ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಪ್ರಕರಣ ಇಂದು (ಏಪ್ರಿಲ್ 25) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಮುಂದೆ ಮತ್ತೆ ಪ್ರಸ್ತಾಪಿತವಾಗಿದೆ.
ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಕ್ಷೇತ್ರ ಪುನರ್‌ವಿಂಗಡಣೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಪಟ್ಟಿ ಮಾಡುವಂತೆ ಹಿರಿಯ ವಕೀಲ ಶೇಖರ್ ನಫಡೆ ಕೋರಿದರು. ಪೀಠದ ರಚನೆಯಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಹೇಳುವ ಮೂಲಕ ಪ್ರಕರಣವನ್ನು ವಿಚಾರಣೆ ಮಾಡಲು ಪರಿಗಣಿಸುವುದಾಗಿ ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ.
ಇದನ್ನು ಓದಿ: ಜಮ್ಮು ಮತ್ತು ಕಾಶ್ಮೀರದ ಸ್ವರೂಪ ನಾಶ: ಮೋದಿ-ಷಾ ಜೋಡಿಯ ಆಟದ ಹುನ್ನಾರ
“ಇದು 5 ನ್ಯಾಯಾಧೀಶರ ಪೀಠದ ಮುಂದೆ ಇದೆ. ವಿವರಗಳನ್ನು ನೀಡಿ ನಾವು ಅದನ್ನು ವಿಚಾರಣೆ ಮಾಡುತ್ತೇವೆ. ನ್ಯಾಯಾಧೀಶರು ಮತ್ತು ಪೀಠದ ಸಂಯೋಜನೆಯಲ್ಲಿ ಕೆಲವು ಸಮಸ್ಯೆಗಳಿವೆ” ಎಂದು ಹೇಳಿದ್ದಾರೆ. ಸಂವಾದದವರು, ರಾಧಾ ಕುಮಾರ್, ಕಪಿಲ್ ಕಾಕ್ ಮತ್ತಿತರರ ಪರ ಹಿರಿಯ ವಕೀಲ ನಾಫಡೆ ವಾದ ಮಂಡಿಸಿದರು.
ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಆಗಸ್ಟ್ 2019 ರ ನಿರ್ಧಾರವನ್ನು ಪ್ರಶ್ನಿಸಿ 20 ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಈ ವಿಧಿಯನ್ನು ರದ್ದುಪಡಿಸುವ ಮೂಲಕ ಕೇಂದ್ರವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ. ತರುವಾಯ, ರಾಜ್ಯವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.
ಇದನ್ನು ಓದಿ: ಕಾಶ್ಮೀರದಲ್ಲಿ 370ನೇ ವಿಧಿ ರದ್ದು: ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ – ಯೂಸುಫ್ ತರಿಗಾಮಿ
ವಿಧಿ 370ರ ರದ್ದತಿಯನ್ನು ಪ್ರಶ್ನಿಸುವ ಅರ್ಜಿಗಳನ್ನು ಬೇಸಿಗೆ ರಜೆಯ ನಂತರ ಇತರ ನ್ಯಾಯಾಧೀಶರೊಂದಿಗೆ ಚರ್ಚಿಸಿ ವಿಚಾರಣೆಗೆ ಪರಿಗಣಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ. ರಜೆಯ ನಂತರ ನಾನು ನೋಡೋಣ… ಇದು ಐವರು ನ್ಯಾಯಾಧೀಶರ ಪೀಠದ ಪ್ರಕರಣ. ನಾನು ಇತರ ನ್ಯಾಯಾಧೀಶರನ್ನು ಸಹ ಕೇಳುತ್ತೇನೆ ಎಂದು ಮುಖ್ಯನ್ಯಾಯಮೂರ್ತಿ ಪಿ. ಚಿದಂಬರಂ, ಕಪಿಲ್ ಸಿಬಲ್ ಮತ್ತು ಶೇಖರ್ ನಾಫಡೆ ಸೇರಿದಂತೆ ಹಿರಿಯ ವಕೀಲರ ಗುಂಪನ್ನು ಉದ್ದೇಶಿಸಿ ಹೇಳಿದರು.
ಮಾರ್ಚ್ 2020 ರಲ್ಲಿ, ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು 370 ನೇ ವಿಧಿಯನ್ನು ಪ್ರಶ್ನಿಸುವ ಅರ್ಜಿಗಳನ್ನು ಏಳು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹೇಳಿತ್ತು.
ಬೇಸಿಗೆ ರಜೆಗಳು ಮೇ 23ರಿಂದ ಪ್ರಾರಂಭವಾಗುತ್ತವೆ ಮತ್ತು ಜುಲೈ 11 ರಂದು ನ್ಯಾಯಾಲಯವು ಪುನರಾರಂಭವಾಗುತ್ತದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಆಗಸ್ಟ್ 26 ರಂದು ನಿವೃತ್ತರಾಗಲಿದ್ದಾರೆ.