ಚಳ್ಳಕೆರೆ: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಂತೆ ಅಧ್ಯಕ್ಷ ಉಪಾಧ್ಯಕ್ಷ ಅಧ್ಯಕ್ಷೆ ಗದ್ದುಗೆಯ ಮುಸಿಕಿನ ಜಗಳದಲ್ಲಿ ಘನ ತ್ಯಾಜ್ಯ ಘಟಕ ಕಾಮಗಾರಿ ಸುಮಾರು ಒಂದು ವರ್ಷದಿಂದ ಸ್ಥಗಿತಗೊಂಡಿದೆ.
ಹೌದು, ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಸರಕಾರಿ ಗೋಮಾಳದಲ್ಲಿ ನರೇಗಾ ಅಡಿ ರೂ.10 ಲಕ್ಷ ಹಾಗೂ 15ನೇ ಹಣಕಾಸು ಯೋಜನೆಯಡಿಯಲ್ಲಿ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿದೆ. ಇದರ ಅಡಿಯಲ್ಲಿ ಗ್ರಾಮ ಪಂಚಾಯತಿಗಳಿಗೆ ಒಂದು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಗೆ ಸರಕಾರಗಳು ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ ಆದರೆ ಅಧ್ಯಕ್ಷೆ, ಉಪಾಧ್ಯಕ್ಷೆ ಇಬ್ಬರು ಜತೆಗೂಡಿ ಕಾಮಗಾರಿ ಪ್ರಾರಂಭ ಮಾಡುತ್ತಾರೆ.
ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಒಬ್ಬರಿಗೊಬ್ಬರಿಗೆ ಮಾತುಕತೆಯಿಲ್ಲದೆ ಇರುವುದರಿಂದ ಘನತ್ಯಾಜ್ಯ ಘಟಕ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ನರೇಗದಲ್ಲಿ 1. 60 ಲಕ್ಷ ರೂ, 15ನೇ ಹಣಕಾಸು ಯೋಜನೆಯಡಿಯಲ್ಲಿ 3 ಲಕ್ಷ ರೂ ಕಾಮಗಾರಿ ಬಿಲ್ ಪಡೆದಿದ್ದು. ಗ್ರಾ.ಪಂ. ಸದಸ್ಯರಲ್ಲಿ ಹೊಂದಾಣಿಗೆ ಇಲ್ಲದ ಕಾರಣ ಗ್ರಾಮ ಅಭಿವೃದ್ಧಿಗೆ ಕುಂಠಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗ್ರಾ.ಪಂ. ಕಾಮಗಾರಿಗೂ ಕಮೀಷನ್
ಗ್ರಾಮ ಪಂಚಾಯತ್ ವತಿಯಿಂದ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿಯಲ್ಲಿ 3 ಲಕ್ಷ ರೂ ಸಾಮಾಗ್ರಿ ಬಿಲ್ ನಲ್ಲಿ ಶೇ. 38ರಷ್ಟು ಪಡೆದಿರುವುದರಿಂದ ಇಷ್ಟೊಂದು ದೊಡ್ಡ ಮೊತ್ತದ ಕಮೀಷನ್ ನೀಡಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಗ್ರಾ.ಪಂ. ಕಾಮಗಾರಿ ಅಧ್ಯಕ್ಷ ಉಪಾಧ್ಯಕ್ಷೆ ನಿರ್ಮಿಸುವ ಕಾಮಗಾರಿಗೆ ಪರ್ಸೆಂಟೇಜ್ ಪಡೆದಿರುವುದು ಎಷ್ಟು ಸರಿ ಎಂಬುದು ಸಹ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಎರಡ ಬದಲು ಒಂದು ಕಸದ ಬುಟ್ಟಿ
ಗ್ರಾಮಗಳು ಸ್ವಚ್ಛತೆಯ ಜೊತಗೆ ಆರೋಗ್ಯ ರಕ್ಷಣೆ ಮಾಡುವ ಉದ್ದೇಶದಿಂದ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾ.ಪಂ.ಗಳಿಂದ ಪ್ರತಿ ಮನೆಗಳಿಗೆ ಎರಡರಂತೆ ಹಸಿ ಹಾಗೂ ಒಣ ಕಸ ವಿಂಗಡನೆಗೆ ಎರಡು ಕಸದ ಬುಟ್ಟಿಗಳನ್ನು ನೀಡಬೇಕು. ಆದರೆ ಒಂದರಲ್ಲಿ ಒಣಗಿದ ಕಸ ಹಾಗೂ ಇನ್ನೊಂದರಲ್ಲಿ ಹಸಿ ಕಸ ಹಾಕಬೇಕು. ಇದನ್ನು ಕಸದ ವಾಹನ ಬಂದಾಗ ಅದರಲ್ಲಿ ಹಾಕಬೇಕು ಎಂಬ ನಿಯಮವಿದೆ. ಗೋಪನಹಳ್ಳಿ ವ್ಯಾಪ್ತಿಯಲ್ಲಿ ಎರಡು ಕಸದ ಬುಟ್ಟಿ ಬದಲಾಗಿ ಒಂದನ್ನು ಮಾತ್ರ ವಿತರಣೆ ಮಾಡಲಾಗಿದೆ ಎನ್ನಲಾಗಿದೆ.
ಕಸದ ವಾಹನ ಮೂಲೆ ಗುಂಪು
ಮನೆ ಮನೆಗೆ ಹೋಗಿ ಕಸ ಸಂಗ್ರಹಣೆಯ ವಾಹನ ಸ್ವಚ್ಚತೆಯೊಂದಿಗೆ ಕಸ ಸಂಗ್ರಹಣೆ ಮಾಡುವ ಬದಲು ಸುಮಾರು 8 ತಿಂಗಳಿಂದ ಊರ ಹೊರಗಿನ ಜಮೀನೊಂದರ ರೊಬ್ಬದಲ್ಲಿ ನಿಲ್ಲಿಸಿರುವುದರಿಂದ ಬಿಳುವ ಮಳೆಗೆ ಕಸದ ವಾಹನಕ್ಕೆ ರಕ್ಷಣೆ ಇಲ್ಲದಂತಾಗಿ ಕಸ ಸಂಗ್ರಹಣೆ ಮುನ್ನವೇ ತುಕ್ಕು ಹಿಡಿಯುವ ಸಾಧ್ಯತೆ ಇದೆ.
ಕಸದ ಸಂಗ್ರಹಣೆ ವಾಹನ ಹಾಗೂ ಕಸದ ಬುಟ್ಟಿ, ಮತ್ತಿತರ ಪರಿಕರಗಳನ್ನು ಖರೀದಿ ಮಾಡಲು ಸರಕಾರ ಅನುನಾನ ಬಿಡುಗಡೆ ಮಾಡಿದ್ದರೂ ಸಹ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಅನುದಾನದಲ್ಲಿ ನಿರ್ಮಿಸಿದ ಘನ ತ್ಯಾಜ್ಯ ಘಟಕ, ಕಸ ಸಂಗ್ರಹಣೆ ವಾಹನ ಸಾರ್ವಜನಿಕರ ಉಪಯೋಗಕ್ಕಿಲ್ಲದೆ ಇರುವುದು ವಿಪರ್ಯಾಸವಾಗಿದೆ.
ಕಸದ ರಾಶಿಗಳು
ಗ್ರಾಮದ ಮುಖ್ಯರಸ್ತೆಗಳಲ್ಲಿ ಕಸದ ರಾಶಿಗಳು, ಮದ್ಯ ಸೇವನೆಯ ಪ್ಯಾಕೇಟುಗಳ ರಾಶಿಗಳನ್ನು ಕಾಣಬಹುದು. ಪ್ರತಿನಿತ್ಯ ಸ್ವಚ್ಛತೆ ಮಾಡುವುದೇ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ದೊಡ್ಡ ತಲೆನೋವಾಗಿದೆ. ಯಾವಾಗ ಘನ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭವಾಗುತ್ತದೆ ಎಂಬುದು ಸಾರ್ವಜನಿಕರು ಮತ್ತು ಗ್ರಾ.ಪಂ. ಸಿಬ್ಬಂದಿಗಳು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಘನ ತ್ಯಾಜ್ಯ ಘಟಕ ಕಾಮಗಾರಿಯನ್ನು ಪೂರ್ಣಗೊಳಿಸುವರೇ ಕಾದು ನೋಡಬೇಕಿದೆ.