ನವದೆಹಲಿ: “ನೀವು ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದೀರಿ. ಆದರೆ ನಿಮಗೆ ತಳಮಟ್ಟದ ವಾಸ್ತವತೆಗಳು ತಿಳಿದಿಲ್ಲ. ಜಾರ್ಖಂಡ್‍ನ ಒಬ್ಬ ಬಡ ಕಾರ್ಮಿಕ ಕೋವಿಡ್ ಲಸಿಕೆ ಪಡೆಯಲು ನೋಂದಣಿಗಾಗಿ ಯಾವುದಾದರೂ ಕಾಮನ್ ಸೆಂಟರ್ ಗೆ ಹೋಗಬೇಕೇ?” ಎಂದು ಸರ್ವಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ಅವರು ಇಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೋವಿಡ್ ಲಸಿಕೆ ಖರೀದಿ ನೀತಿ ಮತ್ತು ನೈಜ ‘ಡಿಜಿಟಲ್ ಇಂಡಿಯಾ’ ಪರಿಸ್ಥಿತಿಯನ್ನು ಅರಿತುಕೊಳ್ಳದ ಜನ ಕೋವಿನ್ ಅಪ್ಲಿಕೇಶನ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ನಿಯಮಗಳ ಬಗ್ಗೆ ಸರ್ವೋಚ್ಛ ನ್ಯಾಯಾಲಯವ ಸೋಮವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಇದನ್ನು ಓದಿ: ಭಾರತವನ್ನು ಅಭಿವೃದ್ಧಿಶೀಲ ಪಟ್ಟಿಯಿಂದ ಹೊರಬೀಳುವಂತೆ ಮಾಡಿದ್ದು ಮೋದಿ ಸಾಧನೆ
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ಎನ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ವಿಶೇಷ ನ್ಯಾಪೀಠವು ಲಸಿಕೆ ಹಾಕಿಸಿಕೊಳ್ಳಲು ಕೋವಿನ್ ಆಪ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರದ ಆದೇಶದಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಡಿಜಿಟಲ್ ಇಂಡಿಯಾ ದೇಶದಲ್ಲಿ ಯಾವ ರೀತಿ ಇದೆ, ಹಳ್ಳಿಗಳಿಗೆ ತಲುಪಿದೆಯೇ, ಜನರಿಗೆ ಬಳಸಲು ಸುಲಭವಾಗುತ್ತಿದೆಯೇ ಈ ಬಗ್ಗೆ ಸರ್ಕಾರ ಆಲೋಚಿಸಿದೆಯೇ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಪೀಠವು ಪ್ರಶ್ನೆ ಮಾಡಿದೆ.
ಡಿಜಿಟಲ್ ಇಂಡಿಯಾ ಎಂದು ಹೇಳುವ ನೀವು ಕೊರೋನಾ ಸೋಂಕು ಇಳಿಮುಖವಾಗುತ್ತಿದೆ, ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ನೀವು ಹೇಳುತ್ತೀರಿ, ಆದರೆ ಕಣ್ಣು-ಕಿವಿ ತೆರೆದಿಟ್ಟು ನೋಡಿ ಗ್ರಾಮಾಂತರ ಪ್ರದೇಶಗಳ ಸ್ಥಿತಿ ಮಾತ್ರ ಭಿನ್ನವಾಗಿದೆ. ಜಾರ್ಖಂಡ್ ನ ಒಬ್ಬ ಅನಕ್ಷರಸ್ಥ ರಾಜಸ್ತಾನದಲ್ಲಿ ಕೋವಿನ್ ಆಪ್ ನಲ್ಲಿ ಹೇಗೆ ದಾಖಲಾತಿ ಮಾಡಿಕೊಳ್ಳುತ್ತಾನೆ? ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವ ವಲಸಿಗ ಕಾರ್ಮಿಕರು ಏನು ಮಾಡಬೇಕು? ಡಿಜಿಟಲ್ ಇಂಡಿಯಾದ ಸಮಸ್ಯೆಗಳನ್ನು ನೀವು ಹೇಗೆ ಬಗೆಹರಿಸುತ್ತೀರಿ ಹೇಳಬೇಕೆಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಪೀಠ ತುಷಾರ್ ಮೆಹ್ತಾ ಅವರನ್ನು ಪ್ರಶ್ನೆ ಮಾಡಿತು.
ಇದನ್ನು ಓದಿ: ಕುಸಿದ ಲಸಿಕೆ ಅಭಿಯಾನ – ಲಸಿಕೆ ಕೊರತೆ ಇನ್ನಷ್ಟು ಹೆಚ್ಚಳ ಸಾಧ್ಯತೆ
ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಂಡು ದಿನಕ್ಕೊಂದು ನೀತಿ-ನಿರೂಪಣೆ ಬದಲಿಸುವ ನೀವು 15-20 ದಿನಗಳ ಹಿಂದೆಯೇ ಮಾಡಬೇಕಾಗಿತ್ತು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್, ಕೋವಿಡ್ ಲಸಿಕೆಗೆ ದಾಖಲಾತಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. 2ನೇ ಡೋಸ್ ಯಾರ‍್ಯಾರು ಪಡೆದಿದ್ದಾರೆ, ಯಾರು ಪಡೆಯಲು ಬಾಕಿ ಇದ್ದಾರೆ ಎಂದು ನಿಖರವಾಗಿ ತಿಳಿಯಲಿದೆ. ಗ್ರಾಮಾಂತರದಲ್ಲಿಯೂ ಲಸಿಕೆಗೆ ದಾಖಲಾತಿ ಮಾಡಿಕೊಳ್ಳಲು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು ಈ ಬಗ್ಗೆ ಕೇಂದ್ರ ಸರಕಾರವು ತನ್ನ ಅಫಿಡವಿಟ್‍ನಲ್ಲಿ ಹೇಳಿತ್ತು.
ಅದಕ್ಕೆ ನ್ಯಾಯಾಪೀಠ ಈ ಪ್ರಕ್ರಿಯೆಯು ಕಾರ್ಯಸಾಧ್ಯವೆಂದು ಸರ್ಕಾರ ಭಾವಿಸುತ್ತದೆಯೇ ಎಂದು ಕೇಳಿ ನೀತಿ ದಾಖಲೆಯನ್ನು ಇರಿಸುವಂತೆ ಹೇಳಿತು.
ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡ ನ್ಯಾಯಾಲಯವು ಇಂದು ವಿಚಾರಣೆ ನಡೆಸಿತು. ರಾಜ್ಯ ಸರ್ಕಾರಗಳು ಅಥವಾ ನಗರ ಪಾಲಿಕೆಗಳು ಲಸಿಕೆಗಳನ್ನು ಖರೀದಿಸಬಹುದೇ ಅಥವಾ ನೋಡಲ್ ಏಜೆನ್ಸಿ ಮೂಲಕ ಕೇಂದ್ರ ಸರ್ಕಾರ ಲಸಿಕೆ ಸಂಗ್ರಹಿಸುತ್ತದೆಯೇ, ಈ ಬಗ್ಗೆ ನ್ಯಾಯಾಲಯಕ್ಕೆ ಸರ್ಕಾರದಿಂದ ಸ್ಪಷ್ಟತೆ ಸಿಗಬೇಕಿದೆ ಎಂದು ವಿಶೇಷ ಪೀಠ ಹೇಳಿದೆ.
ಇದೇ ಸಂದರ್ಭದಲ್ಲಿ, ದೇಶದ ಎಲ್ಲಾ ಅರ್ಹ ಜನರಿಗೆ 2021ನೇ ವರ್ಷದ ಕೊನೆಯ ಹೊತ್ತಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೆ ಫೈಜರ್ ನಂತಹ ಕಂಪೆನಿಗಳ ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದ್ದು ಎಲ್ಲಾ ಯಶಸ್ವಿಯಾದರೆ ಅದಕ್ಕೆ ಮೊದಲೇ ಎಲ್ಲರಿಗೂ ಲಸಿಕೆ ದೊರಕಲಿದೆ ಎಂದು ತುಷಾರ್ ಮೆಹ್ತಾ ಹೇಳಿದರು.