸಾಮಾಜಿಕ ಮತ್ತು ಆರ್ಥಿಕ ನೀತಿಯ ಉದ್ದೇಶವಾಗಿ ಅಂಗೀಕರಿಸುತ್ತದೆ ಎಂದು ಹೇಳಿದ್ದರೂ, ಅದರಲ್ಲಿ ಪ್ರಭುತ್ವ ಮಾತ್ರ ಹೂಡಿಕ ಮಾಡಬಹುದಾದ ದೊಡ್ಡ ಪ್ರಮಾಣದ ಹೂಡಿಕೆಯ ಅಗತ್ಯವಿರುವ ಕೈಗಾರಿಕೆಗಳು ಮಾತ್ರ ಪ್ರಸ್ತುತ ಸಂದರ್ಭಗಳಲ್ಲಿ ಸಾರ್ವಜನಿಕ ವಲಯದಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿತ್ತು.

ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು ಎಪ್ಪತ್ತೈದು ವರ್ಷಗಳನ್ನು ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಿದೆ. ನಮ್ಮ ಸ್ವಾತಂತ್ರ್ಯವು ನಮ್ಮ ದೇಶದ ಜನರು, ಪುರುಷರು, ಮಹಿಳೆಯರು ಮತ್ತು ಮಕ್ಕಳು, ಕಾರ್ಮಿಕರು, ರೈತರು ಮತ್ತು ಇತರ ವರ್ಗಗಳು ತಮ್ಮ ಜೀವವನ್ನು ಸೇರಿದಂತೆ ಎಲ್ಲವನ್ನೂ ತ್ಯಾಗ ಮಾಡಿದ ಹೋರಾಟದ ಫಲಿತಾಂಶವಾಗಿದೆ. ಅವರು ಧೈರ್ಯದಿಂದ ಬ್ರಿಟಿಷ್ ವಸಹಾತುಶಾಹಿ ವಿರುದ್ಧ ಹೋರಾಡಿದಾಗ ಅವರು ಏನು ಆಶಿಸಿದ್ದರು? ಎಪ್ಪತ್ತೈದು ವರ್ಷಗಳು, ಒಂದು ಕಾಲದಲ್ಲಿ ‘ಸೂರ್ಯ ಅಸ್ತಮಿಸುವುದಿಲ್ಲ’ ಎಂದು ಹೇಳಲ್ಪಟ್ಟ ವಿಶ್ವದ ಪ್ರಬಲ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿ ಮತ್ತು ತಮ್ಮ ಸ್ವಾತಂತ್ರ್ಯವನ್ನು ಗೆದ್ದ ಜನರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿದ್ದೇವೆಯೇ ಎಂದು ನಾವು ಹಿಂತಿರುಗಿ ನೋಡಲು ಮತ್ತು ಪರೀಕ್ಷಿಸಲು ಸಾಕಷ್ಟು ದೀರ್ಘ ಅವಧಿಯಾಗಿದೆ. ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಬಾಂಬೆಯ ಜವಳಿ ಗಿರಣಿಯ ಅನಕ್ಷರಸ್ಥ ಕಾರ್ಮಿಕರೊಬ್ಬರು ವಿವರಿಸಿದಂತೆ, ಕಾರ್ಮಿಕರಿಗೆ ‘ಸ್ವರಾಜ್’ ಎಂದರೆ ತಾವು ಋಣಭಾರದಿಂದ, ಮಾಲೀಕರ ಅಮಾನವೀಯ ವರ್ತನೆ ಮತ್ತು ದಬ್ಬಾಳಿಕೆಯಿಂದ ಮುಕ್ತರಾಗುತ್ತೇವೆ ಎನ್ನುವುದಾಗಿತ್ತು. ಸ್ವತಂತ್ರ ಭಾರತದ ಸರ್ಕಾರವು ಅವರ ವೇತನವನ್ನು ಹೆಚ್ಚಿಸಲು, ಅವರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಕಾರ್ಮಿಕರ ಮೇಲೆ ಮಾಲಿಕರ ಅಮಾನವೀಯ ದಬ್ಬಾಳಿಕೆಯನ್ನು ನಿಲ್ಲಿಸಲು ಕಾನೂನುಗಳನ್ನು ಜಾರಿಗೊಳಿಸುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ರೌಲತ್ ಕಾಯಿದೆ ಮತ್ತು ಬ್ರಿಟಿಷರ ಇತರ ಕ್ರಮಗಳ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ನಿರಾಕರಣೆ, ಸಂಘಟಿತರಾಗುವ ಮತ್ತು ಸಾಮೂಹಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ತಡೆಯಿಂದ ರೋಷಗೊಂಡ ಕಾರ್ಮಿಕರು, ಸ್ವತಂತ್ರ ಭಾರತದಲ್ಲಿ ಈ ಸ್ವಾತಂತ್ರ್ಯಗಳನ್ನು ಪಡೆಯಬಹುದೆಂಬ ನಿರೀಕ್ಷೆಯೊಂದಿಗೆ ಅಪಾರ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ವಸಹಾತುಶಾಹಿ ದಬ್ಬಾಳಿಕೆ ಮತ್ತು ಶೋಷಣೆಯಿಂದ ಮುಕ್ತವಾದ ಭಾರತವು ಸ್ವಾವಲಂಬಿ ಮತ್ತು ಕೈಗಾರಿಕೆಗಳಲ್ಲಿ ಮುಂದುವರಿದ ದೇಶವಾಗುತ್ತದೆ, ಎಲ್ಲರಿಗೂ ಯೋಗ್ಯ ಉದ್ಯೋಗವನ್ನು ನೀಡುತ್ತದೆ ಮತ್ತು ಅನಕ್ಷರತೆ, ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡುತ್ತದೆ ಎಂದು ಜನರು ನಂಬಿದ್ದರು.

ಶ್ರಮಜೀವಿಗಳ ಅಗಾಧ ಭಾಗವಹಿಸುವಿಕೆ, ಬೃಹತ್ ಮುಷ್ಕರಗಳು ಮತ್ತು ಜನಾಂದೋಲನಗಳನ್ನು ಪರಿಗಣಿಸಿ, ಬ್ರಿಟಿಷರನ್ನು ಬದಲಾಯಿಸಿ ಅಧಿಕಾರಕ್ಕೆ ಬಂದವರು, ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವ ನೀತಿಗಳನ್ನು ರೂಪಿಸಿ ಮತ್ತು ಶಾಸನಗಳನ್ನು ಜಾರಿಗೊಳಿಸಬೇಕಾಗಿತ್ತು. ಸ್ವಾತಂತ್ರ್ಯದ ನಂತರದ ಆರಂಭಿಕ ವರ್ಷಗಳಲ್ಲಿ, ಅಂತಹ ಹಲವಾರು ಕ್ರಮಗಳನ್ನು ವಾಸ್ತವವಾಗಿ ತೆಗೆದುಕೊಳ್ಳಲಾಗಿತ್ತು. ಅಂಬೇಡ್ಕರ್ ಅವರಿಂದ ಬರೆಯಲ್ಪಟ್ಟ, ‘ಭಾರತದ ಜನರಾದ ನಾವು’ 26 ನವೆಂಬರ್ 1949 ರಂದು ಅಂಗೀಕರಿಸಿದ ಮತ್ತು 26 ಜನವರಿ 1950 ರಂದು ಜಾರಿಗೆ ಬಂದ ಸಂವಿಧಾನವು ಜನರ ಆಶಯಗಳ ಅಂತಹ ಒಂದು ಅಭಿವ್ಯಕ್ತಿಯಾಗಿದೆ. ಸಂವಿಧಾನವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅದರ ಎಲ್ಲಾ ನಾಗರಿಕರಿಗೆ ಸುರಕ್ಷಿತ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಚಿಂತನೆಯ ಸ್ವಾತಂತ್ರ್ಯ, ಅಭಿವ್ಯಕ್ತಿಯ, ನಂಬಿಕೆ, ಶ್ರದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯ ಮತ್ತು ಸ್ಥಾನಮಾನದ ಮತ್ತು ಅವಕಾಶದ ಸಮಾನತೆಯನ್ನು ರೂಪಿಸುವ ತನ್ನ ದೃಡ ಸಂಕಲ್ಪವನ್ನು ಘೋಷಿಸಿದೆ. ಸಂವಿಧಾನದಲ್ಲಿನ ಪ್ರಭುತ್ವ ನೀತಿಯ ನಿರ್ದೇಶಕ ತತ್ವಗಳು ಪ್ರಭುತ್ವವು ಅನುಸರಿಸಬೇಕಾದ ಕೆಲವು ನೀತಿ ತತ್ವಗಳನ್ನು ಪ್ರಸ್ತಾಪಿಸಿದೆ. ಇವುಗಳಲ್ಲಿ ಎಲ್ಲಾ ನಾಗರಿಕರಿಗೆ ಸಾಕಷ್ಟು ಜೀವನೋಪಾಯದ ಹಕ್ಕು; ಎಲ್ಲರ ಒಳಿತನ್ನು ಕಾಪಾಡಲು ಭೌತಿಕ ಸಂಪನ್ಮೂಲಗಳ ಸಮುದಾಯದ ಮಾಲೀಕತ್ವ ಮತ್ತು ನಿಯಂತ್ರಣ; ಸಂಪತ್ತು ಮತ್ತು ಉತ್ಪಾದನೆಯ ಸಾಧನಗಳ ಕೇಂದ್ರೀಕರಣಕ್ಕೆ ಕಾರಣವಾಗದ ರೀತಿಯಲ್ಲಿ ಆರ್ಥಿಕ ವ್ಯವಸ್ಥೆಯ ಕಾರ್ಯಾಚರಣೆ; ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ, ಇತ್ಯಾದಿಗಳು ಸೇರಿದ್ದವು.

ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಖಾತ್ರಿಪಡಿಸಲು, ನಿರುದ್ಯೋಗ, ವೃದ್ಧಾಪ್ಯ, ಅನಾರೋಗ್ಯ ಮತ್ತು ಅಂಗವೈಕಲ್ಯ ಮತ್ತು ಅರ್ಹವಾದ ಇತರ ಪ್ರಕರಣಗಳಲ್ಲಿ ಸಾರ್ವಜನಿಕ ಸಹಾಯಕ್ಕಾಗಿ ಪ್ರಭುತ್ವವು ತನ್ನ ಆರ್ಥಿಕ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಮಿತಿಯೊಳಗೆ ಪರಿಣಾಮಕಾರಿ ನಿಬಂಧನೆಗಳನ್ನು ಮಾಡಬೇಕು ಎಂದು ನಿರ್ದೇಶಕ ತತ್ವಗಳು ಷರತ್ತು ವಿಧಿಸುತ್ತವೆ. ಮತ್ತು ಎಲ್ಲಾ- ಕೃಷಿ, ಕೈಗಾರಿಕಾ ಅಥವಾ ಇತರೆ, ಕಾರ್ಮಿಕರಿಗೆ, ಜೀವನ ವೇತನ, ಯೋಗ್ಯ ಗುಣಮಟ್ಟದ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಲು. ಜೀವನ ಮತ್ತು ವಿರಾಮದ ಸಂಪೂರ್ಣ ಆನಂದ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಒದಗಿಸಲು ಆರ್ಥಿಕ ವ್ಯವಸ್ಥೆಯ ಸೂಕ್ತ ಶಾಸನಗಳ ಮೂಲಕ ಅಥವಾ ಇತರ ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಪ್ರಭುತ್ವಕ್ಕೆ ನಿರ್ದೇಶಿಸುತ್ತದೆ.

ಸ್ವಾತಂತ್ರ್ಯದ ನಂತರ ಶೀರ್ಘದಲ್ಲೇ, 1950ರಲ್ಲಿ, ಪಂಚವಾರ್ಷಿಕ ಯೋಜನೆಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಯೋಜನಾ ಆಯೋಗವನ್ನು ಸ್ಥಾಪಿಸಲಾಯಿತು. ಕಾರ್ಖಾನೆಗಳ ಕಾಯಿದೆ, ಕೈಗಾರಿಕಾ ವಿವಾದಗಳ ಕಾಯಿದೆ, ಇಎಸ್‌ಐ ಕಾಯಿದೆ, ಕನಿಷ್ಠ ವೇತನ ಕಾಯಿದೆ, ಇಪಿಎಫ್ (ವಿವಿಧ ನಿಬಂಧನೆಗಳು), ಬೋನಸ್ ಕಾಯಿದೆ, ಗ್ರಾಚ್ಯುಟಿ ಪಾವತಿ ಕಾಯಿದೆ, ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯಿದೆ, ಸಮಾನ ಸಂಭಾವನೆ ಕಾಯಿದೆಯಂತಹ ಹಲವಾರು ಶಾಸನಗಳನ್ನು ಜಾರಿಗೊಳಿಸಲಾಯಿತು.

ಇದಲ್ಲದೆ, ಬಂದರು ಕಾರ್ಮಿಕರು, ತೋಟದ ಕಾರ್ಮಿಕರು, ಗಣಿ ಕಾರ್ಮಿಕರು, ಬೀಡಿ ಕಾರ್ಮಿಕರು, ಸಿನಿಮಾ ಕಾರ್ಮಿಕರು, ಕಾರ್ಯನಿರತ ಪತ್ರಕರ್ತರು ಮುಂತಾದ ವಿವಿಧ ವಲಯಗಳ ಕಾರ್ಮಿಕರು ತಮ್ಮ ಸಂಘಟಿತ ಹೋರಾಟಗಳ ಮೂಲಕ ಆಯಾ ವಲಯಕ್ಕೆ ಸೀಮಿತ ನಿರ್ದಿಷ್ಟ ಕಾನೂನುಗಳನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು. ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಮುಂದೆ ಎರಡು ವಿಶಾಲ ಪರ್ಯಾಯ ಆರ್ಥಿಕ ಮತ್ತು ಕೈಗಾರಿಕಾ ನೀತಿಗಳಿದ್ದವು. ಒಂದು ಸೋವಿಯತ್ ಮಾದರಿಯ ಯೋಜನೆಯನ್ನು ಅಳವಡಿಸಿಕೊಳ್ಳುವುದು. ಪ್ರಮುಖ ಕೈಗಾರಿಕೆಗಳ ರಾಷ್ಟ್ರೀಕರಣ ಮತ್ತು ಸಹಕಾರಿ ಮತ್ತು ಸಾಮೂಹಿಕ ಕೃಷಿ ಮತ್ತು ದೇಶದ ಬೌತಿಕ ಸಂಪನ್ಮೂಲಗಳ ಸಾಮಾಜಿಕೀಕರಣದ ತತ್ವವನ್ನು ಆಧರಿಸಿದ ಸಮಾಜವಾದಿ ಆರ್ಥಿಕತೆಯನ್ನು ದೇಶವು ಅನುಸರಿಸಬೇಕು ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಸಂವಿಧಾನ ಸಭೆಯಲ್ಲಿ ಖಾಸಗಿ ಸದಸ್ಯರ ನಿರ್ಣಯವನ್ನು ಮಂಡಿಸಿದರು. ಆದರೆ ಕಾಂಗ್ರೆಸ್ ನಾಯಕತ್ವದ ಮೇಲೆ ದೊಡ್ಡ ಪ್ರಭಾವ ಬೀರಿದ ಭಾರತೀಯ ಕೈಗಾರಿಕೋದ್ಯಮಿಗಳಿಗೆ ಇದು ಸ್ವೀಕಾರಾರ್ಹವಿರಲಿಲ್ಲ. ಅವರ ಒತ್ತಡದ ಮೇರೆಗೆ ನಿರ್ಣಯವನ್ನು ಹಿಂಪಡೆಯಲಾಯಿತು. ದೇಶದಲ್ಲಿ ಆಳುವ ವರ್ಗಗಳು ಬಂಡವಾಳಶಾಹಿ ಮಾರ್ಗವನ್ನು ಆರಿಸಿಕೊಂಡವು.

ಪ್ರಸ್ತುತ ಬಿಜೆಪಿಯ ಪೂರ್ವಜ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ, ಮತ್ತು ಆಗಿನ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿಯವರು 1948ರಲ್ಲಿ, ಕೈಗಾರಿಕಾ ನೀತಿ ಹೇಳಿಕೆಯನ್ನು ಸಂವಿಧಾನ ಸಭೆಯ ಮುಂದೆ ಮಂಡಿಸಿದರು. ಅದು ಬಹುತೇಕ ಆ ಕಾಲದ ಕೈಗಾರಿಕೋದ್ಯಮಿಗಳು. 1944 ರಲ್ಲಿ ಪ್ರಮುಖವಾಗಿ ಪ್ರಕಟಿಸಿದ ಬಾಂಬೆ ಯೋಜನೆಯಲ್ಲಿ ಮಾಡಿದ ಸಲಹೆಗಳಿಗೆ ಹೆಚ್ಚು ಅನುಗುಣವಾಗಿತ್ತು. 1956 ರ ಕೈಗಾರಿಕಾ ನೀತಿಯು ಸಂಸತ್ತು, ಸಮಾಜವಾದಿ ಮಾದರಿಯನ್ನು ಸಾಮಾಜಿಕ ಮತ್ತು ಆರ್ಥಿಕ ನೀತಿಯ ಉದ್ದೇಶವಾಗಿ ಅಂಗೀಕರಿಸುತ್ತದೆ ಎಂದು ಹೇಳಿದ್ದರೂ, ಅದರಲ್ಲಿ ಪ್ರಭುತ್ವ ಮಾತ್ರ ಹೂಡಿಕ ಮಾಡಬಹುದಾದ ದೊಡ್ಡ ಪ್ರಮಾಣದ ಹೂಡಿಕೆಯ ಅಗತ್ಯವಿರುವ ಕೈಗಾರಿಕೆಗಳು ಮಾತ್ರ ಪ್ರಸ್ತುತ ಸಂದರ್ಭಗಳಲ್ಲಿ ಸಾರ್ವಜನಿಕ ವಲಯದಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿತ್ತು. ಅಂದರೆ, ಖಾಸಗಿ ಕೈಗಾರಿಕೋದ್ಯಮಿಗಳು ಹೂಡಿಕೆ ಮಾಡಲು ಸಾಧ್ಯವಾಗದ ಅಥವಾ ಮಾಡಲು ಸಿದ್ಧರಿಲ್ಲದ ಬೃಹತ್ ಹೂಡಿಕೆಯ ಅಗತ್ಯವಿರುವ ಕೈಗಾರಿಕೆಗಳು ತ್ವರಿತ ಲಾಭವನ್ನು ನೀಡದ ಕಾರಣ ಸಾರ್ವಜನಿಕ ಅವುಗಳನ್ನು ವಲಯದಲ್ಲಿ ಸ್ಥಾಪಿಸಬೇಕು.

ಖಾಸಗಿ ವಲಯವು ಹೂಡಿಕೆ ಮಾಡಲು ಸಿದ್ಧವಿಲ್ಲದ ಕೈಗಾರಿಕೆಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಮಾಡಲಾಯಿತು. ಇದು ನಮ್ಮ ದೇಶದಲ್ಲಿ ಸಾರ್ವಜನಿಕ ವಲಯವನ್ನು ಸ್ಥಾಪಿಸಿದ ಹಿನ್ನೆಲೆಯಾಗಿತ್ತು. ಮತ್ತು ಖಾಸಗಿ ವಲಯವು ಅದನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾದಾಗ ಅವುಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲಾಯಿತು. ವಾಸ್ತವವೆಂದರೆ ಸರ್ಕಾರವು ಸಮಾನ ಹಂಚಿಕೆ ಅಥವಾ ಸಮಾಜದ ಸಮಾಜವಾದಿ ಮಾದರಿ'ಯಲ್ಲಿ ಆಸಕ್ತಿ ಹೊಂದಿರಲಿಲ್ಲ.

ನೆನಪಿಡಬೇಕಾದ ಸಂಗತಿಯೆಂದರೆ, ಲಕ್ಷಾಂತರ ಕಾರ್ಮಿಕರು ಮತ್ತು ಇತರ ವರ್ಗದ ಜನರು ಭಾಗವಹಿಸಿದ ಸುದೀರ್ಘ ಹೋರಾಟದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಬಂದರೂ, ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಪಕ್ಷವು ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದಾಗ, ಕಾರ್ಮಿಕ ವರ್ಗದ ಹಿತದ ಬದಲಾಗಿ ದೊಡ್ಡ ಬಂಡವಾಳಶಾಹಿಗಳು ಮತ್ತು ಭೂಮಾಲೀಕರ, ಹಿತಾಸಕ್ತಿಗಳನ್ನು ಮಾತ್ರ ಪ್ರತಿನಿಧಿಸಿತು. ಆದ್ದರಿಂದ, ಹಲವಾರು ಶಾಸನಗಳನ್ನು ಅಂಗೀಕರಿಸಿದರೂ,, ಅವುಗಳ ಅನುಷ್ಠಾನವು ಕೇವಲ ಅರೆ ಮನಸ್ಸಿನದಾಗಿತ್ತು.. ಕಾರ್ಮಿಕರಿಗೆ ಸ್ವಲ್ಪ ರಕ್ಷಣೆ, ಸ್ವಲ್ಪ ಪರಿಹಾರ ಮತ್ತು ಕೆಲವು ಸುಧಾರಣೆಗಳನ್ನು ಒದಗಿಸುವ ಶಾಸನಗಳು ಸಹ, ಸ್ವಾತಂತ್ರ್ಯದ ಮೊದಲು ಮತ್ತು ಸ್ವಾತಂತ್ರ್ಯದ ನಂತರವೂ ಕಾರ್ಮಿಕ ವರ್ಗದ ಬೃಹತ್ ಹೋರಾಟಗಳ ಫಲಿತಾಂಶವಾಗಿದ್ದವು… ಕಾರ್ಮಿಕರು ಅವುಗಳ ಅನುಷ್ಠಾನಕ್ಕಾಗಿ ಕಾರ್ಖಾನೆಗಳಲ್ಲಿ, ಬೀದಿಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಹೋರಾಡಬೇಕಾಯಿತು.

ಆಳುವ ವರ್ಗಗಳು ಆರಿಸಿಕೊಂಡ ಬಂಡವಾಳಶಾಹಿ ಮಾರ್ಗವು ದೇಶವನ್ನು ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿಸಿತು. ಅಂತಹ ಬಿಕ್ಕಟ್ಟುಗಳ ಹೊರೆಯನ್ನು ಯಾವಾಗಲೂ ಕಾರ್ಮಿಕ ವರ್ಗ ಮತ್ತು ಶ್ರಮಜೀವಿಗಳ ಹೆಗಲ ಮೇಲೆ ವರ್ಗಾಯಿಸಲು ಪ್ರಯತ್ನಿಸಲಾಗುತ್ತದೆ. ದೊಡ್ಡ ವ್ಯಾಪಾರ ಸಂಸ್ಥೆಗಳು ಬಿಕ್ಕಟ್ಟುಗಳ ನಡುವೆಯೂ ಹಣವನ್ನು ಶೇಖರಿಸುತ್ತಿದ್ದಾಗ, ಕಾರ್ಮಿಕ ವರ್ಗವು ಕಾರ್ಖಾನೆಗಳ ಮುಚ್ಚುವಿಕೆಯನ್ನು ಎದುರಿಸಬೇಕಾಯಿತು; ಅವರನ್ನು ಮೂಲ ವೇತನದಲ್ಲಿ, ಮತ್ತು ತುಟ್ಟಿಭತ್ತೆ, ಬೋನಸ್ ಕಡಿತವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನ್ಯಾಯಾಲಯಗಳು ಸಹ ಬೋನಸ್ ಕಾಯಿದೆಯಲ್ಲಿ ಸೂಚಿಸಿದಂತೆ ಬೋನಸ್ ಪಾವತಿಸದಿರುವುದನ್ನು ಸಮರ್ಥಿಸಿವೆ. ಕೆಲಸದ ಹೊರೆಯೂ ಹೆಚ್ಚಾಯಿತು.

ಕಾರ್ಮಿಕ ವರ್ಗವು ಈ ದಾಳಿಗಳನ್ನು ನಿಷ್ಕ್ರಿಯವಾಗಿ ತೆಗೆದುಕೊಳ್ಳಲಿಲ್ಲ. ದೇಶದ ಬಹುತೇಕ ಎಲ್ಲ ಭಾಗಗಳಲ್ಲಿ ಹೋರಾಟಗಳ ದೊಡ್ಡ ಅಲೆಗಳು ಎದ್ದವು. ಹಲವು ಕ್ಷೇತ್ರಗಳಲ್ಲಿ ಈ ಹೋರಾಟಗಳು ಸುದೀರ್ಘವಾಗಿದ್ದವು. ಪಶ್ಚಿಮ ಬಂಗಾಳದ ಕೈಗಾರಿಕಾ ಕಾರ್ಮಿಕರು, ತಮಿಳುನಾಡಿನ ಮತ್ತು ಕಾನ್ಪುರದ ಜವಳಿ ಕಾರ್ಮಿಕರು, ಕೇರಳದ ಪೇಪರ್ ಮಿಲ್ ಕಾರ್ಮಿಕರು, ದಕ್ಷಿಣ ರೈಲ್ವೆಯ ಅಗ್ನಿಶಾಮಕ ಸಿಬ್ಬಂದಿ, ಪಂಜಾಬ್ ಮತ್ತು ಹರಿಯಾಣದ ರಸ್ತೆ ಸಾರಿಗೆ ಕಾರ್ಮಿಕರು, ದುರ್ಗಾಪುರದ ಉಕ್ಕಿನ ಕಾರ್ಮಿಕರು ಮತ್ತು ಇತರ ಪ್ರದೇಶಗಳಲ್ಲಿ ಇತರ ಕೈಗಾರಿಕೆಗಳಲ್ಲಿ ಲಕ್ಷಾಂತರ ಕಾರ್ಮಿಕರು ದೇಶದ, ಮುಚ್ಚುವಿಕೆಯ ವಿರುದ್ಧ ಮತ್ತು ಹೆಚ್ಚಿನ ವೇತನ ಮತ್ತು ತುಟ್ಟಿಭತ್ಯೆಗಾಗಿ, ಕೆಲಸದ ಸಮಯವನ್ನು ಕಡಿತಗೊಳಿಸಲು ಒತ್ತಾಯಿಸಿ ಮತ್ತು ಗಣೀಕರಣದ ವಿರುದ್ಧ ಹೋರಾಡಿದರು.

ಕೈಗಾರಿಕಾ ಕಾರ್ಮಿಕರು ಮಾತ್ರವಲ್ಲದೆ ಹಲವಾರು ವಲಯಗಳ ನೌಕರರು ತಮ್ಮ ಬೇಡಿಕೆಗಳಿಗಾಗಿ ತೀವ್ರ ಹೋರಾಟ ನಡೆಸಬೇಕಾಯಿತು. ಅಗತ್ಯಾಧಾರಿತ ಕನಿಷ್ಠ ವೇತನ ಮತ್ತು 100% ತುಟ್ಟಿಭತ್ಯೆ ತಟಸ್ಥಗೊಳಿಸುವಿಕೆಯ ಬೇಡಿಕೆಯ ಮೇಲೆ ಕೇಂದ್ರ ಸರ್ಕಾರಿ ನೌಕರರು 1968 ರಲ್ಲಿ ನಡೆಸಿದ ಬೃಹತ್ ಮುಷ್ಕರ ಅವುಗಳಲ್ಲಿ ಗಮನಾರ್ಹವಾಗಿವೆ.. ಸರ್ಕಾರದ ಧೋರಣೆ ಬ್ರಿಟಿಷರಿಗಿಂತ ಹೆಚ್ಚು ಭಿನ್ನವಾಗಿರಲಿಲ್ಲ. ಕೈಗಾರಿಕಾ ವಿವಾದಗಳಲ್ಲಿ ಪೊಲೀಸ್ ಸಿಆರ್‌ಪಿ ಬಲವನ್ನು ಬಳಸುವುದು ಸಾಮಾನ್ಯ ಲಕ್ಷಣವಾಯಿತು.. ಕಾರ್ಮಿಕರಲ್ಲಿ ಭಯದ ಭಾವನೆ ಮೂಡಿಸಲು ಗುಂಡಾಗಳನ್ನು ಬಳಸಲಾಯಿತು. ಮುಷ್ಕರವನ್ನು ನಿಷೇಧಿಸುವ ಮತ್ತು ಮುಷ್ಕರವನ್ನು ಬೆಂಬಲಿಸುವವರಿಗೆ ಜೈಲುವಾಸ ಸೇರಿದಂತೆ ಶಿಕ್ಷೆಯನ್ನು ವಿಧಿಸುವ ಅಗತ್ಯ ಸೇವೆಗಳ ನಿರ್ವಹಣೆ ಸುಗ್ರೀವಾಜ್ಞೆಯನ್ನು ಪ್ರಕಟಿಸಲಾಯಿತು. ಪೊಲೀಸರ ಗುಂಡಿನ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಂಭೀರವಾಗಿ ಗಾಯಗೊಂಡರು. ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ಹೆಚ್ಚಿನ ವೇತನ ಮತ್ತು ತುಟ್ಟಿಭತ್ಯೆ ನೀಡಬೇಕು ಎಂದು ಒತ್ತಾಯಿಸಿ ಹಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಸಮರಶೀಲ ಮುಷ್ಕರಗಳನ್ನು, ಹೋರಾಟಗಳನ್ನು ನಡೆಸಿದರು. ಯಾಂತ್ರೀಕರಣದ ವಿರುದ್ಧ ಎಲ್‌ಐಸಿ ನೌಕರರು ಸುದೀರ್ಘ ಹೋರಾಟ ನಡೆಸಿದರು. ತಮ್ಮ ಟ್ರೇಡ್ ಯೂನಿಯನ್ ಹಕ್ಕುಗಳ ಮೇಲಿನ ನಿರ್ಬಂಧಗಳ ವಿರುದ್ಧ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು. ಅಗತ್ಯಾಧಾರಿತ ಕನಿಷ್ಠ ವೇತನ, ಬೆಲೆಯೇರಿಕೆಯ ಪರಿಣಾಮಗಳನ್ನು ಸಂಪೂರ್ಣ ತಟಸ್ಥಗೊಳಿಸಲು ತುಟ್ಟಿಭತ್ತೆ, ಎಂಟು ಗಂಟೆಗಳನ್ನು ಮೀರದ ಕೆಲಸದ ಅವಧಿ, ಕೈಗಾರಿಕಾ ಕಾರ್ಮಿಕರಂತೆ ಪರಿಗಣಿಸುವುದು ಮತ್ತು ಸಂಪೂರ್ಣ ಟ್ರೇಡ್ ಯೂನಿಯನ್ ಹಕ್ಕುಗಳು ಇತ್ಯಾದಿಗಳಿಗೆ ಒತ್ತಾಯಿಸಿ ಮೂರು ವಾರಗಳ ಕಾಲ ನಡೆದ ಸುಮಾರು ಎರಡು ಮಿಲಿಯನ್ ರೈಲ್ವೆ ಕಾರ್ಮಿಕರ ಐತಿಹಾಸಿಕ ಮುಷ್ಕರವು ಈ ಹೋರಾಟಗಳಲ್ಲಿ ಅತ್ಯಂತ ಗಮನಾರ್ಹವಾಗಿದೆ. ಸರ್ಕಾರವು ಭಯೋತ್ಪಾದನೆಯ ಆಳ್ವಿಕೆಯನ್ನು ಬಿಚ್ಚಿಟ್ಟಿತು. ರೈಲ್ವೆ ಕಾಲೋನಿಗಳ ಮೇಲೆ ದಾಳಿ ಮಾಡಲಾಯಿತು, ಕಾರ್ಮಿಕರನ್ನು ಅವರ ಮನೆಗಳಿಂದ ಹೊರಗೆ ಎಳೆದು ಚಿತ್ರಹಿಂಸೆ ನೀಡಲಾಯಿತು. ಮಹಿಳೆಯರು ಮತ್ತು ಮಕ್ಕಳನ್ನು ಬಿಡಲಿಲ್ಲ. ಸಾವಿರಾರು ಕಾರ್ಯಕರ್ತರನ್ನು ಬಂಧಿಸಲಾಯಿತು. ಕಾರ್ಮಿಕರನ್ನು ಸಾಮೂಹಿಕವಾಗಿ ವಜಾಗೊಳಿಸಲಾಯಿತು. ಮುಷ್ಕರವು ಇಡೀ ದೇಶದ ಮೇಲೆ ದೊಡ್ಡ ಆರ್ಥಿಕ ಮತ್ತು ರಾಜಕೀಯ ಪರಿಣಾಮ ಬೀರಿತು. ಇದು 1975ರಲ್ಲಿ ಇಂದಿರಾ ಗಾಂಧಿ ಸರ್ಕಾರವು ಘೋಷಿಸಿದ ಆಂತರಿಕ ತುರ್ತು ಪರಿಸ್ಥಿತಿಯ ಪೂರ್ವಭಾವಿಯಾಗಿತ್ತು, ಅದರಡಿಯಲ್ಲಿ ಕಾರ್ಮಿಕ ವರ್ಗ ಸೇರಿದಂತೆ ಜನರ ಎಲ್ಲಾ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು.

ಸ್ವಾತಂತ್ರ್ಯದ ನಂತರದ ಕೆಲವು ದಶಕಗಳಲ್ಲಿ ದೊಡ್ಡ ಬಂಡವಾಳಶಾಹಿ ವರ್ಗವು ಅಗಾಧವಾಗಿ ಬೃಹತ್ ಸಂಪತ್ತನ್ನು ಗಳಿಸಿತು ಮತ್ತು ಸಂಗ್ರಹಿಸಿತು, ತಮ್ಮನ್ನು ಮತ್ತಷ್ಟು ಶ್ರೀಮಂತಗೊಳಿಸಲು ಆರ್ಥಿಕತೆಯ ಮೇಲೆ ತಮಗೆ ಹೆಚ್ಚು ಹೆಚ್ಚು ನಿಯಂತ್ರಣವನ್ನು ನೀಡಲು ಒತ್ತಾಯಿಸಲು ಪ್ರಾರಂಭಿಸಿತು. ಈ ವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಸರ್ಕಾರವು ಸಂವಿಧಾನದಲ್ಲಿನ ಘೋಷಣೆಗಳನ್ನು ಹೆಚ್ಚು ಹೆಚ್ಚು ತಿರಸ್ಕರಿಸಲು ಪ್ರಾರಂಭಿಸಿತು. ಪ್ರಭುತ್ವ ನೀತಿಯು ಸಂವಿಧಾನದ ನಿರ್ದೇಶಕ ತತ್ವಗಳಿಂದ ಹೆಚ್ಚು ಹೆಚ್ಚು ದೂರ ಸಾಗುತ್ತಿತು. ನವ ಉದಾರವಾದಿ ನೀತಿಗಳ ಅಧಿಕೃತ ಆಗಮನದೊಂದಿಗೆ ಕಾರ್ಮಿಕ ವರ್ಗ ಮತ್ತು ಶ್ರಮಜೀವಿಗಳ ಮೇಲಿನ ದಾಳಿಗಳು ಮತ್ತಷ್ಟು ಹೆಚ್ಚಾದವು. 1991 ರ ಆರ್ಥಿಕ ಬಿಕ್ಕಟ್ಟನ್ನು ನವ ಉದಾರೀಕರಣ ನೀತಿಗಳನ್ನು ಜಾರಿಗೆ ತರಲು ಮತ್ತು ಕೈಗಾರಿಕಾ ನೀತಿಯನ್ನು ಅಧಿಕೃತವಾಗಿ ಬದಲಾಯಿಸಲು ಆರ್ಥಿಕತೆಯನ್ನು ಮಾರುಕಟ್ಟೆ ಶಕ್ತಿಗಳಿಗೆ ಹಸ್ತಾಂತರಿಸಲು ಮತ್ತು ಕಾರ್ಮಿಕ ವರ್ಗವು ಹೋರಾಟಗಳ ಮೂಲಕ ಸಾಧಿಸಿದ ಸೌಲಭ್ಯಗಳು ಮತ್ತು ಹಕ್ಕುಗಳನ್ನು ನಿರಾಕರಿಸಲು ಬಳಸಿಕೊಳ್ಳಲಾಯಿತು. ನವ ಉದಾರವಾದದ ಮುಖ್ಯ ಉದ್ದೇಶವೆಂದರೆ ಕಾರ್ಮಿಕ ಸಂಘಗಳನ್ನು ದುರ್ಬಲಗೊಳಿಸುವುದು, ಕಾರ್ಮಿಕ ವರ್ಗದ ಸಂಘಟಿತ ಶಕ್ತಿ, ಕಾರ್ಮಿಕರ ಹಕ್ಕುಗಳನ್ನು ನಾಶಪಡಿಸುವುದು ಮತ್ತು ಶೋಷಣೆಯ ತೀವ್ರತೆಯನ್ನು ಹೆಚ್ಚುಗೊಳಿಸುವುದು, ಖಾಸಗೀಕರಣದ ಮೂಲಕ ಎಲ್ಲಾ ಸಾರ್ವಜನಿಕ ಸಂಪತ್ತನ್ನು ದೊಡ್ಡ ಬಂಡವಾಳಶಾಹಿಗಳು ದೋಚಲು ಅನುವು ಮಾಡಿಕೊಡುತ್ತಿದೆ.

ನವ ಉದಾರೀಕರಣ ನೀತಿಗಳನ್ನು ಅಧಿಕೃತವಾಗಿ ಜಾರಿಗೆ ತಂದದ್ದು ಕಾಂಗ್ರೆಸ್ ಸರಕಾರವೇ ಆಗಿದ್ದರೂ, ಬಿಜೆಪಿ ನೇತೃತ್ವದ ಸರಕಾರಗಳು ಖಾಸಗೀಕರಣ ಮತ್ತು ಮಾರುಕಟ್ಟೆ ಪರವಾದ ನೀತಿಗಳಲ್ಲಿ ತಮ್ಮ ಬಲಪಂಥೀಯ ಪಾತ್ರವನ್ನು ಹೆಚ್ಚು ಆಕ್ರಮಣಕಾರಿಯಾಗಿಸಿವೆ. 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಈಗಿನ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಈ ನೀತಿಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ. ಕಾರ್ಮಿಕ ಕಾನೂನು ಸುಧಾರಣೆಗಳು ಎಂದು ಹೇಳಲಾದ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಕಷ್ಟದಿಂದ ಪಡೆದಿದ್ದ ಹಕ್ಕುಗಳನ್ನು, ವಿಶೇಷವಾಗಿ ಸಂಘಟನೆ ಮತ್ತು ಸಾಮೂಹಿಕ ಕ್ರಿಯೆಗಳ ಹಕ್ಕನ್ನು ಕಸಿದುಕೊಳ್ಳುವ ಕ್ರಮಗಳಲ್ಲದೆ ಬೇರೇನೂ ಅಲ್ಲ. ಖಾಸಗೀಕರಣದ ಭರಾಟೆ, ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್, ರಾಷ್ಟ್ರೀಯ ಭೂ ನಗದೀಕರಣ ಯೋಜನೆ ಇತ್ಯಾದಿಗಳೆಲ್ಲವೂ ಸ್ವಾತಂತ್ರ್ಯದ ನಂತರ ಅವರು ಸಂಗ್ರಹಿಸಿದ ಸಂಪತ್ತಿನಿಂದ ಈಗ ದೇಶದ ಸಂಪೂರ್ಣ ಆರ್ಥಿಕತೆಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿರುವ ದೊಡ್ಡ ಕೈಗಾರಿಕೋದ್ಯಮಿಗಳ ಬಾಂಬೆ ಯೋಜನೆಯ ನಡಾವಳಿಯಂತೆಯೇ ಅನುಸರಿಸಲಾಗುತ್ತಿದೆ.

ಆರೆಸ್ಸೆಸ್ ನಿಯಂತ್ರಿತ ಮೋದಿ ಸರಕಾರವು ‘ಹಿಂದೂ ರಾಷ್ಟ್ರ’ ಸ್ಥಾಪನೆಯ ‘ಹಿಂದುತ್ವ’ ಅಜೆಂಡಾವನ್ನು ಸ್ಪಷ್ಟವಾಗಿ ಪ್ರಚಾರ ಮಾಡುತ್ತಿದೆ. ಇದು ಸಮಾಜವನ್ನು ಧ್ರುವೀಕರಿಸಲು ಮತ್ತು ಧರ್ಮ, ಜಾತಿ, ಪ್ರದೇಶ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಕಾರ್ಮಿಕ ವರ್ಗ ಮತ್ತು ಶ್ರಮಜೀವಿಗಳನ್ನು ವಿಭಜಿಸಲು ಪ್ರಯತ್ನಿಸುತ್ತದೆ. ಹೀಗಾಗಿ ಇದು ಕಾರ್ಮಿಕರು ಮತ್ತು ಶ್ರಮಜೀವಿಗಳ ಏಕತೆಯನ್ನು ಅಡ್ಡಿಪಡಿಸುವ ಮೂಲಕ ಅವರ ಗಮನವನ್ನು, ಜ್ವಲಂತ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುವ ಮೂಲಕ ಮತ್ತು ನವ ಉದಾರವಾದಿ ನೀತಿಗಳ ಅನುಷ್ಠಾನದ ವಿರುದ್ಧ ಐಕ್ಯ ಹೋರಾಟಗಳನ್ನು ದುರ್ಬಲಗೊಳಿಸುವ ಮೂಲಕ ನವ ಉದಾರವಾದಿ ನೀತಿಗಳ ಅನುಷ್ಠಾನವನ್ನು ಸುಗಮಗೊಳಿಸುತ್ತದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಜನರ ಆಶೋತ್ತರಗಳನ್ನು ಸಂಪೂರ್ಣವಾಗಿ ಅಲ್ಲಗಳೆಯುವ ನೀತಿಗಳನ್ನು ಜಾರಿಗೆ ತರುವ ಮೂಲಕ ಮೋದಿ ಸರ್ಕಾರವು ‘ಆಜಾದಿ ಕಿ ಅಮೃತ್ ಮಹೋತ್ಸವ’ ಎಂದು ಕರೆಯಲ್ಪಡುವ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವುದು ವಿಪರ್ಯಾಸವಾಗಿದೆ. ಈ ಸರ್ಕಾರವು ಸಂವಿಧಾನದಲ್ಲಿ ಪ್ರತಿಪಾದಿಸಿದ – ಎಲ್ಲಾ ನಾಗರಿಕರಿಗೆ ಸಾಕಷ್ಟು ಜೀವನೋಪಾಯದ ಹಕ್ಕು, ಯೋಗ್ಯ ಜೀವನ ಮಟ್ಟಕ್ಕಾಗಿ ಜೀವನ ವೇತನ, ಸಾಮಾನ್ಯ ಒಳಿತಿಗಾಗಿ ಭೌತಿಕ ಸಂಪನ್ಮೂಲಗಳ ನಿಯಂತ್ರಣ, ಸಂಪತ್ತಿನ ಕೇಂದ್ರೀಕರಣವನ್ನು ತಡೆಗಟ್ಟುವುದು. ಮುಂತಾದ ಎಲ್ಲಾ ತತ್ವಗಳನ್ನು ದುರ್ಬಲಗೊಳಿಸುತ್ತಿದೆ. ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಹೋರಾಡಿದ ನಮ್ಮ ದೇಶದ ಕಾರ್ಮಿಕ ವರ್ಗವು ನವ ಉದಾರವಾದಿ ದಾಳಿಗಳ ವಿರುದ್ಧ ಮಾತ್ರವಲ್ಲದೆ ಆರ್‌ಎಸ್‌ಎಸ್ ನೇತೃತ್ವದ ಕೋಮು ವಿಭಜಕ ಕುತಂತ್ರಗಳ ವಿರುದ್ಧವೂ ಹೆಚ್ಚು ತೀವ್ರತೆಯಿಂದ ಐಕ್ಯ ಹೋರಾಟಗಳಲ್ಲಿ ಮತ್ತೆ ಅಣಿನೆರೆಯುವುದು ಅನಿವಾರ್ಯವಾಗಿದೆ. ನವ ಉದಾರವಾದದ ವಿರುದ್ಧ ಅದರ ಆರಂಭದಿಂದಲೂ ಆರಂಭಿಸಿದ ಹೋರಾಟವನ್ನು ತೀವ್ರಗೊಳಿಸಬೇಕು ಮತ್ತು ಅವುಗಳನ್ನು ಕೋಮು ವಿಭಜಕ ಕುತಂತ್ರಗಳ ವಿರುದ್ಧದ ಹೋರಾಟದೊಂದಿಗೆ ಜೋಡಿಸಬೇಕಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ನಮ್ಮ ಪೂರ್ವಜರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ನನಸಾಗಿಸಲು ಇದು ಏಕೈಕ ಮಾರ್ಗವಾಗಿದೆ. ಅದು ನಮ್ಮ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ನಾವು ಮಾಡಬೇಕಾದ ಆಧ್ಯ ಕರ್ತವ್ಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *