ಟಿ.ಸುರೇಂದ್ರರಾವ್
ಇಂದಿನ ಪ್ರಮುಖ ಎಲ್ಲಾ ದಿನಪತ್ರಿಕೆಗಳ ಮುಖಪುಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟಗಳನ್ನು ಪ್ರಕಟಿಸಿದ ಕರ್ನಾಟಕ ವಾರ್ತೆ ಅವರ ತ್ಯಾಗ ಬಲಿದಾನಗಳನ್ನು ನೆನೆದಿದೆ.
ಆ ಪಟಗಳಲ್ಲಿ ಇರುವ ಒಬ್ಬ ವ್ಯಕ್ತಿ ಅಂಡಮಾನ್ ಜೈಲಿನಿಂದ ಬಿಡುಗಡೆ ಬೇಡಿ ನಾಲ್ಕಾರು ಪತ್ರಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಬರೆದಿದ್ದ. “ತನ್ನ ಬಿಡುಗಡೆಯಾದರೆ ತಾನೂ ಹಾಗೂ ತನ್ನ ಅನುಯಾಯಿಗಳು ಇನ್ನೆಂದೂ ಬ್ರಿಟಿಷ್ ಸರ್ಕಾರದ ವಿರುದ್ಧ ಚಟುವಟಿಕೆ ನಡೆಸುವುದಿಲ್ಲ ಮಾತ್ರವಲ್ಲ, ಬ್ರಿಟಿಷ್ ಸರ್ಕಾರದೊಂದಿಗೆ ಸಹಕರಿಸುವುದಾಗಿ ಮುಚ್ಚಳಿಕೆ ಬರೆದುಕೊಡುವುದಾಗಿ” ಹೇಳಿದ ವ್ಯಕ್ತಿಯೇ ವಿನಾಯಕ್ ದಾಮೋದರ್ ಸಾವರ್ಕರ್.
ವಿ ಡಿ ಸಾವರ್ಕರ್ ಬಿಡುಗಡೆಯಾದ ನಂತರ ಸಂಪೂರ್ಣವಾಗಿ ಭಾರತದ ಸ್ವಾತಂತ್ರ್ಯ ಚಳುವಳಿಗೆ ವಿರುದ್ಧವಾಗಿ ಬ್ರಿಟಿಷ್ ಸರ್ಕಾರದೊಂದಿಗೆ ಸೇರಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದ್ರೋಹ ಬಗೆದರು ಕೂಡ. ಅಷ್ಟೇ ಅಲ್ಲ ಬ್ರಿಟಿಷ್ ಸರ್ಕಾರದಿಂದ ಪ್ರತಿ ತಿಂಗಳೂ ರೂ.60/- ನಿವೃತ್ತಿ ವೇತನವನ್ನೂ ಪಡೆದ ವ್ಯಕ್ತಿ ಆತ. ಆ ಮೊತ್ತ ತನಗೆ ಸಾಲುತ್ತಿಲ್ಲ, ಅದನ್ನು ಹೆಚ್ಚಿಸಬೇಕೆಂದು ಪತ್ರವನ್ನೂ ಬರೆದ ದೇಶದ್ರೋಹಿ ಆತ.
ಅಂತಹ ದೇಶದ್ರೋಹಿ ವ್ಯಕ್ತಿಯನ್ನು ಸ್ವಾತಂತ್ರ್ಯ ಹೊರಾಟಗಾರ ಎಂದು ಇತರ ನಿಜವಾದ ಹೋರಾಟಗಾರರೊಂದಿಗೆ ಸರಿಸಮಾನವಾಗಿ ತೋರಿಸಿರುವುದು ಸ್ವಾತಂತ್ರ್ಯ ಚಳುವಳಿ ಮತ್ತು ತ್ಯಾಗ ಬಲಿದಾನ ಮಾಡಿದ ವೀರರಿಗೆ ಮಾಡುವ ಅವಮಾನವಾಗುತ್ತದೆ.
ಕರ್ನಾಟಕ ಸರ್ಕಾರವು ಆ ವ್ಯಕ್ತಿಯ ಪಟವನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ತೆಗೆದುಹಾಕಬೇಕು ಮತ್ತು ಅಂತಹ ಪ್ರಮಾದ ಎಸಗಿದ್ದಕ್ಕೆ ರಾಜ್ಯದ ಹಾಗೂ ದೇಶದ ಜನರ ಕ್ಷಮೆ ಕೇಳಬೇಕು.