ಮೇ 7ರಂದು ವಿಠ್ಠಲ ಭಂಡಾರಿ ಅವರ ನೆನಪಿನ ದಿನವನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದ ‘ಸಹಯಾನ ಅಂಗಳ’ದಲ್ಲಿ ಆಚರಿಸಲಾಯಿತು. ಅಂದು ಬಿಡುಗಡೆಯಾದ ಮೂರು ಪುಸ್ತಕಗಳಲ್ಲಿ ಒಂದಾದ ವಿಠ್ಠಲ ಭಂಡಾರಿ ಅವರು ಬರೆದ ‘ಸ್ವಾತಂತ್ರ್ಯಾನೂ ಬೇಕು, ಭೂಮಿನೂ ಬೇಕು’ ಪುಸ್ತಕದ ಆಯ್ದ ಭಾಗಗಳು
ಪ್ರಕಾಶಕರ ಮಾತು
ಕರ್ನಾಟಕದಲ್ಲಿ ರೈತ ಚಳುವಳಿಯ ಇತಿಹಾಸ ಎಂದರೆ ಕಾಗೋಡು ಸತ್ಯಾಗ್ರಹ, ಮಲಪ್ರಭಾ ರೈತರ ಹೋರಾಟವೆಂದೂ, ರೈತ ಸಂಘಟನೆ ಎಂದರೆ ಕರ್ನಾಟಕ ರಾಜ್ಯ ರೈತ ಸಂಘ ಎಂದೂ ಸಮೀಕರಿಸಲಾಗುತ್ತದೆ. ಕರಾವಳಿ (ದಕ್ಷಿಣ ಮತ್ತು ಉತ್ತರ ಕನ್ನಡ) ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಸಹ ಪ್ರಮುಖವಾಗಿ ನಡೆದ ಗೇಣಿದಾರ ರೈತರ ಹಲವು ದಶಕಗಳ ಹೋರಾಟಗಳು ಇತಿಹಾಸದಲ್ಲಿ ದಾಖಲಾಗಿಲ್ಲ. ಈ ಹೋರಾಟಗಳು ಮತ್ತು ಕೋಲಾರ ಮುಂತಾದ ಕಡೆ ರೈತ ಹೋರಾಟಗಳನ್ನು ಸಂಘಟಿಸಿದ ಅಖಿಲ ಭಾರತ ಕಿಸಾನ ಸಭಾಕ್ಕೆ ಸಂಯೋಜಿತವಾಗಿರುವ ಕರ್ನಾಟಕ ಪ್ರಾಂತ ರೈತ ಸಂಘದ ಹೆಸರೂ ಇತಿಹಾಸದಲ್ಲಿ ಕೇಳಿ ಬರುವುದಿಲ್ಲ. ಅದರಿಂದಾಗಿ ಇವು ಜನಮಾನಸದಲ್ಲೂ ದಾಖಲಾಗಿಲ್ಲ. ‘ಅರಸು ಕೊಡುಗೆ’ ಎಂದೇ ಹೆಸರಾಗಿರುವ ಗೇಣಿದಾರರಿಗೆ ಭೂಮಿ ಒಡೆತನ ಕೊಟ್ಟ ಭೂಸುಧಾರಣೆ ಕಾನೂನು ಬರಲು ಮತ್ತು ಸೀಮಿತವಾಗಿಯಾಗಿಯಾದರೂ ಜಾರಿಯಾಗಲು ಕರ್ನಾಟಕ ಪ್ರಾಂತ ರೈತ ಸಂಘದ ನಾಯಕತ್ವದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ದಶಕಗಳ ಕಾಲ ನಡೆದ ಸಮರಶೀಲ ಗೇಣಿದಾರ ರೈತ ಚಳುವಳಿಯ ಒತ್ತಡ ಕಾರಣವೆನ್ನುವುದು ಈಗಂತೂ ಯಾರಿಗೂ ತಿಳಿದೇ ಇಲ್ಲ. ಇದಕ್ಕೆ ಈ ಚಳುವಳಿಯ ಕುರಿತು ಅಧ್ಯಯನ, ಸಂಶೋಧನೆ, ಪ್ರಕಟಣೆಗಳು ನಡೆಯದಿರುವುದು ಕಾರಣ.
ಅದೇ ರೀತಿ ಉತ್ತರ ಕನ್ನಡದ ರೈತ ಚಳುವಳಿ ಮತ್ತು ದಿನಕರ ದೇಸಾಯಿ ಅವರ ನಾಯಕತ್ವದ ರೈತ ಹೋರಾಟಗಳನ್ನು ಸಮೀಕರಿಸುವುದು ಸಹ ಸಾಮಾನ್ಯ. ಇಲ್ಲೂ ಕಿಸಾನ ಸಭಾ ಮತ್ತು ಕಮ್ಯುನಿಸ್ಟ್ ನಾಯಕತ್ವದ ರೈತ ಹೋರಾಟಗಳ ಕುರಿತು ಅಕಾಡೆಮಿಕ್ ಮತ್ತು ಬುದ್ಧಿಜೀವಿ ವಲಯಗಳಲ್ಲೂ ಜಾಣ ಮೌನ ಮತ್ತು ಜಾಣ ಕುರುಡು ಕಾಣುತ್ತೇವೆ. ಈ ಕೊರತೆಗಳನ್ನು ಭಾಗಶಃವಾದರೂ ಈ ಪುಸ್ತಕ ತುಂಬುತ್ತದೆ.
ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಒಂದು ಡಾ.ವಿಠ್ಠಲ ಭಂಡಾರಿ ಅವರು ಯು.ಜಿ.ಸಿ ಪ್ರಾಯೋಜಕತ್ವದಲ್ಲಿ ನಡೆಸಿದ ಕಿರು ಸಂಶೋಧನಾ ಪ್ರಾಜೆಕ್ಟಿನ ವರದಿ. ಈ ಕಿರು ಸಂಶೋಧನೆ ಈ ವರೆಗೆ ಗೊತ್ತಿರದ ಎಲ್ಲೂ ದಾಖಲಾಗದ 1920-40ರ ಮೂರು ದಶಕಗಳ ಉತ್ತರ ಕನ್ನಡದ ಕೆಂಬಾವುಟ ನಾಯಕತ್ವದ ರೈತ ಹೋರಾಟಗಳ ವೀರಗಾಥೆ ಹೇಳುತ್ತದೆ. ಇದನ್ನು ಈ ಹೋರಾಟಗಳ ನಾಯಕರ, ಪಾಲುಗೊಂಡವರ, ಕುಟುಂಬದವರ ಸಂದರ್ಶನಗಳ ಮತ್ತು ದಾಖಲೆಗಳ ಸಂಗ್ರಹಗಳ ಆಧಾರದ ಮೇಲೆ ಮೊದಲ ಬಾರಿಗೆ ದಾಖಲು ಮಾಡಲಾಗಿದೆ. ಇನ್ನೊಂದು ಭಾಗದಲ್ಲಿ ಉತ್ತರ ಕನ್ನಡದ ರೈತ ಚಳುವಳಿ ಮತ್ತು ಅದರ ಪ್ರಮುಖ ನಾಯಕರ ಕುರಿತು ಅವರು ವಿವಿಧ ಸಂದರ್ಭಗಳಲ್ಲಿ ಬರೆದ ಪ್ರಕಟವಾದ ಲೇಖನಗಳು ಇವೆ. ಎರಡನೆಯ ಭಾಗವನ್ನು ಮೊದಲನೆಯ ಭಾಗಕ್ಕೆ ಪೂರಕವಾಗುವುದರಿಂದ ಇಲ್ಲಿ ಸೇರಿಸಲಾಗಿದೆ. ಈ ಎರಡೂ ಒಟ್ಟಾಗಿ ಸುಮಾರು 1970ರ ದಶಕದ ವರೆಗಿನ ಉತ್ತರ ಕನ್ನಡದ ರೈತ ಚಳುವಳಿಯ ಗೊತ್ತಿರದ ಇತಿಹಾಸದ ಭಾಗಗಳನ್ನು ಬೆಳಕಿಗೆ ತರುವ ಮೂಲಕ ಅದನ್ನು ಹೆಚ್ಚು ಪೂರ್ಣ ಮತ್ತು ಸಮಗ್ರಗೊಳಿಸುತ್ತದೆ……
ಇದನ್ನು ವಿಠ್ಠಲ ಭಂಡಾರಿ ಅವರ ನೆನಪಿನ ಪುಸ್ತಕವಾಗಿ ಮಾತ್ರ ನಾವು ಪ್ರಕಟಿಸುತ್ತಿಲ್ಲ. ಕರ್ನಾಟಕದ ರೈತ ಚಳುವಳಿಯ ಇತಿಹಾಸದಲ್ಲಿ ಇರುವ ಕೊರತೆಗಳನ್ನು ನೀಗಿಸಲು ಬೇಕಾದ ದಾಖಲೆಗಳ ಸಂಗ್ರಹ, ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಲು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಿದ್ವಾಂಸರಿಗೆ ಇದು ಸ್ಫೂರ್ತಿ ತುಂಬಬಲ್ಲದು ಎಂದು ನಾವು ಭಾವಿಸಿದ್ದೇವೆ……
ಈ ಪುಸ್ತಕದ ಪ್ರಕಟಣೆಯು ಉತ್ತರ ಕನ್ನಡದ, ಕರ್ನಾಟಕದ ರೈತ ಚಳುವಳಿಯ ಸಮಗ್ರ ಇತಿಹಾಸವನ್ನು ಕಟ್ಟಿ ಕೊಡುವತ್ತ ಉತ್ತಮ ಪ್ರಗತಿಗೆ ಪ್ರೇರಕವಾಗುವುದು ಎಂಬುದು ನಮ್ಮ ಆಶಯ.
`ಕಮ್ಯುನಿಸ್ಟ್, ಕಿಸಾನ ಸಭಾ ನಾಯಕರ ಗಡಿಪಾರು, ಜೈಲುವಾಸ ರದ್ದು ಮಾಡಿ’
ಮುರಾರ್ಜಿ ದೇಸಾಯಿಯವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಅವಧಿಯಲ್ಲಿ ಬಾಂಬೆ ಪ್ರಾಂತೀಯ ಸರ್ಕಾರದ ಕಂದಾಯ ಮತ್ತು ಗೃಹ ಮಂತ್ರಿಗಳಾಗಿದ್ದಾಗ ರೈತ ಮುಂದಾಳುಗಳನ್ನು ಗಡಿಪಾರು ಮಾಡಿದ ಆದೇಶವನ್ನು ಹೊರಡಿಸಿದ್ದರು. ಅವನ್ನು ರದ್ದು ಮಾಡಲು ಮುರಾರ್ಜಿ ದೇಸಾಯಿಯವರಿಗೆ 06-09-1947ರಂದು (ಅಂದರೆ ಸ್ವಾತಂತ್ರ್ಯ ಬಂದ ಮೇಲೆ) ಉತ್ತರ ಕನ್ನಡ ಜಿಲ್ಲಾ ಕಮ್ಯುನಿಷ್ಟ ಪಾರ್ಟಿ ಮತ್ತು ಕಿಸಾನ ಸಭಾ ಸಮಿತಿಗಳ ಪರವಾಗಿ ಬರೆದ ಪತ್ರ.ದ ಪೂರ್ಣ ಪಾಠ ಪುಸ್ತಕದಲ್ಲಿರುವ ಪ್ರಮುಖ ಆಕರಗಳಲ್ಲಿ ಒಂದು. ಅದರ ಆಯ್ದ ಭಾಗಗಳು
“ಬ್ರಿಟಿಷರು ನಿರ್ಮಿಸಿದ ಸಾಮಾಜಿಕ ಪದ್ಧತಿಯ ಒತ್ತಡದಿಂದ ಉತ್ತರ ಕನ್ನಡ ಜಿಲೆಯ ರೈತರು ಬಹಳ ಕಷ್ಟ ಪಟ್ಟಿದ್ದಾರೆ. ಈ ಜಿಲ್ಲೆಯಲ್ಲಿಯ ಗೇಣಿಯ ಮಾನವು ಎಲ್ಲಕ್ಕಿಂತ ಹೆಚ್ಚಿದೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಒಮ್ಮೆ ರೈತರ ಸ್ವಂತದ್ದಾಗಿದ್ದ ಭೂಮಿಗಳು ಈಗ ಒಡೆಯರ (ಜಮಿನ್ದಾರರ) ಸೊತ್ತಾಗಿದೆ. ಯಾವ ಭೂಮಿಗಳ ಮೇಲೆ ರೈತರ ಮನೆಗಳಿವೆಯೋ ಆ ಭೂಮಿಗಳು ರೈತರ ಕಣ್ಣ ಮುಂದೆ ಜಮೀನ್ದಾರರ ಕಬಜೆಯೊಳಗೆ ಹೋಗಿವೆ. ಮೇಲೆ ಈ ಭೂಮಿಗಳಿಗೆ ಅವರು ಗೇಣಿ ಕೊಡಬೇಕಾಗಿದೆ. ಗೇಣಿಯ ಮಾನವು ಭಾರವಾದ್ದರಿಂದ ರೈತರ ಪೈಕಿ ಎಷ್ಟೋ ರೈತರು ಸಾಲದಲ್ಲಿ ಮುಳುಗಿದ್ದಾರೆ……
ಬ್ರಿಟಿಷ್ ಸಾಮ್ರಾಜ್ಯಶಾಹಿ ನಿರ್ಮಿಸಿದ ಸಮಾಜ ಪದ್ಧತಿ ಬೇರೂರಿದ ಹಾಗೆ ನಮ್ಮ ಜಿಲ್ಲೆಯ ಜಮೀನು ಸಂಖ್ಯೆ 13 ಲಕ್ಷಗಳಿಂದ 4 ವರೆ ಲಕ್ಷಕ್ಕೆ ಇಳಿದಿದೆ. ಶೇಕಡಾ 80 ರೈತರು ಪ್ರತಿ ವರ್ಷ ಅಡವಿಗಳಲ್ಲಿ ಹೋಗಿ ಅಲ್ಲಿ ಅಡವಿ ಕಂಟ್ರಾಕ್ಟರ್ ಕೈಕೆಳಗೆ ದುಡಿಯುತ್ತಾರೆ. ಈ ವರ್ಷ ಅವರ ಕೂಲಿ ಇಳಿಸಲಾಗಿದೆ…..
ಒಂದು ಕಡೆ ಜನ ಅರೆ ಹೊಟ್ಟೆ ಉಣ್ಣುತ್ತಿದ್ದಾರೆ. ಮತ್ತೊಂದೆಡೆ ಕಳ್ಳ ಪೇಟೆ ವ್ಯಾಪಾರ ಜಮೀನದಾರರ ನಿತ್ಯದ ವ್ಯವಹಾರವಾಗಿದೆ….. ಈ ನಿರ್ಲಜ್ಜ ಕಳ್ಳಪೇಟೆ ವ್ಯಾಪಾರ ನಡೆಸುವ ಕೆಲವು ದೊಡ್ಡ ಜಮೀನ್ದಾರರೇ ಅಧಿಕಾರಿಗಳ ಕಣ್ಣಲ್ಲಿ ಮಣ್ಣೆರಚುವದಕ್ಕೆ, ಕಿಸಾನ್ ಸಭೆಯ ಮತ್ತು ಅದರ ಮುಂದಾಳುಗಳ ಮೇಲೆ ಸುಳ್ಳು ಕೇಸ್ ಆರೋಪ ಹೊರಿಸಿ ಅಪಪ್ರಚಾರ ನಡೆಸುತ್ತಾರೆಂದು ಈ ಮೇಲಿನ ಪ್ರಕರಣಗಳಿಂದ ಎಲ್ಲರಿಗೂ ತಿಳಿದು ಬಂದಿತು.
ಮೇಲೆ ವರ್ಣಿಸಿದ ಕಷ್ಟದಲ್ಲಿದ್ದ ರೈತರು ತಮ್ಮ ಪರಿಸ್ಥಿತಿ ಸುಧಾರಿಸಿಕೊಳ್ಳಲು ಬೇರೆ ಬೇರೆ ಸಂಘಟನೆಗಳನ್ನು 1940 ನಂತರ ಶುರು ಮಾಡಿದರು. 1945 ರಲ್ಲಿ ಈ ಬೇರೆಬೇರೆ ಸಂಘಟನೆಗಳು ಒಂದು ಸೇರಿ ಉಳಗಾದಲ್ಲಿ ಜಿಲ್ಲಾ ಕಿಸಾನ್ ಪರಿಷತ್ತನ್ನು ಕರೆದರು. ಆಗಿನಿಂದ ಕಿಸಾನ್ ಸಂಘಟನೆ ಸರಿಯಾಗಿ ಶುರುವಾಯಿತು. ತಾಲೂಕು ಮತ್ತು ಜಿಲ್ಲಾ ಪರಿಷತ್ತುಗಳು ಪ್ರತಿವರ್ಷ ಆಗಹತ್ತಿದವು. ಕಿಸಾನರು (ರೈತರು) ಜಿಲ್ಲೆಯಲ್ಲೇ ಸಂಘಟಿತರಾಗುವುದನ್ನು ಕಂಡು ಜಮೀನದಾರರು ಸಹ ಶೇತಕರಿ ಸಂಘ ಎಂಬ ತಮ್ಮ ಸಂಘಟನೆ ಸ್ಥಾಪಿಸಿದರು. ಮತ್ತು ಅದರ ಮಾರ್ಫತ್ ಆದ ಮೀಟಿಂಗುಗಳಲ್ಲಿ ಕಿಸಾನ್ ಸಂಘಟನೆಯನ್ನು ಚೂರುಗೊಳಿಸುವ ಪ್ರಚಾರ ಮಾಡಿದರು….
ಜಮಿನದಾರರು ನಡೆಸಿದ ಸುಲಿಗೆ ಬಯಲಿಗೆ ಎಳೆಯಲು ಉಳಗಾದಲ್ಲಿ ಕಿಸಾನ ಸಭೆಯವರು ಸತ್ಯಾಗ್ರಹ ಹೂಡಿದರು. ಈ ಪ್ರಕರಣದಲ್ಲಿ ಜಮಿನದಾರರು ರೈತರ ಮಾತಿಗೆ ಒಪ್ಪಬೇಕಾಯಿತೆಂದು ಗೊತ್ತಿದೆ. ಈ ಜಮಿನದಾರರು ಸಬ್ ಜಜ್ ಕೋರ್ಟಿನಲ್ಲಿ ನಾಜೀರ್ ಇದ್ದಾರೆಂದು ನಾವು ಲಕ್ಷದಲ್ಲಿಡಬೇಕು. ಬೇಳೆಯ 2/3 ಅಂಶ ರೈತನ ಬಳಿಯಲ್ಲಿ ಇರಬೇಕೆಂದು ಮುಂಬಯಿ ಟೆನೆನ್ಸಿ ಕಾಯಿದೆ ತಿದ್ದುಪಡಿ ಅಮಲಿನಲ್ಲಿ ಬಂದ ಕೂಡಲೇ ಜಮಿನದಾರರು ಗಾಭರಿಯಾಗಿ ಲೋಕಪ್ರಿಯ ಮಂತ್ರಿಗಳ ವಿರುದ್ಧ ಪ್ರಚಾರ ನಡೆಸಿದರು….. ಬೇಕಾಯ್ದೆಶೀರ್ ಜಮಾವದಲ್ಲಿದ್ದರೆಂದು ಪುರುಷೋತ್ತಮ ನಾಯ್ಕ ಅವರ ತಮ್ಮ ಬಾಬಣಿ ನಾಯ್ಕ ಮತ್ತಿಬ್ಬರ ಮೇಲೆ ಖಟ್ಳೆ ಶುರುವಾಯಿತು. ಟೌನ್ ಮೆಜಿಷ್ಟ್ರೇಟ್ ಕೋರ್ಟಿನಲ್ಲಿ ಇಬ್ಬರನ್ನು ಮತ್ತು ಡಿಷ್ಟ್ರಿಕ್ಟ್ ಕೋರ್ಟಿನಲ್ಲಿ ಮತ್ತಿಬ್ಬರನ್ನು ನಿರ್ದೋಷಿಗಳೆಂದು ನಿರ್ಣಯಿಸಲಾಯಿತು. ಮಾಮಲೆದಾರರು ಈ ಖಟ್ಳೆಗೆ ಭಯಂಕರ ರೂಪ ಕೊಡಲು ಯತ್ನಿಸಿದರು. ಜಿಲ್ಲೆಯಲ್ಲಿ ಅಶಾಂತತೆಯ ವಾತಾವರಣ ಉಂಟಾಗುವಂತೆ ಕಿಸಾನ ಸಭೆಯವರು ಎಲ್ಲಿಯೂ ಪ್ರಚಾರ ನಡೆಸಿದ್ದಿಲ್ಲವೆಂದು ಸ್ಪಷ್ಟವಾಗುತ್ತದೆ.
ಆದರೆ ಜಮಿನದಾರರು ಕಿಸಾನ ಸಭೆಯ ವಿರುದ್ಧ ನಡೆಸಿದ ಅಪಪ್ರಚಾರದ ಫಲವಾಗಿ ಸರಕಾರದವರು ಮುಂಬಯಿ ಪ್ರಾಂತದಿಂದ ಎನ್.ಎಲ್. ಉಪಾಧ್ಯಾಯ ಮತ್ತು ಡಿ.ವಿ. ಸಿಂಗರನ್ನು ಹದ್ದುಪಾರು ಮಾಡಿದರು…. ಎನ್.ಜಿ.ಮಾಲಸೇಕರ, ಪುರುಷೋತ್ತಮ ನಾಯ್ಕ, ಸೈಯದ್ ಹೈದರ್ ಸೈಯದ್ ಯೂಸುಫ್ ಇವರನ್ನು ಜಿಲ್ಲೆಯಿಂದ ಹದ್ದುಪಾರು ಮಾಡಲಾಗಿದೆ….. ಚುಡೋ ಫಕೀರ್ ಪಡ್ತಿ, ಕಾಯತಾನ ಮನವೇಲ ಡಿಸೋಜಾ, ಮುಕುಂದ ಬಾಂದೇಕರ್, ಸೈಯದ್ ಅಬ್ದುಲ್ ಹಮೀದ್ ಸೈಯದ್ ಹೈದರ್, ಶೇಖ್ ಮಹಮ್ಮದ್ ಅಬ್ದುಲ್ ರಜಾಕ್, ಗುಬ್ಬು ನಾಯ್ಕ, ಬಿ.ಎನ್. ಧಾರವಾಡಕರ್ ಇವರನ್ನೆಲ್ಲ ಕಾರವಾರ ಸಬ್ ಜೈಲಿನಲ್ಲಿ ಸ್ಥಾನಬದ್ಧ ಕೈದಿಯಾಗಿ ಇಟ್ಟಿದ್ದಾರೆ….
ಹಿಂದಿ ಸ್ವಾತಂತ್ರ್ಯ ದಿನವೆಂದು ಆಚರಿಸಲ್ಪಟ್ಟು ತಾರೀಖು 15 ಅಗಷ್ಟ ತಮ್ಮ ಮುಂದಾಳುಗಳು ತಮ್ಮ ನಡುವೆ ಇರುವುದು ಯೋಗ್ಯವೆಂದು ಜಿಲ್ಲಾ ಕಿಸಾನ ಸಭಾ ಕಮಿಟಿಯವರು ಸ್ಥಾನಬದ್ಧರ ಬಿಡುಗಡೆಯ ಬಗ್ಗೆ ಮತ್ತು ಹದ್ದುಪಾರು ಹುಕುಂ, ವಾರಂಟುಗಳನ್ನು ರದ್ದುಗೊಳಿಸುವ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ತಾ. 11 ಅಗಷ್ಟ ದಿನ ತಂತಿ ಮಾಡಿದರು. “ಹಿಂದುಸ್ತಾನದಿಂದ ತೊಲಗುವೆವು” ಎಂದು ಸಾಮ್ರಾಜ್ಯವಾದಿಯವರು ಕೊಟ್ಟ ಮಾತನ್ನು ಅವರಿಂದ ನಿಜಗೊಳಿಸಬೇಕಾದರೆ ಹಿಂದಿಯವರೆಲ್ಲರೂ ಹೆಚ್ಚಿಗೆ ಸಹಕಾರದಿಂದ ನಡೆಯಬೇಕೆಂದು ಕಿಸಾನ ಸಭೆಗೆ ಗೊತ್ತಿದೆ. ಆದ್ದರಿಂದಲೇ ಟೆನೆನ್ಸಿ ಕಾಯಿದೆ ಸುರುಳೀತವಾಗಿ ನಡೆಯಲಿಕ್ಕೆ ಬ್ರಿಟಿಷ್ ನಿರ್ಮಿತ ಜಮಿನದಾರಿ ಪದ್ಧತಿಯನ್ನು ಸಾವಕಾಶ ನಾಶಗೊಳಿಸುವ ಬಗ್ಗೆ ಕಳ್ಳಪೇಟೆಯನ್ನು ನಿರ್ಮೂಲನಗೊಳಿಸಿ ರೇಷನ್ ಪದ್ಧತಿ ಯಶಸ್ವಿಗೊಳಿಸಲಿಕ್ಕೆ ಈಗಿನ ಸರಕಾರ ದೊಡನೆ ಸಹಕರಿಸುವದಾಗಿ ತಾರೀಖ 15 ಅಗಷ್ಟ ರ ದಿನ ಠರಾವು ಮಾಡಲಾಯಿತು. ಈ ಮೇಲಿನ ಗುರಿಯನ್ನು, ಕಾರ್ಯಕ್ರಮವನ್ನು ಅನುಸರಿಸಲಿಕ್ಕೆ ಅನುವು ಮಾಡಲು ಮುಂಬಯಿ ಸರಕಾರವು ಸ್ಥಾನಬದ್ಧ ಕೈದಿಗಳನ್ನು ಬಿಡಿಗಡೆ ಮಾಡುವುದು ಮತ್ತು ಹದ್ದುಪಾರು ಹುಕ್ಕುಂ ವಾರಂಟುಗಳನ್ನು ರದ್ದು ಗೊಳಿಸುವರೆಂದು ಕಿಸಾನ ಸಭೆಯಿಂದ ಆಶಿಸಲಾಗಿದೆ.