(ಕೃಪೆ ಯು.ಎನ್.ಐ. ನ್ಯೂಸ್)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪಿಯ ವಿರುದ್ದ ಸಂಘಟಿತ ಅಪರಾಧ ಪ್ರಕರಣವನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಗೌರಿ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.
ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (ಕೋಕಾ) ೨೦೦೦ರ ಅಡಿ ಆರೋಪಿ ಮೋಹನ್ ನಾಯಕ್ ವಿರುದ್ಧ ದಾಖಲಿಸಿದ್ದ ಆರೋಪಗಳನ್ನು ಕೈಬಿಟ್ಟಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲ ಹುಝೇಫಾ ಅಹ್ಮದಿ ಹಾಗೂ ಆರೋಪಿ ಪರ ವಕೀಲ ಬಸವಪ್ರಭು ಪಾಟೀಲ ಅವರ ವಾದವನ್ನು ಪೀಠ ಆಲಿಸಿತು.
ಕೋಕಾ ಕಾಯಿದೆಯ ಸೆಕ್ಷನ್ 24ರಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗಿಂತ ಕೆಳಗಿನ ದರ್ಜೆಯಲ್ಲಿಲ್ಲದ ಅಧಿಕಾರಿಗಳಿಂದ ಹಿಂದೆ ಅನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ವಿಶೇಷ ನ್ಯಾಯಾಲಯವು ಅಪರಾಧದವನ್ನು ಪರಿಗಣಿಸಬಾರದು ಎಂದು ಹೇಳಲಾಗಿದೆ. ಇಲ್ಲಿ ಕಾಯಿದೆಯ ಸೆಕ್ಷನ್ 24 ಅನ್ನು ಪರಿಗಣಿಸದೇ ಹೈಕೋರ್ಟ್ ಲೋಪ ಎಸಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಒಪ್ಪಿಗೆಗೂ ಮುನ್ನ ಅದರ ಲಾಭವನ್ನು ಆರೋಪಿ ಮೋಹನ್ ನಾಯಕ್ಗೆ ನೀಡಬಹುದಾಗಿತ್ತು. ಆದರೆ, ಆರೋಪಿಯ ವಿರುದ್ಧದ ಆರೋಪಪಟ್ಟಿಯನ್ನು ವಜಾ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಪೀಠ ಹೇಳಿದೆ.
“ಸಾಕ್ಷ್ಯದ ಕೊರತೆ ಎಂದು ನೀವು ವಾದಿಸಬಹುದು. ಆದರೆ, ಹೈಕೋರ್ಟ್ ಆರೋಪಪಟ್ಟಿಯನ್ನೇ ವಜಾ ಮಾಡಿದೆ. ಇದು ಸರಿಯಲ್ಲ ಮತ್ತು ವ್ಯಾಪ್ತಿ ಮೀರಿದ್ದಾಗಿದೆ. ಈ ರೀತಿ ಆರೋಪಪಟ್ಟಿಯನ್ನು ವಜಾ ಮಾಡಲಾಗದು. ಆರೋಪಪಟ್ಟಿಯ ವಿಶ್ಲೇಷಣೆಯನ್ನು ಹೈಕೋರ್ಟ್ ನಡೆಸಿಲ್ಲ. ಹೀಗಿರುವಾಗ ಹೈಕೋರ್ಟ್ ಆರೋಪಪಟ್ಟಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿಲ್ಲ ಎಂದು ಹೇಳಬೇಕಾಗುತ್ತದೆ” ಎಂದು ಪೀಠ ಹೇಳಿದೆ.
ಹೈಕೋರ್ಟ್ ಪತ್ತೆ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದರೂ ಆರೋಪಿಯು ಅಪರಾಧ ಕೂಟದ ಸದಸ್ಯನೇ ಎಂಬುದನ್ನು ಪತ್ತೆಹಚ್ಚುವುದಕ್ಕೆ ಯಾರೂ ತನಿಖಾ ಸಂಸ್ಥೆಗೆ ತಡೆಯೊಡ್ಡುವುದಿಲ್ಲ. ನಿಮಗೆ ಮಾಹಿತಿ ಲಭ್ಯವಾದರೆ ಆರೋಪಿಯ ವಿರುದ್ಧದ ಪ್ರಕ್ರಿಯೆಯನ್ನು ಮುಂದುವರಿಸಬಹುದು” ಎಂದು ನ್ಯಾಯಾಲಯ ಹೇಳಿದೆ.
“ಗ್ಯಾಂಗ್ ಒಂದರಲ್ಲಿ 20 ಮಂದಿ ಇದ್ದರು ಎಂದಿಟ್ಟುಕೊಳ್ಳಿ. ನಾಲ್ವರು ಯೋಜನೆ ರೂಪಿಸಿದ್ದು, ಉಳಿದವರು ದಾಳಿಯ ಮುಂಚೂಣಿಯಲ್ಲಿದ್ದರು ಎಂದುಕೊಳ್ಳೋಣ. ಯೋಜನೆ ರೂಪಿಸಿದವರು ಮುಂದೆ ಬಂದಿರಲಿಲ್ಲ ಎಂದು ಪಿತೂರಿದಾರರು, ಕುಮ್ಮಕ್ಕು ನೀಡಿದವರ ವಿರುದ್ದ ಕಾನೂನು ಕ್ರಮಕೈಗೊಳ್ಳದೇ ಇರಲಾಗುತ್ತದೆಯೇ? ಅವರು ಆಗಲೂ ಗ್ಯಾಂಗ್‌ನ ಸದಸ್ಯರಾಗಿರುತ್ತಾರೆ” ಎಂದು ಪೀಠವು ವಿವರಿಸಿದೆ. ಮೇಲ್ಮನವಿಯ ತೀರ್ಪು ಕಾಯ್ದಿರಿಸುವುದಕ್ಕೂ ಮುನ್ನ ಪೀಠವು ಉಭಯ ಪಕ್ಷಕಾರರ ಪರ ವಕೀಲರಿಗೆ ಲಖಿತ ವಾದ ಸಲ್ಲಿಸುವಂತೆ ಆದೇಶಿಸಿತು.
ಕೋಕಾ ಕಾಯಿದೆ ಅಡಿ ಆರೋಪಗಳನ್ನು ಹೈಕೋರ್ಟ್ ವಜಾ ಮಾಡಿದ ನಂತರ ಆರೋಪಿ ಮೋಹನ್ ನಾಯಕ್ ಅವರು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
2018ರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಆದೇಶವನ್ನು ಮತ್ತು ಆ ಬಳಿಕ ಸಲ್ಲಿಸಿದ ಪೂರಕ ಆರೋಪಪಟ್ಟಿಯನ್ನು 2021ರ ಏಪ್ರಿಲ್ 22ರಂದು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಮೋಹನ್ ನಾಯಕ್ ವಿರುದ್ಧ 2000ರ ಕೋಕಾ ಕಾಯಿದೆಯ ಸೆಕ್ಷನ್ 3 (1) (ಐ), 3 (2), 3 (3) ಮತ್ತು 3 (4) ರ ಅಡಿಯಲ್ಲಿ ಅಪರಾಧಗಳನ್ನು ಕೈಬಿಡಲಾಗಿದೆ. ಕೃತ್ಯ ಎಸಗುವ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವಲ್ಲಿ ನಾಯಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ.