ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು: ಸ್ಪೀಕರ್ ಆದೇಶ ಹಿಂಪಡೆಯಲು ವಿಜಯೇಂದ್ರ ಆಗ್ರಹ

ಬೆಂಗಳೂರು: ವಿಧಾನಸಭೆಯಲ್ಲಿ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿದ ಸ್ಪೀಕರ್ ಯು.ಟಿ. ಖಾದರ್ ಅವರ ನಿರ್ಧಾರವನ್ನು ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಈ ನಿರ್ಧಾರವನ್ನು ಅಸಾಂವಿಧಾನಿಕ, ಏಕಪಕ್ಷೀಯ ಮತ್ತು ಕಾನೂನುಬಾಹಿರ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, “ಸ್ಪೀಕರ್ ನಮ್ಮ ಪಕ್ಷದ 18 ಶಾಸಕರನ್ನು ಅಮಾನತು ಮಾಡಿ, ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ. ಇದು ಖಂಡನೀಯ. ನಮ್ಮ ಶಾಸಕರ ಅಮಾನತು ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

ಇದನ್ನು ಓದಿ:ಹವಾಮಾನ ವೈಪರಿತ್ಯ ನಿರ್ವಹಣೆ ರೈತರಿಗೆ ದೊಡ್ಡ ಸವಾಲು: ಜಿ. ಪರಮೇಶ್ವರ

ಅವರು ಮುಂದುವರೆದು, “ಸ್ಪೀಕರ್ ನಮ್ಮ ಶಾಸಕರ ರಕ್ಷಣೆಗೆ ಬರಬೇಕಿತ್ತು. ಆದರೆ, 6 ತಿಂಗಳು 18 ಜನಪ್ರತಿನಿಧಿಗಳನ್ನು ಅಮಾನತು ಮಾಡಿದ್ದು ಸರಿಯಲ್ಲ. ಅವರು ಶಾಸಕರನ್ನು ಭಯೋತ್ಪಾದಕರಂತೆ, ನಕ್ಸಲರಂತೆ ಕಾಣುತ್ತಿದ್ದಾರೆ. ಇದು ಶಾಸಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕಾರ್ಯ” ಎಂದು ಹೇಳಿದರು.

ವಿಧಾನಸಭೆಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದ ಕುರಿತು ಮಾತನಾಡಿದ ವಿಜಯೇಂದ್ರ, “ಸಚಿವರು 48 ಶಾಸಕರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ ಎಂದು ಹೇಳಿದ್ದರು. ಆದರೆ, ಮುಖ್ಯಮಂತ್ರಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ, 18 ಶಾಸಕರನ್ನು ಅಮಾನತು ಮಾಡಲಾಗಿದೆ. ಇದು ಅನ್ಯಾಯವಾಗಿದೆ” ಎಂದು ಹೇಳಿದರು.

ವಿಜಯೇಂದ್ರ ಅವರು, ಮುಸ್ಲಿಂ ಮೀಸಲಾತಿ ಕುರಿತಂತೆ ಮಾತನಾಡಿ, “ಕಾಮಗಾರಿಯಲ್ಲಿ ಮುಸ್ಲಿಂ ಮೀಸಲಾತಿ ಅಸಾಂವಿಧಾನಿಕ. ಇದನ್ನು ನಾವು ವಿರೋಧಿಸುತ್ತೇವೆ. ಈ ಸಂಬಂಧ ಹೋರಾಟದ ಕುರಿತು ಪಕ್ಷದ ಮುಖಂಡರ ಜೊತೆ ಚರ್ಚಿಸಿದ್ದೇವೆ. ಅತಿ ಶೀಘ್ರದಲ್ಲಿ ಹೋರಾಟದ ರೂಪುರೇಷೆಯನ್ನು ಪ್ರಕಟಿಸುತ್ತೇವೆ. ಜಿಲ್ಲೆಗಳಲ್ಲಿ ಸೋಮವಾರದಿಂದ ಹೋರಾಟ ನಡೆಯಲಿದೆ” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನು ಓದಿ:ರೈಲ್ವೆ ನೇಮಕಾತಿ: 32,438 ಹುದ್ದೆಗಳಿಗೆ 1.08 ಕೋಟಿ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ

Donate Janashakthi Media

Leave a Reply

Your email address will not be published. Required fields are marked *