“ಸುಪ್ರಿಂ ಕೋರ್ಟಿಗೆ ಕೃತಜ್ಞತೆ, ಆದರೆ ಅದರ ಮಧ್ಯಸ್ಥಿಕೆ ಬೇಡ, ಕಾಯ್ದೆಗಳ ರದ್ಧತಿಯಷ್ಟೇ ಬೇಕು”- ಸಂಯುಕ್ತ ಕಿಸಾನ್ ಮೋರ್ಚಾ

ದೆಹಲಿ; ಜ, 12 : ಸುಪ್ರಿಂ ಕೋರ್ಟ್ ಜನವರಿ 11ರಂದು ಮೂರು ಕೃಷಿ ಕಾಯ್ದೆಗಳನ್ನು ಕುರಿತ ಅರ್ಜಿಗಳ ವಿಚಾರಣೆಯ ವೇಳೆಯಲ್ಲಿ “ನೀವು ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಸಮರ್ಥರಾಗಿದ್ದೀರಿ ಎಂದು ಹೇಳಲೇಬೇಕಾಗುತ್ತದೆ. ನೀವು ಸಾಕಷ್ಟು ಸಮಾಲೋಚನೆ ನಡೆಸದೆ ಒಂದು ಕಾನೂನನ್ನು ಮಾಡಿದ್ದಿರಿ, ಅದರ ಫಲಿತಾಂಶವಾಗಿ ಒಂದು ಮುಷ್ಕರ ಉಂಟಾಗಿದೆ. ಆದ್ದರಿಂದ ನೀವೇ ಇದನ್ನು ಬಗೆಹರಿಸಬೇಕು” ಎಂದು ಕೇಂದ್ರ ಸರಕಾರಕ್ಕೆ ಕಟುವಾಗಿ ಹೇಳಿದೆ. ಮುಂದುವರೆದು ಅದು ಸರಕಾರ ಈ ಕಾಯ್ದೆಗಳ ಜಾರಿಯನ್ನು ತಡೆಹಿಡಿಯಬೇಕು, ಇಲ್ಲವೇ ತಾನೇ ತಡೆ ಹಾಕಬೇಕಾಗುತ್ತದೆ ಎಂದಿತು, ಅಲ್ಲದೆ ಒಂದು ಸಮಿತಿಯನ್ನು ರಚಿಸಬೇಕೆಂದಿದ್ದೇವೆ ಎಂದೂ ನ್ಯಾಯಾಲಯ ಹೇಳಿತು.

ಇದಕ್ಕೆ ಸ್ಪಂದಿಸುತ್ತ ಸಂಯುಕ್ತ ಕಿಸಾನ್ ಮೋರ್ಚಾ ಈ ಕಾಯ್ದೆಗಳ ಜಾರಿಯನ್ನು ತಡೆಯುವ ಸೂಚನೆಯನ್ನು ಎಲ್ಲ ರೈತ ಸಂಘಟನೆಗಳು ಸ್ವಾಗತಿಸುತ್ತವೆ, ಆದರೆ ಸುಪ್ರಿಂ ಕೋರ್ಟ್ ನೇಮಿಸಬಹುದಾದ ಸಮಿತಿಯ ಯಾವುದೇ ಕಲಾಪದಲ್ಲಿ ಸಾಮೂಹಿಕವಾಗಿ ಅಥವ ಪ್ರತ್ಯೇಕವಾಗಿ ಭಾಗವಹಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದೆ.

ಇದನ್ನು ಓದಿಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಿರತ 108 ರೈತರ ಮರಣ

ಈ ವಿಚಾರಣೆಯ ವೇಳೆಯಲ್ಲೂ ಕೂಡ ಸರಕಾರ ಈ ಕಾಯ್ದೆಗಳನ್ನು ರದ್ದುಮಾಡಲು ಒಪ್ಪುವುದಿಲ್ಲ ಎಂದು ಮತ್ತೆ-ಮತ್ತೆ ಸ್ಪಷ್ಟಪಡಿಸಿ ತನ್ನ ನಿಲುವಿನ ಪ್ರದರ್ಶನವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ವಕೀಲರೊಡನೆ ಸಮಾಲೋಚನೆ ನಡೆಸಿದ ಮೋರ್ಚಾ, ತಮ್ಮ ವೇದಿಕೆಯ ಅಡಿಯಲ್ಲಿರುವ ರೈತ ಸಂಘಟನೆಗಳು ಯಾವುದೇ ಸಮಿತಿಯ ಮುಂದೆ ಹೋಗಲು ಬಯಸುವುದಿಲ್ಲ ಎಂಬ ಬಗ್ಗೆ ಒಮ್ಮತ ಹೊಂದಿದ್ದಾರೆ ಎಂದಿದೆ. ಮೋರ್ಚಾದ ವಕೀಲರು ಮತ್ತು ಇತರ ಕೆಲವು ವಕೀಲರು ಕೂಡ ಸಂಘಟನೆಗಳೊಂದಿಗೆ ಈ ಕುರಿತು ಸಮಾಲೋಚನೆ ನಡೆಸಲು ಅವಕಾಶಕ್ಕಾಗಿ ವಿಚಾರಣೆಯನ್ನು ಜನವರಿ 12ಕ್ಕೆ ನಿಗದಿ ಪಡಿಸಬೇಕು ಎಂದು ಕೇಳಿದರು. ಆದರೆ ಜನವರಿ 12ರಂದು ಯಾವುದೇ ವಿಚಾರಣೆಯಿರುವುದಿಲ್ಲ, ನ್ಯಾಯಾಲಯದ ಆದೇಶ ಮಾತ್ರ ಬರುತ್ತದೆ ಎಂದು ತಿಳಿದುಬಂದಿದೆ, ಇದು ರೈತರಿಗೆ ನಿರಾಶೆ ಉಂಟುಮಾಡಿರುವ ಸಂಗತಿ ಎಂದು ಮೋರ್ಚಾದ ಹೇಳಿಕೆ ತಿಳಿಸಿದೆ.

ಇದನ್ನು ಓದಿ : ಜನವರಿ 18-ಮಹಿಳಾ ರೈತ ದಿನಾಚರಣೆಗೆ ಮಹಿಳಾ ಸಂಘಟನೆಗಳ ಬೆಂಬಲ

“ರೈತರು ಮತ್ತು ಅವರ ಪ್ರತಿನಿಧಿಗಳಾಗಿ ನಾವು ಸುಪ್ರಿಂ ಕೋರ್ಟಿಗೆ ನಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇವೆ, ಆದರೆ ಗೌರವಾನ್ವಿತ ಸುಪ್ರಿಂ ಕೋರ್ಟಿನ ಸೂಚನೆಗಳಿಗೆ ಒಪ್ಪಲು ನಮಗೆ ಸಾಧ್ಯವಿಲ್ಲದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದಿರುವ ಸಂಯುಕ್ತ ಮೋರ್ಚಾ, ರೈತರ ಹೋರಾಟ ದೇಶಾದ್ಯಂತ ಕೋಟ್ಯಂತರ ರೈತರ ಕಲ್ಯಾಣಕ್ಕಾಗಿಯಾದರೂ, ಅಲ್ಲದೆ ಸಾರ್ವಜನಿಕ ಹಿತದೃಷ್ಟಿಯನ್ನೂ ಹೊಂದಿದ್ದರೂ ಸರಕಾರ ಅದು ಪಂಜಾಬಿನ ರೈತರಿಗಷ್ಟೇ ಸೀಮಿತವಾಗಿದೆ ಎನ್ನುತ್ತಿದೆ ಎಂದು ಖೇದ ವ್ಯಕ್ತಪಡಿಸಿದೆ. ಹರ‍್ಯಾಣ, ಉತ್ತರಪ್ರದೇಶ, ಉತ್ತರಾಖಂಡ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಇತರ ಕೆಲವು ರಾಜ್ಯಗಳ ರೈತರೂ ದಿಲ್ಲಿಯ ಗಡಿಗಳಲ್ಲಿ ಇದ್ದಾರೆ, ಇನ್ನೂ ಸಾವಿರಾರು ರೈತರು ವಿವಿಧ ರಾಜ್ಯಗಳಿಂದ ಬರುತ್ತಲೇ ಇದ್ದಾರೆ ಎಂಬ ಸಂಗತಿಯತ್ತ ಸಂಯುಕ್ತ ಕಿಸಾನ್ ಮೋರ್ಚಾ ಗಮನ ಸೆಳೆದಿದೆ. ಈ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂಬುದು ತಮ್ಮ ಒಮ್ಮತದ ನಿರ್ಧಾರ ಎಂದು ಅದು ಪುನರುಚ್ಚರಿಸಿದೆ.

ಇದು ರಾಜಕೀಯ ಪ್ರಶ್ನೆ, ರೈತರೇ ನಿರ್ಧರಿಸಲು ಬಿಡಬೇಕು

ಈ ವಿಚಾರಣೆಗೆ ಮೊದಲು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎ.ಐ.ಕೆ.ಎಸ್.ಸಿ.ಸಿ.)ಯ ಮುಖಂಡರಾದ ಅವಿಕ್ ಸಾಹಾ “ಈ ಕಾಯ್ದೆಗಳ ಸಂವಿಧಾನಿಕತೆಯ ವಿಷಯವನ್ನು ಸುಪ್ರಿಂ ಕೋರ್ಟ್ ಪರಿಶೀಲಿಸಬಹುದು, ಆದರೆ ಇದರ ಧೋರಣೆಯ ಆಯಾಮದ ವಿಷಯದಲ್ಲಿ ಅದು ದೂರವಿರುವುದೇ ಒಳ್ಳೆಯದು” ಎಂದಿದ್ದರು. ಸರಕಾರ ಇದು ರೈತರಿಗಾಗಿ ತಂದಿರುವಂತದ್ದು ಎನ್ನುತ್ತಿದೆ, ಆದ್ದರಿಂದ ಅದು ತಮಗೆ ಬೇಕೇ ಬೇಡವೇ ಎಂಬುದನ್ನು ಹೇಳಲು ರೈತರಿಗೆ ಬಿಡಬೇಕು. ಸರಕಾರ 40 ಸಂಘಟನೆಗಳೊಂದಿಗೆ ಮಾತುಕತೆ ನಡೆಸುತ್ತಿದೆ, ಆದರೆ ಸುಪ್ರಿಂ ಕೋರ್ಟ್ 8 ಸಂಘಗಳಿಂದಷ್ಟೇ ಅಭಿಪ್ರಾಯ ಕೇಳಿದೆ ಎಂಬ ಸಂಗತಿಯತ್ತ ಗಮನ ಸೆಳೆಯುತ್ತ ಅವರು, “ಇದು ಬಿಜೆಪಿ ರೈತರ ಹಿತಗಳ ವಿರುದ್ಧ ಮಾಡಿರುವ ರಾಜಕೀಯ ಅಯ್ಕೆ, ಇದನ್ನು ದೇಶಾದ್ಯಂತ ರೈತರು ವಿರೋಧಿಸುತ್ತಿದ್ದಾರೆ. ದಿಲ್ಲಿಯನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆಯುತ್ತಿದ್ದಾರೆ, ಬೇಗನೇ ಎಲ್ಲ ಗಡಿಗಳನ್ನು ಮುಚ್ಚಲಿದ್ದಾರೆ. ಸರಕಾರ ಮತ್ತು ಸಂಸತ್ತು ತಪ್ಪು ಕಾಯ್ದೆಗಳನ್ನು ಪಾಸು ಮಾಡಿದೆ ಎಂದು ತಿಳಿಸಲು ಅವರು ಬಂದಿದ್ದಾರೆ” ಎಂದು ಎ.ಐ.ಕೆ.ಎಸ್.ಸಿ.ಸಿ. ಹೇಳಿಕೆ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *