ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ಆಧಾರದಲ್ಲಿ ರಾಜ್ಯ ಸರ್ಕಾರ ನೀಮಿಸಿದ್ದ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿದ್ದ ವರದಿಯನ್ನು ರಾಜ್ಯ ಸರ್ಕಾರ ಕೆಲವು ತಿದ್ದುಪಡಿಗಳೊಂದಿಗೆ ಜಾರಿಗೊಳಿಸಲು ತೀರ್ಮಾನಿಸಿದೆ. ರಾಜ್ಯ ಸರ್ಕಾರದ ಹೊಸ ಸೂತ್ರವು ಒಳ ಮೀಸಲಾತಿ ಜಾರಿಯನ್ನು ತಾತ್ವಿಕವಾಗಿ ಒಪ್ಪಿದರೂ ಕೆಲವು ಸಮಸ್ಯೆಗಳನ್ನು ಬಿಗಡಾಯಿಸುವಂತೆ ಮಾಡಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಸ್ಫೂರ್ತಿಯನ್ನು ಹಾಳುಗೆಡವದೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಸರ್ಕಾರವನ್ನು ಆಗ್ರಹಿಸುತ್ತದೆ.
ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳನ್ನು ಅನುಸರಿಸಿ ನ್ಯಾ. ನಾಗಮೋಹನದಾಸ್ ಆಯೋಗವು, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025, ರಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಆಧರಿಸಿ 101 ಪ.ಜಾ.ಗಳನ್ನು 5 ಪ್ರವರ್ಗಗಳಾಗಿ ವರ್ಗೀಕರಿಸಿ ಒಳ ಮೀಸಲಾತಿಯನ್ನು ನಿರ್ಧರಿಸಿ ಶಿಫಾರಸು ನೀಡಿತ್ತು. ಆಯೋಗದ ಪ್ರಕಾರ, ಪ್ರವರ್ಗ A (59 ಜಾತಿಗಳು) – 1%, ಪ್ರವರ್ಗ B (18 ಜಾತಿಗಳು) – 6%, ಪ್ರವರ್ಗ C (17 ಜಾತಿಗಳು) – 5% ಪ್ರವರ್ಗ D (4 ಜಾತಿಗಳು) – 4% ಮತ್ತು ಪ್ರವರ್ಗ E (3 ಜಾತಿಗಳು) – 1% ಒಳ ಮೀಸಲಾತಿ ಶಿಫಾರಸು ಮಾಡಲಾಗಿತ್ತು.
ನ್ಯಾ.ನಾಗಮೋಹನದಾಸ್ ಆಯೋಗವು ಈ ರೀತಿ ಪ್ರವರ್ಗಗಳನ್ನು ವಿಂಗಡಿಸುವಾಗ ಕಡಿಮೆ ಸಂಖ್ಯೆಯ ಕೆಲ ಜಾತಿಗಳನ್ನು B ಮತ್ತು C ಪ್ರವರ್ಗಗಳಲ್ಲಿ ಸೇರಿಸಿದ್ದರಿಂದ, ಇದೇ ಪ್ರವರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾತಿಗಳ ಜೊತೆಯಲ್ಲಿ ಸೇರಿಸಿದ್ದರಿಂದ ಒಳ ಮೀಸಲಾತಿ ಪಡೆಯಲು ಅನುಕೂಲಕರವಾಗಿ ಇರಲಿಲ್ಲ ಎಂಬ ಸಣ್ಣ ಮಿತಿಯನ್ನು ಹೊರತುಪಡಿಸಿದರೆ ಆಯೋಗದ ವರದಿಯು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗೆ ಅನುಗುಣವಾಗಿಯೇ ಇತ್ತು. ಇಂತಹ ಕೆಲ ಮಿತಿಗಳನ್ನು ಸರ್ಕಾರ ಸರಿಪಡಿಸಬಹುದಿತ್ತು.
ಇದುವರೆಗಿನ ಪ.ಜಾ. ಮೀಸಲಾತಿಯ ಪ್ರಯೋಜನ ಪಡೆದ ಜಾತಿಗಳಲ್ಲಿ ಅತ್ಯಂತ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಂತಹ ಜಾತಿಗಳಿಗೂ ಆಯೋಗವು ಮೀಸಲಾತಿಯನ್ನು ನಿಗದಿಪಡಿಸಿ ಒಳ ಮೀಸಲಾತಿಯ ನೈಸರ್ಗಿಕ ನ್ಯಾಯವನ್ನು ಒದಗಿಸಿತ್ತು.
ಇದನ್ನೂ ಓದಿ : ಒಳ ಮೀಸಲಾತಿ | 1766 ಪುಟ, 6 ಶಿಫಾರಸ್ಸುಳ್ಳ ವರದಿ ಮುಖ್ಯಮಂತ್ರಿಗೆ ಸಲ್ಲಿಕೆ
ರಾಜ್ಯ ಸರ್ಕಾರವು ಅಂತಿಮವಾಗಿ ಆಯೋಗದ ಶಿಫಾರಸುಗಳನ್ನು ಬದಲಾವಣೆ ಮಾಡಿ ಮೂರು ಪ್ರವರ್ಗಗಳನ್ನು ತೀರ್ಮಾನಿಸಿ, ಎಡಗೈ ಸಂಬಂಧಿತ ಜಾತಿಗಳಿಗೆ ಶೇ.6 ಮತ್ತು ಬಲಗೈ ಸಂಬಂಧಿತ ಜಾತಿಗಳಿಗೆ ಶೇ. 6 ಹಾಗೂ ಸ್ಪ್ರಶ್ಯ ಮತ್ತು ಅಲೆಮಾರಿ ಸಮುದಾಯದ ಜಾತಿಗಳಿಗೆ ಶೇ. 5 ರಷ್ಟು ಒಳ ಮೀಸಲಾತಿ ಹಂಚಿಕೆ ಮಾಡಿದೆ.
ಅತಿ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಸ್ಪ್ರಶ್ಯ ಜಾತಿ ಸಮುದಾಯಗಳ ಜೊತೆಗೆ ಸೇರಿಸಿ ಶೇ.5 ರಷ್ಟು ಪ್ರವರ್ಗದ ಜೊತೆ ಮೀಸಲಾತಿ ನೀಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಒಳ ಮೀಸಲಾತಿ ವರ್ಗೀಕರಣ ಕುರಿತಂತೆ ಸರ್ವೋಚ್ಚ ನ್ಯಾಯಾಲಯದ “ಶೈಕ್ಷಣಿಕ, ಔದ್ಯೋಗಿಕ ಮತ್ರು ಸಾಮಾಜಿಕ ಹಿಂದುಳಿದಿರುವಿಕೆ” ಯನ್ನು ಪರಿಗಣಿಸಬೇಕೆಂಬ ಮಾರ್ಗಸೂಚಿಗೆ ರಾಜ್ಯ ಸರ್ಕಾರದ ಈ ತೀರ್ಮಾನ ವಿರುದ್ಧವಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. “ಸಮಾನರಲ್ಲಿ ಮಾತ್ರ ಸಮಾನತೆ ಇರುತ್ತದೆ. ಅಸಮಾನರನ್ನು ಸಮಾನರ ಜೊತೆ ಸರಿಸಮ ಎಂದು ಸೇರಿಸಿದರೆ ಅಲ್ಲಿ ಅಸಮಾನತೆ ಮುಂದುವರಿಯುತ್ತದೆ” ಎಂಬ ತತ್ವಕ್ಕೂ ರಾಜ್ಯ ಸರ್ಕಾರದ ತೀರ್ಮಾನ ವ್ಯತಿರಿಕ್ತವಾಗಿವಾಗಿದೆ. ಹೀಗಾಗಿಯೇ, ಪ.ಜಾ.ಗಳಲ್ಲಿ ಅತೀ ಹಿಂದುಳಿದಿರುವ ಶೇ.70 ಕ್ಕಿಂತ ಹೆಚ್ಚಿನ ಅಲೆಮಾರಿ ಮತ್ತು ಅತೀ ಹಿಂದುಳಿದ ಜಾತಿಗಳ ಜನರು ಒಳ ಮೀಸಲಾತಿಯಲ್ಲಿ ಪ್ರತ್ಯೇಕ ಪ್ರವರ್ಗವಾಗಿ ಗುರುತಿಸಿ ಒಳ ಮೀಸಲಾತಿಯನ್ನು ನೀಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗೆ ವಿರುದ್ಧವಾಗಿ ಆಯೋಗದ ಶಿಫಾರಸ್ಸನ್ನು ಮಾರ್ಪಡಿಸಿ ರಾಜ್ಯ ಸರ್ಕಾರ ಒಳ ಮೀಸಲಾತಿ ವರ್ಗೀಕರಣ ಮಾಡಿರುವುದರಿಂದ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ ಸರ್ಕಾರಕ್ಕೆ ಮುಖಭಂಗವಾಗುವ ಸಾಧ್ಯತೆಯಿದೆ.
ಈ ನಿಟ್ಟಿನಲ್ಲಿ ಪರಿಶಿಷ್ಟರಲ್ಲಿ ಅಲೆಮಾರಿ ಮತ್ತು ಅತೀ ಹಿಂದುಳಿದ ಜಾತಿಗಳಿಗೆ ಪ್ರತ್ಯೇಕವಾಗಿ ಒಳ ಮೀಸಲಾತಿ ವರ್ಗೀಕರಣ ಮಾಡುವುದು ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗುತ್ತದೆ ಮತ್ತು ನ್ಯಾಯ ಸಮ್ಮತವಾಗುತ್ತದೆ. ರಾಜ್ಯ ಸರ್ಕಾರ ಕೇವಲ ರಾಜಕೀಯ ಹಿತಾಸಕ್ತಿಗಳನ್ನಷ್ಟೇ ಗಮನಿಸದೆ ಸಾಮಾಜಿಕ ನ್ಯಾಯದ ದೃಢ ತೀರ್ಮಾನ ಮಾಡಬೇಕಾಗಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನವ ಉದಾರವಾದಿ ಮತ್ತು ಖಾಸಗೀಕರಣದ ಆರ್ಥಿಕ ನೀತಿಗಳ ಪರಿಣಾಮವಾಗಿ ಸಾರ್ವಜನಿಕ ರಂಗದಲ್ಲಿ ಮೀಸಲಾತಿಯೇ ಅಪ್ರಸ್ತುತ ಎಂಬಂತಾಗುತ್ತಿದೆ. ಮೀಸಲಾತಿ ಯಾಗಲೀ ಅಥವಾ ಒಳ ಮೀಸಲಾತಿಯಾಗಲೀ, ಅದಕ್ಕೆ ನಿಜವಾದ ಅರ್ಥದಲ್ಲಿ ಮಾನ್ಯತೆ ಮತ್ತು ಪ್ರಯೋಜನ ಸಿಗಬೇಕಾದರೆ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನೀತಿಗಳ ವಿರುದ್ಧ ದೃಢವಾದ ಪ್ರತಿರೋಧವನ್ನು ರಾಜ್ಯ ಸರ್ಕಾರ ತೋರಬೇಕು. ರಾಜ್ಯದಲ್ಲಿರುವ ಎಲ್ಲ ಸಾರ್ವಜನಿಕ ಉದ್ಯಮಗಳು ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಎರಡು ಲಕ್ಷಕ್ಕಿಂತ ಅಧಿಕ ಹುದ್ದೆಗಳನ್ನು ಭರ್ತಿಮಾಡಲು ಕ್ರಮವಹಿಸಬೇಕು. ಮತ್ತು ಬಹಳ ಮುಖ್ಯವಾಗಿ ಖಾಸಗಿ ರಂಗದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಸಿಪಿಐ(ಎಂ) ಆಗ್ರಹಿಸುತ್ತದೆ.
ಇದನ್ನೂ ನೋಡಿ : 40 ವರ್ಷ ನಡೆದ ಕ್ರೈಮ್ 20 ದಿನದಲ್ಲಿ ಹೇಗೆ ಸಿಗುತ್ತೆ? ಅದಕ್ಕಿನ್ನೂ ಸಮಯ ಬೇಕು Janashakthi Media
