ಸುಪ್ರೀಂ ಕೋರ್ಟ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಹಿಳಾ ಮೀಸಲಾತಿ ಮಸೂದೆ ತಂದಿರುವುದು ಸ್ಪಷ್ಟವಾಗಿದೆ-ಸಿಪಿಐ(ಎಂ) ಸಂಸದ ಆರಿಫ್

ಸುಪ್ರಿಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸರ್ಕಾರ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಬೇಕಾದುದರಿಂದ ಅದಕ್ಕೆ ಪ್ರತಿಯಾಗಿ ಈ ಮಸೂದೆಯನ್ನು ತರಲಾಗಿದೆ ಎಂಬುದು ಸ್ಪಷ್ಟ ಎಂದು ಸಪ್ಟೆಂಬರ್‍ 20ರಂದು ಲೋಕಸಭೆಯಲ್ಲಿ ಮಂಡಿಸಿದ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಗೆ ಕುರಿತ  ಮಸೂದೆಯ ಮೇಲೆ ಮಾತಾಡುತ್ತ ಸಿಪಿಐ(ಎಂ) ಸಂಸದ ಎ.ಎಂ. ಆರಿಪ್   ಹೇಳಿದರು.

ಮಹಿಳೆಯರಿಗೆ ಮೀಸಲಾತಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ಆಗಸ್ಟ್ 11ರಂದು ಸುಪ್ರಿಂ ಕೋರ್ಟ್ ಸರ್ಕಾರಕ್ಕೆ  “ಇದಕ್ಕೆ ಸಂಬಂಧಿಸಿ ನೀವು (ಸರ್ಕಾರ) ಇನ್ನೂ ಉತ್ತರ ನೀಡಿಲ್ಲ. ಇದಕ್ಕೆ ಉತ್ತರಿಸಲು ಏಕೆ ಸಂಕೋಚಪಡುತ್ತೀರಿ ? ನೀವು ಯಾಕೆ ಉತ್ತರಿಸುತ್ತಿಲ್ಲ? ನೀವು ಅದನ್ನು ಕಾರ್ಯಗತ ಮಾಡುತ್ತೀರಾ  ಅಥವಾ ಇಲ್ಲವಾ?” ಎಂದು ಕೇಳಿದ ಪ್ರಶ್ನೆಯನ್ನು ಆರಿಫ್‍ ಉಲ್ಲೇಖಿಸಿದರು. “ ನಿಮ್ಮ ಆದ್ಯತೆ ಏನು ಎಂದು ಹೇಳಿ. ಏಕೆಂದರೆ ಇದು
ನಿರ್ಲಕ್ಷಿಸಲಾಗದ ತುಂಬಾ ಮುಖ್ಯವಾದ ಸಮಸ್ಯೆಯಾಗಿದೆ. ಇದು ನಮಗೆಲ್ಲರಿಗೂ ಸಂಬಂಧಿಸಿದ ವಿಷಯವಾಗಿದೆ ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಕೊನೆಯ ಅವಕಾಶವಾಗಿ ಈ ಮಸೂದೆಯನ್ನು ಮಂಡಿಸಲಾಗಿದೆ. ಅದೇ ರೀತಿ ನಾಗಾ ಲ್ಯಾಂಡ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸರ್ಕಾರಕ್ಕೆ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ನಂತರ, ನಿಮ್ಮೊಂದಿಗೆ ಒಪ್ಪದ ಸರ್ಕಾರಿ ಸಂಸ್ಥೆಗಳ ವಿರುದ್ಧ ನೀವು ತೀವ್ರ ನಿಲುವುಗಳನ್ನು ತೆಗೆದುಕೊಳ್ಳುತ್ತೀರಿ. ಆದರೆ ನಿಮ್ಮದೇ ಸರ್ಕಾರ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ವರ್ತಿಸುತ್ತಿದೆ. ಅದರ ಬಗ್ಗೆ ನೀವು ಏನನ್ನೂಹೇಳಬಯಸುವುದಿಲ್ಲ”  ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದಕ್ಕೂ ಸರಕಾರ ಸ್ಪಂದಿಸಿಲ್ಲ ಎಂದು ಆರಿಫ್‍ ಹೇಳಿದರು.

ನಕಲಿ ಅನುಕಂಪವನ್ನು ಬಯಲು ಮಾಡಿದೆ

ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸಿಪಿಐ(ಎಂ) ಪರವಾಗಿ ಮಧ್ಯಪ್ರವೇಶಿಸುತ್ತ ಅವರು ಪಕ್ಷದ ಪರವಾಗಿ ಸಂವಿಧಾನ (128ನೇ ತಿದ್ದುಪಡಿ) ಮಸೂದೆಯನ್ನು ಸ್ವಾಗತಿಸುವುದಾಗಿ ಹೇಳುತ್ತ ಇದನ್ನು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ತರಲಾಗಿದೆ ಎಂದರು. ದೇಶದ ಕಾನೂನುಗಳನ್ನು ರೂಪಿಸುವಲ್ಲಿ ಮತ್ತು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ನಮ್ಮ ದೇಶದಲ್ಲಿ ಬಹಳ  ಹಿಂದೆಯೇ ಚರ್ಚೆ ಆರಂಭವಾಗಿದೆ.ಆದರೂ ಈಗ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಹಿಂದಿನ ಎಲ್ಲ ಪ್ರಯತ್ನಗಳನ್ನು ಮರೆಮಾಚಿ, ಬಿಜೆಪಿ ಮಾತ್ರವೇ ಇದನ್ನು ಮಾಡಲು ಸಾಧ್ಯ ಎಂಬಂತೆ  ಈ ಮಸೂದೆಯನ್ನು ಮಂಡಿಸಿದೆ ಎಂದು ಅವರು ಲೋಕಸಭೆಗೆ ಹೇಳಿದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಈ ವೈರಲ್ ವಿಡಿಯೊದಲ್ಲಿ ತೆವಳುತ್ತಿರುವವರು ಮುಸ್ಲಿಂ ಅಲ್ಲ, ಅದು ಯುಪಿಯದ್ದೂ ಅಲ್ಲ!

ವಾಸ್ತವವಾಗಿ, ಈ ಮಸೂದೆಯನ್ನು ತಂದ ಶ್ರೇಯಸ್ಸು ಕಾಮ್ರೇಡ್ ಬೃಂದಾ ಕಾರಟ್, ಅನಿ ರಾಜ, ಶ್ರೀಮತಿ ಟೀಚರ್ ಸೇರಿದಂತೆ ದೇಶದಲ್ಲಿ ಸಕ್ರಿಯವಾಗಿರುವ ಎಲ್ಲಾ ಮಹಿಳಾ ಸಂಘಟನೆಗಳಿಗೆ  ಮತ್ತು ಮಹಿಳೆಯರಿಗೆ ಹಾಗೂ ಮೀಸಲಾತಿಯನ್ನು ಜಾರಿಗೊಳಿಸಬೇಕು, ಸಂವಿಧಾನದ ಪ್ರಕಾರ ಎಲ್ಲರಿಗೂ ಸಮಾನ ನ್ಯಾಯ, ಸಮಾನ ಸ್ಥಾನಮಾನವನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿ, ಸುಪ್ರೀಂ ಕೋರ್ಟ್‌ಗೆ ಹೋದವರಿಗೆ ಸಲ್ಲುತ್ತದೆ ಎಂದು ಅವರು ಲೋಕಸಭೆಗೆ
ನೆನಪಿಸಿದರು. “ಇಷ್ಟು ವರ್ಷಗಳಿಂದ ಈ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ಎಲ್ಲ ರಿಗೂ ನನ್ನ ಅಭಿನಂದನೆಗಳನ್ನು ವ್ಯಕ್ತಪಡಿಸುತ್ತೇನೆ” ಎಂದ ಅವರು ಈ ಬಾರಿಯ ಲೋಕಸಭೆಯ ಅವಧಿ ಮುಗಿಯುವ ಹಂತದಲ್ಲಿ ಮಂಡಿಸಿ, ಅದೂ ಕೂಡ ತಕ್ಷಣ ಅನುಷ್ಠಾನಗೊಳಿಸದೆ ಕಾಲಹರಣ ಮಾಡುವ  ರೀತಿಯಲ್ಲಿ ತಂದಿರುವ ಈ ವಿಧೇಯಕವು  ಮಹಿಳೆಯರ ಬಗ್ಗೆ ದೇಶದ ಆಳುವವರಿಗೆ ಇರುವ ನಕಲಿ ಅನುಕಂಪವನ್ನು ಬಯಲು ಮಾಡಿದೆ ಎಂದರು.

ನೀತಿ ಉಲ್ಲಂಘನೆ… ಪ್ರಜಾಪ್ರಭುತ್ವಕ್ಕೆ ಅಗೌರವ

“ಲೋಕಸಭೆಯಲ್ಲಿ ನಡೆಸಬೇಕಾದ ಅಜೆಂಡಾದ ಬಗ್ಗೆ ಕೊನೆಯ ಗಳಿಗೆಯವರೆಗೂ ಏನನ್ನೂ ಹೇಳದೆ ಸಂಸತ್ತಿನ ಎಲ್ಲ ನೀತಿ ನಿಯಮಗಳನ್ನು  ಈ ಸರ್ಕಾರ ಸಾರಾಸಗಟಾಗಿ ಉಲ್ಲಂಘಿಸಿ ನಮ್ಮನ್ನೆಲ್ಲ ಕತ್ತಲಲ್ಲಿಟ್ಟಿದೆ. ಈ ಮಸೂದೆಯನ್ನು ಮಂಡಿಸುವವರೆಗೂ ನಮಗೆ ಅದರ ಬಗ್ಗೆ ಏನೂ ತಿಳಿದಿಲ್ಲ. ಆದರೆ ಅದೇ ಸಮಯದಲ್ಲಿ ಬಿಜೆಪಿಯ ಎಲ್ಲರಿಗೂ ಇದು ಈಗಾಗಲೇ ಚೆನ್ನಾಗಿ ತಿಳಿದಿದೆ. ನಾವೆಲ್ಲರೂ ಇದನ್ನು ನೋಡಿದ್ದೇವೆ. ಅವರೇ ಈ ಸರಕಾರಕ್ಕೆ ಸಂಸದ್‍ ಸದಸ್ಯರಿಗಿಂತ ಹೆಚ್ಚು ನಂಬಲರ್ಹರು. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಮತ್ತೊಂದು ಅವಮಾನ. ಈ ಸರ್ಕಾರ ಯಾಕೆ ಹೀಗೆ ವರ್ತಿಸುತ್ತಿದೆ? ಇದು ಈ ಸದನ ಮತ್ತು ಪ್ರಜಾಪ್ರಭುತ್ವದ ಘನತೆಯ ಅಪಹಾಸ್ಯವಲ್ಲದೆ ಬೇರೇನೂ ಅಲ್ಲ” ಎಂದು ಮುಂದುವರೆದು ಆರಿಫ್‍ ಹೇಳಿದರು.

2014ರಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿದಾಗ ಸಂಸತ್‌ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ .33ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿತ್ತು. ವಾಸ್ತವವಾಗಿ, ಅವರು ತಮ್ಮ ಚುನಾವಣಾ ಭರವಸೆಗಳನ್ನು ಗೌರವಿಸಿದ್ದರೆ, ಈ ಸದನದಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಅಥವಾ ಇನ್ನೂ ಹೆಚ್ಚು ಮಹಿಳಾ ಸದಸ್ಯರು ಇರುತ್ತಿದ್ದರು. 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗ ಇಂತಹ ಸಂವಿಧಾನ ತಿದ್ದುಪಡಿ ತರಲು ಅವಕಾಶ ಸಿಕ್ಕಾಗಲಾದರೂ ಅದನ್ನು ನಿಜವಾಗಿಯೂ ಅನುಷ್ಠಾನಕ್ಕೆ ತರುವ ಕಾಳಜಿ ಇದ್ದಿದ್ದರೆ  ಅದನ್ನು ಜಾರಿಗೊಳಿಸಬಹುದಿತ್ತು ಎಂದು ಆರಿಫ್
ಹೇಳಿದರು.

ಇನ್ನೂ ಹಲವು ವರ್ಷ ಕಾಯಬೇಕಾಗಿದೆ

“ಈ ಸರ್ಕಾರ ಸದನದಲ್ಲಿ ಯಾವುದೇ ಚರ್ಚೆ ನಡೆಸದೆ ಅಥವಾ ಸ್ಥಾಯಿ ಸಮಿತಿಗೆ ಏನನ್ನೂ ಕಳುಹಿಸದೆ ಲೆಕ್ಕವಿಲ್ಲದಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಈ ಅವಧಿಯಲ್ಲಿ ಬಿಜೆಪಿಯಾಗಲೀ, ಈ ಸರಕಾರವಾಗಲೀ ಮಹಿಳಾ ಮೀಸಲಾತಿಯಬಗ್ಗೆ ಬಾಯಿ ತೆರೆಯಲಿಲ್ಲ. ಎರಡನೇ ಬಾರಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳ ನಂತರ ಈ ಮಸೂದೆಯನ್ನು ಮಂಡಿಸಲಾಗಿದೆ. ಈಗಲೂ 2024ರಲ್ಲಿ ನಡೆಯುವ ಚುನಾವಣೆಯಲ್ಲಿ  ಮಹಿಳೆಯರಿಗೆ ಮೀಸಲಾತಿ ಇರುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ 2029ರಲ್ಲಿ ಎಂದು ಹೇಳಿದ್ದೀರಿ. ಹಾಗಾಗಿ ವಿನಾಯಕ ಚತುರ್ಥಿಯಂದು ರಾಷ್ಟ್ರೀಯ ಅಸೆಂಬ್ಲಿಯ ಹೊಸ ಕಟ್ಟಡವನ್ನು ಪ್ರವೇಶಿಸುವಾಗ ಮಹಿಳೆಯರ ಶಾಪಕ್ಕೆ ಒಳಗಾಗುತ್ತೀರಿ. ಅದೇ ರೀತಿ ಜನಗಣತಿ ಮತ್ತು ಕ್ಷೇತ್ರಗಳ ಮರುವಿಂಗಡಣೆಯ ಸಮಯವನ್ನು ನಿರ್ದಿಷ್ಟ ಪಡಿಸಲಾಗಿಲ್ಲ.  ಇದರಿಂದ ಮಹಿಳೆಯರು ಇನ್ನೂ ಹಲವು ವರ್ಷ ಕಾಯಬೇಕಾಗಿದೆ” ಎಂದು ಆರಿಫ್‍ ಟಿಪ್ಪಣಿ ಮಾಡಿದರು.

ನಿಜವಾದ ಇತಿಹಾಸ ಹೇಳಬೇಕು

ಇದು ಈ ಸದನದಲ್ಲಿ ಪರಿಚಯಿಸಲಾದ ಅತ್ಯಂತ ಆಸಕ್ತಿದಾಯಕ ಮಸೂದೆಗಳಲ್ಲಿ ಒಂದಾಗಿದೆ. ರಾಜೀವ್ ಗಾಂಧಿ ಪ್ರಧಾನಿ ಯಾಗಿದ್ದಾಗಿನಿಂದಲೂ ಹಲವು ಪ್ರಯತ್ನಗಳು ನಡೆದಿವೆ.  2010ರಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವೂ ಆಗಿತ್ತು. ಈ ಎಲ್ಲಾ ಇತಿಹಾಸವನ್ನು ಈ ಮಸೂದೆಯ “ ಉದ್ದೇಶ ಮತ್ತು ಕಾರಣ”ಗಳಲ್ಲಿ ಹೇಳಬೇಕು.

“ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಕಾನೂನು ಸಚಿವರು ಈ ವಿಷಯದಲ್ಲಿ ಏನು ಹೇಳಿದ್ದಾರೆ? ಪ್ರಧಾನಿ ಆಗಾಗ ಹೇಳುತ್ತಿರುತ್ತಾರೆ. ಅಮೃತಕಾಲ, ವಿಕಸಿತ್  ಭಾರತ್,   ನಾರಿ ಶಕ್ತಿ ಎಂದು ಆಗಾಗ್ಗೆ ಉಲ್ಲೇಖಿಸುತ್ತಾರೆ. ನಾನು ಕೇರಳ ರಾಜ್ಯದ ಜನರ ಪ್ರತಿನಿಧಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ.  ಕೇರಳವು 1990 ರ ದಶಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ  ಮೀಸಲಾತಿಯನ್ನು ಪರಿಚಯಿಸಿತು – ಸುಮಾರು 32 ವರ್ಷಗಳ ಹಿಂದೆ. ಆ ಸಮಯದಲ್ಲಿ ಸುಮಾರು 30 ಪ್ರತಿಶತ ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. 2008ರಲ್ಲಿ ನಾವು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು 50%ಕ್ಕೆ ಹೆಚ್ಚಿಸಿದ್ದೇವೆ. ಸಂವಿಧಾನವು ನಿಗದಿಪಡಿಸಿದ 33% ಕನಿಷ್ಟ ಮಿತಿಯನ್ನು ಮೀರಿ, ದೇಶದ ಯಾವುದೇ ರಾಜ್ಯಕ್ಕಿಂತ ಮಹಿಳೆಯರಿಗೆ ಹೆಚ್ಚಿನ ಕೋಟಾವನ್ನು ಒದಗಿಸಿದ ದೇಶದ ಮೊದಲ ರಾಜ್ಯ ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಇದೆ” ಎಂದು ಅವರು ಹೇಳಿದರು.

“ಆದುದರಿಂದ ಈ ಮಸೂದೆಯನ್ನು ತರುವ ಮೂಲಕ ಈ ರಾಷ್ಟ್ರೀಯ ಸಭೆಯು ಇತಿಹಾಸವನ್ನು ಸೃಷ್ಟಿಸುವ  ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳುವುದು ದೇಶದ ಮಹಿಳೆಯರನ್ನು ಮೂರ್ಖರನ್ನಾಗಿ ಮಾಡುವ ರಾಜಕೀಯ ಅಪ ಹಾಸ್ಯವಲ್ಲದೆ ಬೇರೇನೂ ಅಲ್ಲ ಎಂದು ನಾನು ನಿಮಗೆ ತಿಳಿಸಬಯಸುತ್ತೇನೆ” ಎಂದ ಸಿಪಿಐ(ಎಂ) ಸಂಸದ ಎ. ಎಂ. ಆರಿಫ್, ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಕಾಯದೆ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಈ ಮಸೂದೆಯನ್ನು ಈ ಸರ್ಕಾರ ಜಾರಿಗೆ ತರಬೇಕು ಎಂದು ಪಕ್ಷದ ಪರವಾಗಿ ವಿನಂತಿಸಿದರು.

(ಸಂಗ್ರಹ: ಸಿ.ಸಿದ್ದಯ್ಯ)

ವಿಡಿಯೋ ನೋಡಿ:ಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್.‌ ವಿಮಲಾ ಜೊತೆ ಮಾತುಕತೆ #womensreservationbill

Donate Janashakthi Media

Leave a Reply

Your email address will not be published. Required fields are marked *