-ಹರೀಶ್ ಗಂಗಾಧರ
ಹೋದ ತಿಂಗಳು ಚಾರಣಕ್ಕೆಂದು ಕೊಡಚಾದ್ರಿಗೆ ಹೋಗಿದ್ದೆವು. ಅದೊಂದು ಅದ್ಭುತ ಅನುಭವ. ಅಲ್ಲಿನ ಪರ್ವತ ಶ್ರೇಣಿ, ಹಚ್ಚ ಹಸಿರ ಕಾಡು, ತುಂತುರು ಮಳೆ, ನೀಳವಾಗಿ ಧುಮುಕುತ್ತಿದ್ದ ಜಲಪಾತಗಳು, ಹಳದಿ ಬಣ್ಣದ ಕಪ್ಪೆಗಳ, ನೂರಾರು ಬಣ್ಣದ ಚಿಟ್ಟೆಗಳ ಜೀವ ವೈವಿಧ್ಯತೆ, ಎತ್ತರೆತ್ತರಕ್ಕೆ ಹೋದಂತೆ ಸಾಗಿ ಹೋಗುತ್ತಿದ್ದ ಮೋಡಗಳನ್ನು ತೂರುತ್ತಿದ್ದೇವೆಂಬ ಅನುಭವಕ್ಕೆ ನಮ್ಮೆಲ್ಲರ ಮನ ಸೋತಿತ್ತು. ದೇಹ ದಣಿದಿದ್ದರು ಮತ್ತಷ್ಟೂ ಆ ಪ್ರಾಂತ್ಯದ ಸೊಬಗು ಸವಿಯಬೇಕೆಂಬ ಇರಾದೆ ನಮ್ಮದಾಗಿತ್ತು. ಸೇತುವೆ
ಚಾರಣ ಮುಗಿಸಿ ಹೋಂಸ್ಟೇಗೆ ಹಿಂದುರಿಗಿದ ಕೆಲವೇ ಕ್ಷಣಗಳಲ್ಲಿ ಹತ್ತಿರದಲ್ಲೇ ಇದ್ದ ನಿಟ್ಟೂರಿಗೆ ಹೋಗುವ ಎಂದು ನಿರ್ಧರಿಸಿದ್ದೆವು. ಜಳಕ ಮಾಡಿ ನಿಟ್ಟೂರಿಗೆ ಹೋದೆವು. ಚಾರಣದ ನಿಜವಾದ ಆಯಾಸ ಗೊತ್ತಾಗಿದ್ದೇ ಅಲ್ಲಿ. ಅಲ್ಲೇ ಇದ್ದ ಪುಟ್ಟ ಹೋಟೆಲ್ಲಿಗೆ ಲಗ್ಗೆಯಿಟ್ಟ ನಾವು ಎಲ್ಲ ಬಗೆಯ ತಿಂಡಿಯನ್ನು ಗಬಗಬನೆ ತಿಂದೆವು. ಅಷ್ಟರಲ್ಲಿ ಚಾರಣದ ನೇತೃತ್ವ ವಹಿಸಿದ್ದ ಸೂರಿ ಇಲ್ಲೇ ಹತ್ತಿರದಲ್ಲಿ ಮತ್ತೊಂದು ಸಖತ್ ಸ್ಪಾಟ್ ತೋರಿಸುವೆ ಮೇಷ್ಟ್ರೇ ಬನ್ನಿ ಎಂದ. ಹೀಗೆ ಕೆಲ ದೂರ ಕ್ರಮಿಸಿ ನಾವು ಬಂದು ನಿಂತದ್ದು ಹೆಬ್ಬಿಗೆ ತೂಗು ಸೇತುವೆಯ ಬಳಿ!
ಹೆಬ್ಬಿಗೆ ತೂಗು ಸೇತುವೆ ಮೇಲೆ ನಿಂತ ನನಗೆ ರೋಮಾಂಚನವಾಗಲಿಲ್ಲ. ಭಯವಾಯಿತು. ಕೆಳಗೆ ದೊಡ್ಡದಾದ ಕಂದಕ. ವಿಸ್ತಾರವಾದ ಜಲರಾಶಿ. ಗೋರಿಯಿಂದ ಮೇಲೆದ್ದು ನಿಂತ ಭೂತದಂತೆ ಕಾಣುವ ಜೀವರಹಿತ ಬರಿ ಮೈಯ್ಯ ಮರಗಳು, ಆ ದಂಡೆಯ ಮೇಲೆ ಅಸ್ಥಿಪಂಜರದಂತೆ ಬಿದ್ದಿದ್ದ ಬಿಳಿ ಬಣ್ಣದ ದೋಣಿ ನೋಡಿ ನನಗೆ ಇನ್ನಷ್ಟು ದಿಗಿಲಾಗಿತ್ತು. ಸೂರ್ಯ ಮುಳುಗುವುದರಲ್ಲಿದ್ದ. ಕತ್ತಲಲ್ಲಿ ಅಲ್ಲಿ ನಿಲ್ಲುವ ಧೈರ್ಯವಂತು ನನ್ನಲ್ಲಿರಲಿಲ್ಲ. ನಾಲ್ಕು ಕವೆಗಳ ಮೇಲಿರುವ ಅಸ್ತಿರ ಅಟ್ಟಣಿಗೆಯಂತಿದ್ದ ಆ ತೂಗು ಸೇತುವೆ ಮೇಲೆ ಹೆಚ್ಚು ಹೊತ್ತು ನಿಂತಷ್ಟು ಆತಂಕ ಹೆಚ್ಚಾಗುತ್ತಿತ್ತು. ಅಷ್ಟರಲ್ಲಿ ದ್ವಿಚಕ್ರ ವಾಹನವೊಂದು ಸೇತುವೆ ಮೇಲೆ ಹಾದು ಹೋಯಿತು. ತೂಗು ಸೇತುವೆಯ ಮೇಲೆ ಏಕಕಾಲಕ್ಕೆ ಒಂದು ದ್ವಿಚಕ್ರ ವಾಹನ ಹಾದು ಹೋಗಬಹುದಷ್ಟೇ!
ಇದನ್ನೂ ಓದಿ: ವೈಚಾರಿಕತೆಯ ಕೊರತೆ- ಮೌಢ್ಯದ ಪರಾಕಾಷ್ಠೆ
ದ್ವಿಚಕ್ರ ವಾಹನದಲ್ಲಿ ಹೋದವ ಯಾವ ಊರಿನವನು? ಈ ತೂಗು ಸೇತುವೆ ಎಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ ಎಂಬ ಪ್ರಶ್ನೆ ಕಾಡ ತೊಡಗಿದವು. ತಕ್ಷಣ ಫೋನ್ ತೆಗೆದು ಗೂಗಲ್ ಮಾಡಿ ನೋಡುವ ಎಂದರೆ ನೆಟ್ವರ್ಕ್ ಇಲ್ಲದ ಜಾಗವದು. ಉತ್ತರ ತಿಳಿಯುವ ತವಕದಲ್ಲಿಯೇ ನಿಟ್ಟೂರಿಗೆ ವಾಪಸಾದೆವು. ಧರೆಮನೆ, ಹೆಬ್ಬಿಗೆ, ಬರುವೆ, ಜಿಮಲೆ, ತಲಗೋಡು, ಹಡೆಕೈಯಂತಹ ಹಳ್ಳಿಗಳಿಗೆ ಮುಂದುವರೆದು ತುಮರಿಗೂ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಅದಾಗಿತ್ತು.
2012- 13 ರಲ್ಲಿ ಈ ಸೇತುವೆ ನಿರ್ಮಾಣ ಆಗುವವರೆಗೆ ಜನ ತಮ್ಮ ಹಳ್ಳಿ ಸೇರಲು ದೋಣಿಯನ್ನೇ ಅವಲಂಬಿಸಿದ್ದರಂತೆ. ಸೇತುವೆ ಮೇಲೆ ನಡೆದು ಸಾಗಲು ನನ್ನಂತಹವನಿಗೆ ಭಯವಾಗುವಾಗ, ಹಳ್ಳಿಯ ಪುಟ್ಟ ಮಕ್ಕಳು ತಮ್ಮ ಶಾಲಾ ಕಾಲೇಜಿಗೆ ತಲುಪಲು, ದಿನಸಿ ತರಲು, ಆಸ್ಪತ್ರೆಗೆ ತೆರಳಲು ದೋಣಿಯನ್ನೆ ನಂಬಿಕೊಂಡಿದ್ದ ಆ ದಿನಗಳನ್ನು ನೆನೆದು ದಿಗ್ಬ್ರಂಥನಾದೆ.
ಅವರು ದಿನನಿತ್ಯ ಜೀವ ಕೈಯಲ್ಲಿಡಿದು ಶರಾವತಿಯನ್ನು ದಾಟುತ್ತಿದ್ದುದಾದರು ಹೇಗೆ? ಎಂತಹ ನಿಷ್ಣಾತ ಈಜುಗಾರನು ಬದುಕುಳಿಯುವ ಸಾಧ್ಯತೆಯೇ ಇಲ್ಲದ ಆ ಮಹಾ ಕಂದಕವನ್ನು ದಿನನಿತ್ಯ ದಾಟಲು ಮಕ್ಕಳಿಗೆ ಬಿಡುತ್ತಿದ್ದ ಪೋಷಕರ ಗುಂಡಿಗೆ ಎಂತದ್ದು? ಬೇಸೂರಿನಿಂದ ಕರೂರಿಗೆ ವಧು ವರನ ಸಮೇತ ದೋಣಿಯಲ್ಲಿ ಹೊರಟ ಮದುವೆ ದಿಬ್ಬಣದ 20 ಮಂದಿ ಜಲಸಮಾಧಿಯಾಗಿದ್ದು ಹಳ್ಳಿಯ ಜನರಿಗೆ ತಿಳಿದಿಲ್ಲವೇ ಅಥವಾ ವಿಧಿ ಇಲ್ಲದೆ ಇಂತಹ ದುಸ್ಸಾಹಸಕ್ಕೆ ಅನುಮತಿ ನೀಡುತ್ತಿದ್ದಾರೆಯೇ? ಯಾವುದೇ ಸಂಪರ್ಕ, ಸೌಲಭ್ಯಗಳಿಲ್ಲದ ಇಂಥಹ ನಿಗೂಢ ದ್ವೀಪಗಳಿಗೆ ಈ ಜನರು ಬಂದು ನೆಲೆಸಿದ್ದು ಏಕೆಂಬ ಪ್ರಶ್ನೆಗಳು ನನ್ನ ಬೆನ್ನುಹತ್ತಿದವು.
ಇನ್ನಷ್ಟು ಆಳಕ್ಕಿಳಿದು ಮಾಹಿತಿ ಕೆದಕಿದಾಗ ಶರಾವತಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳಿಂದ ದಟ್ಟ ಕಾನನ, ಭೂಮಿ ಮುಳುಗಡೆಯಾಗಿ ಸೃಷ್ಟಿಯಾದ ಕೃತಕ ದ್ವೀಪಗಳಲ್ಲಿ ಸಿಕ್ಕಿಹಾಕಿಕೊಂಡ ಹಳ್ಳಿಗಳಿವು ಎಂದು ತಿಳಿಯಿತು. ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, ಉಪನದಿಗಳನ್ನು ಸೇರಿಕೊಂಡು ಜೋಗದಲ್ಲಿ ಧುಮುಕಿ ಸುಮಾರು 128 ಕಿಲೋಮೀಟರು ಕ್ರಮಿಸಿ ಅರಬ್ಬಿ ಸಮುದ್ರ ಸೇರುವ ಶರಾವತಿಯ ಅಡ್ಡಲಾಗಿ 1945 ಮತ್ತು 1962 ರಲ್ಲಿ ಹಿರೇ ಭಾಸ್ಕರ ಮತ್ತು ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಲಾಯಿತು.
ಶರಾವತಿ ನದಿ ಕಣಿವೆಯಲ್ಲಿ ಮೊದಲ ಅಣೆಕಟ್ಟು ನಿರ್ಮಾಣವಾದದ್ದು ಹಿರೇಭಾಸ್ಕರ. ಈ ಅಣೆಕಟ್ಟು ಪ್ರಾಂತ್ಯದ ಹಲವು ಊರುಗಳನ್ನು ಮುಳುಗಿಸಿತು, ಇದು ಮೊದಲ ಮುಳುಗಡೆ. ಆದ ಮೊದಲ ಮುಳುಗಡೆಯ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಎರಡನೇ ಮುಳುಗಡೆ ಬಂದು ಆವರಿಸಿತ್ತು. 1962 ಹೊತ್ತಿಗೆ ದೈತ್ಯ ಲಿಂಗನಮಕ್ಕಿ ಜಲಾಶಯ ಎದ್ದು ನಿಂತಿತ್ತು. ಎರಡನೇ ಮುಳುಗಡೆಗೆ ಹೋಲಿಸಿದರೆ ಮೊದಲ ಮುಳುಗಡೆ ಚಿಕ್ಕದು. ಎರಡನೇ ಮುಳುಗಡೆ ಊರುಗಳನ್ನು, ಜನವಸತಿ ಪ್ರದೇಶಗಳನ್ನು, ತೋಟ, ಮನೆ, ದೇವಾಲಯ ಬಸದಿಗಳನ್ನು, ಕಾಡು, ಬೆಟ್ಟ ಗುಡ್ಡಗಳನ್ನು ಮುಳುಗಿಸಿತು.
ಮುಳುಗಿದ ಕಾಡಿನ ಪ್ರಾಣಿಗಳು ಎತ್ತರದ ಪ್ರದೇಶಕ್ಕೆ ಬಂದರೆ, ಊರೊಳಗಿನ ಜನರೆಲ್ಲೆ ಊರು ಬಿಟ್ಟರು. ಗಿಜಿ ಗಿಜಿ ಅನ್ನುತ್ತಿದ್ದ ಊರುಗಳೆಲ್ಲಾ ಬಣ ಬಣ ಅನ್ನಲು ಶುರುವಾದವು. ಭೂ ಮಾಲೀಕರು ಸ್ಥಳಾಂತರಗೊಳ್ಳಲು ಸರ್ಕಾರ ವ್ಯವಸ್ಥೆ ಮಾಡಿತು. ಸಣ್ಣ ರೈತರಿಗೂ ಈ ಅವಕಾಶ ಕೆಲವು ಮಿತಿಯಲ್ಲಿ ದೊರೆಯಿತು. ಆದರೆ ಕಾರ್ಮಿಕರು, ದಲಿತರು, ಬಿಡಿ ಉದ್ಯೋಗಿಗಳು, ಗೇಣಿ ರೈತರ ವಿಚಾರದಲ್ಲಿ ನ್ಯಾಯ ಮರೀಚಿಕೆಯಾಯಿತು. ಕೃಷಿ ಕಾರ್ಮಿಕರಿಗೆ, ದಲಿತರಿಗೆ ಪರ್ಯಾಯ ಸೌಲಭ್ಯ ಕಲ್ಪಿಸಿಕೊಡಲಾಗುವುದೆಂದು ಖಾಲಿ ಜಾಗದಲ್ಲಿ ಒಂದು ಸೈಟ್ ತೋರಿಸಿ ಒಪ್ಪಿಕೊಳ್ಳಲು ಒತ್ತಡ ಹೇರಲಾಯಿತು. ಊರು ಹೊಸತು, ನೆಲೆಯೇ ಇಲ್ಲದ ಊರಲ್ಲಿ ಅಂಗೈ ಜಾಗ ನಂಬಿ ಬದುಕುವುದಾದರೂ ಹೇಗೆ? ಹೀಗೆ ಸಂಕಷ್ಟಕ್ಕೆ ಸಿಲುಕಿದ ನಿರಾಶ್ರಿತರ ಗುಂಪು ಮರಳಿ ಈ ಕೃತಕ ದ್ವೀಪವನ್ನು ಸೇರಿಕೊಂಡರು. (ಅಪ್ಪಯ್ಯ ಕೃತಿಯಿಂದ)
ಕರ್ನಾಟಕ ರಾಜ್ಯದ ಒಟ್ಟು ವಿದ್ಯುತ್ ಪೂರೈಕೆಯಲ್ಲಿ ಲಿಂಗನಮಕ್ಕಿಯದೆ ಸಿಂಹಪಾಲು. ಬೆಂಗಳೂರಿನಂತಹ ಬೃಹತ್ ನಗರಗಳ ಮಾಲುಗಳಿಗೆ, ಐಷಾರಾಮಿ ಹೋಟೆಲ್ಲುಗಳಿಗೆ, ಬಹುಮಹಡಿ ಕಟ್ಟಡಗಳಿಗೆ, ಗಿಜಿಗುಡುವ ಬಾರು ಪಬ್ಬುಗಳಿಗೆ, ಕಾರ್ಖಾನೆಗಳಿಗೆ, ಅಂಗಡಿಗಳಿಗೆ ವಿದ್ಯುತ್ ಸರಬರಾಜು ಮಾಡಲು ಶರಾವತಿ ದಂಡೆಯ ಜನ ತ್ಯಾಗ ಮಾಡಿ ಮನೆ ಮಠ ಜಮೀನು ಭಾವನೆಗಳ ನೆಲವನ್ನೇ ಮುಳುಗಿಸಿಕೊಳ್ಳಬೇಕಾಯಿತು.
‘ನಮ್ಮ ದ್ವೀಪ ನೈಸರ್ಗಿಕ ದ್ವೀಪ ಅಲ್ಲ. ಇದು ಸರ್ಕಾರ ನಿರ್ಮಿಸಿದ ಕೃತಕ ದ್ವೀಪ. ರಾಜ್ಯದ ಯೋಜನೆಗೆ ನಾವು ತ್ಯಾಗ ಮಾಡಿ ದ್ವೀಪದಲ್ಲಿ ಇದ್ದೇವೆ. ಅಂದು ಸ್ವಾತಂತ್ರ್ಯ ಹೋರಾಟ ಮಾಡಿದವರನ್ನ ಬ್ರಿಟಿಷ್ ಸರ್ಕಾರ ಅಂಡಮಾನ್ ದ್ವೀಪದಲಿ ಬಂಧಿಸಿಡುತ್ತಿತ್ತು, ಸ್ವತಂತ್ರ ಭಾರತದಲ್ಲಿ ರಾಜ್ಯದ ಅಭಿವೃದ್ಧಿಗೆ ತ್ಯಾಗ ಮಾಡಿದ 20 ಸಾವಿರ ಜನರನ್ನು ಸಮರ್ಪಕ ಸಂಪರ್ಕ ನೀಡದೆ ದ್ವೀಪದಲ್ಲಿ ಏಕೆ ಕೂಡಿ ಹಾಕಿದ್ದೀರಿ..? ಲಾಂಚ್ ಸೇವೆ ಸಂಜೆ 6 ಕ್ಕೆ ಮುಗಿದರೆ ನಾವು ಪೂರ್ಣ ಬಂಧಿಗಳು. ಇದು ಸರ್ಕಾರದ ಮಾನವ ಹಕ್ಕಿನ ಉಲ್ಲಂಘನೆ ಅಲ್ಲವೇ..? ಎಂದು ಕೇಳುವ ಹೋರಾಟಗಾರರ ಮಾತುಗಳಲ್ಲಿ ಅತೀವ ನೋವಿದೆ ಆಕ್ರೋಶವಿದೆ.
ಜನರನ್ನು ಗುಳೆ ಎಬ್ಬಿಸುವುದು, ಒತ್ತಾಯದಿಂದ ಸ್ಥಳಾಂತರಗೊಳಿಸುವುದು, ಉಳ್ಳವರಿಗೆ ಅನುಕೂಲ ಮಾಡಿಕೊಟ್ಟು, ಕೂಲಿ ಕಾರ್ಮಿಕರಿಗೆ, ಬುಡಕಟ್ಟು ಜನಾಂಗದವರಿಗೆ, ದಲಿತರಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ನೀಡದೆ ಅವರು ಹೋರಾಟದ ಹಾದಿ ಹಿಡಿದಾಗ ದೇಶ ದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟುವುದು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭಾರತ ಅನುಸರಿಸಿದ ಅಭಿವೃದ್ಧಿ ಮಾದರಿ ಎಂದರೆ ತಪ್ಪಾಗಲಾರದು. ಜಗತ್ತಿನ ಬಹುಪಾಲು ರಾಷ್ಟ್ರಗಳ ಅಭಿವೃದ್ಧಿ ಮಾದರಿಯು ಇದೇ ಆಗಿದೆ.
ಮರಿಷಿಯ ಎಂಬ ದೇಶವೊಂದು ತನ್ನ ಪಶ್ಚಿಮ ಕರಾವಳಿಯಲ್ಲಿ ಅನಾದಿ ಕಾಲದಿಂದಲೂ ನೆಲೆಸಿದ್ದ ಮೀನುಗಾರರನ್ನು ನಿರ್ಲಕ್ಷಿಸಿ ಜಿಡಿಪಿ ವೃದ್ಧಿಸಿಕೊಳ್ಳುವ ಭರದಲ್ಲಿ ವಿದೇಶಿ ಕಂಪನಿಗಳಿಗೆ ಮೀನು ಹಿಡಿಯುವ ಗುತ್ತಿಗೆ ನೀಡಿತಂತೆ. ಸ್ಥಳೀಯ ಮೀನುಗಾರರಿಗೆ ಮೀನುಗಳು ಸಿಗದಾದಾಗ ಸಹಾರ ಮರುಭೂಮಿಯ ಆಸುಪಾಸಿನ ಸಹೇಲ್ ಪ್ರದೇಶಕ್ಕೆ ಮೀನುಗಾರರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಯಿತಂತೆ. ಬೇಸಾಯ ಕಲಿತ ಮೀನುಗಾರರಿಗೆ ಕೆಲ ಕಾಲ ಎಲ್ಲವೂ ಹಿತವೆನಿಸಿತಂತೆ. ಹಣ ಹರಿದುಬರತೊಡಗಿತಂತೆ. ಆದರೆ ಕೆಲವೇ ವರುಷಗಳಲ್ಲಿ ಮೀನುಗಾರರು ಕಂಡುಕೊಂಡಿದ್ದ ಸಂತೃಪ್ತಿಯ ಜೀವನ ಕರಾಳವಾಗತೊಡಗಿತ್ತು. ಫಲವತ್ತಾಗಿ ಕಾಣುತ್ತಿದ್ದ ಮರುಭೂಮಿಯ ಅಂಚಿನ ಭೂಮಿಯನ್ನು ಮರುಭೂಮಿ ಕಬಳಿಸುತ್ತಿದ್ದುದು ಅವರ ಗಮನಕ್ಕೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಅಭಿವೃದ್ಧಿಯ ಹೆಸರಲ್ಲಿ ಕಸಬು, ಭೂಮಿ ಕಳೆದುಕೊಂಡ ಇಡಿಯ ಸಮುದಾಯ ಭಿಕ್ಷುಕರಾದರು. ದುಃಖ ಮರೆಯಲಾಗದ ಸಮುದಾಯ ಮಾದಕ ವಸ್ತುಗಳಿಗೆ ಶರಣರಾದರು. ಅಭಿವೃದ್ಧಿಯ ನೆಪದಲ್ಲಿ ಒಂದು ಸಮುದಾಯವನ್ನು, ಅದರ ವಿವೇಕ, ವಿಶಿಷ್ಟ ಕಸಬು, ಸಂಸ್ಕೃತಿಯನ್ನು ಪ್ರಭುತ್ವ ನಾಶಮಾಡಿತ್ತು.
ಕೆಲ ಪದಗಳನ್ನು ನಾವು ಕಾಲಕಾಲಕ್ಕೆ ಪರಾಮರ್ಶಿಸಿ ಮರುವ್ಯಾಖ್ಯಾನಿಸುತ್ತಲೇ ಇರಬೇಕಾಗುತ್ತದೆ. ರಾಜಕೀಯ ಅನ್ನೋದು ನಮ್ಮ ನುಡಿ, ಭಾಷೆಗಳಿಂದ ಪ್ರಾಮಾಣಿಕತೆಯನ್ನು ಕಿತ್ತೆಸೆದು ಭ್ರಷ್ಟಗೊಳಿಸಿರುವಾಗ ಅಭಿವೃದ್ಧಿ ಎಂಬ ಪದವನ್ನೇ ಸಂಶಯದಿಂದ ನೋಡಬೇಕಾಗುತ್ತದೆ. “ಪೊಲಿಟಿಕ್ಸ್ ಆಫ್ ಇಂಗ್ಲಿಷ್ ಲ್ಯಾಂಗ್ವೇಜ್” ಎಂಬ ಪುಸ್ತಕದಲ್ಲಿ ಜಾರ್ಜ್ ಆರ್ವೆಲ್ ಹೀಗೇಳುತ್ತಾನೆ –
“ರಾಜಕೀಯ ಭಾಷೆ ಬರಿಯ ಅಸ್ಪಷ್ಟತೆ ಮತ್ತು ಸೌಮ್ಯೋಕ್ತಿಗಳಿಂದ (euphemism) ತುಂಬಿದೆ. ರಕ್ಷಣೆ ಇಲ್ಲದ ಹಳ್ಳಿಗಳ ಮೇಲೆ ಬಾಂಬಿನ ಸುರಿಮಳೆಗೈದು, ಅಲ್ಲಿನ ಜಾನುವಾರುಗಳನ್ನು ಗುಂಡು ಹೊಡೆದು ಕೊಂದು, ಜನರನ್ನು ಗುಳೆ ಎಬ್ಬಿಸಿ, ಅವರ ಗುಡಿಸಲುಗಳನ್ನು ಸುಡುವ ಪ್ರಕ್ರಿಯೆಗೆ ಶಾಂತಿ ಸ್ಥಾಪನೆ ಎಂದು ಕರೆಯಲಾಗುತ್ತದೆ. ಲಕ್ಷಾಂತರ ರೈತರ ಜಮೀನು ಕಸಿದುಕೊಂಡು, ಬೀದಿ ಪಾಲು ಮಾಡುವ ಪ್ರಕ್ರಿಯೆಗೆ ಜನರ-ವರ್ಗಾವಣೆಯೆಂದು ಕರೆಯಲಾಗುತ್ತದೆ. ನ್ಯಾಯಯುತ ವಿಚಾರಣೆ ಇಲ್ಲದೆ ಬಂಧನದಲ್ಲಿಟ್ಟು, ಬೆನ್ನಿಗೆ ಗುಂಡು ಹಾರಿಸಿ ಅಥವಾ ಯಾತನ ಶಿಬಿರಗಳಲ್ಲಿ ರೋಗಗಳಿಗೆ ತುತ್ತಾಗುವಂತೆ ಮಾಡುವ ಪ್ರಕ್ರಿಯೆಗೆ ನಂಬಿಕೆಗೆ ಅರ್ಹರಲ್ಲದವರ ನಿವಾರಣೆ ಎಂದು ಕರೆಯಲಾಗುತ್ತದೆ.” ಹೀಗೆ ಅಪ್ರಾಮಾಣಿಕ ಭಾಷೆ ಆಲೋಚನಾ ಕ್ರಮವನ್ನೇ ಭ್ರಷ್ಟವನ್ನಾಗಿಸುತ್ತದೆ ಮತ್ತು ಆಲೋಚನಾ ಕ್ರಮ ಭಾಷೆಯನ್ನು ಭ್ರಷ್ಟಗೊಳಿಸುತ್ತದೆ. ಇದೊಂದು ವಿಷವರ್ತುಲ. ಉದಾರೀಕರಣದ ಈ ದಿನಗಳಲ್ಲಿ ವಿನಾಶದ ಪರ್ಯಾಯ ಅಥವಾ ಸೌಮ್ಯೋಕ್ತಿಯಾಗಿ ಅಭಿವೃದ್ಧಿ ಎಂಬ ಪದವನ್ನು ಬಳಸಲಾಗುತ್ತಿದೆ ಎಂದರೆ ತಪ್ಪಲ್ಲ.
ಹೆಬ್ಬಿಗೆ ತೂಗು ಸೇತುವೆ ನಿರ್ಮಾಣವಾಗಿ ಹನ್ನೆರಡು- ಹದಿಮೂರು ವರ್ಷಗಳೇ ಕಳೆದಿದೆ. ಈ ಒಂದು ದಶಕದಲ್ಲಿ ಒಮ್ಮೆಯೂ ಸೇತುವೆಯ ಪರಿಶೀಲನೆಯಾಗಿಲ್ಲ, ಸೇತುವೆಯ ಸರ್ವಿಸ್ ಆಗಿಲ್ಲ. ಒಂದು ಕಾಲದಲ್ಲಿ ಸೇತುವೆಗೆ ಬೇಡಿಕೆಯಿಟ್ಟಿದ್ದ ಜನರೀಗ ಸೇತುವೆಯ ಗುಣಮಟ್ಟ ಪರಿಶೀಲನೆ ಮತ್ತು ಸರ್ವಿಸ್ ಗಾಗಿ ಕಾದು ಬಸವಳಿದಿದ್ದಾರೆ. ಸೇತುವೆಯ ಗುಣಮಟ್ಟ ಕಾಪಾಡಿಕೊಳ್ಳದಿದ್ದಾರೆ ದುರಂತವೊಂದು ಸಂಭವಿಸಲಿದೆ. ಮುಳುಗಡೆಯಾದ ಹಳ್ಳಿಗಳ ಜನರ ಮನಸ್ಥಿತಿ, ಭೂಮಿ ಮುಳುಗಡೆಯಾದ ನಂತರದಲ್ಲಿ ಕುಂದಿದ ಆತ್ಮವಿಶ್ವಾಸ, ಗುಳೆ ಹೋದ, ಆತ್ಮಹತ್ಯೆಗೆ ಶರಣಾದವರ ಅಂಕಿ ಅಂಶಗಳನ್ನು ಅಕ್ಯುರೇಟ್ ಆಗಿ ಕಲೆಹಾಕಬೇಕಿದೆ. ಆಗ ಮಾತ್ರ ಅಭಿವೃದ್ಧಿಯ ನಾನಾ ಮುಖಗಳು ನಮ್ಮ ಕಣ್ಮುಂದೆ ಬರಲಿದೆ.
ಚಾರಣ ತಂಡ ಮುಂದಿನ ದಿನ ನಗರ ಕೋಟೆ, ದೇವಗಂಗ ನೋಡಿಕೊಂಡು ಕವಲೇದುರ್ಗಾದೆಡೆಗೆ ಪ್ರಯಾಣ ಬೆಳೆಸಿದೆವು. ಆದರೆ ನನ್ನ ಮನಸ್ಸು ಮಾತ್ರ ನದಿಯ ದಾಟಿ ಆ ದಡಕ್ಕೂ ಹೋಗಲಾಗದೆ ಈ ದಡಕ್ಕೂ ಬರಲಾಗದೆ ಹೆಬ್ಬಿಗೆ ತೂಗು ಸೇತುವೆಯ ನಡುವೆ ಅತಂತ್ರವಾಗಿ ನಿಂತಿತ್ತು.
ಇದನ್ನೂ ನೋಡಿ: ವಚನಾನುಭವ – 03 | ಗೋತ್ರ ನಾಮವ ಬೆಸಗೊಂಡಡೆ | ಬಸವಣ್ಣಮವರ ವಚನ – ಮೀನಾಕ್ಷಿ ಬಾಳಿ Janashakthi Media