ಮೂಲ ಹಿಂದಿ: ಸೂರ್ಯಕಾಂತ ತ್ರಿಪಾಠಿ ‘ನಿರಾಲ’
ಅನುವಾದ: ಕೋಟ ನಾಗರಾಜ
ಅವಳು ಒಡೆಯುತ್ತಿದ್ದಾಳೆ ಕಲ್ಲು
ನೋಡಿದೆಯವಳ ನಾನು ಅಲಹಾಬಾದಿನ ರಸ್ತೆಯಲ್ಲಿ
ಅವಳು ಒಡೆಯುತ್ತಿದ್ದಾಳೆ ಕಲ್ಲು
ನೆರಳಿನಾಶ್ರಯವಿಲ್ಲ,
ಪರವಾಗಿಲ್ಲ,ಕುಳಿತಿದ್ದಾಳೆ ಆ ಮರದಡಿ ,
ಕಪ್ಪು ದೇಹ ಉಕ್ಕಿ ಹರಿವ ಯೌವನ
ಬಾಗಿದ ನೋಟ ನೆಚ್ಚಿದ ಕಾಯಕ ನಿರತ ಮನ ,
ದೊಡ್ಡ ಸುತ್ತಿಗೆ ಕೈಲಿ
ಮಾಡುವಳು ಮತ್ತೆ ಮತ್ತೆ ಪ್ರಹಾರ
ಮುಂದೆ ಭವ್ಯ ಅಂತಸ್ತು ಭವನ, ಪ್ರಾಕಾರ.
ಏರುತ್ತಲಿತ್ತು ಬಿಸಿಲು
ಬೇಸಿಗೆಯ ಕಾಲ
ಧಗ ಧಗಿಸುತ್ತಿರುವ ಆ ದಿನ
ಸುಡುವ ಬಿಸಿ ಗಾಳಿ ಎದ್ದು
ಹತ್ತಿಯೇ ಹೊತ್ತಿಯುರಿವಂತೆ ಸುಡು ನೆಲ
ಕಿಡಿಗಳಾಗುದುರುತ್ತಿರುವ ಧೂಳ ಕಣಗಳು
ಬಹುಶಃ : ಮಧ್ಯಾಹ್ನವಾಗಿದೆ
ಎಂದವಳು ಒಡೆಯುತ್ತಿದ್ದಾಳೆ ಕಲ್ಲು.
ನೋಡಿದಳೊಮ್ಮೆ ಯಾರೋ ಎಂಬಂತೆ ನನ್ನತ್ತ ,
ಮತ್ತೆ ಆ ಭವನದತ್ತ – ಹರಿದ ತಂತಿಯ ಹಾಗೆ.
ಯಾರೂ ಇಲ್ಲದ್ದನ್ನು ಕಂಡು ಅಲ್ಲಿ
ನೋಡಿದಳು ಮತ್ತೊಮ್ಮೆ ನನ್ನತ್ತ
ನೋವ ತಿನ್ನತ್ತಾ ಅಳಲಾಗದ ದೃಷ್ಟಿಯಲ್ಲಿ.
ಮೀಟಿದೆ ಸಹಜ ಸಿತಾರ, ಕೇಳಿದೆ ನಾನು
ಹಿಂದೆಂದೂ ಕೇಳದಾ ಝಂಕಾರ
ಕಂಪಿಸಿದಳಾಕೆ ಒಂದು ಕ್ಷಣ
ಬಿತ್ತು ಹನಿಯೊಂದು ಬೆವರಿದಾ ಹಣೆಯಿಂದ
ಮತ್ತೆ ತಲ್ಲೀನಳಾಗುತ್ತಾ ಕೆಲಸದಲ್ಲಿ,ಹೇಳಿದಂತೆ –
” ನಾನು ಒಡೆಯುತ್ತೇನೆ ಕಲ್ಲು “