ಕೆ.ಎನ್. ಉಮೇಶ್
ಭಾರತವೀಗ 75ನೇ ಸ್ವಾತಂತ್ಯೋತ್ಸವದತ್ತ ಸಾಗುತ್ತಿದೆ. ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ಕಳೆದುಕೊಳ್ಳುವ ಅಪಾಯದಲ್ಲಿ ದೇಶದ ಜನತೆ ಇದ್ದಾರೆ. ದೇಶದಲ್ಲಿ ಕೋಮುವಾದೀ ಶಕ್ತಿಗಳು ಬೆಳವಣಿಗೆ ಸ್ವಾತಂತ್ರ್ಯಕ್ಕೆ ಸಂಚಕಾರ ತರುವ ಬೆದರಿಕೆಯನ್ನು ಒಡ್ಡುತ್ತಿವೆ. ಈ ಶಕ್ತಿಗಳ ಇಂತಹ ಪಾತ್ರ ಸ್ವಾತಂತ್ರ್ಯ ಸಂಗ್ರಾಮ ಕಾಲದಿಂದಲೂ ಇದೆ ಎನ್ನುವುದನ್ನು ಐತಿಹಾಸಿಕವಾಗಿ ಗುರುತಿಸಿದ್ದಾರೆ ಲೇಖಕರು.
ಭಾರತದ ಕಾರ್ಮಿಕ ವರ್ಗವು ಒಂದೆಡೆ ತಾನು ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ರಕ್ಷಿಸುವ ಹೋರಾಟದಲ್ಲಿ ನವ ಉದಾರವಾದಿ ನೀತಿಗಳ ಆಕ್ರಮಣದ ವಿರುದ್ಧ, ಮತ್ತು ಮತ್ತೊಂದೆಡೆ ಪ್ರಸ್ತುತ ಆಳುವ ವರ್ಗದ ಆಳ್ವಿಕೆಯು ಉತ್ತೇಜಿಸುತ್ತಿರುವ ಹತಾಶ ವಿಛಿದ್ರಕಾರಿ ಶಕ್ತಿಗಳ ಕುತಂತ್ರದ ವಿರುದ್ಧ ವರ್ಗ ಏಕತೆಯನ್ನು ಎತ್ತಿಹಿಡಿಯುವ ಹೋರಾಟದಲ್ಲಿ ತೊಡಗಿದೆ. ಭಾರತ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ನಡೆಸುತ್ತಿರುವ ಈ ಕದನವು ಹೆಚ್ಚು ಮಹತ್ವದ್ದಾಗಿದೆ. ದೇಶದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ಮೌಲ್ಯಗಳು ಮತ್ತು ಸಾಧನೆಗಳ ಮೇಲೆ ಘೋರ ಮತ್ತು ವಿನಾಶಕಾರಿ ಆಕ್ರಮಣವನ್ನು ನಡೆಸುತ್ತಿರುವ ಈ ಅಪರಾಧಿಗಳು ಆಡಳಿತದಲ್ಲಿ ಭಾಗವಹಿಸುತ್ತಲೇ, ಅನೈಕ್ಯತೆ, ಅವನತಿಯ, ವಿಷವನ್ನು ಹರಡುತ್ತಾ, ಸ್ವಾತಂತ್ರದ `ಅಮೃತ್ ಮಹೋತ್ಸವ ವರ್ಷ’ ಎಂದು ಘೋಷಿಸುತ್ತಿರುವುದು ಬಹಳ ಗಂಭೀರ ವಿಷಯವಾಗಿದೆ.
ಭಾರತದ ಕಾರ್ಮಿಕ ವರ್ಗವು ಸಾಮ್ರಾಜ್ಯಶಾಹಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಮತ್ತು ಸ್ವಾತಂತ್ರ್ಯದ ನಂತರದ ಭಾರತದ ಆಳುವ ವರ್ಗದ ಆಳ್ವಿಕೆಯಲ್ಲಿ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಆಳುವ ವರ್ಗದ ಆಕ್ರಮಣಗಳನ್ನು ಎದುರಿಸಿ ನಿಂತಿದೆ. ದೇಶದ ಇತಿಹಾಸ ಇದಕ್ಕೆ ಎಲ್ಲ ಅರ್ಥದಲ್ಲೂ ಸಾಕ್ಷಿಯಾಗಿ ನಿಂತಿದೆ.
ಆಗಿನ ಬ್ರಿಟಿಷ್-ಭಾರತದ ವಿವಿದ ಭಾಗಗಳಲ್ಲಿ ಕಾರ್ಮಿಕ ವರ್ಗದ ಹೋರಾಟಗಳು ವಿಸ್ತರಿಸುತ್ತಿರುವಾಗ ಮತ್ತು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನರು ತೀವ್ರವಾಗಿ ಹೋರಾಡುತ್ತಿರುವಾಗ, ಆರ್.ಎಸ್.ಎಸ್.ನಂತಹ ವಿಛಿದ್ರಕಾರಿ ಬಲಪಂಥೀಯ ಕೋಮುವಾದಿ ಶಕ್ತಿಗಳ ಹರಿವು ಕೂಡ ಬೆಳೆಯುತ್ತ ಸಾಗುತ್ತಿತ್ತು, ಅವರ ನಾಯಕರು ಬ್ರಿಟಿಷರಿಗೆ ಸಂಪೂರ್ಣ ಶರಣಾಗಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಅದರ ವಿಭಜಿಸಿ-ಆಳುವ ತಂತ್ರದಲ್ಲಿ ಒಂದು ಸಾಧನವಾಗಿ, ಸಕ್ರಿಯವಾಗಿ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರಿಂದ, ಈ ದ್ರೋಹಿಗಳಿಗೆ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಹೆಜ್ಜೆಗುರುತನ್ನು ಮೂಡಿಸಿದ ಕಾರ್ಮಿಕ ವರ್ಗದ ಹೋರಾಟಗಳು
ಕಾರ್ಮಿಕ ವರ್ಗದ ಹೋರಾಟಗಳು ಉದ್ದಗಲಕ್ಕೂ ಉಲ್ಬಣಗೊಳ್ಳುತ್ತಿದ್ದಂತೆ,. 1922 ರೈಲ್ವೆ, ಉಕ್ಕು ಮತ್ತು ಜವಳಿ ಕಾರ್ಮಿಕರ ಬಹು ದಿನದ ಪ್ರಮುಖ ಮುಷ್ಕರಗಳಿಗೆ ಸಾಕ್ಷಿಯಾಯಿತು. ಲಭ್ಯವಿರುವ ದಾಖಲೆಗಳ ಪ್ರಕಾರ 1928ರಲ್ಲಿ ಸರಿ ಸುಮಾರು 35 ಲಕ್ಷಕ್ಕೂ ಹೆಚ್ಚು ಮಾನವ ದಿನಗಳು ನಷ್ಟವಾದವು.. ಬಹುತೇಕ ಇಡೀ ದೇಶವು ನಿರ್ದಿಷ್ಟವಾಗಿ ಬಾಂಬೆ, ಕಾನ್ಪುರ್, ಕಲ್ಕತ್ತಾ, ಖರಗ್ಪುರ, ಬೆಂಗಳೂರು, ಜಮ್ಶೆಡ್ಪುರ, ಝರಿಯಾ, ಧನ್ಬಾದ್, ನಾಗ್ಪುರ, ಮದ್ರಾಸ್ ಪ್ರೆಸಿಡೆನ್ಸಿ, ಅಸ್ಸಾಂನ ದಿಗ್ಬೋಯಿ ಇತ್ಯಾದಿ ಕೈಗಾರಿಕಾ ಕೇಂದ್ರಗಳು. ಕಾರ್ಮಿಕರ ಹೋರಾಟಗಳ ರಂಗಭೂಮಿಯಾಗಿ ಮಾರ್ಪಟ್ಟವು. 1939ರಲ್ಲಿ 49.9 ಲಕ್ಷ, 1940 ರಲ್ಲಿ 75.7 ಲಕ್ಷ, 1942 ರಲ್ಲಿ 57.7 ಲಕ್ಷ ಕೆಲಸದ ದಿನಗಳು ನಷ್ಟವಾದವು. ಮತ್ತು ಈ ಪ್ರಕ್ರಿಯೆಯು 1945ರವರೆಗೆ ಮುಂದುವರೆಯಿತು, ಆ ವರ್ಷ 7.82 ಲಕ್ಷ ಕಾರ್ಮಿಕರನ್ನು ಒಳಗೊಂಡ 33.4 ಲಕ್ಷಗಳ ಕೆಲಸದ ದಿನಗಳ ನಷ್ಟಕ್ಕೆ ಸಾಕ್ಷಿಯಾಯಿತು.
ಕಾರ್ಮಿಕ ವರ್ಗದ ಈ ಹೋರಾಟಗಳು ತಮ್ಮ ಸ್ವಂತ ಆರ್ಥಿಕ ಬೇಡಿಕೆಗಳಿಗಾಗಿ ಮಾತ್ರವಲ್ಲದೆ ವಸಾಹತುಶಾಹಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಭಾರತದ ಸ್ವಾತಂತ್ರ್ಯಕ್ಕಾಗಿಯೂ ನಡೆದವು. ಈ ರೀತಿ ಕಾರ್ಮಿಕ ವರ್ಗದ ಹೋರಾಟಗಳು ಸ್ವಾತಂತ್ರ್ಯ ಹೋರಾಟದೊಂದಿಗೆ ಹೆಣೆದುಕೊಂಡಿದ್ದವು ಮತ್ತು ಬೆರೆತಿದ್ದವು. ಕಾರ್ಮಿಕ ವರ್ಗವು ಸ್ವಾತಂತ್ರ್ಯ ಚಳುವಳಿಯ ಬಹುತೇಕ ಎಲ್ಲಾ ಕರೆಗಳಲ್ಲಿ ಬೃಹತ್ ಭಾಗವಹಿಸುವಿಕೆಯೊಂದಿಗೆ ಸ್ವಾತಂತ್ರ್ಯ ಚಳುವಳಿಯ ಭಾಗವಾಯಿತು. ಚಳವಳಿಯ ಭಾಗವಾಗಿರುವುದು ಮಾತ್ರವಲ್ಲದೆ ಪೂರ್ಣ ಸ್ವರಾಜ್, ಇಂಕ್ವಿಲಾಬ್ ಜಿಂದಾಬಾದನಂತಹ ಕ್ರಾಂತಿಕಾರಿ ಘೋಷಣೆಗಳ ಹೊರಹೊಮ್ಮುವಿಕೆಗೆ ಅನುವು ಮಾಡಿಕೊಡುವ ಚಳವಳಿಗೆ ಅಗತ್ಯವಾದ ತೀಕ್ಷ್ಣತೆಯನ್ನು ಒದಗಿಸಿತು ಮತ್ತು ಈ ಕಾರಣಕ್ಕಾಗಿ ಅಪಾರ ತ್ಯಾಗಗಳನ್ನು ಮಾಡಲಾಯಿತು. ಈ ಕ್ರಾಂತಿಕಾರಿಗಳ ಸಮರಶೀಲತೆಯಿಂದ ನೇಣುಗಂಬವು ತುಂಬಿತ್ತು. ಈ ಸಂಘ ಪಕ್ಷವು ಭಾರತವನ್ನು ಒಂದು ಆಧುನಿಕ ರಾಷ್ಟ್ರವಾಗಿ ರೂಪಿಸಲು ಅನುವು ಮಾಡಿಕೊಟ್ಟವು. ಆದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಬಂಡವಾಳಶಾಹಿ ವರ್ಗದ ನಾಯಕತ್ವವು ಕ್ರಾಂತಿಕಾರಿ ಪರಿವರ್ತನೆಯ ಪ್ರಕ್ರಿಯೆಯನ್ನು ಮೊಟಕುಗೊಳಿಸಿತು. ಇಂದು ಸ್ವಾತಂತ್ರ್ಯದ 75 ನೇ ವರ್ಷದಲ್ಲಿಯೂ ಇದು ದೃಡವಾಗುತ್ತಿದೆ.
ಆದರೆ ಹತಾಶ ವಿಛಿದ್ರಕಾರಿ ಶಕ್ತಿಗಳು ಬ್ರಿಟಿಷ್ ಸಿಂಹಾಸನಕ್ಕೆ ನಿಷ್ಠೆ ಹೊಂದಿದ್ದವು.
ಕಾರ್ಮಿಕ ವರ್ಗದ ಹೋರಾಟಗಳಲ್ಲಿ ಈ ರೀತಿ ಕ್ರಾಂತಿಕಾರಿ ಪ್ರವೃತ್ತಿಗಳು ಹೆಚ್ಚುತ್ತಿರುವಾಗ, ವಸಾಹತುಶಾಹಿ ಬ್ರಿಟಿಷ್ ಆಡಳಿತಗಾರರು ಬ್ರಿಟಿಷ್ ಸಿಂಹಾಸನಕ್ಕೆ ತಮ್ಮ ನಿಷ್ಠೆಯನ್ನು ಹೊಂದಿದ್ದ ದೇಶೀಯ ಆಳುವ ವರ್ಗದ ಸಣ್ಣ ವಿಭಾಗದ ಬೆಂಬಲವನ್ನು ಹೊಂದಿದ್ದ ಹತಾಶ ವಿಛಿದ್ರಕಾರಿ ಕೋಮುವಾದಿ ಶಕ್ತಿಗಳನ್ನು ಪೋಷಿಸಿದರು,. 1925ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರಚನೆಯೊಂದಿಗೆ ಇದು ಹೆಚ್ಚು ಸ್ಪಷ್ಟವಾಯಿತು. ಅಖಿಲ ಭಾರತ ಮುಸ್ಲಿಂ ಲೀಗ್ 1930 ರಿಂದ ಪ್ರತ್ಯೇಕ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಪಾಕಿಸ್ತಾನಕ್ಕಾಗಿ ತನ್ನ ಬಲವಾದ ಬೇಡಿಕೆಯನ್ನು ಎತ್ತಲು ಪ್ರಾರಂಭಿಸಿತು.
ಆರ್‌ಎಸ್‌ಎಸ್ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಮತ್ತು ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಮುಂತಾದ ಅವರ ಉನ್ನತ ನಾಯಕರ ಕ್ಷಮಾದಾನ ಅರ್ಜಿಗಳು ಮತ್ತು ತಪ್ಪೊಪ್ಪಿಗೆಗಳು ಬ್ರಿಟೀಶರಿಗೆ ಇದ್ದ ಅವರ ನಿಷ್ಠೆಯನ್ನು ಬಯಲುಗೊಳಿಸುತ್ತವೆ. ಅಕ್ಟೋಬರ್-ನವೆಂಬರ್, 1913ರಲ್ಲಿ. ಗವರ್ನರ್ ಜನರಲ್ ಕೌನ್ಸಿಲ್‌ನ ಗೃಹ ಸದಸ್ಯ ಸರ್ ರೆಜಿನಾಲ್ಡ್ ಕ್ರಾಡಾಕ್ ಅಂಡಮಾನಿಗೆ ಭೇಟಿ ನೀಡಲು ಬಂದಾಗ ವಿ.ಡಿ.ಸಾವರ್ಕರ್ (ಅಪರಾಧಿ ಸಂಖ್ಯೆ 32778) ಅವರಿಗೆ ವೈಯಕ್ತಿಕವಾಗಿ ಸಲ್ಲಿಸಿದ ಈ ಕೆಳಗೆ ಉಲ್ಲೇಖಿಸಿದ ಕ್ಷಮಾದಾನ ಅರ್ಜಿಯು ಈ ಆಘಾತಕಾರಿ ವಿಷಯವನ್ನು ಬಹಿರಂಗಗೊಳಿಸುತ್ತದೆ.
“ನಾನು ಈ ಕೆಳಗಿನ ಅಂಶಗಳನ್ನು ತಮ್ಮ ಪರಿಶೀಲನೆಗಾಗಿ ಸಲ್ಲಿಸಲು ಅನುಮತಿ ಕೋರುತ್ತೇನೆ: “……….ಇದಲ್ಲದೆ ನನ್ನ ಪರಿವರ್ತನೆಯು ಭಾರತ ಮತ್ತು ವಿದೇಶಗಳಲ್ಲಿನ ದಾರಿ ತಪ್ಪಿದ, ಹಿಂದೆ ನನ್ನನ್ನು ತಮ್ಮ ಮಾರ್ಗದರ್ಶಕರಾಗಿ ನೋಡುತ್ತಿದ್ದ ಎಲ್ಲ ಯುವಕರನ್ನು ಸಾಂವಿಧಾನಿಕ ಮಾರ್ಗಕ್ಕೆ ತಿರುಗಿ ಕರೆ ತರುತ್ತದೆ, ತಾವು ಇಷ್ಟಪಡುವ ಯಾವುದೇ ಸಾಮರ್ಥ್ಯದಲ್ಲಿ ಸರ್ಕಾರಕ್ಕೆ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ, ಏಕೆಂದರೆ ನನ್ನ ಮತಾಂತರವು ಆತ್ಮಸಾಕ್ಷಿಯಾಗಿರುವುದರಿಂದ ನನ್ನ ಮುಂದಿನ ನಡವಳಿಕೆಯು ಹೀಗಿರುತ್ತದೆ ಎಂದು ನಾನು ಭಾವಿಸುತ್ತೇನೆ, ನನ್ನನ್ನು ಜೈಲಿನಲ್ಲಿ ಇರಿಸುವುದರಿಂದ ಏನನ್ನೂ ಪಡೆಯಲಾಗುವುದಿಲ್ಲ, ಶಕ್ತಿಶಾಲಿಗಳು ಮಾತ್ರ ಕರುಣೆಯನ್ನು ತೊರಬಹುದು ಮತ್ತು ಸರ್ಕಾರದ ದತ್ತು ಮಗನಾದ ನಾನು ಸರಕಾರದ ಬಾಗಿಲಿಗೆ ಹೊರತುಪಡಿಸಿ ಬೇರೆಲ್ಲಿಗೆ ಹೋಗಲು ಸಾಧ್ಯ? ಆದ್ದರಿಂದ ತಾವು ದಯವಿಟ್ಟು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರುತ್ತೇನೆ.” [ಒತ್ತು ಸೇರಿಸಲಾಗಿದೆ]. ಇದೊಂದೇ ಅಲ್ಲ ಸಾವರ್ಕರ್. ಅವರು 1911, 1913, 1914, 1918 ಮತ್ತು 1920 ರಲ್ಲಿ ಸೇರಿ ಐದು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದರು. ನಾವು ಅವರ 1911, 1914 ಮತ್ತು 1918 ರ ಕ್ಷಮಾದಾನ ಅರ್ಜಿಗಳ ಉಲ್ಲೇಖವನ್ನು ಕಾಣುತ್ತೇವೆ. ದುಃಖಕರವೆಂದರೆ, ಇವುಗಳ ಪಠ್ಯಗಳು ಆರ್ಕಿವ್‌ಗಳಲ್ಲಿ ಲಭ್ಯವಿಲ್ಲ.
ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ 27.08.1942 ರಂದು ನಡೆದ ಬಟೇಶ್ವರ ಅರಣ್ಯ ಕಚೇರಿಯ ಘೇರಾವ್‌ನಲ್ಲಿ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಭಾಗವಹಿಸಿದ್ದಾಗಿ ಆರ್‌ಎಸ್‌ಎಸ್ ಹೇಳಿಕೊಳ್ಳುತ್ತಿದೆ. ಇದು ಸುಳ್ಳು ಎಂದು ಸಾಬೀತಾಗಿದೆ. ಏಕೆಂದರೆ, 01.09.1942ರಂದು ಆಗ್ರಾದ ಎರಡನೇ ದರ್ಜೆ ಮಾಜಿಸ್ಟ್ರೇಟ್ ಕೋರ್ಟಿನಲ್ಲಿ ಅವರು “ನಾನು ಗುಂಪಿನ ಭಾಗವಾಗಿದ್ದೆ, ಆದರೆ ನಾನು ಅದರ ಉದ್ದೇಶಗಳನ್ನು ಹಂಚಿಕೊಳ್ಳಲಿಲ್ಲ ಮತ್ತು ನಾನು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗವಹಿಸಲಿಲ್ಲ.” ಎಂದು ಹೇಳಿದ್ದು ದಾಖಲೆಯಲ್ಲಿದೆ.
ಫ್ಯಾಸಿಸ್ಟ್ ಮುಸೊಲಿನಿ ಮತ್ತು ಮೂಂಜೆ ಸಂಪರ್ಕ-ಕೊಂಡಿ
ಭಗತ್ ಸಿಂಗ್ ಮತ್ತು ಅವರ ಸಂಗಡಿಗರ, ಪರಮೋಚ್ಚ ಬಲಿದಾನಗಳಿಂದ ಇಡೀ ದೇಶವು ಭಾವೋದ್ವೇಗಕ್ಕೆ ಒಳಗಾದ ಸಮಯದಲ್ಲಿ, 1927 ರಿಂದ 1937 ರವರೆಗೆ, ನಂತರ ಅಧ್ಯಕ್ಷತೆಯನ್ನು ವಿ.ಡಿ.ಸಾವರ್ಕರ್ ಅವರಿಗೆ ಹಸ್ತಾಂತರಿಸುವವರೆಗೂ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಡಾ.ಬಿ.ಎಸ್. ಮೂಂಜೆಯವರು 1931ರಲ್ಲಿ ಇಟಲಿಗೆ ಭೇಟಿ ನೀಡಿ ಅದರ ಪ್ರಧಾನಿಯಾಗಿದ್ದ ಫ್ಯಾಸಿಸ್ಟ್ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯವರನ್ನು ಭೇಟಿಯಾದರು. ಮೂಂಜೆ ಆರ್‌ಎಸ್‌ಎಸ್ ಸ್ಥಾಪಿಸಿದ ಡಾ. ಹೆಡ್ಗೆವಾರ್‌ರ ರಾಜಕೀಯ ಮಾರ್ಗದರ್ಶಕರಾಗಿದ್ದರು. ಮೂಂಜೆಯವರು ಫ್ಯಾಸಿಸ್ಟ್ ಮತ್ತು ನಾಜಿ ಸಿದ್ಧಾಂತದಿಂದ ಎಷ್ಟು ಆಕರ್ಷಿತರಾಗಿದ್ದರೆಂದರೆ, ಅವರು ಹಿಂದೂಗಳ ಮನಸ್ಸನ್ನು ತರಬೇತುಗೊಳಿಸಲು ಭೋನ್ಸಾಲಾ ಮಿಲಿಟರಿ ಶಾಲೆಯನ್ನು ತೆರೆದರು. ಮಹಾತ್ಮಾ ಗಾಂಧಿಯವರ ಹಂತಕರಾದ ನಾಥೂರಾಮ್ ಗೋಡ್ಸೆ ಮತ್ತು ಅವರ ಸಹೋದರ ಗೋಪಾಲ್ ಗೋಡ್ಸೆ, ಆ ಚಿಂತನೆಗಳ ಶಾಲೆಯ ಮುಖ್ಯ ಉತ್ಪನ್ನಗಳಾಗಿದ್ದರು.
ಅವರದೇ ಸ್ವಂತ ದಾಖಲೆಗಳು ಸತ್ಯವನ್ನು ಬಹಿರಂಗಪಡಿಸುತ್ತಿವೆ
ಸ್ವಾತಂತ್ರ್ಯ ಚಳವಳಿಯ ಬಗ್ಗೆ ಆರ್‌ಎಸ್‌ಎಸ್ ನಾಯಕತ್ವದ ಧೋರಣೆಯು ಆರ್‌ಎಸ್‌ಎಸ್‌ನ ಎರಡನೇ ಸರಸಂಘಚಾಲಕ್ ಗೋಳ್ವಾಲ್ಕರರ ಈ ಕೆಳಗಿನ ಹೇಳಿಕೆಯಿಂದ (ಶ್ರೀ ಗುರೂಜಿ ಸಮಗ್ರ ದರ್ಶನ, ಸಂಪುಟ. IV, ಪುಟ 39): ಸ್ಪಷ್ಟವಾಗುತ್ತದೆ.
ದೇಶದಲ್ಲಿ ಕಾಲಕಾಲಕ್ಕೆ ಬೆಳೆಯುತ್ತಿರುವ ಪರಿಸ್ಥಿತಿಯಿಂದ ಮನಸ್ಸಿನಲ್ಲಿ ಸ್ವಲ್ಪ ಅಶಾಂತಿ ಇತ್ತು. 1942ರಲ್ಲಿ ಇಂತಹ ಅಶಾಂತಿ ಇತ್ತು.. ಅದಕ್ಕೂ ಮುನ್ನ 1930-31ರ ಚಳವಳಿ ನಡೆದ ಸಮಯದಲ್ಲಿ ಕೆಲವು ಜನರು ಡಾಕ್ಟರ್‌ಜಿ (ಹೆಡ್ಗೆವಾರ್) ಬಳಿಗೆ ಹೋಗಿದ್ದರು. ಈ ಹೋರಾಟವು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲಿದ್ದು, ಸಂಘವು ಅದರಲ್ಲಿ ಭಾಗವಹಿಸುವಲ್ಲಿ ಹಿಂಜರಿಯಬಾರದು ಎಂದು ನಿಯೋಗವು ಡಾಕ್ಟರಜಿಯವರನ್ನು ವಿನಂತಿಸಿತು. ಆ ಸಮಯದಲ್ಲಿ ಒಬ್ಬ ಸಜ್ಜನ ಡಾಕ್ಟರ್ಜಿಗೆ ತಾನು ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿದಾಗ, ಡಾಕ್ಟರ್ಜಿ ಅವರಿಗೆ ಹೀಗೆ ಹೇಳುತ್ತಾರೆ:
“ಖಂಡಿತವಾಗಿಯೂ ಹೋಗು, ಆದರೆ ಆಗ ನಿನ್ನ ಸಂಸಾರವನ್ನು ಯಾರು ನೋಡಿಕೊಳ್ಳುತ್ತಾರೆ” ಆ ಮಹಾನುಭಾವನು ಉತ್ತರಿಸುತ್ತಾನೆ, “ನಾನು ಎರಡು ವರ್ಷಗಳ ಕುಟುಂಬದ ಖರ್ಚುಗಳನ್ನು ನಿರ್ವಹಿಸಲು ಮಾತ್ರವಲ್ಲದೆ ಅವಶ್ಯಕತೆಗೆ ಅನುಗುಣವಾಗಿ ದಂಡವನ್ನು ಪಾವತಿಸಲು ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಿಟ್ಟಿದ್ದೇನೆ”. ಆಗ ಡಾಕ್ಟರಜಿ ಅವರಿಗೆ, “ನೀವು ಸಂಪನ್ಮೂಲಗಳನ್ನು ಸಂಪೂರ್ಣವಾಗಿ ವ್ಯವಸ್ಥೆಗೊಳಿಸಿದ್ದರೆ ಎರಡು ವರ್ಷಗಳ ಕಾಲ ಸಂಘದಲ್ಲಿ ಕೆಲಸ ಮಾಡಲು ಹೊರಗೆ ಬಾ” ಎಂದು ಹೇಳುತ್ತಾರೆ. ಮನೆಗೆ ಹಿಂದಿರುಗಿದ ನಂತರ, ಆ ಮಹಾನುಭಾವನು ಜೈಲಿಗೂ ಹೋಗಲಿಲ್ಲ ಅಥವಾ ಸಂಘಕ್ಕಾಗಿ ಕೆಲಸ ಮಾಡಲೂ ಹೊರಗೆ ಬರಲಿಲ್ಲ.
ಇದೇ ರೀತಿಯಲ್ಲಿ, 1942ರಲ್ಲಿ, ಪ್ರಕ್ಷುಬ್ಧತೆ ಪ್ರಾರಂಭವಾದಾಗ, ಗೋಲ್ವಾಲ್ಕರ್ ಅವರು “ಆರ್‌ಎಸ್‌ಎಸ್‌ನ ದಿನನಿತ್ಯದ ಕೆಲಸವನ್ನು ಮುಂದುವರಿಸಬೇಕು ಮತ್ತು ಬ್ರಿಟಿಷರನ್ನು ಕೆರಳಿಸುವ ಯಾವ ಚಟುವಟಿಕೆಯನ್ನೂ ಮಾಡಬಾರದು” ಎಂಬ ಸೂಚನೆಗಳನ್ನು ನೀಡಿದ್ದರು. 1942ರಲ್ಲಿ ಸಹ ಹಲವರ ಹೃದಯದಲ್ಲಿ ಚಳುವಳಿಯಲ್ಲಿ ಭಾಗವಹಿಸುವ ಕುರಿತು ಬಲವಾದ ಭಾವನೆಯಿತ್ತು. ಆ ಸಮಯದಲ್ಲಿಯೂ ಸಂಘದ ತನ್ನ ದೈನಂದಿಕ ಕಾರ್ಯವನ್ನು ಮುಂದುವರಿಸಿತು. ಮತ್ತು “ನೇರವಾಗಿ ಏನನ್ನೂ ಮಾಡುವುದಿಲ್ಲ” ಎಂದು ಸಂಘ ಪ್ರತಿಜ್ಞೆ ಮಾಡಿತ್ತು.. ಬ್ರಿಟಿಷರ ವಿರುದ್ಧ ಹೋರಾಡುವುದು ಕಾರ್ಯಸೂಚಿಯ ಭಾಗವಾಗಿಲ್ಲ ಎಂದು ಆರ್‌ಎಸ್‌ಎಸ್ ಸಿದ್ಧಾಂತವು ಸ್ಪಷ್ಟವಾಗಿ ಹೇಳುತ್ತದೆ, “ನಮ್ಮ ಪ್ರತಿಜ್ಞೆಯಲ್ಲಿ ನಾವು ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಮೂಲಕ ದೇಶದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದೇವೆ, ಆದರೆ ಭಾರತದಿಂದ ಬ್ರೀಟಿಷರ ನಿರ್ಗಮನದ ಉಲ್ಲೇಖಿಸುತ್ತಿಲ್ಲ..” (ಶ್ರೀ ಗುರೂಜಿ ಸಮಗ್ರ ದರ್ಶನ ಸಂಪುಟ IV, ಪುಟ 40,)
ಜೀವನ ಚರಿತ್ರೆ ದಾವೆಗಳನ್ನು ನಿರಾಕರಿಸುತ್ತದೆ
ಆರೆಸ್ಸೆಸ್ ಪ್ರಕಟಿಸಿದ ಹೆಡ್ಗೆವಾರ್ ಜೀವನ ಚರಿತ್ರೆಯ ಪ್ರಕಾರ, ಗಾಂಧಿಯವರು 1930 ರಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ, ಹೆಡ್ಗೆವಾರ್ “ಸಂಘವು ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ. ಆದಾಗ್ಯೂ ಸತ್ಯಾಗ್ರಹದಲ್ಲಿ ವೈಯುಕ್ತಿಕವಾಗಿ ಭಾಗವಹಿಸಲು ಇಚ್ಛಿಸುವವರನ್ನು ನಿಷೇಧಿಸಲಾಗಿಲ್ಲ, ಆದರೆ ಸಂಘದ ಯಾವುದೇ ಜವಾಬ್ದಾರಿಯುತ ಕಾರ್ಯಕರ್ತ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು”. ಎಂದು ಎಲ್ಲೆಡೆ ಮಾಹಿತಿ ಕಳುಹಿಸಿದ್ದರು.
ಹಿಂದಿನ ವರ್ಷದ ನೌಕಾ ದಂಗೆಯ ನಂತರ ಮಾರ್ಚ್ 1947ರಲ್ಲಿ ಅಂತಿಮವಾಗಿ ಭಾರತವನ್ನು ತೊರೆಯಲು ಬ್ರಿಟಿಷರು ನಿರ್ಧಾರವನ್ನು ತೆಗೆದುಕೊಂಡಾಗಲೂ ಸಹ, ಗೋಲ್ವಾಲ್ಕರ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಬಯಸಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಟೀಕಿಸುತ್ತಲೇ ಇದ್ದರು ಆದಾಗ್ಯೂ, ಹೆಡ್ಗೆವಾರ್ ಅವರು ವೈಯಕ್ತಿಕ ಸಾಮರ್ಥ್ಯದಲ್ಲಿ ಭಾಗವಹಿಸಿದ್ದರು ಮತ್ತು ಜೈಲಿಗೆ ಹೋದರು. ಆದರೆ ಸ್ವಾತಂತ್ರ್ಯ ಹೋರಾಟಗಾರನ ಉದ್ದೇಶದಿಂದ ಅಲ್ಲ. ಆರ್‌ಎಸ್‌ಎಸ್ ಪ್ರಕಟಿಸಿದ ಜೀವನ ಚರಿತ್ರೆಯ ಪ್ರಕಾರ, ಅವರು ಜೈಲಿಗೆ ಹೋದದ್ದು, “ಸ್ವಾತಂತ್ರ್ಯ ಬಯಸುವ, ಸ್ವಯಂ ತ್ಯಾಗಕ್ಕೆ ಸಿದ್ದರಿದ್ದ ಪ್ರತಿಷ್ಠಿತ ಜನರ ಗುಂಪಿನೊಂದಿಗೆ ಸಂಘದ ಗುರಿಗಳ ಕುರಿತು ಚರ್ಚಿಸಲು ಮತ್ತು ಅದರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಅವರಿಗೆ ಮನವರಿಕೆ ಮಾಡಲು ಅವಕಾಶ ಸಿಗುತ್ತದೆ ಎನ್ನುವ ವಿಶ್ವಾಸದಿಂದ” ತಮ್ಮ ವಿಚ್ಛಿದ್ರಕಾರಕ ಉದ್ದೇಶಗಳಿಗಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಳ್ಳಲು ಹಿಂದೂ ಮತ್ತು ಮುಸ್ಲಿಂ ಪಂಥೀಯ ಗುಂಪುಗಳು ನಡೆಸುತ್ತಿರುವ ಕುತಂತ್ರಗಳಿಂದ ಎಚ್ಚೆತ್ತ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು 1934ರಲ್ಲಿ ನಿರ್ಣಯವನ್ನು ಅಂಗೀಕರಿಸಿ, ಕಾಂಗ್ರೆಸ್ ಪಕ್ಷದ ಸದಸ್ಯರು ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಮತ್ತು ಮುಸ್ಲೀಂ ಲೀಗ ನ ಸದಸ್ಯರಾಗುವುದನ್ನು ನಿಷೇಧಿಸಿತು.
ದಶಕದ ಅಂತ್ಯದ ವೇಳೆಗೆ, ಡಿಸೆಂಬರ್ 1940 ರಲ್ಲಿ, ಗಾಂಧೀಜಿ ಕ್ವಿಟ್ ಇಂಡಿಯಾಕ್ಕಾಗಿ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ, ವಸಾಹತುಶಾಹಿ ಸರ್ಕಾರದ ಗೃಹ ಇಲಾಖೆಯ ಒಂದು ಟಿಪ್ಪಣಿಯು ಆರ್‌ಎಸ್‌ಎಸ್ ನಾಯಕರು ಗೃಹ ಇಲಾಖೆಯ ಕಾರ್ಯದರ್ಶಿಯನ್ನು ಭೇಟಿಯಾಗಿ “ಸಂಘವು ನಾಗರಿಕ ರಕ್ಷಕ ಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ತನ್ನ ಸದಸ್ಯರಿಗೆ ಉತ್ತೇಜನ ನೀಡುವುದಾಗಿ ಭರವಸೆ ನೀಡಿದ್ದರು” ಎಂದು ಬಹಿರಂಗಪಡಿಸುತ್ತದೆ. “ಆಂತರಿಕ ಭದ್ರತೆಗಾಗಿ ವಿಶೇಷ ಕ್ರಮಗಳಲ್ಲಿ” ಒಂದಾಗಿ ಸಾಮ್ರಾಜ್ಯಶಾಹಿ ಸರ್ಕಾರವು ನಾಗರಿಕ ರಕ್ಷಕ ಪಡೆಯನ್ನು ಸ್ಥಾಪಿಸಿತ್ತು.
ಬ್ರಿಟಿಷ್-ಸರ್ಕಾರದ ದಾಖಲೆಗಳಲ್ಲಿ ಆರ್‌ಎಸ್‌ಎಸ್ ಮತ್ತು ಅದರ ಪಾತ್ರ
ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದ ಒಂದೂವರೆ ವರ್ಷಗಳ ನಂತರ, ಬ್ರಿಟಿಷ್-ರಾಜ್ ನ ಬಾಂಬೆ ಸರ್ಕಾರವು ಒಂದು ಜ್ಞಾಪಕ ಪತ್ರದಲ್ಲಿ “ಸಂಘವು ತನ್ನನ್ನು ತಾನು ನಿಷ್ಠುರವಾಗಿ ಕಾನೂನಿನ ಚೌಕಟ್ಟಿನೊಳಗೆ ಇಟ್ಟುಕೊಂಡಿದೆ ಮತ್ತು ಚಳವಳಿಯಲ್ಲಿ ಭಾಗವಹಿಸುವದನ್ನು ನಿರ್ದಿಷ್ಟವಾಗಿ ನಿರಾಕರಿಸಿದೆ.” ಎಂದು ಗಣನೀಯ ತೃಪ್ತಿಯೊಂದಿಗೆ ಗಮನಿಸಿದೆ, ಆದರೆ ಆರೆಸ್ಸೆಸ್ ನಾಯಕತ್ವವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿರಲು ಒಂದು ಕುತೂಹಲಕಾರಿ ಕಾರಣವನ್ನು ಹೊಂದಿತ್ತು. ಅನಾವಶ್ಯಕವಾಗಿ, ಬ್ರಿಟಿಷರಿಂದ ನಿರ್ಮಿತ ಕ್ಷಾಮವು ಬಂಗಾಳದಲ್ಲಿ ಕನಿಷ್ಠ ಮೂರು ಮಿಲಿಯನ್ ಭಾರತೀಯರನ್ನು ಕೊಂದ ಕೆಲವು ತಿಂಗಳುಗಳ ಮೊದಲು ಜೂನ್ 1942ರಂದು ನೀಡಿದ ಭಾಷಣದಲ್ಲಿ ಗೋಳ್ವಾಲ್ಕರ್ ಹೀಗೆ ಹೇಳುತ್ತಾರೆ “ಸಮಾಜದ ಪ್ರಸ್ತುತ ಅಧೋಗತಿಗೆ ಬೇರೆ ಯಾರನ್ನೂ ದೂಷಿಸಲು ಸಂಘವು ಬಯಸುವುದಿಲ್ಲ. ಜನರು ಇತರರನ್ನು ದೂಷಿಸಲು ಪ್ರಾರಂಭಿಸುವಲ್ಲಿ, ಮೂಲತಃ ದೌರ್ಬಲ್ಯವಿದೆ. ದುರ್ಬಲರಿಗೆ ಮಾಡಿದ ಅನ್ಯಾಯಕ್ಕೆ ಬಲಿಷ್ಠರನ್ನು ದೂಷಿಸುವುದು ವ್ಯರ್ಥ… ಸಂಘವು ಇತರರನ್ನು ನಿಂದಿಸುವುದರಲ್ಲಿ ಅಥವಾ ಟೀಕಿಸುವುದರಲ್ಲಿ ತನ್ನ ಅಮೂಲ್ಯ ಸಮಯವನ್ನು ವ್ಯರ್ಥಮಾಡಲು ಬಯಸುವುದಿಲ್ಲ. ದೊಡ್ಡ ಮೀನುಗಳು ಚಿಕ್ಕ ಮೀನುಗಳನ್ನು ತಿನ್ನುತ್ತವೆ ಎಂದು ನಮಗೆ ತಿಳಿದಿದ್ದರೆ, ದೊಡ್ಡ ಮೀನುಗಳನ್ನು ದೂಷಿಸುವುದು ಹುಚ್ಚುತನವಾಗಿದೆ. ಒಳ್ಳೆಯದು ಅಥವಾ ಕೆಟ್ಟದ್ದು ಸಾರ್ವಕಾಲಿಕ ಸತ್ಯ ಅದು ಪ್ರಕೃತಿಯ ಸಹಜ ನಿಯಮ. ಅದನ್ನು ಅನ್ಯಾಯವೆಂದು ಕರೆಯುವುದರಿಂದ ಈ ನಿಯಮವು ಬದಲಾಗುವುದಿಲ್ಲ”.
ನಾಥೂರಾಮ್ ಗೋಡ್ಸೆಯಿಂದ ಮಹಾತ್ಮ ಗಾಂಧಿ ಹತ್ಯೆಯ ಕೆಲವು ದಿನಗಳ ನಂತರ 30.01.1948 ರಂದು ಆರ್‌ಎಸ್‌ಎಸ್ ನಾಯಕರನ್ನು ಬಂಧಿಸಲಾಯಿತು ಮತ್ತು ಸಂಘಟನೆಯನ್ನು ನಿಷೇಧಿಸಲಾಯಿತು. ಫೆಬ್ರವರಿ 4 ರಂದು ಹೊರಡಿಸಿದ ಪ್ರಕಟಣೆಯಲ್ಲಿ ಸರ್ಕಾರವು ಹೀಗೆ ವಿವರಿಸಿದೆ.
“.. ನಮ್ಮ ದೇಶದಲ್ಲಿ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು.. ಕೆಲಸ ಮಾಡುತ್ತಿರುವ, ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯಲು.. ಭಾರತ ಸರ್ಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಾನೂನುಬಾಹಿರ ಎಂದು ಘೋಷಿಸಲು ನಿರ್ಧರಿಸಿದೆ. ದೇಶದ ಹಲವಾರು ಭಾಗಗಳಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲವು ಸದಸ್ಯರು ಬೆಂಕಿ ಹಚ್ಚುವಿಕೆ, ದರೋಡೆ, ಡಕಾಯಿತ ಮತ್ತು ಕೊಲೆಗಳನ್ನು ಒಳಗೊಂಡ ಹಿಂಸಾಚಾರದ ಕೃತ್ಯಗಳಲ್ಲಿ ತೊಡಗಿದ್ದಾರೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ. ಅವರು ಭಯೋತ್ಪಾದಕ ವಿಧಾನಗಳನ್ನು ನಡೆಸುವಂತೆ ಮತ್ತು ಗುಂಡು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಂತೆ… ಜನರನ್ನು ಪ್ರೇರೇಪಿಸುವ. ಕರಪತ್ರಗಳನ್ನು ವಿತರಣೆ ಮಾಡುತ್ತಿರುವುದು ಕಂಡುಬಂದಿದೆ. ಸಂಘದ ಚಟುವಟಿಕೆಗಳಿಂದ ಪ್ರಾಯೋಜಿತ ಮತ್ತು ಪ್ರೇರಿತವಾದ ಹಿಂಸಾಚಾರದ ಆರಾಧನೆಯು ಅನೇಕ ಜನರನ್ನು ಬಲಿ ತೆಗೆದುಕೊಂಡಿದೆ. ಇತ್ತೀಚಿನ ಮತ್ತು ಅತ್ಯಂತ ಅಮೂಲ್ಯವಾದ ಬಲಿ ಗಾಂಧೀಜಿಯೇ. ಇಂತಹ ಸನ್ನಿವೇಶಗಳಲ್ಲಿ ಹಿಂಸಾಚಾರದ ಮರು-ಪ್ರತ್ಯಕ್ಷತೆಯನ್ನು ನಿಗ್ರಹಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ಕಾರದ ಬದ್ಧ ಕರ್ತವ್ಯವಾಗಿದೆ ಮತ್ತು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ; ಸರ್ಕಾರ ಸಂಘವನ್ನು ಕಾನೂನು ಬಾಹಿರ ಸಂಘ ಎಂದು ಘೋಷಿಸಿದೆ.
ಆರ್‌ಎಸ್‌ಎಸ್ ಇಂದು ತಮ್ಮವರೆಂದು ಹೇಳಿಕೊಳ್ಳುವ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆ ವರ್ಷದ ಸೆಪ್ಟೆಂಬರ್‌ನಲ್ಲಿ ಗೋಲ್ವಾಲ್ಕರ್ ಗೆ ಪತ್ರ ಬರೆದು ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಕಾರಣಗಳನ್ನು ವಿವರಿಸಿದ್ದರು. ಅವರು ಹೀಗೆ ಹೇಳಿದ್ದಾರೆ: “ಆರ್‌ಎಸ್‌ಎಸ್‌ನ ಭಾಷಣಗಳು ಕೋಮು ವಿಷದಿಂದ ತುಂಬಿವೆ, ಈ.. ವಿಷದ ಅಂತಿಮ ಪರಿಣಾಮವಾಗಿ ದೇಶವು ಗಾಂಧೀಜಿಯವರ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳಬೇಕಾಯಿತು. ಆರ್‌ಎಸ್‌ಎಸ್ ಪರವಾಗಿ ಸರ್ಕಾರ ಅಥವಾ ಜನರ ಸಹಾನುಭೂತಿಯ ಒಂದು ತುಣುಕೂ ಉಳಿದಿಲ್ಲ. ವಾಸ್ತವವಾಗಿ ವಿರೋಧ ಬೆಳೆದಿದೆ.. ಗಾಂಧೀಜಿಯವರ ಮರಣದ ನಂತರ ಆರ್‌ಎಸ್‌ಎಸ್‌ನವರು ಸಂತೋಷ ವ್ಯಕ್ತಪಡಿಸಿದಾಗ ಮತ್ತು ಸಿಹಿ ಹಂಚಿದಾಗ ವಿರೋಧವು ಮತ್ತಷ್ಟು ತೀಕ್ಷ್ಣವಾಗಿದೆ.. ಈ ಪರಿಸ್ಥಿತಿಗಳಲ್ಲಿ ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಯಿತು.” 1948ರ ಜುಲೈನಲ್ಲಿ, ಪಟೇಲ್, ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಇದೇ ರೀತಿಯ ಪತ್ರ ಬರೆದರು.
ಮನುಸ್ಮೃತಿ ಆರ್‌ಎಸ್‌ಎಸ್ ನ ಹೃದಯವನ್ನು ಆಳುತ್ತಿದೆ
ನಾಲ್ಕು ತಿಂಗಳ ನಂತರ, ಕರಡು ಸಮಿತಿಯು ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ತನ್ನ ಪತ್ರಿಕೆ ಆರ್ಗನೈಸರ್ ನಲ್ಲಿ ನವೆಂಬರ್ 30, 1949 ರಂದು ಪ್ರಕಟವಾದ ಲೇಖನದಲ್ಲಿ ಆರ್‌ಎಸ್‌ಎಸ್ ಸಂವಿಧಾನಕ್ಕೆ ಆಕ್ಷೇಪಣೆಯನ್ನು ಎತ್ತುತ್ತಾ ಹೀಗೆ ಹೇಳಿತು:
“ಆದರೆ ನಮ್ಮ ಸಂವಿಧಾನದಲ್ಲಿ, ಪ್ರಾಚೀನ ಭಾರತದಲ್ಲಿನ ಆ ವಿಶಿಷ್ಟವಾದ ಸಂವಿಧಾನಾತ್ಮಕ ಅಭಿವೃದ್ಧಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ… ಇಂದಿಗೂ ಮನುಸ್ಮೃತಿಯಲ್ಲಿ ನಮೂದಿಸಿದ ಮನುವಿನ ಕಾನೂನುಗಳು ಪ್ರಪಂಚದ ಮೆಚ್ಚುಗೆಯನ್ನು ಪಡೆಯುತ್ತಿವೆ. ಮತ್ತು ಸ್ವಯಂಪ್ರೇರಿತ ವಿಧೇಯತೆ ಮತ್ತು ಅನುಸರಣೆಯನ್ನು ಹೊರಹೊಮ್ಮಿಸುತ್ತಿವೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅರ್ಥವಾಗುತ್ತಿಲ್ಲ.”
ಹೀಗೆ ಇದು ಆರ್‌ಎಸ್‌ಎಸ್ ನ ಪ್ರತಿಗಾಮಿ ಮನಸ್ಥಿತಿಯ ಒಳನೋಟವನ್ನು ನೀಡುತ್ತದೆ. ಅದು ಮನುಸ್ಮೃತಿಯನ್ನು ಸಂವಿಧಾನಕ್ಕಿಂತ ಶ್ರೇಷ್ಠವೆಂದು ಪರಿಗಣಿಸುತ್ತದೆ. ಮನುಸ್ಮೃತಿಯು ಸುಪ್ರಸಿದ್ಧವಾಗಿರುವ ಕಾನೂನು ಸಂಹಿತೆಯಾಗಿದೆ, ಅದರ ಪ್ರಕಾರ, “ಬ್ರಾಹ್ಮಣರ ಸೇವೆಯು ಮಾತ್ರ ಶೂದ್ರರಿಗೆ ಅತ್ಯುತ್ತಮ ಉದ್ಯೋಗವೆಂದು ಘೋಷಿಸಲಾಗಿದೆ; ಯಾಕಂದರೆ ಇದನ್ನು ಹೊರತುಪಡಿಸಿ ಅವನು ಏನು ಮಾಡಿದರೂ ಅದು ಅವನಿಗೆ ಫಲ ನೀಡುವುದಿಲ್ಲ. ಇದು ಶೂದ್ರನು ಸಂಪತ್ತನ್ನು ಗಳಿಸುವುದನ್ನು ನಿಷೇಧಿಸುತ್ತದೆ. ಅವನು ಎಷ್ಟೇ ಸಮರ್ಥನಾಗಿದ್ದರೂ; ಸಂಪತ್ತು ಗಳಿಸಿದ ಶೂದ್ರನು ಬ್ರಾಹ್ಮಣರಿಗೆ ನೋವು ಕೊಡುತ್ತಾನೆ”.
ಸಂವಿಧಾನವನ್ನು ಅಧಿಕೃತವಾಗಿ ದೇಶವು ಅಂಗೀಕರಿಸಿದ ನಂತರವೂ ಸಂವಿಧಾನದ ಬದಲಿಗೆ ಮನುಸ್ಮೃತಿಯನ್ನು ಜಾರಿಗೆ ತರುವ ಆರ್‌ಎಸ್‌ಎಸ್‌ನ ಅಭಿಯಾನವು ಮುಂದಿನ ವರ್ಷವೂ ಮುಂದುವರೆಯಿತು. “ಮನು ನಮ್ಮ ಹೃದಯವನ್ನು ಆಳುತ್ತಾನೆ” ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ಆರ್‌ಎಸ್‌ಎಸ್ ಧಿಕ್ಕಾರದ ಧ್ವನಿಯಲ್ಲಿ ಇದನ್ನೇ ಪ್ರತಿಪಾದಿಸುತ್ತದೆ.
ಪ್ರಸ್ತುತ ರಾಜಕೀಯ ವ್ಯವಸ್ಥೆ: ನಾಚಿಕೆಯಿಲ್ಲದ ದೇಶದ್ರೋಹಿಗಳ ಭಂಡಾರ
ಸ್ವಾತಂತ್ರ್ಯದ ಈ 75 ನೇ ವರ್ಷದಲ್ಲಿ, ಈ ಫ್ಯಾಸಿಸ್ಟ್ ಆರ್‌ಎಸ್‌ಎಸ್‌ನ ರಿಮೋಟ್ ಕಂಟ್ರೋಲ್‌ನಲ್ಲಿ ನಡೆಯುತ್ತಿರುವ ಈಗಿನ ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರವು ಕೇಂದ್ರ ಮತ್ತು ಹಲವಾರು ರಾಜ್ಯಗಳಲ್ಲಿ ಆಳುತ್ತಿದೆ. ಈ ವರ್ಷವನ್ನು ಅಮೃತ್ ವರ್ಷ್ ಎಂದು ಹೆಸರಿಸಲಾಗಿದ್ದರೂ ಸಹ, ಭಾರತವನ್ನು ರಾಷ್ಟ್ರಪ್ರಭುತ್ವವಾಗಿ ಕಟ್ಟಿದ ಇದುವರೆಗಿನ ಕಲ್ಪನೆಯನ್ನು ರದ್ದುಗೊಳಿಸಲು ಅವರು ನಡೆಸುತ್ತಿರುವ ಸಿನಿಕತನದ ಹತಾಶ ಕುತಂತ್ರಗಳು ಪ್ರತಿಯೊಂದು ರೀತಿಯ ವಿಷ-ಪ್ರಾಶನಕ್ಕೆ ಸಾಕ್ಷಿಯಾಗಿದೆ.
ಪ್ರಸ್ತುತ ವ್ಯವಸ್ಥೆಯ ರಾಜಕೀಯ ಆರ್ಥಶಾಸ್ತ್ರವು ನವ ಉದಾರವಾದಿ ನೀತಿಗಳ ಅಡೆತಡೆಯಿಲ್ಲದ ಮುಂದುವರಿಕೆಯ ಮೂಲಕ ಹೆಚ್ಚುವರಿ ಮೌಲ್ಯವನ್ನು ಸುಲಿಗೆ ಮಾಡಲು ಮತ್ತು ಬೆರಳೆಣಿಕೆಯಷ್ಟು ಜನರು ಖಾಸಗಿ ಲಾಭಕ್ಕಾಗಿ ರಾಷ್ಟ್ರೀಯ ಸಂಪತ್ತಿನ ಸ್ವಾಧೀನಪಡಿಸಿಕೊಳ್ಳಲು ಅವಕಾಶ ಮಾಡಿ ಕೊಡುತ್ತಿದೆ… ಈ ವಿಚ್ಛಿದ್ರಕಾರಿ ಶಕ್ತಿಗಳಿಂದ ಧರ್ಮ, ಜಾತಿ, ಉಪಜಾತಿ, ಭಾಷೆ ಮತ್ತು ಪ್ರದೇಶದ ಅಸ್ಮಿತೆಗಳನ್ನು ಮುನ್ನೆಲೆಗೆ ತರುವ ಮೂಲಕ, ಒಂದು ಅಸ್ಮಿತೆಯಾಗಿ ವರ್ಗವನ್ನು ನಿರಾಕರಿಸುವ ಆಧುನಿಕೋತ್ತರ ಚಿಂತನೆಯನ್ನು ಮುಂದುವರಿಸಲಾಗುತ್ತಿದೆ. ಆಡಳಿತದಲ್ಲಿ ಕೋಮುವಾದಿ- ಕಾರ್ಪೊರೇಟ್ ನಂಟು ಒಂದು ಕಡೆ ನವ ಉದಾರವಾದವನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ ಮತ್ತು ಇನ್ನೊಂದು ಕಡೆ ವಿಚ್ಛಿದ್ರಕಾರಿ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಿದೆ. ಅವರ ಸ್ಫೂರ್ತಿ ಮತ್ತು ಚಟುವಟಿಕೆಗಳ ಮೂಲ ಭಾರತದ ಸಂವಿಧಾನವಲ್ಲ ಬದಲಾಗಿ, ಎಮ್.ಎಸ್.ಗೋಳ್ವಾಲ್ಕರ್. ಬರೆದ “ನಾವು ಅಥವಾ ನಮ್ಮ ರಾಷ್ಟ್ರವಾದ”ದ ವ್ಯಾಖ್ಯಾನ (ವೀ ಅಂಡ್ ಅವರ್ ನೇಶನ್ ವುಡ್ ಡಿಫೈನ್ಡ್)” (1939) ಮತ್ತು “ಬಂಚ್ ಆಫ್ ಥಾಟ್ಸ್ (1966) ಪುಸ್ತಕಗಳು. ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಜ್ಯದ ಕಲ್ಪನೆಯನ್ನು ಚಿತ್ರಿಸುತ್ತಿದ್ದರೆ, ಎರಡನೆಯದು ಆ ವಿಚಾರಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ ಮತ್ತು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯೂನಿಸ್ಟರನ್ನು ಆಂತರಿಕ ಶತ್ರುಗಳೆಂದು ಘೋಷಿಸುತ್ತದೆ ಮತ್ತು ಏಕೀಕೃತ ದೇಶಕ್ಕಾಗಿ ವಾದಿಸುತ್ತದೆ. ಇದರ ಸಂಪೂರ್ಣ ಹರವು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಆರೆಸ್ಸೆಸ್, ಬಿಜೆಪಿಯ ವಿವಿಧ ಅಂಗಸಂಸ್ಥೆಗಳಿಂದ ಮತ್ತು ಅವರ ಸರ್ಕಾರಗಳಿಂದ ಅನಾವರಣಗೊಂಡಿದೆ.
ಇಂತಹ ವಿಷಪೂರಿತ ವಿಚಾರಗಳು ಮತ್ತು ತತ್ತ್ವಶಾಸ್ತ್ರವನ್ನು ಅಳವಡಿಸಿಕೊಂಡಿರುವ, ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ, ಅದೇ ದ್ರೋಹಿಗಳ ಕುಲದ ಈಗಿನ ಕುಡಿ, ಅತ್ಯಂತ ದುರದೃಷ್ಟವಶಾತ್ ಪ್ರಸ್ತುತ ಸಮಯದಲ್ಲಿ ದೇಶದ ಆಡಳಿತವನ್ನು ಆಕ್ರಮಿಸಿಕೊಂಡಿದೆ. ವಾಸ್ತವವಾಗಿ, ಭಾರತದ ಸಂವಿಧಾನವನ್ನು ಮನುಸ್ಮೃತಿಯಿಂದ ಬದಲಾಯಿಸುವ ಹತಾಶ ಪ್ರಯತ್ನದಲ್ಲಿ ಸ್ವತಂತ್ರ ಭಾರತದ ಏಳುವರೆ ದಶಕಗಳ ಸುದೀರ್ಘ ಅವಧಿಯ ಎಲ್ಲಾ ಸಾಧನೆಗಳಾದ, ಧರ್ಮ, ಜಾತಿ ಅಥವಾ ಪಂಥವನ್ನು ಮೀರಿ ಸಾಧಿಸಿದ ಜನರ ಐಕ್ಯತೆ,, ಸ್ವಾವಲಂಬಿ ಆರ್ಥಿಕತೆ, ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಮತ್ತಿತರ ಎಲ್ಲಾ ಸಾಂವಿಧಾನಿಕ ಮೌಲ್ಯಗಳ ವಿರುದ್ಧ ವಿನಾಶಕಾರಿ ಯುದ್ಧವನ್ನು ಘೋಷಿಸಿದೆ. “ಆಜಾದಿ ಕಾ ಅಮೃತ್ ಮಹೋತ್ಸವ” ಎಂದು ಕರೆಯಲ್ಪಡುವ ಅವರು ಠಂಕಿಸಿದ ಬಿಲ್ಲೆ ಜನರನ್ನು ಮೋಸಗೊಳಿಸುವ ಸಂಶಯಾಸ್ಪದ ಮತ್ತು ಮೋಸಗೊಳಿಸುವ ಚಿಲ್ಲರೆ ಕೆಲಸವಾಗಿದೆ. ಈ ಸಂಶಯಾಸ್ಪದ ಬೂಟಾಟಿಕೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಮತ್ತು ತಡೆದು ನಿಲ್ಲಿಸಬೇಕಿದೆ.
ಕಾರ್ಮಿಕ ವರ್ಗ ತನ್ನ ಪಾತ್ರವನ್ನು ನಿರ್ವಹಿಸಬೇಕು
ದೇಶದ ಕಾರ್ಮಿಕ ವರ್ಗವು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ತನ್ನ ಐತಿಹಾಸಿಕ ಪಾತ್ರವನ್ನು ವಹಿಸಿದೆ ಮಾತ್ರವಲ್ಲದೆ ತನ್ನ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವುದರೊಂದಿಗೆ ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಾಗಿ ಹೋರಾಡುತ್ತಾ, ಸಾಮ್ರಾಜ್ಯಶಾಹಿ ವಿರೋಧಿ ದ್ವಜವನ್ನು ಉನ್ನತ ಮಟ್ಟದಲ್ಲಿ ಎತ್ತಿ ಹಿಡಿದಿದೆ. ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ತಮ್ಮ ನಿಷ್ಠೆಯನ್ನು ಘೋಷಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಶಕ್ತಿಗಳೇ ಈ ಮೂಲಭೂತ ಮೌಲ್ಯಗಳಾದ ಏಕತೆ, ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗಂಭೀರ ಸವಾಲುಗಳನ್ನು ಒಡ್ಡುತ್ತಿರುವ ಹಿನ್ನೆಲೆಯಲ್ಲಿ, ತನ್ನ ಐತಿಹಾಸಿಕ ಜವಾಬ್ದಾರಿಯನ್ನು ನಿರ್ವಹಿಸಲು ಮತ್ತೆ ಮುಂಚೂಣಿಗೆ ಬರಬೇಕಾದದ್ದು ಕಾರ್ಮಿಕ ವರ್ಗದ ಜವಾಬ್ದಾರಿಯಾಗಿದೆ.
“ರಾಷ್ಟ್ರವನ್ನು ಉಳಿಸಿ; ಜನರನ್ನು ರಕ್ಷಿಸಿ”. ಘೋಷಣೆಯೊಂದಿಗೆ, ಮಾರ್ಚ್ 28-29ರಂದು ಎರಡು ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಮೂಲಕ ಕಾರ್ಮಿಕ ವರ್ಗ ತಾನು ಇದಕ್ಕೆ ಸಿದ್ಧವೆಂದು ಘೋಷಿಸಿದೆ. ಶ್ರಮಜೀವಿಗಳು, ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು ಮತ್ತು ಸಮಾಜದ ಎಲ್ಲಾ ಪ್ರಗತಿಪರ ವರ್ಗಗಳ ಎಲ್ಲಾ ವಿಭಾಗಗಳನ್ನು ಒಗ್ಗೂಡಿಸಿ ಈ ಹೋರಾಟವನ್ನು ಮತ್ತಷ್ಟು ಬಲಪಡಿಸುವ, ವಿಸ್ತರಿಸುವ ಮತ್ತು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅಗತ್ಯವಿದೆ. ಈ ದೇಶದ ಸಂಪತ್ತನ್ನು ಉತ್ಪಾದಿಸುವ ಕಾರ್ಮಿಕರು, ರೈತರು ಮತ್ತು ಶ್ರಮಜೀವಿಗಳ ಹಿತಾಸಕ್ತಿಗಳಿಗೆ ದ್ರೋಹ ಬಗೆಯುತ್ತಿರುವ ಮತ್ತು ವಿದೇಶಿ ಕಾರ್ಪೊರೇಟ್ ದಣಿಗಳಿಗೆ ಸೇವೆ ಸಲ್ಲಿಸುತ್ತಿರುವ ಈ ಸ್ವಯಂ ಘೋಷಿತ “ದೇಶಭಕ್ತರು” ಮತ್ತು ದೇಶದ್ರೋಹಿಗಳನ್ನು ಬಯಲುಗೊಳಿಸಬೇಕು.
“ತಲುಪದವರನ್ನು ತಲುಪಿ – ವರ್ಗವನ್ನು ಏಕೀಕರಿಸಿ – ನವ ಉದಾರವಾದಿ ನೀತಿಗಳನ್ನು ಮತ್ತು ವಿಭಜನೆಯ ಕುತಂತ್ರಗಳನ್ನು ಸೋಲಿಸಿ” ಎನ್ನುವ ಸಿಐಟಿಯು ಕರೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ ಮತ್ತು ಹೋರಾಟಗಳನ್ನು ನಿರಾಕರಣೆ ಮತ್ತು ಪ್ರತಿರೋಧದ ಮಟ್ಟಕ್ಕೆ ಏರಿಸುವ ಮೂಲಕ ಮಾತ್ರ ಇದನ್ನು ಸಾಧಿಸಬಹುದು.
ನಮ್ಮ ಸ್ವಾತಂತ್ರ್ಯದ ಈ 75ನೇ ವರ್ಷದಲ್ಲಿ ಭವಿಷ್ಯದ ಪೀಳಿಗೆಗೆ ಉತ್ತಮ ಜೀವನಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ನಮ್ಮ ಪೂರ್ವಜರ ಕನಸುಗಳನ್ನು ನನಸಾಗಿಸುವ ಮಹತ್ತರ ಕಾರ್ಯಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ.
ಕೋಲ್ಕತ್ತಾ 1946ರಲ್ಲಿ `ಸೈಮನ್ ಹಿಂತಿರುಗಿ’ ಆಂದೋಲನ
ಒಡೆದದ್ದು ಮೂರು ಗುಮ್ಮಟಗಳನ್ನಲ್ಲ, ಸಂವಿಧಾನದ ಆಧಾರ ಸ್ತಂಬಗಳನ್ನು