ಜನಾಕ್ರೋಶಕ್ಕೆ ಮಣಿದ ಸರ್ಕಾರ: ಶಾಲಾಭಿವೃದ್ಧಿಗೆ 100 ರೂ. ದೇಣಿಗೆ ಸಂಗ್ರಹ ಆದೇಶ ವಾಪಸ್

ಬೆಂಗಳೂರು : ಸರ್ಕಾರಿ ಶಾಲೆಯಲ್ಲಿ ಪೋಷಕರು ಮಾಸಿಕವಾಗಿ 1೦೦ ರೂಪಾಯಿ ವಂತಿಗೆ ನೀಡಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಶನಿವಾರ (ಅ.22) ಸರ್ಕಾರ ವಾಪಸ್‌ ಪಡೆದುಕೊಂಡಿದೆ. ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ, ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಈ ಬಗ್ಗೆ ಶನಿವಾರ ಬೆಳಗ್ಗೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಈ ಆದೇಶಕ್ಕೂ ತಮಗೆ ಮತ್ತೆ ಮುಖ್ಯಮಂತ್ರಿಗೆ ಸಂಬಂಧವೇ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ, ಸರ್ಕಾರದ ನಡೆಗೆ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಆದೇಶವನ್ನು ವಾಪಸ್‌ ಪಡೆದುಕೊಳ್ಳಲಾಗಿದೆ. ಆದೇಶವನ್ನು ವಾಪಸ್‌ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ನೂತನ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸರಕಾರದ ಆದೇಶದ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿತ್ತು, ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ ಮುಖ್ಯಮಂತ್ತಿಗಳಿಗೆ ಪತ್ರ ಬರೆದಿದ್ದರು, AIDSO ಸಂಘಟನೆ, ಪೋಷಕರು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು, ಈ ಹಿನ್ನಲೆಯಲ್ಲಿ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ.

ಸಂವಿಧಾನದ 21 ಎ ವಿಧಿ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಆಯಾ ಸರ್ಕಾರಗಳ ಹೊಣೆ. ಆರ್‌ಟಿಇ ಸೆಕ್ಷನ್‌ 3ರ ಪ್ರಕಾರ 8ನೇ ತರಗತಿಯವರೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಬಹುತೇಕ ಸರ್ಕಾರಿ ಶಾಲೆಗಳು ಈಗಾಗಲೇ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿವೆ. ಪರಿಶಿಷ್ಟರು, ಕೂಲಿ ಕಾರ್ಮಿಕರು, ಬಡವರ ಮಕ್ಕಳಷ್ಟೇ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಇಂತಹ ಆದೇಶ ಹೊರಡಿಸಿದ್ದು ಎಷ್ಟು ಸರಿ? ಮೊದಲೇ ಕಡುಬಡತನದಲ್ಲಿರುವ ಪೋಷಕರು ಸರ್ಕಾರದ ಹಣವಸೂಲಿ ನೀತಿಗೆ ಬೇಸತ್ತು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿದರೆ ಅದಕ್ಕೆ ಹೊಣೆ ಯಾರು? ಎಂದು ಜನಪರ ಸಂಘಟನೆಗಳು ಸರ್ಕಾರವನ್ನು ಪ್ರಶ್ನಿಸಿದ್ದವು.

 

Donate Janashakthi Media

Leave a Reply

Your email address will not be published. Required fields are marked *