ನವ ದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಬೃಹತ್ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಹೊಸದಾಗಿ ಕೇಳಿಬರುತ್ತಿರುವ ಆರೋಪ ಬಗ್ಗೆ ತನಿಖೆ ಮಾಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದೆ.
ಫ್ರಾನ್ಸ್ ದೇಶದ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಕಂಪನಿಯು, 36 ರಫೇಲ್ ವಿಮಾನಗಳಿಗಾಗಿ ಭಾರತವು ಸಹಿ ಹಾಕಿದ ಬೆನ್ನಲ್ಲೇ ಭಾರತದ ಮಧ್ಯವರ್ತಿಯೊಬ್ಬರಿಗೆ 1.1 ಮಿಲಿಯನ್ ಯೂರೋ ಪಾವತಿಸಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಫ್ರಾನ್ಸ್ನ ಮೀಡಿಯಾಪಾರ್ಟ್ ಡಿಜಿಟಲ್ ಸುದ್ದಿ ಸಂಸ್ಥೆ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಕುರಿತು ಸ್ವತಂತ್ರ ತನಿಖೆಯಾಗಬೇಕಿದೆ ಎಂದು ಎಂ ಎಲ್ ಶರ್ಮ ಎಂಬ ವಕೀಲರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ: ರಫೇಲ್ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ
ಭಾರತವು 2016ರಲ್ಲಿ 59,000 ಕೋಟಿಯಷ್ಟು ಸರ್ಕಾರಿ ಒಪ್ಪಂದದಲ್ಲಿ ಫ್ರಾನ್ಸ್ನಿಂದ 36 ಫೈಟರ್ ಜೆಟ್ಗಳನ್ನು ಖರೀದಿಸಿತು. ನಾಲ್ಕನೇ ಬ್ಯಾಚ್ ರಫೇಲ್ ಜೆಟ್ಗಳು ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಬಂದವು. ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಕೇಂದ್ರ ಸರ್ಕಾರವು ಸಾವಿರಾರು ಕೋಟಿ ಭ್ರಷ್ಟಾಚಾರಕ್ಕೆ ಗುರಿಯಾಗಿದೆ ಎಂದು ವಿರೋಧ ಪಕ್ಷಗಳು ಹಲವು ವರ್ಷಗಳಿಂದ ಟೀಕಿಸುತ್ತಿದೆ. ನಂತರದಲ್ಲಿ ರಫೇಲ್ ಯುದ್ಧ ವಿಮಾನದ ಕಡತಗಳೇ ಕಾಣೆಯಾಗಿದ್ದು ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು.
ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ತಿಳಿಸಿದ್ದಾರೆ.
ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ವಿ.ವಿ.ಐ.ಪಿ ಹೆಲಿಕ್ಯಾಪ್ಟರ್ಗಳ ಒಪ್ಪಂದದಲ್ಲಿ ಭಾರತದಲ್ಲಿ ಕಿಕ್ಬ್ಯಾಕ್ ಪಡೆದ ಆರೋಪದ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಸುಶೇನ್ ಗುಪ್ತಾ ನಡೆಸುತ್ತಿರುವ ಭಾರತೀಯ ಕಂಪನಿ ಡೆಫ್ಸಿಸ್ ಸೊಲ್ಯೂಷನ್ಸ್ನಿಂದ ಹಣಕ್ಕೆ ರಶೀದಿ ನೀಡಲಾಗಿದೆ. ಸುಶೇನ್ ಗುಪ್ತಾ ಈಗಾಗಲೇ ಆರೋಪಿಯಾಗಿದ್ದು ಒಮ್ಮೆ ಬಂಧನಕ್ಕೀಡಾಗಿ ಪ್ರಸ್ತುತ ಜಾಮೀನಿನ ಮೇಲಿದ್ದಾರೆ.