ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜನಚಳವಳಿಗಳು ಧರಣಿ, ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳುವುದರ ಮೇಲೆ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ಉಂಟಾಗಿರುವ ಪರಿಸ್ಥಿತಿಯ ಕುರಿತು ಚರ್ಚಿಸಲು ಸಮಾನ ಮನಸ್ಕ ಜನಪರ ಸಂಘಟನೆಗಳು ನಗರದಲ್ಲಿ ಸಮಾಲೋಚನಾ ಸಭೆ ನಡೆಸಿದವು. ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳು, ಎಡಪಕ್ಷಗಳ ಪ್ರಮುಖರು ಸಭೆಯಲ್ಲಿ ಭಾಗಿಯಾದರು. ಕಮೀಷನರ್
ಬಿಜೆಪಿ ದುರಾಡಳಿತದ ಎದುರಾಗಿ ಜನಪರ ಸಂಘಟನೆಗಳ ಒಕ್ಕೊರಲ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರದ ಅಡಿಯಲ್ಲಿ ಜನಪರ, ಪ್ರಜಾಪ್ರಭುತ್ವವಾದಿ ಚಳುವಳಿಗಳನ್ನು ಪೊಲೀಸರ ಮೂಲಕ ದಮನ ಮಾಡುವ ಕಾರ್ಯ ಮಂಗಳೂರಿನಲ್ಲಿ ನಡೆಯುತ್ತಿರುವುದು ಆಘಾತಕಾರಿ ಎಂದು ವಿವಿಧ ಸಂಘಟನೆಗಳ ಪ್ರಮುಖರು ಅಭಿಪ್ರಾಯ ಪಟ್ಟರು. ಮಂಗಳೂರಿನಲ್ಲಿ ಈಗಲೂ ಬಿಜೆಪಿ ಆಡಳಿತವೇ ಮುಂದುವರಿದಿದೆ ಪೊಲೀಸ್ ಕಮೀಷನರ್ ಸಂಘಪರಿವಾರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಜನಚಳವಳಿಗಳನ್ನು ಹತ್ತಿಕ್ಕುವುದು, ಅನಗತ್ಯ ಎಫ್ಐಆರ್ ದಾಖಲಿಸುವುದು, ಕೋಮುವಾದಿ ಸಂಘಟನೆಗಳಿಗೆ, ಜುಗಾರಿ, ಗ್ಯಾಂಬ್ಲಿಂಗ್, ಅಕ್ರಮ ಮರಳುಗಾರಿಕೆ ದಂಧೆಗಳಿಗೆ ಮುಕ್ತ ಅವಕಾಶ ಒದಗಿಸಿರುವುದು ಒಪ್ಪಲು ಸಾಧ್ಯವಿಲ್ಲ. ಕೋಮುವಾದಿ ಮನಸ್ಥಿತಿಯ ಸರ್ವಾಧಿಕಾರಿ ಧೋರಣೆಯ ಕಮೀಷನರ್ ಅನುಪಮ್ ಅಗ್ರವಾಲ್ ರನ್ನು ರಾಜ್ಯ ಸರಕಾರ ಅಮಾನತು ಮಾಡಲೇಬೇಕು, ಮಂಗಳೂರಿನಲ್ಲಿ ಈ ಹಿಂದಿನಂತೆ ಧರಣಿ, ಪ್ರತಿಭಟನೆಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು, ಆ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಸಭೆ ತೀರ್ಮಾನಿಸಿತು. ಅದರಂತೆ, ಡಿಸೆಂಬರ್ 23 ರ ರಂದು ಮಂಗಳೂರು ಪುರಭವನದ ಸಮೀಪ ಬೃಹತ್ ಧರಣಿ ನಡೆಸುವುದು, ಜನವರಿ ಪ್ರಥಮ ವಾರದಲ್ಲಿ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ಕಮಿಷನರೇಟ್ ಕಚೇರಿ ಚಲೋ ನಡೆಸುವುದು ಎಂದು ಘೋಷಿಸಲಾಯಿತು.
ಜಂಟಿ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಿದ ಕೆಲವು ಹೋರಾಟಗಳು ಮತ್ತು ಬೇಡಿಕೆಗಳ ಕುರಿತು ಮಾಹಿತಿ ನೀಡಿದೆ.
ಇದನ್ನೂ ಓದಿ : ಮಂಗಳೂರು ಪೋಲೀಸ್ ಕಮಿಷನರ್ ರವರನ್ನು ತಕ್ಷಣವೇ ಅಮಾನತುಗೊಳಿಸಿ: ಭಾರತ ಕಮ್ಯುನಿಸ್ಟ್ ಪಕ್ಷ ಮನವಿ
ಬೇಡಿಕೆಗಳು
ಜನವಿರೋಧಿ, ಸರ್ವಾಧಿಕಾರಿ ಧೋರಣೆಯ, ಭ್ರಷ್ಟ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ರನ್ನು ರಾಜ್ಯ ಸರಕಾರ ತಕ್ಷಣವೇ ಅಮಾನತುಗೊಳಿಸಬೇಕು. ದಕ್ಷ, ಪ್ರಾಮಾಣಿಕ, ಜನ ಸ್ನೇಹಿ ಅಧಿಕಾರಿಯನ್ನು ಮಂಗಳೂರು ಪೊಲೀಸ್ ಕಮೀಷನರ್ ಆಗಿ ನೇಮಿಸಬೇಕು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿದಂತೆ ಮಂಗಳೂರಿನಲ್ಲಿ ಈ ಹಿಂದಿನಂತೆ ಧರಣಿ, ಪ್ರತಿಭನೆಗಳಿಗೆ ಅವಕಾಶ ಒದಗಿಸಬೇಕು. ಅನಗತ್ಯ ನಿರ್ಬಂಧ ಸಲ್ಲದು.
ಪ್ರತಿಭಟನೆಗಳಿಗೆ ಅವಕಾಶ ನಿರಾಕರಣೆ, ಜನಪರ ಸಂಘಟನೆಗಳ ಮೇಲಿನ ಎಫ್ಐರ್ ಗಳಿಂದ ಉಂಟಾಗಿರುವ ಪರಿಸ್ಥಿತಿಯ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜನಪರ ಸಂಘಟನೆಗಳ ಪ್ರತಿನಿಧಿಗಳ ಸಭೆ ಕರೆಯಬೇಕು
ಧರಣಿ, ಪ್ರತಿಭಟನೆ, ಮೆರವಣಿಗೆಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಪಡೆಯುವ ಪ್ರಕ್ರಿಯೆ ಸರಳೀಕರಿಸಬೇಕು. ಕಮೀಷನರೇಟ್ ಕಚೇರಿಗೆ ಅರ್ಜಿಸಲ್ಲಿಸುವ ಬದಲಿಗೆ ಈ ಹಿಂದಿನಂತೆ ಸ್ಥಳೀಯ ಠಾಣೆಗಳಲ್ಲಿ ಅನುಮತಿ ಪಡೆಯುವ ನಿಯಮವನ್ನು ಮರು ಜಾರಿಗೊಳಿಸಬೇಕು.
ಮಾದಕ ದ್ರವ್ಯ, ಜುಗಾರಿ, ಬೆಟ್ಟಿಂಗ್, ಮಸಾಜ್ ಪಾರ್ಲರ್, ವೇಶ್ಯಾವಾಟಿಕೆ, ಅಕ್ರಮ ಮರಳುಗಾರಿಕೆ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ಅನುಪಮ್ ಅಗ್ರವಾಲ್ ಅವಧಿಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು, ಮಂಗಳೂರು ನಗರ ಕ್ರೈಂ ಸಿಟಿ ಎಂಬ ಕುಖ್ಯಾತಿಗೆ ಒಳಗಾಗಿದೆ. ಈ ರೀತಿಯ ಕಾನೂನು ಬಾಹಿರ ದಂಧೆಗಳನ್ನು ತಕ್ಷಣವೇ ನಿಗ್ರಹಿಸಬೇಕು.
ಧರಣಿ, ಪ್ರತಿಭಟನೆಗಳ ಸಂದರ್ಭ ಹಾಕಿರುವ ಅನಗತ್ಯ ಮೊಕದ್ದಮೆಗಳನ್ನು ವಾಪಾಸುಪಡೆಯಬೇಕು
ಹೋರಾಟಗಳು
ಸಹಭಾಗಿ ಸಂಘಟನೆಗಳು ಪ್ರತ್ಯೇಕ ಮಾಧ್ಯಮ ಹೇಳಿಕೆಗಳನ್ನು ಬಿಡುಗಡೆಗೊಳಿಸುವುದು.
ಗ್ರಾಮ, ತಾಲೂಕು ಮಟ್ಟದಲ್ಲಿ ಜಂಟಿ ಪ್ರತಿಭಟನಾ ಸಭೆ, ಖಂಡನಾ ಸಭೆಗಳನ್ನು ನಡೆಸುವುದು.
ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗುವುದು.
ಡಿಸೆಂಬರ್ 23 ರಂದು ಎಲ್ಲಾ ಜನಪರ ಸಂಘಟನೆಗಳನ್ನು ಒಗ್ಗೂಡಿಸಿ ನಗರದಲ್ಲಿ ಸಾಮೂಹಿಕ ಧರಣಿ ನಡೆಸುವುದು
ಜನವರಿ ಪ್ರಥಮ ವಾರದಲ್ಲಿ ಸಾವಿರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಕಮೀಷನರೇಟ್ ಕಚೇರಿ ಚಲೋ ಹೋರಾಟ ಹಮ್ಮಿಕೊಳ್ಳುವುದು.
ಸಮಾಲೋಚನಾ ಸಭೆಯಲ್ಲಿ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಪದಾಧಿಕಾರಿಗಳಾದ ಓಸ್ವಾಲ್ಡ್ ಪ್ರಕಾಶ್ ಪಿಂಟೊ, ಪ್ರೇಮನಾಥ್ ಶೆಟ್ಟಿ, ಸನ್ನಿ ಡಿಸೋಜ, ರಾಜ್ಯ ರೈತ ಸಂಘ (ಕೋಡಿಹಳ್ಳಿ) ಬಣದ ಜಿಲ್ಲಾಧ್ಯಕ್ಷರಾದ ಶ್ರೀಧರ ಶೆಟ್ಟಿ, ಕರ್ನಾಟಕ ರೈತ ಸಂಘದ ಸುರೇಶ್ ಭಟ್, ಪ್ರಾಂತ ರೈತ ಸಂಘದ ಪ್ರಮುಖರಾದ ಕೆ ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ವಿಚಾರವಾದಿ ಸಂಘದ ಅಖಿಲ ಭಾರತ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್, ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಎಂ ದೇವದಾಸ್, ಸದಾಶಿವ ಪಡುಬಿದ್ರೆ, ರಘು ಎಕ್ಕಾರು, ಸರೋಜಿನಿ ಬಂಟ್ವಾಳ, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ ವಾಮಂಜೂರು, ಕೃಷ್ಣಪ್ಪ ಕೊಣಾಜೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೃಷ್ಣ ಇನ್ನಾ, ರವೀಂದ್ರ ವಾಮಂಜೂರು, ಸಿಐಟಿಯು ಜಿಲ್ಲಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬಿ ಎಮ್ ಭಟ್, ಎಐಟಿಯುಸಿಯ ವಿ ಕುಕ್ಯಾನ್, ಕರುಣಾಕರ ಮಾರಿಪಳ್ಳ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಬೀಡಿ ಮಜೂರರ ಸಂಘದ ಪ್ರಮುಖರಾದ ಜಯಂತಿ ಶೆಟ್ಟಿ, ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕ್ಕೊಟು, ಡಿವೈಎಫ್ಐ ಜಿಲ್ಲಾ ಪ್ರಮುಖರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ಎಐವೈಎಫ್ ನ ಜಗತ್ ಪಾಲ್ ಕೋಡಿಕಲ್, ಜನವಾದಿ ಮಹಿಳಾ ಸಂಘಟನೆಯ ಭಾರತಿ ಬೋಳಾರ, ಪ್ರಮೀಳಾ ಕಾವೂರು, ಅಸುಂತಾ ಡಿಸೋಜ, ಹಿರಿಯ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಯಶವಂತ ಮರೋಳಿ, ಅಖಿಲ ಭಾರತ ವಕೀಲರ ಸಂಘದ ಚರಣ್ ಶೆಟ್ಟಿ, ನಿತಿನ್ ಕುತ್ತಾರ್, ಶಾಲಿನಿ, ಸಾಮರಸ್ಯ ಮಂಗಳೂರು ಇದರ ಮಂಜುಳಾ ನಾಯಕ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮದರ್ ಥೆರೆಸಾ ವಿಚಾರ ವೇದಿಕೆಯ ಬಿ ಎನ್ ದೇವಾಡಿಗ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮನೋಜ್ ವಾಮಂಜೂರು, ಶ್ಯಾಮಸುಂದರ್ ರಾವ್, ಅಶ್ರಫ್ ಹರೇಕಳ ಸಹಿತ ಪ್ರಮುಖರು ಭಾಗಿಯಾಗಿದ್ದರು.
ಇದನ್ನೂ ನೋಡಿ : ಮಂಗಳೂರು | ನಗರ ಪೊಲೀಸ್ ಕಮೀಷನರ್ ಹಟಾವೋ ಎಂದ ಯುವಜನ ಕಾರ್ಯಕರ್ತರುJanashakthi Media