ಭಾರತದ ಸೂಪರ್ ಶ್ರೀಮಂತರ ಸೂಪರ್ ಸಮೃದ್ಧಿ ಮತ್ತು ಆಘಾತಕಾರಿ ಅಸಮಾನತೆಯ ಕತೆ

  • ಭಾರತದ 21 ಶ್ರೀಮಂತ ಬಿಲಿಯಾಧಿಪತಿಗಳು 70 ಕೋಟಿ ಭಾರತೀಯರಿಗಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ
  • ಕೇವಲ 5 % ಶ್ರೀಮಂತರು ದೇಶದ ಸಂಪತ್ತಿನ 60%ಕ್ಕಿಂತ ಹೆಚ್ಚಿನದನ್ನು ಹೊಂದಿದ್ದಾರೆ, ಆದರೆ ಭಾರತದ ಜನಸಂಖ್ಯೆಯ ತಳಭಾಗದ 50% ಜನಗಳ ಬಳಿಯಿರುವ ಸಂಪತ್ತಿನ ಪ್ರಮಾಣ ಕೇವಲ 3% .
  • 2012 ರಿಂದ 2021 ರ ನಡುವೆ ಭಾರತದಲ್ಲಿ ಸೃಷ್ಟಿಯಾದ ಸಂಪತ್ತಿನ 40% ಕೇವಲ 1% ಸೂಪರ್ ಶ್ರೀಮಂತರ ಪಾಲಾಗಿದೆ, ಸಂಪತ್ತಿನ ದೃಷ್ಟಿಯಿಂದ ತಳದಲ್ಲಿರುವ 50% ಭಾರತೀಯರಿಗೆ ಸಿಕ್ಕಿದ್ದು 3% .
  • ಭಾರತದ 100 ಶ್ರೀಮಂತರ ಕ್ರೋಢೀಕೃತ ಸಂಪತ್ತು 660 ಶತಕೋಟಿ ಡಾಲರ್(54.12 ಲಕ್ಷ ಕೋಟಿ ರೂ.) – ಇದು ಕೇಂದ್ರ ಸರಕಾರದ ಒಟ್ಟು ವಾರ್ಷಿಕ ಬಜೆಟಿನ ಒಂದೂವರೆ ಪಟ್ಟಿಗಿಂತಲೂ ಹೆಚ್ಚು.

ಇವು ಜನವರಿ 15ರಂದು ಆಕ್ಸ್ ಫಾಮ್ ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ವರದಿ “ಸರ್ವೈವಲ್ ಆಫ್ ದಿ ರಿಚೆಸ್ಟ್: ದಿ ಇಂಡಿಯಾ ಸ್ಟೋರಿ” ಯಲ್ಲಿ ನಮೂದಾಗಿರುವ ಕೆಲವು ಪ್ರಮುಖ ಅಂಕಿ-ಅಂಶಗಳು. ಪ್ರತಿವರ್ಷ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ಬಂಡವಾಳಶಾಹಿ ಜಗತ್ತಿನ ಗಣ್ಯರ ‘ವಿಶ್ವ ಆರ್ಥಿಕ ವೇದಿಕೆ’ಯ ಸಭೆ ಆರಂಭವಾಗುವ ದಿನದಂದು ಜಗತ್ತಿನಾದ್ಯಂತ ಆಕ್ಸ್ಫಾಮ್ ಸಂಸ್ಥೆಯ ಘಟಕಗಳು ಈ ಅಸಮಾನತೆಯ ವರದಿಗಳನ್ನು ಬಿಡುಗಡೆ ಮಾಡುತ್ತವೆ. ಈ ವರದಿಗಳನ್ನು ಅಧಿಕೃತ ಅಂಕಿ-ಅಂಶಗಳ ಆಧಾರದಲ್ಲಿಯೇ ಸಿದ್ಧಪಡಿಸಲಾಗುತ್ತದೆ ಎನ್ನಲಾಗಿದೆ.

ಕಳೆದ ಬಾರಿಯ ಭಾರತದ ವರದಿಯ ಶೀರ್ಷಿಕೆ ‘ಅಸಮಾನತೆ ಕೊಲ್ಲುತ್ತದೆ’ ಎಂದಿದ್ದರೆ, ಈ ವರ್ಷದ ವರದಿಯ ಶಿರೋನಾಮೆ “ಅತ್ಯಂತ ಶ್ರೀಮಂತರೇ ಬದುಕುಳಿಯುವುದು-ಭಾರತದ ಕತೆ”.

ಈ ವರದಿ ಗಮನಿಸಿರುವ ಪ್ರಮುಖ ಅಂಶಗಳು:

ಭಾರತದಲ್ಲಿ ಬಡಜನರ ಸಂಕಟಗಳು ಹೆಚ್ಚುತ್ತಿವೆ ಮತ್ತು ಶ್ರೀಮಂತರ ಸಂಪತ್ತು ಹೆಚ್ಚುತ್ತಿದೆ.
ಸಂಪತ್ತು ಅತಿ-ಶ್ರೀಮಂತರಲ್ಲಿ ಸಂಚಯಗೊಳ್ಳುತ್ತಿದೆ:

  • ಭಾರತದಲ್ಲಿ ಬಡವರ ಸಂಖ್ಯೆ 89 ಕೋಟಿ, ಜಗತ್ತಿನಲ್ಲೆ ಅತಿ ಹೆಚ್ಚು.
  • ಸಂಪತ್ತಿನ ಅಸಮಾನತೆ 70% ದಷ್ಟು ಭಾರತೀಯರನ್ನು ಒಂದು ಆರೋಗ್ಯಕರ ಆಹಾರದ ಮೂಲ ಆವಶ್ಯಕತೆಯಿಂದ ವಂಚಿಸಿದೆ.
  • ದುಬಾರಿ ಆಸ್ಪತ್ರೆ ವೆಚ್ಚಗಳಿಂದಾಗಿ ಪ್ರತಿವರ್ಷ 5ಕೋಟಿ ಜನ ಬಡತನಕ್ಕೆ ನೂಕಲ್ಪಡುತ್ತಿದ್ದಾರೆ.
  • 60% ದಷ್ಟು ಭಾರತೀಯರು ದಿನಕ್ಕೆ 4 ರೂ ಗಿಂತ ಕಡಿಮೆ ಆದಾಯದಲ್ಲಿ ಬದುಕಬೇಕಾಗಿದೆ.

ಮಹಾಸೋಂಕಿನ ಒಂದೇ ವರ್ಷದಲ್ಲಿ

  • ತಳಭಾಗದ 50% ಜನಸಂಖ್ಯೆಯ ಆದಾಯದ ಪ್ರಮಾಣ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಕೇವಲ 13%ಕ್ಕೆ ಇಳಿದಿದೆ ಮತ್ತು ಮೇಲೆ ಹೇಳಿದಂತೆ ಸಂಪತ್ತಿನ ಪ್ರಮಾಣ 3%ಕ್ಕೆ ಇಳಿದಿದೆ.
  • ಅದೇ ವೇಳೆಯಲ್ಲಿ ಮೇಲಣ 30% ಜನರು ದೇಶದ 90%ಸಂಪತ್ತನ್ನು ಹೊಂದಿದ್ದಾರೆ,
    ಅದರಲ್ಲೂ ಮೇಲಿನ 10% ಮಂದಿ 80%ಕ್ಕಿಂತಲೂ ಹೆಚ್ಚು ,
    ಮೇಲಿನ 5% ಮಂದಿ ಸುಮಾರು 62%ದಷ್ಟು
    ಮತ್ತು 1% ಸೂಪರ್ ಶ್ರೀಮಂತರು 40.6%. ಸಂಪತ್ತು ಹೊಂದಿದ್ದಾರೆ.
  • ಭಾರತದ ಬಿಲಿಯಾಧಿಪತಿಗಳ ಸಂಖ್ಯೆ 102ರಿಂದ 166ಕ್ಕೇರಿದೆ. 100 ಸೂಪರ್‌ಶ್ರೀಮಂತರ ಸಂಪತ್ತಿನ ಒಟ್ಟು ಮೊತ್ತ 2021ಕ್ಕೆ ಹೋಲಿಸಿದರೆ 8% ಹೆಚ್ಚಳ ಕಂಡಿದೆ.
  • ಕೊರೊನಾ ಕಾಲದಲ್ಲಿ ಭಾರತದ ಕಾರ್ಪೊರೇಟ್‌ಗಳ ಲಾಭದ ಪ್ರಮಾಣ 70% , ಅತ್ತ 84% ಕುಟುಂಬಗಳ ಆದಾಯಗಳು ಇಳಿದಿವೆ.

 

ಪರೋಕ್ಷ ತೆರಿಗೆಗಳು ಬಡವರನ್ನೇ ಹೆಚ್ಚು ಬಾಧಿಸಿವೆ :

ಈ ಅಂಕಿ-ಅಂಶಗಳನ್ನು ನೋಡಿ:

  • ಆಹಾರ ಮತ್ತು ಆಹಾರೇತರ ಐಟಂಗಳ ಮೇಲೆ ತೆತ್ತ ತೆರಿಗೆಯ ಪ್ರಮಾಣ:
    ತಳಭಾಗದ 50% ಜನಗಳು 64.3%
    40% ಮಧ್ಯಮ ಆದಾಯದವರು 31.80%
    10% ಶ್ರೀಮಂತರು 3.9%
  • ಜಿಎಸ್‌ಟಿಯ ಮೂರನೇ ಎರಡರಷ್ಟು ತಳಭಾಗದ 50%ಜನರಿಂದಲೇ ಬರುತ್ತಿದೆ.
    ಆಹಾರ ಮತ್ತು ಆಹಾರೇತರ ಐಟಂಗಳ ಮೇಲೆ ತೆರಿಗೆ ತೆರಲು ಒಟ್ಟು ಆದಾಯದಲ್ಲಿ
    ಖರ್ಚು ಮಾಡಿದ   ಪ್ರಮಾಣ
    ತಳಭಾಗದ 50% ಜನಗಳು 6.7%
    40% ಮಧ್ಯಮ ಆದಾಯದವರು 3.3%
    10% ಶ್ರೀಮಂತರು 0.4%

  • ತಳಭಾಗದ 50% ಜನರು ತುದಿಯಲ್ಲಿರುವ 10% ಶ್ರೀಮಂತರಿಗಿಂತ ಆರು ಪಟ್ಟು ಹೆಚ್ಚು ತೆರಿಗೆ ತೆರುತ್ತಿದ್ದಾರೆ.

ಕೊರೊನಾದ ಮೊದಲು, 2019ರಲ್ಲಿ ಸರಕಾರ ಕಾರ್ಪೊರೇಟ್ ತೆರಿಗೆಗಳ ದರವನ್ನು 30%ದಿಂದ 22%ಕ್ಕೆ ಇಳಿಸಿತು-ಹೊಸ ಕಂಪನಿಗಳಂತೂ 15% ತೆತ್ತರೆ ಸಾಕು ಎಂದಿತು. ಇದರಿಂದ ಸರಕಾರದ ಆದಾಯದಲ್ಲಿ ಆದ 1.84 ಲಕ್ಷ ಕೋಟಿ ರೂ. ಖೋತಾದಿಂದಾಗಿ 2019-20ರ ರೆವಿನ್ಯೂ ಅಂದಾಜುಗಳು 10% ಇಳಿಕೆ ಕಂಡವು. ಇಂತಹ ಸಂದರ್ಭದಲ್ಲಿ ಸರಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹಿಡಿದ ದಾರಿಯೆಂದರೆ ಜಿಎಸ್‌ಟಿ ದರಗಳನ್ನು ಏರಿಸಿದ್ದು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕಗಳನ್ನು ಏರಿಸಿದ್ದು. ಮೇಲಿನ ಅಂಕಿ-ಅಂಶಗಳು ಹೆಚ್ಚಿನ ಆದಾಯದ ಜನಗಳಿಗೆ ಹೋಲಿಸಿದರೆ ಹೇಗೆ ತಳಭಾಗದ ಜನಗಳ ಮೇಲೆಯೇ ಹೆಚ್ಚಿನ ಹೊರೆ ಹಾಕುವ ದಾರಿಯಿದು ಎಂಬುದನ್ನು ತೋರಿಸುತ್ತದೆ. ಇದರಿಂದಾಗಿ ಜನಗಳ ಸಂಕಟಗಳು ಹಲವು ಪಟ್ಟು ಹೆಚ್ಚಿದ ಕೊರೊನ ದುರಿತ ಕಾಲದಲ್ಲೂ ಸರಕಾರದ ತೆರಿಗೆ ಆದಾಯಗಳು ಹೆಚ್ಚಿವೆ.

ಆದಾಯ ಕಡಿಮೆಯಾದಂತೆ ಹಣದುಬ್ಬರದ ದುಷ್ಪರಿಣಾಮ ಹೆಚ್ಚುತ್ತಿದೆ. ಹಣದುಬ್ಬರವನ್ನು ತಡೆಯಲೆಂದು ಕೈಗೊಂಡ ಕ್ರಮವೆಂದರೆ ಬಡ್ಡಿದರಗಳನ್ನು ಹೆಚ್ಚಿಸುವುದು.

ಮೇ-ಡಿಸೆಂಬರ್ 2022ರ ಅವಧಿಯಲ್ಲಿ 5 ಬಾರಿ ಬಡ್ಡಿದರಗಳನ್ನು ಹೆಚ್ಚಿಸಿದ ಪರಿಣಾಮವಾಗಿ ಈ ಅವಧಿಯಲ್ಲಿ ಬಡ್ಡಿದರಗಳು 4%ದಿಂದ 6.25%ಕ್ಕೆ ಅಂದರೆ ಒಂದೂವರೆ ಪಟ್ಟು ಹೆಚ್ಚಿವೆ ಇಂತಹ ಕ್ರಮಗಳು ಮಧ್ಯಮ ವರ್ಗದವರನ್ನೂ ಬಾಧಿಸಿವೆ. ಆದರೆ ಅವು ಹಣದುಬ್ಬರವನ್ನು ತಡೆಯುವಲ್ಲಿ ವಿಫಲವಾಗಿವೆ.

ವ್ಯಂಗ್ಯಚಿತ್ರ: ಪೆನ್ಪೆವನ್ಸಿಲ್ಡ್ರಾ

ಶ್ರೀಮಂತರ ಮೇಲೆ ತೆರಿಗೆ ಹಾಕುವುದೇ ಮುಂದೆ ಸಾಗುವ ದಾರಿ

ಹೆಚ್ಚಿನ ಆದಾಯದವರ ಮೇಲೆ ಹೆಚ್ಚಿನ ತೆರಿಗೆ ಹಾಕುವುದರಿಂದ ಸರಕಾರ ಹೇಗೆ ತಳಭಾಗದ ಜನರ ಜೀವನ ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರವನ್ನೂ ಈ ವರದಿ ಮಾಡಿದೆ. ಅವುಗಳಲ್ಲಿ ಕೆಲವನ್ನು ಈ ಮುಂದೆ ಕೊಡಲಾಗಿದೆ

  1. ಬಿಲಿಯಾಧಿಪತಿಗಳ ಮೇಲೆ 3% ಸಂಪತ್ತು ತೆರಿಗೆಯ ವಸೂಲಿಯಿಂದ ಭಾರತದಲ್ಲಿ ಅತಿ ದೊಡ್ಡ ಆರೋಗ್ಯ ಯೋಜನೆ ‘ರಾಷ್ಟ್ರೀಯ ಆರೋಗ್ಯ ಮಿಷನ್’ನ್ನು 3 ವರ್ಷಗಳ ಕಾಲ ನಡೆಸಬಹುದು.
  2. ಅಗ್ರ 10 ಬಿಲಿಯಾಧಿಪತಿಗಳ ಮೇಲೆ 5% ತೆರಿಗೆಯಿಂದ 5ವರ್ಷಗಳ ವರೆಗೆ ಬುಡಕಟ್ಟು ಆರೋಗ್ಯಪಾಲನೆಯ ವೆಚ್ಚವನ್ನು ಭರಿಸಬಹುದು.
  3. ಎಲ್ಲ ಬಿಲಿಯಾಧಿಪತಿಗಳ ಮೇಲೆ 2% ತೆರಿಗೆ ವಿಧಿಸಿದರೆ ಪೂರಕ ಪೋಷಣೆ ಕಾರ್ಯಕ್ರಮಕ್ಕೆ (ಎಸ್‌ಎನ್‌ಪಿ) 3 ವರ್ಷಗಳವರೆಗೆ ಸಾಲುವಷ್ಟು ಹಣ ಸಿಗುತ್ತದೆ.
  4. ಆರೋಗ್ಯದ ಮೇಲಿನ ವೆಚ್ಚವನ್ನು ಜಿಡಿಪಿಯ ಶೇ.3ಕ್ಕೆ ಏರಿಸಲು ಬೇಕಾಗುವ ಹಣವನ್ನು ಅಗ್ರ 100 ಬಿಲಿಯಾಧಿಪತಿಗಳ ಮೇಲೆ ಶೇಕಡಾ 2 % ರಷ್ಟು ತೆರಿಗೆ ವಿಧಿಸುವ ಮೂಲಕ ಸಂಗ್ರಹಿಸಬಹುದು.
  5. ಶಾಲಾಶಿಕ್ಷಣದ ಅತಿ ದೊಡ್ಡ ಯೋಜನೆಯಾದ ಸಮಗ್ರ ಶಿಕ್ಷಣ ಯೋಜನೆಗೆ 2022-23ಕ್ಕೆ 58,585 ಕೋಟಿ ರೂ. ಬೇಕಾಗಿತ್ತು, ಆದರೆ ಬಜೆಟ್ ಕೊಟ್ಟದ್ದು 37,383 ಕೋಟಿ ರೂ. 10 ಅಗ್ರ ಬಿಲಿಯಾಧಿಪತಿಗಳ ಮೇಲೆ 1% ತೆರಿಗೆ ವಿಧಿಸಿದರೆ, 1.3 ವರ್ಷದ ವರೆಗೆ ಈ ಬಾಕಿಯನ್ನು ಸಂಗ್ರಹಿಸಬಹುದು, 4%ರಷ್ಟು ತೆರಿಗೆ ವಿಧಿಸಿದರೆ ಎರಡು ವರ್ಷಗಳ ಅಗತ್ಯವಿರುವ ಸಂಪೂರ್ಣ ಹಣವನ್ನು ಪಡೆಯಬಹುದು.
  6. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಲು ಬೇಕಾಗುವ ಒಟ್ಟು 1.4 ಲಕ್ಷ ಕೋಟಿ ರೂ.ಗಳನ್ನು ಅಗ್ರ 100 ಬಿಲಿಯಾಧಿಪತಿಗಳ ಮೇಲೆ 2.5 %, ಅಥವ 10 ಅಗ್ರ ಭಾರತೀಯ ಬಿಲಿಯಾಧಿಪತಿಗಳ ಮೇಲೆ 5%ೆ ತೆರಿಗೆ ವಿಧಿಸಿ ಸಂಗ್ರಹಿಸಬಹುದು.

ಸರಕಾರಕ್ಕೆ ಶಿಫಾರಸುಗಳು

ತಮ್ಮ ಅಧ್ಯಯನದ ಆಧಾರದಲ್ಲಿ ಈ ವರದಿ ತಯಾರಿಸಿದವರು ಈ ಪರಿಸ್ಥಿತಿಯನ್ನು ಉತ್ತಮ ಪಡಿಸಲು ನಾಲ್ಕು ಶಿಫಾರಸುಗಳನ್ನು ಮಾಡಿದ್ದಾರೆ:

  1. ಅಗ್ರ 1% ಶ್ರೀಮಂತರ ನಿವ್ವಳ ಸಂಪತ್ತಿನ ಮೇಲೆ ಶಾಶ್ವತ ಆಧಾರದಲ್ಲಿ 1% ತೆರಿಗೆ ವಿಧಿಸುವುದು. ಕೋಟ್ಯಾಧಿಪತಿಗಳು ಮತ್ತು ಮಿಲಿಯಾಧಿಪತಿಗಳ ಮೇಲೆ ಇದಕ್ಕಿಂತ ಹೆಚ್ಚಿನ ದರದಲ್ಲಿ ತೆರಿಗೆ ವಿಧಿಸುವುದು.
  2. ಬಡ ವಿಭಾಗಗಳ ಮೇಲಿನ ತೆರಿಗೆ ಭಾರವನ್ನು ಇಳಿಸುವುದು
  3. ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯದ ಲಭ್ಯತೆಯನ್ನು ಉತ್ತಮ ಪಡಿಸುವುದು
  4. ಶ್ರಮಿಕರ ಸುರಕ್ಷಾ ಜಾಲಗಳು ಮತ್ತು ಚೌಕಾಶಿ ಸಾಮರ್ಥ್ಯವನ್ನು ಬಲಪಡಿಸುವುದು.

ಇದೇ ಮುಂದೆ ಸಾಗುವ ದಾರಿ ಎಂದು ಈ ವರದಿ ಶಿಫಾರಸು ಮಾಡುತ್ತದೆ.

ಇದಕ್ಕೆ ವಿರುದ್ಧವಾದ  ದಿಕ್ಕಿನಲ್ಲಿ ಸಾಗಿರುವ ಪ್ರಸಕ್ತ ಕೇಂದ್ರ ಸರಕಾರ ಈ ಶಿಫಾರಸುಗಳನ್ನು ಅಂಗೀಕರಿಸುತ್ತದೆಯೆಂದು ನಿರೀಕ್ಷಿಸಬಹುದೇ?

ನಿಜ, ಕೊರೊನ ನಂತರ ಶ್ರೀಮಂತರ ಸಂಪತ್ತು ಹೆಚ್ಚಿರುವುದು, ಆದಾಯಗಳ ಅಸಮಾನತೆ ಹೆಚ್ಚಿರುವುದು, ಭಾರತದಲ್ಲಿ ಮಾತ್ರವೇ ಅಲ್ಲ. 2020ರ ನಂತರ ಜಗತ್ತಿನ ಅತಿಶ್ರೀಮಂತ 1% ಮಂದಿ ಎಲ್ಲ ಹೊಸ ಸಂಪತ್ತಿನ ಮೂರನೇ ಎರಡು ಭಾಗವನ್ನು, ತಳಭಾಗದ 700 ಕೋಟಿ ಜನಗಳು ಪಡೆದಿರುವುದರ ಆರು ಪಟ್ಟು ಸಂಪತ್ತನ್ನು ತಮ್ಮ ಕೈವಶ ಮಾಡಿಕೊಂಡಿದ್ದಾರೆ ಎಂದು ಆಕ್ಸ್ ಫಾಮ್‍ನ  ಜಾಗತಿಕ ವರದಿ ಹೇಳುತ್ತದೆ. ಬಿಲಿಯಾಧಿಪತಿಗಳ ಸಂಪತ್ತು ಪ್ರತಿದಿನ 270 ಕೋಟಿ ಡಾಲರುಗಳ ದರದಲ್ಲಿ ಏರುತ್ತಿದೆ. ಜಗತ್ತಿನ ತಳಭಾಗದ 90% ಜನಗಳಲ್ಲಿ ಒಬ್ಬ ವ್ಯಕ್ತಿ ಒಂದು ಡಾಲರ್‍ ಸಂಪಾದಿಸುತ್ತಿದ್ದರೆ, ಬಿಲಿಯಾಧಿಪತಿಗಳಲ್ಲಿ ಒಬ್ಬ 17 ಲಕ್ಷ ಡಾಲರ್‍ ಸಂಪಾದಿಸುತ್ತಿದ್ದಾನೆ ಎಂದು ಈ ಜಾಗತಿಕ ವರದಿ ಹೇಳುತ್ತದೆ.

ಭಾರತದಲ್ಲಿಯೂ , ನವ-ಉದಾರವಾದಿ  ಮೂಢನಂಬಿಕೆಯಿಂದ ಕುರುಡಾಗಿರುವ ಸರಕಾರಗಳ ಶ್ರೀಮಂತ-ಪರ ಧೋರಣೆಗಳು ಮೊದಲೇ ಇದ್ದ ಅಸಮಾನತೆಗಳನ್ನು ಉಲ್ಬಣಗೊಳಿಸಿವೆ. ಪ್ರಸಕ್ತ ಸರಕಾರ ಶ್ರೀಮಂತರ ಮೇಲಿನ ತೆರಿಗೆಗಳನ್ನು ಕಳೆದ 8 ವರ್ಷಗಳಲ್ಲಿ ಈ ಮೇಲೆ ಹೇಳಿದಂತೆ  ಕಡಿತ ಮಾಡಿದೆಯಷ್ಟೇ ಅಲ್ಲ,  10 ಲಕ್ಷ ಕೋಟಿ ರೂ.ಗಳಷ್ಟು ಸುಸ್ತಿ ಸಾಲಗಳ ರೈಟ್‍-ಆಫ್,  4.86ಲಕ್ಷ ಕೋಟಿ ರೂ.ಗಳಷ್ಟು ಮೌಲ್ಯದ ವಿವಿಧ ಸಾರ್ವಜನಿಕ ವಲಯದ ಉದ್ದಿಮೆಗಳ ಪೂರ್ಣ ಅಥವ ಭಾಗಶಃ ಖಾಸಗೀ ಕರಣ, 6 ಲಕ್ಷ ಕೋಟಿ ಮೌಲ್ಯದ ಸಾರ್ವಜನಿಕ ಸೊತ್ತುಗಳಾದ ರೈಲ್ವೆ ಲೈನ್‍ಗಳು, ಸ್ಟೇಷನ್‍ಗಳು, ದೂರ ಸಂಪರ್ಕ ವ್ಯವಸ್ಥೆ, ವಿದ್ಯುತ್ ಪ್ರಸರಣ ವ್ಯವಸ್ಥೆ, ರಸ್ತೆಗಳು, ಸೇತುವೆಗಳು, ಬಂದರುಗಳನ್ನು  40ವರ್ಷಗಳಿಗೆ “ಭೋಗ್ಯ”ಕ್ಕೆ ಕೊಡುವುದು ಇತ್ಯಾದಿಗಳ ಮೂಲಕ ಅದೇ ಶ್ರಿಮಂತರಿಗೆ  ಕೊಡುಗೆಗಗಳಾಗಿ ಕೊಡುತ್ತಿದೆ. ಅದೂ ಸಾಲದೆಂಬಂತೆ ಶ್ರಮದ ಶೋಷಣೆಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಮತ್ತು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಪ್ರಯತ್ನ ಮುಂದುವರೆಸುತ್ತಿದೆ.

ಆದಾಯಗಳ, ಸಂಪತ್ತಿನ ಅಸಮಾನತೆ ಕೇವಲ ತೆರಿಗೆ ವಿಧಾನದ ಫಲಿತಾಂಶವಲ್ಲ. ಈ ಸಮಸ್ಯೆಯನ್ನು ಎದುರಿಸಬೇಕಾದರೆ ಅದರ ಮೂಲಕ್ಕೆ ಹೋಗಬೇಕಾಗುತ್ತದೆ, ಈಗಿರುವ ಆರ್ಥಿಕ ಧೋರಣೆಗಳನ್ನು ಸಂಪೂರ್ಣವಾಗಿ ಬದಲಿಸಬೇಕಾಗುತ್ತದೆ ಎನ್ನುತ್ತಾರೆ ಒಬ್ಬ ವಿಶ್ಲೇಷಕರು.  ಆದ್ದರಿಂದ ಆಕ್ಸ್ ಫಾಮ್‍ನಂತಹ ವರದಿಗಳು ಏನು ಹೇಳಿದರೂ ಅವು ಪ್ರಸಕ್ತ  ಸರಕಾರ ಯೋಚಿಸುವಂತೆ  ಮಾಡುತ್ತವೆ ಎಂದು ನಿರೀಕ್ಷಿಸುವುದು ಕಷ್ಟವೇ.

“1%ಅತಿಶ್ರೀಮಂತರು ಭಾರತದ 40%ಒಡೆತನ ಹೊಂದಿದ್ದಾರೆ
ಎನ್ನುತ್ತದೆ ವರದಿ. ಭಾವನೆಗಳನ್ನು ಘಾಸಿಗೊಳಿಸಿಲ್ಲವೇ?”

“ಮೊದಲಿಗೆ, ಇದನ್ನು ಬರೆದವರು ಯಾರು ಎಂದು ನೋಡಬೇಕು”
ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಮಸ್‍ ಆಫ್‍ ಇಂಡಿಯ

Donate Janashakthi Media

Leave a Reply

Your email address will not be published. Required fields are marked *