ಸೂರ್ಯಗ್ರಹಣವನ್ನು ಸಂಭ್ರಮಿಸಿ; ಬೆಳಕಿನ ಹಬ್ಬ ಆಚರಿಸಿದ ಮಕ್ಕಳು

ಕೊಪ್ಪಳ: ತಾಳಕೇರಿ ಪ್ರೌಢಶಾಲೆಯ “ರಾಮನ್ ವಿಜ್ಞಾನ ಕೇಂದ್ರ” ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಪಾರ್ಶ್ವ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯ ರಾಮನ್ ವಿಜ್ಞಾನ ಸಂಘದ ಪದಾಧಿಕಾರಿಗಳೆಲ್ಲರೂ ಸೇರಿ ಪಿನ್ ಹೋಲ್ ಕ್ಯಾಮರಾ, ವಿಶೇಷ ಟೆಲಿಸ್ಕೋಪ್ ಮತ್ತು ಸೋಲಾರ್ ಫಿಲ್ಟರ್ ಗ್ಲಾಸ್ ಬಳಸಿ ಸೂರ್ಯಗ್ರಹಣ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜ್ಞಾನ ಶಿಕ್ಷಕರು ಹಾಗೂ ರಾಮನ್ ವಿಜ್ಞಾನ ಕೇಂದ್ರದ ಸಂಚಾಲಕ ದೇವೇಂದ್ರ ಜಿರ್ಲಿ, ಗ್ರಹಣಗಳು ಖಗೋಳದಲ್ಲಿ ನಡೆಯುವ ಅತ್ಯಂತ ಸಹಜ ಹಾಗೂ ಸರಳ ವಿದ್ಯಮಾನಗಳು. ಈ ಜಗತ್ತಿನಲ್ಲಿ ಮಾನವ ಜನಾಂಗ ಹುಟ್ಟುವ ಮುಂಚಿನಿಂದಲೂ ಅವು ನಡೆಯುತ್ತಿವೆ. ಇದೇನೂ ಹೊಸತಲ್ಲ. ಆದರೆ ಜೀವಿಗಳಲ್ಲೇ ಅತ್ಯಂತ ಬುದ್ದಿಜೀವಿ ಅನಿಸಿಕೊಂಡಿರುವ ಮನುಷ್ಯ ಮಾತ್ರ ಈ ವಿದ್ಯಮಾನಗಳಿಗೆ ಸಾಕಷ್ಟು ಹೆದರುತ್ತಾನೆ. ಚಿತ್ರವಿಚಿತ್ರ ನಂಬಿಕೆ ಆಚರಣೆಗಳಿಗೆ ಮುಂದಾಗುತ್ತಾನೆ!. ಆಹಾರ ನೀರು ವಿಷವಾಗುತ್ತದೆ. ಈ ಸಂದರ್ಭದಲ್ಲಿ ಊಟ ಮಾಡಬಾರದು, ನೀರು ಕುಡಿಯಬಾರದು. ಗರ್ಭಿಣಿ ಹೆಣ್ಣು ಮಕ್ಕಳು ಹೊರಗೆ ಬರಬಾರದು. ಮಕ್ಕಳು ಹೊರಬರಬಾರದು. ಕೆಡುಕು, ಕೇಡಾಗುತ್ತದೆ ಅಂತ ಭಯ ಹುಟ್ಟಿಸಲಾಗಿದೆ. ಪ್ರಕೃತಿಯ ಎಲ್ಲಾ ಜೀವಿಗಳೂ ಸಹಜವಾಗಿಯೇ ಜೀವಿಸುವ ಹೊತ್ತಿನಲ್ಲಿ ಮನುಷ್ಯ ಮಾತ್ರ ಮನೆಯಲ್ಲಿ ಅಡಗಿ ಕೂತುಕೊಳ್ಳುತ್ತಾನೆ. ಇದು ತಪ್ಪು ಗ್ರಹಿಕೆ. ಸರಿಯಾದ ತಿಳುವಳಿಕೆ ಇಲ್ಲ. ಇತ್ತೀಚೆಗಷ್ಟೇ ಇಸ್ರೋ 36 ಉಪಗ್ರಹಗಳನ್ನು ಗಗನಕ್ಕೆ ಚಿಮ್ಮಿಸಿದೆ‌. ಇಂತಹ ವೈಜ್ಞಾನಿಕ ಯುಗದಲ್ಲೂ ಜನರು ಮೌಢ್ಯ ಮತ್ತು ಭಯದಲ್ಲಿ ಬದುಕುವಂತಾಗಿರುವುದು ಖೇದಕರ ಎಂದರು.

ಸೂರ್ಯಗ್ರಹಣ ಅನ್ನುವುದು ಪ್ರಕೃತಿಯ ಅತ್ಯಂತ ಸರಳ ವಿದ್ಯಮಾನ. ಅದೊಂದು ಬೆಳಕು ಮತ್ತು ನೆರಳಿನ ಆಟ ಮಾತ್ರ. ಅದನ್ನು ಸಂಭ್ರಮಿಸುತ್ತಲೇ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸೋಣ ಎಂದರು. ಗ್ರಹಣದಿಂದ ಯಾವುದೇ ಕೆಡುಕು ಕೇಡು ಆಗುವುದಿಲ್ಲ. ಅದನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡಬೇಕು. ಅಂದಾಗ ಮಾತ್ರ ಯಾವುದೇ ಭಯ ಮತ್ತು ಆತಂಕ ಇರುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ವಿಜ್ಞಾನಕ್ಕೆ ಮಹತ್ವ ನೀಡಬೇಕು. ಏಕೆಂದರೆ ವಿಜ್ಞಾನ ಮಾತ್ರ ಜನರ ಅಜ್ಞಾನ ಮತ್ತು ಮೌಢ್ಯವನ್ನು ಅಳಿಸಬಲ್ಲದು. ಆ ದಿಸೆಯಲ್ಲಿ ವಿಜ್ಞಾನದ ಹಿನ್ನೆಲೆಯುಳ್ಳ ಶಿಕ್ಷಕರು, ವಿಜ್ಞಾನ ಶಿಕ್ಷಕರು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಘ ಸಂಸ್ಥೆಗಳು ಕಾರ್ಯಕಮಗಳನ್ನು ಆಯೋಜಿಸಿ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿವೆ. ಇತ್ತೀಚೆಗೆ ಶಿಕ್ಷಣವಂತ ಸಮೂಹ ಇದರ ಬಗೆಗಿನ ಮೂಢನಂಬಿಕೆ ಮತ್ತು ಭಯಗಳನ್ನು ತೊರೆದು ಬದಕುತ್ತಿದೆ. ಆದರೂ ಮೂಢನಂಬಿಕೆ ನಂಬುವ ಜನರು ಇನ್ನೂ ನಮ್ಮ ನಡುವೆ ಕಡಿಮೆಯೇನಿಲ್ಲ. ಅಕ್ಷರಸ್ಥರು ಅನಕ್ಷರಸ್ಥರು ಎಂಬ ಬೇಧವಿಲ್ಲದೇ ಎಲ್ಲರಲ್ಲೂ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು ಮತ್ತು ಮೌಢ್ಯಗಳಿವೆ, ಅಂತವರಿಗಾಗಿಯೇ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹೋಳಿಗೆ, ಕರಿಗಡುಬು, ಬಾಳೆಹಣ್ಣು, ಸೇಬು ಮತ್ತು ಮಂಡಕ್ಕಿ ತಿನ್ನುವ ಮೂಲಕ ಗ್ರಹಣ ವೀಕ್ಷಣೆ ಮಾಡಲಾಯಿತು.

ವಿಜ್ಞಾನ ಸಂಘದ ಅಧ್ಯಕ್ಷೆ ಕುಮಾರಿ ಈರಮ್ಮ ಬಂಗಿ ಮಾತನಾಡಿ, ಪ್ರಕೃತಿಯ ವಿದ್ಯಮಾನಗಳನ್ನು ಕಣ್ಣಾರೆ ಕಾಣುವ ಅಪೂರ್ವ ಅವಕಾಶಗಳನ್ನು ನಾವು ಕಳೆದುಕೊಳ್ಳಬಾರದು. ಬಹಳ ಅಪರೂಪಕ್ಕೊಮ್ಮೆ ನಡೆಯುವ ಗ್ರಹಣ ವೀಕ್ಷಣೆಗೆ ನಮ್ಮ ವಿಜ್ಞಾನ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಿದ್ದು ಸಂತೋಷ ಎಂದು ಗ್ರಹಣ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

ಪ್ರದಾನ ಕಾರ್ಯದರ್ಶಿ ಬಾಳಪ್ಪ ಗುಳೇದಾರ ಮಾತನಾಡಿ, ಟಿ.ವಿ. ಮಾಧ್ತಮಗಳು ಬೆಳಗಿನಿಂದಲೇ ಗ್ರಹಣದ ಬಗ್ಗೆ ಭಯ ಮತ್ತು ಮೌಢ್ಯ ಬಿತ್ತುತ್ತಿವೆ. ಅವುಗಳ ಚರ್ಚೆಗಳನ್ನು ಗಮನಿಸಿದರೆ ಅಲ್ಲಿ ವಿಜ್ಞಾನದ ಹಿನ್ನೆಲೆ ಇರುವ ಶಿಕ್ಷಕರಾಗಲಿ, ವಿಜ್ಞಾನಿಗಳಾಗಲಿ ಇರುವದೇ ಇಲ್ಲ‌. ಜ್ಯೋತಿಷಗಳನ್ನು ಮಾತ್ರ ಮುಂದಿಟ್ಟುಕೊಂಡು ಚರ್ಚೆ ನಡೆಸುವುದು ದುರಂತ ಎಂದರು.

ಉಪಾಧ್ಯಕ್ಷ ಹನುಮೇಶ ಕೊಳ್ಳಿ, ಸಹ ಕಾರ್ಯದರ್ಶಿ ರಾಧಿಕಾ ಬಂಡಾರಿ ಹಾಗೂ ಸಂಗೀತಾ ಗೊಂದಿ, ಅಕ್ಷತಾ ಹಳ್ಳಿ, ಸಾವಿತ್ರಿ, ಅನುಷಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಮಾತನಾಡಿದರು. ಪದಾಧಿಕಾರಿಗಳು ಸೇರಿದಂತೆ ಶಾಲೆಯ ನೂರಾರು ವಿದ್ಯಾರ್ಥಿಗಳು, ಗ್ರಾಮದ ಯುವಕರು, ಹಿರಿಯರು ಮಹಿಳೆಯರು ಗ್ರಹಣ ವೀಕ್ಷಣೆ ಮಾಡುತ್ತಾ ತಿನಿಸುಗಳನ್ನು ತಿಂದರು. ನಿಸರ್ಗದ ಅಪರೂಪದ ಸೋಜಿಗವನ್ನು ಕಣ್ತುಂಬಿಕೊಂಡರು.

Donate Janashakthi Media

Leave a Reply

Your email address will not be published. Required fields are marked *