ಸುರತ್ಕಲ್ ಟೋಲ್ ತೆರವುಗೊಳಿಸಲು ಆಗ್ರಹ: ಸಮಾನ ಮನಸ್ಕ ಸಂಘಟನೆಗಳಿಂದ ಧರಣಿ

ಸುರತ್ಕಲ್: ಸುರತ್ಕಲ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ಅನ್ನು ತೆರವುಗೊಳಿಸಲು ಕೂಡಲೇ ದಿನಾಂಕ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದ ಟೋಲ್ ಗೇಟ್‌ ಹೋರಾಟ ಸಮಿತಿ ಇಂದು(ಸೆಪ್ಟಂಬರ್‌ 13) ಒಂದು ದಿನದ ಧರಣಿಯನ್ನು ಟೋಲ್‌ ಗೇಟ್‌ ಬಳಿ ನಡೆಸಿತು.

ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಈವರೆಗೂ ಜನ‌ಪ್ರತಿನಿಧಿಗಳು ಸುಳ್ಳು ಪೊಳ್ಳು ಭರವಸೆಗಳನ್ನು ನೀಡಿಕೊಂಡು ಬರುತ್ತಿದ್ದಾರೆ. ಆದರೆ, ಇನ್ನು ಯಾವುದೇ ಪೊಳ್ಳು ಭರವಸೆಗಳನ್ನು ನಾವು ನಂಬುವುದೂ ಇಲ್ಲ ಇದನ್ನು ಕೇಳುವುದೂ ಇಲ್ಲ. ಸರಕಾರ ಅಥವಾ ಜಿಲ್ಲಾಡಳಿತ ಇಂದು ಸಂಜೆಯ ಒಳಗೆ ಧರಣಿಯ ಸ್ಥಳಕ್ಕೆ ಭೇಟಿ ನೀಡಿ ಟೋಲ್ ಗೇಟ್ ತೆರವಿನ ದಿನಾಂಕವನ್ನು ಪ್ರಕಟಿಸಬೇಕು. ಇಲ್ಲವಾದರೆ, ಇಂದು ಸಂಜೆ ಹೋರಾಟ ಸಮಿತಿ ಸಭೆ ‌ನಡೆಸಿ ನಾಗರಿಕರೇ ಟೋಲ್ ತೆರವು ಮಾಡುವ ದಿನಾಂಕ ಪ್ರಕಟಿಸಲಿದ್ದಾರೆ ಎಂದು ಕರೆ ನೀಡಿದರು.

ಧರಣಿಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಯುವ ಮುಖಂಡ‌ ಮಿಥುನ್ ರೈ ಮಾತನಾಡಿ, ಟೋಲ್ ಗೇಟ್ ನಿಂದ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು  ಶೇ. 40 ಕಮಿಷನ್‌ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

ಅವರು ಕಮಿಷನ್‌ ಪಡೆಯದಿದ್ದರೆ, ಅವರ ಕ್ಷೇತ್ರದ ಜನರು ನಡೆಸುತ್ತಿರುವ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಟೋಲ್ ತೆರವಿಗೆ ಬೆಂಬಲ‌ವಿದೆ‌ ಎಂದು ಎಲ್ಲೋ ಕುಳಿತು ಶಾಸಕರು, ಸಂಸದರು ಹೇಳುತ್ತಾ ನಮ್ಮನ್ನು ಮೋಸ ಮಾಡುತ್ತಿದ್ದಾರೆ. ಅವರ‌ ಬೆಂಬಲವಿರುವುದೆ ಅಗಿದ್ದರೆ ಧರಣಿಯಲ್ಲಿ ಭಾಗಿಯಾಗುತ್ತಿದ್ದರು ಎಂದರು.

ಅಧಿಕಾರಿಗಳು ದಿನಾಂಕ‌ ಪ್ರಕಟಿಸಬೇಕು ಇಲ್ಲವಾದರೆ ನಾವೇ ಟೋಲ್ ಗೇಟ್ ಅನ್ನು ತೆಗೆದು ಸಮುದ್ರಕ್ಕೆ ಎಸೆಯುತ್ತೇವೆ. ಜೈಲ್ ಬರೋ ಮಾಡಿದರೂ ಅಂಜಲ್ಲ ಎಂದು ಮಿಥುನ್‌ ರೈ ನುಡಿದರು.

ಸುರತ್ಕಲ್‌ ಟೋಲ್ ಗೇಟ್ ತೆರವು ದಿನಾಂಕ ಘೋಷಿಸಲು ಆಗ್ರಹಿಸಿ ನಡೆಯುವ ಸಾಮೂಹಿಕ‌ ಧರಣಿ ಪ್ರಚಾರದ ಭಾಗವಾಗಿ ಸುರತ್ಕಲ್ ಪೇಟೆಯಲ್ಲಿ ಸೆಪ್ಟಂಬರ್‌ 12ರಂದು ಕಾಲ್ನಡಿಗೆ ಜಾಥಾ ನಡೆಸಿದರು.

ಟೋಲ್‌ ಗೇಟ್‌ ತೆರವಿಗೆ ದಿನಾಂಕ ಘೋಷಣೆ ಮಾಡಿ ಇಲ್ಲವಾದರೆ ಜೈಲ್ ಬರೋ ನಡೆಸಲಾಗುವುದು ಎಂದು ಮಾಜಿ ಸಚಿವ ಅಭಯಚಂದ್ರ‌ ಜೈನ್‌ ಸರಕಾರ‌ ಜಿಲ್ಲಾಡಳಿತಕ್ಕೆ ಎಚ್ಚರಿಕೆ‌ ನೀಡಿದರು. ಜೈಲ್‌ಬರೋ ಗೆ ಪ್ರಥಮವಾಗಿ ಜೈಲ್ ಹೋಗುವವರಲ್ಲಿ ನಾನು ಮೊದಲಿನಾಗಿರುತ್ತೇನೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಹೋರಾಟ‌ ಸಮಿತಿ ಸಹ ಸಂಚಾಲಕ ರಾಘವೇಂದ್ರ, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾಯಿ, ಮೂಸಬ್ಬ ಪಕ್ಷಿಕೆರೆ, ಮೊಯ್ದಿನ್ ಬಾವಾ, ಮಿಥುನ್ ರೈ, ದಿನೇಶ ಕುಂಪಳ, ರಮೇಶ್, ದಿನೇಶ್ ಹೆಗ್ಡೆ ಉಳೆಪಾಡಿ, ರಮೇಶ್ ಶಿಯಾನ್, ಪಿ. ಮೊಹನ್, ಮಾಜಿ ಮೇಯರ್ ಶಶಿದರ ಹೆಗಡೆ, ಗುಲ್ಝಾರ್ ಬಾನು, ಎಂ.ಜಿ. ಹೆಗ್ಡೆ, ವಸಂತ್‌ ಬರ್ನಾರ್ಡ್, ಶೇಖರ ಹೆಜಮಾಡಿ, ರಾಲ್ಫಿ ಡಿಕೋಸ್ತಾ ಸೇರಿದಂತೆ  ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಧರಣಿಗೆ ಮಣಿದು ಜಿಲ್ಲಾಧಿಕಾರಿ ಪರವಾಗಿ ಉಪ ತಹಶೀಲ್ದಾರ್ ನವೀನ್ ಅವರಿ ಸ್ಥಳಕ್ಕೆ‌ ಆಗಮಿಸಿ ನಾಗರಿಕರಿಂದ ಮನವಿ ಸ್ವೀಕರಿಸಿದರು. ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಧರಣಿಯ ಸ್ಥಳಕ್ಕೆ‌ ಭೇಟಿ ನೀಡುವ ಭರವಸೆ ನೀಡಿದ್ದಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *