ಉಳ್ಳಾಲದ ರಾಣಿಪುರ ಸಮೀಪದಲ್ಲಿ ನೇತ್ರಾವತಿ ನದಿ ಬಳಿ ಪಶ್ವಿಮ ಬಂಗಾಲ ಮೂಲದ ಯುವತಿಯೊಬ್ಬಳ ಮೈಮೇಲೆ ವಿಪರೀತ ಗಾಯದ ಗುರುತು ಸಹಿತ ಅರೆಪ್ರಜ್ಞೆ ಸ್ಥಿತಿಯಲ್ಲಿ ನಿನ್ನೆ ತಡರಾತ್ರಿ ಪತ್ತೆಯಾಗಿದ್ದು ಸಾಮೂಹಿಕ ಅತ್ಯಾಚಾರ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರನ್ನು ಕಠಿಣ ಪ್ರಕರಣದಡಿ ಬಂಧಿಸಬೇಕೆಂದು ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ಒತ್ತಾಯಿಸಿದೆ.
ಇದನ್ನು ಓದಿ :-ಅನೇಕಲ್ | ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ
ಉಳ್ಳಾಲ ಭಾಗದಲ್ಲಿ ಅಹಿತಕರ ಘಟನೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಕಾನೂನಿನ ಯಾವ ಭಯವೂ ಇಲ್ಲದೇ ದುಷ್ಕರ್ಮಿಗಳು ಮೆರೆಯುವಂತಾಗಿದೆ. ಇಂತಹದೇ ಹಲವಾರು ಪ್ರಕರಣಗಳು ಉಳ್ಳಾಲ ಭಾಗದಲ್ಲಿ ನಡೆದಿದ್ದು ಹಿಂದೆ ಜರ್ಮನಿ ಮೂಲದ ಯುವತಿಯೊಬ್ಬಳನ್ನು ಸಾರ್ವಜನಿಕವಾಗಿ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆ ಸಹಿತ ಹಲವು ಹೆಣ್ಣುಮಕ್ಕಳ ಮೇಲೆ ಶೋಷಣೆ ಎಸಗಿರುವ ಪ್ರಕರಣಗಳು ನಡೆದಿದೆ. ಅಲ್ಲದೇ ಗಾಂಜಾ ವ್ಯಸನಿಗಳ ಸಂಖ್ಯೆಯೂ ಮಿತಿಮೀರಿದ್ದು ಇವರ ಅಟ್ಟಹಾಸಕ್ಕೆ ಹಲವು ಜೀವಹಾನಿ ಸಂಭವಿಸಿವೆ. ಇನ್ನು ಇಲ್ಲಿನ ವಿದ್ಯಾರ್ಥಿ ಯುವಜನರು ಗಾಂಜಾ ವ್ಯಸನಿಗಳಾಗಿ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿ ದಾರಿ ತಪ್ಪುತಿದ್ದಾರೆ. ಉಳ್ಳಾಲ ಭಾಗದಲ್ಲಿರುವ ಹಲವು ಮೆಡಿಕಲ್ ಕಾಲೇಜು, ವಿಶ್ವವಿದ್ಯಾಲಯ, ಇಂಜನೀಯರಿಂಗ್ ಕಾಲೇಜು ಸಹಿತ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಲು ಹೊರರಾಜ್ಯ , ಹೊರದೇಶಗಳಿಂದ ಬಂದ ಅಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಈ ಎಲ್ಲಾ ಘಟನೆಗಳು ವ್ಯತಿರಿಕ್ತ ಪರಿಣಾಮ ಬೀರಲಿದೆ ಹಾಗೂ ನಿರ್ಬೀತಿಯಿಂದ ಸಂಚರಿಸಲು ಭಯಪಡುವಂತಾಗಿದೆ.
ಉಳ್ಳಾಲದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಕಾನೂನಿನ ಯಾವ ಭಯವೂ ಇಲ್ಲದೆ ನಡೆಯುತ್ತಿರುವಂತಹ ಕಳ್ಳತನ, ದರೋಡೆ, ಅಕ್ರಮ ಚಟುವಟಿಕೆ, ನಿಷೇಧಿತ ಮಾದಕ ದ್ರವ್ಯದ ಸಾಗಾಟ ಮತ್ತು ಸೇವನೆ, ಅತ್ಯಾಚಾರದಂತಹ ಪ್ರಕರಣಗಳು ನಾಡಿನ ನೆಮ್ಮದಿಯನ್ನು ಕೆಡಿಸಿದೆ. ಅಲ್ಲದೆ ಉಳ್ಳಾಲದ ಮಾನವನ್ನು ಹರಾಜಿಗಿಟ್ಟಿದೆ. ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಈ ಬಗ್ಗೆ ನಿಯಂತ್ರಿಸುವಲ್ಲಿ ಯಾವುದೇ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ಮತ್ತು ಶಾಸಕರ ಬೇಜಾವಾಬ್ದಾರಿ ನಡೆಯನ್ನು ಡಿವೈಎಫ್ಐ ಖಂಡಿಸಿದೆ. ಇಂತಹ ಸಮಾಜಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಈ ಭಾಗಕ್ಕೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಲು ಮುಂದಾಗಬೇಕೆಂದು ಡಿವೈಎಫ್ಐ ಒತ್ತಾಯಿಸಿದೆ.
ಇದನ್ನು ಓದಿ :-ಮಂಜೂರಾದ ಹುದ್ದೆಯಲ್ಲಿ 10 ವರ್ಷ ನಿರಂತರ ಕೆಲಸ ; ಕಾರ್ಯನಿರ್ವಹಿಸಿದ ಉದ್ಯೋಗಿ ಕಾಯಂಗೆ ಅರ್ಹ: ಹೈಕೋರ್ಟ್
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ,ಪೊಲೀಸ್ ಇಲಾಖೆ ಪಶ್ಚಿಮ ಬಂಗಾಲ ಮೂಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದೆಂಬ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಿ ತಪ್ಪಿತಸ್ಥರ ಮೇಲೆ ಕಠಿಣ ಪ್ರಕರಣವನ್ನು ದಾಖಲಿಸಿ ಶೀಘ ಬಂಧಿಸಬೇಕೆಂದು ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ಒತ್ತಾಯಿಸಿದೆ ಎಂದು ತಾಲೂಕು ಅಧ್ಯಕ್ಷರಾದ ಅಡ್ವಕೇಟ್ ನಿತಿನ್ ಕುತ್ತಾರ್, ಕಾರ್ಯದರ್ಶಿ ರಿಝ್ವಾನ್ ಹರೇಕಳ ಒತ್ತಾಯಿಸಿದ್ದಾರೆ.