ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ(ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ಕಾನೂನನ್ನು ಸುಪ್ರೀಂಕೋರ್ಟ್ ಸಂವಿಧಾನ ಪೀಠವು ಎತ್ತಿ ಹಿಡಿದಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆಬಿ ಪರ್ದಿವಾಲಾ ಅವರನ್ನು ಒಳಗೊಂಡ ಸಂವಿಧಾನ ಪೀಠ ತೀರ್ಪು ನೀಡಿದ್ದು, ಮೂವರು ನ್ಯಾಯಮೂರ್ತಿಗಳು ತಿದ್ದುಪಡಿಯ ಸಿಂಧುತ್ವವನ್ನು ಎತ್ತಿಹಿಡಿದಿದ್ದಾರೆ. ಯು ಯು ಲಲಿತ್, ಎಸ್ ರವೀಂದ್ರ ಭಟ್ ಮಾತ್ರ ಭಿನ್ನ ತೀರ್ಪು ನೀಡಿದ್ದಾರೆ.
ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು, ಅಲ್ಪಸಂಖ್ಯಾತರ ದೃಷ್ಟಿಯಿಂದ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಬಡವರನ್ನು ಇದರಿಂದ ಹೊರಗಿಡುವುದು ತಾರತಮ್ಯವಾಗುತ್ತದೆ ಎಂದು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ನೀತಿಯನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಧೀಶರಾದ ತ್ರಿವೇದಿ ಮತ್ತು ಪಾರ್ದಿವಾಲಾ ಹೇಳಿದರು.
ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಅವರು ತಮ್ಮ ತೀರ್ಪಿನಲ್ಲಿ ‘ಒಟ್ಟು ಮೀಸಲಾತಿಯ ಶೇ 50ರಷ್ಟು ಮಿತಿಯನ್ನು ಮೀರಲು ಅವಕಾಶ ಮಾಡಿಕೊಡುವುದು ಮತ್ತಷ್ಟು ಅಸಮಾನತೆಗೆ ಕಾರಣವಾಗಬಹುದು. ಅಂತಿಮವಾಗಿ ಅದು ಮತ್ತಷ್ಟು ವಿಭಜನೆಗೆ ದಾರಿ ಮಾಡಿಕೊಡಬಹುದು. ಆಗ ಸಮಾನತೆ ಎಂಬುದು ಕೇವಲ ಮೀಸಲಾತಿಯ ಹಕ್ಕು ಎಂಬ ಮಟ್ಟಕ್ಕೆ ಕುಸಿಯಬಹುದು’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು 2019ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿತ್ತು. ಇದು ಸಂವಿಧಾನಬಾಹಿರ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಅರ್ಜಿಗಳನ್ನು ಸಲ್ಲಿಸಿದ್ದರು.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವುದಕ್ಕೆ ಸಂಬಂಧಿಸುವ ಕಾನೂನಿನ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಕೈಗೊಂಡ ನ್ಯಾಯಪೀಠ ತನ್ನ ತೀರ್ಪು ಪ್ರಕಟಿಸಿದೆ.
ಬಹುಮತದ ತೀರ್ಪು ತಿದ್ದುಪಡಿಯ ಪರವಾಗೇ ಇದ್ದ ಕಾರಣ, ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 40ಕ್ಕೂ ಹೆಚ್ಚು ಅರ್ಜಿಗಳನ್ನು ವಜಾ ಮಾಡಲಾಗಿದೆ.
ಆರ್ಥಿಕ ಮಾನದಂಡಗಳನ್ನು ಆಧರಿಸಿದ ಮೀಸಲಾತಿ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆಯೇ? ಹೀಗೆ ಮಾಡಿದರೆ ಸಂವಿಧಾನದ 103ನೇ ತಿದ್ದುಪಡಿ ಸಂವಿಧಾನದ ಮೂಲ ಆಶಯದ ಉಲ್ಲಂಘನೆಯಾಗುತ್ತದೆಯಲ್ಲವೇ? ಖಾಸಗಿ ಸಂಸ್ಥೆಗಳಿಗೆ ನೇಮಕಾತಿ ಅಥವಾ ದಾಖಲಾತಿಗೆ ಸಂಬಂಧಿಸಿದ ವಿಚಾರದಲ್ಲಿ ನಿರ್ದೇಶನ ನೀಡಲು ಸರ್ಕಾರಗಳಿಗೆ ವಿಶೇಷ ಅಧಿಕಾರ ನೀಡಲು ಅವಕಾಶವಿದೆಯೇ ಎಂಬ ಅಂಶಗಳ ಬಗ್ಗೆ ನ್ಯಾಯಾಲಯ ಪರಿಶೀಲನೆಯನ್ನು ಕೈಗೊಂಡಿತು.
ಸುಪ್ರೀಂಕೋರ್ಟ್ ನ್ಯಾಯಪೀಠ ಪರಿಗಣಿಸಿದ ಮತ್ತೊಂದು ಅಂಶವೆಂದರೆ, ಮೀಸಲಾತಿ ನಿಯಮ. 1992ರ ಇಂದ್ರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ಆಯೋಗ ಪ್ರಕರಣ) 9 ಸದಸ್ಯರಿದ್ದ ನ್ಯಾಯಪೀಠವು ಮೀಸಲಾತಿಯ ಒಟ್ಟು ಪ್ರಮಾಣ ಶೇಕಡಾ 50 ಮೀರಬಾರದು. ವಿಶೇಷ ಸಂದರ್ಭದಲ್ಲಿ ಈ ನಿರ್ಬಂಧಕ್ಕೆ ವಿನಾಯ್ತಿಯಿದೆ ಎಂದು ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನಿವೃತ್ತಿಗೆ ಒಂದು ದಿನ ಮೊದಲು ಈ ಮಹತ್ವದ ತೀರ್ಪು ಬಂದಿದೆ. ಲಲಿತ್ ಅವರು ನಾಳೆ (ನವೆಂಬರ್ 8) ನಿವೃತ್ತರಾಗಲಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಸೋತ ಕೂಡಲೇ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರ 103 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು 2019ರ ಸಾರ್ವತ್ರಿಕ ಚುನಾವಣೆಯ ಮೊದಲು ಆರಂಭಿಸಲಾಯಿತು.