ಅತ್ಯಾಚಾರಿಗಳ ಬಿಡುಗಡೆ: ಬಿಲ್ಕಿಸ್‌ ಬಾನೊ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಗುಜರಾತ್‌ ರಾಜ್ಯದಲ್ಲಿ 2002ರಲ್ಲಿ ಸಂಭವಿಸಿದ ಕೋಮು ಹಿಂಸಾಚಾರದ ವೇಳೆ, ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ ಅಪರಾಧಿಗಳನ್ನು ಗುಜರಾತ್ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್‌ ಬಾನೊ ಸಲ್ಲಿಸಿದ್ದ ಮರುಪರಿಶೀಲಾನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ತನ್ನ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳ ಕ್ಷಮಾಪಣೆಯನ್ನು ಶಿಕ್ಷೆಯ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ನೀತಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಮೇ 13ರ ತೀರ್ಪನ್ನು ಪ್ರಶ್ನಿಸಿ ಗುಜರಾತ್ ಗಲಭೆಯಲ್ಲಿ ಸಂತ್ರಸ್ತ ಮಹಿಳೆ ಬಿಲ್ಕಿಸ್ ಬಾನೊ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಸದ್ಯ ಮಾರ್ಪಾಡು ಮಾಡಲಾಗಿರುವ ನೀತಿಯು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಶಿಕ್ಷೆ ಅವಧಿಗಿಂತ ಮುಂಚಿತವಾಗಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹೇಳುತ್ತದೆ. ಆದರೆ, 1992ರ ನೀತಿಯು ಬಿಡುಗೊಂಡಿರುವ ಅಪರಾಧಿಗಳಿಗೆ ಅನ್ವಯಿಸುತ್ತದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಆ ಹಿನ್ನೆಲೆಯಲ್ಲಿ ಬಿಲ್ಕಿಸ್‌ ಬಾನೊ ಅರ್ಜಿಗಳನ್ನು ವಜಾಗೊಳಿಸಿದೆ.

ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ನೇತೃತ್ವದ ನ್ಯಾಯಪೀಠ, 2002ರ ಗುಜರಾತ್‌ ಗಲಭೆಯ ನಂತರ ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅದರೊಂದಿಗೆ ಗುಜರಾತ್‌ನ ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಗುಂಪೊಂದು ಹತ್ಯೆ ಮಾಡಿದ ಹನ್ನೆರಡು ಜನರಲ್ಲಿ ಆಕೆಯ ಮೂರು ವರ್ಷದ ಮಗಳು ಕೂಡ ಸೇರಿದ್ದಳು. ಮೇ 13 ರಂದು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಬಿಲ್ಕಿಸ್‌ ಬಾನೊ ಅವರ ಮನವಿಯಲ್ಲಿ, ಪ್ರಕರಣದ ವಿಚಾರಣೆಯು ಮಹಾರಾಷ್ಟ್ರದಲ್ಲಿ ನಡೆದಿರುವುದರಿಂದ ಗುಜರಾತ್‌ನ 1992ರ ನೀತಿಯ ಬದಲಿಗೆ ಪ್ರಸ್ತುತ ಪ್ರಕರಣದಲ್ಲಿ ಮಹಾರಾಷ್ಟ್ರದ ನೀತಿಯನ್ನು ಅನ್ವಯಿಸಬೇಕು ಎಂದು ಹೇಳಲಾಗಿತ್ತು.

ಮೇ 13 ರಂದು ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಅಪರಾಧಿಗಳ ಕ್ಷಮೆಯನ್ನು ಅಪರಾಧವು ನಿಜವಾಗಿ ಎಸಗಿರುವ ರಾಜ್ಯದಲ್ಲಿ ಶಿಕ್ಷೆಯ ಸಮಯದಲ್ಲಿ ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ ಪರಿಗಣಿಸಬೇಕು ಎಂದು ತೀರ್ಪು ನೀಡಿತ್ತು. ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಭಗವಾಂದಾಸ್ ಷಾ 1992ರ ಜುಲೈ 9ರ ನೀತಿಯ ಅಡಿಯಲ್ಲಿ ಅವಧಿಪೂರ್ವ ಬಿಡುಗಡೆಗಾಗಿ ತನ್ನ ಅರ್ಜಿಯನ್ನು ಪರಿಗಣಿಸಲು ಗುಜರಾತ್ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್‌ನ ತೀರ್ಪು ಬಂದಿತ್ತು.

2022ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ಬಳಿಕ ಗುಜರಾತ್‌ನಲ್ಲಿ ವ್ಯಾಪಕ ಕೋಮುಗಲಭೆ ನಡೆದಿತ್ತು. ಆಗ ಸಂಭವಿಸಿದ ಗಲಭೆಯಲ್ಲಿ ಗಲಭೆಕೋರರ ಗುಂಪು ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬದ ಏಳು ಸದಸ್ಯರು ಒಳಗೊಂಡು ಹನ್ನೆರಡು ಜನರನ್ನು ಹತ್ಯೆಗೈದಿತ್ತು. ಇದರಲ್ಲಿ ಬಾನೋ ಅವರ ಮೂರು ವರ್ಷದ ಮಗಳು ಕೂಡ ಸೇರಿದ್ದಳು. ಗಲಭೆಯಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳ ಶಿಕ್ಷೆಯನ್ನು ಕಡಿತಗೊಳಿಸಿ ಗುಜರಾತ್‌ ಸರ್ಕಾರ ಆಗಸ್ಟ್‌ 15ರಂದು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿತು.

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳು ಜೈಲಿನಿಂದ ಹೊರ ಬಂದಿದ್ದಾರೆ. ಅವರನ್ನು ಬಿಡುಗಡೆ ಮಾಡಿದ ಬಗ್ಗೆ ಗುಜರಾತ್‌ ಬಿಜೆಪಿ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಕೇಂದ್ರ ಗೃಹ ಇಲಾಖೆಯ ಅನುಮೋದನೆಯೊಂದಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಗುಜರಾತ್‌ ಸರ್ಕಾರ ಹೇಳಿಕೊಂಡಿತ್ತು.

ಗುಜರಾತ್ ಬಿಜೆಪಿ ಸರ್ಕಾರ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧ್ಯೇಶಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೊಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಅವರನ್ನು ಬಿಡುಗಡೆ ಮಾಡಿತ್ತು. ಜೈಲಿನಿಂದ ಹೊರಬಂದವರಿಗೆ ಭವ್ಯ ಸ್ವಾಗತ ನೀಡಿದ್ದು ಅದಕ್ಕೆ ಕೂಡ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

Donate Janashakthi Media

Leave a Reply

Your email address will not be published. Required fields are marked *