ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ; ಹಿಜಾಬ್ ಧರಿಸಿಕೊಂಡು ಹೋಗುವ ಅಗತ್ಯವೇನಿದೆ: ಸುಪ್ರೀಂ ಕೋರ್ಟ್

ನವದೆಹಲಿ: ಒಬ್ಬ ವ್ಯಕ್ತಿಗೆ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವ, ಆಚರಿಸುವ ಹಕ್ಕು ಇದೆ. ಆದರೆ ಸಮವಸ್ತ್ರ ಧರಿಸುವ ಶಾಲೆಯವರೆಗೆ ಅದನ್ನು ತೆಗೆದುಕೊಂಡು ಹೋಗುವ ಔಚಿತ್ಯವೇನಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, “ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗೆ ಬೇಕಾದುದನ್ನು ಬಟ್ಟೆಯನ್ನು ಧರಿಸಬಹುದೇ ಮತ್ತು ಧಾರ್ಮಿಕ ಆಚರಣೆಗಳನ್ನು ಬದಿಗಿಡಬೇಕಲ್ಲವೇ?” ಎಂದು ಕೇಳಿದೆ.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ನಿಯಮ ಸರಿಯಿದೆ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ನ್ಯಾಯಪೀಠ ಮೇಲಿನಂತೆ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಹೆಗ್ಡೆ, ಏಕರೂಪ ಸಂಹಿತೆ ಪಾಲನೆ ಮಾಡದ ಕಾರಣ ಕಾಲೇಜಿನಿಂದ ಹೊರಗಿಡಬಹುದೇ? ಇದು ಸರಿಯೇ? ಎಂದು ವಾದಿಸಿದರು. ನ್ಯಾಯಮೂರ್ತಿ ಗುಪ್ತಾ ಅವರು ಉನ್ನತ ನ್ಯಾಯಾಲಯದಲ್ಲಿ ಮಹಿಳಾ ವಕೀಲೆಯೊಬ್ಬರು ಜೀನ್ಸ್ ಧರಿಸಿ ಕಾಣಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡರು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ರಾಜೀವ್ ದವನ್, ಹಿಜಬ್ ನಿಷೇಧದಿಂದಾಗಿ ಲಕ್ಷಾಂತರ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಿದೆ. ಅವರ ಶಿಕ್ಷಣದ ಹಕ್ಕು ಕಸಿದುಕೊಂಡಂತಾಗಿದೆ. ಹಿಜಬ್ ಗೆ ಸಂಬಂಧಿಸಿ ಕೇರಳ ಮತ್ತು ಕರ್ನಾಟಕ ವಿಭಿನ್ನ ತೀರ್ಪುಗಳನ್ನು ನೀಡಿವೆ, ಒಂದು ಪರವಾಗಿದ್ದರೆ ಮತ್ತೊಂದು ವಿರುದ್ಧವಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ತೆಗೆದುಕೊಳ್ಳಲಿರುವ ನಿಲುವು ಅತ್ಯಂತ ಮಹತ್ವದ್ದೆನಿಸಿಕೊಳ್ಳಲಿದೆ ಎಂದರು.

ರಾಜ್ಯವು ಶಾಲಾ-ಕಾಲೇಜುಗಳಿಗೆ ನಿಯಮಗಳನ್ನು ರೂಪಿಸುವ ವಿಷಯಗಳಲ್ಲಿ ವಸ್ತ್ರ ಸಂಹಿತೆ ಇಲ್ಲ ಎಂಬ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ವಾದಕ್ಕೆ ನ್ಯಾಯಮೂರ್ತಿಪೀಠ, ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದರೆ ವಿದ್ಯಾರ್ಥಿಗಳು ಮಿಡಿ-ಮಿನಿಸ್ಕರ್ಟ್‌ಗಳಲ್ಲಿ ಬರಬಹುದೇ ಎಂದು ಕೇಳಿತು. ಸಮವಸ್ತ್ರ ಮೂಲಭೂತ ಹಕ್ಕುಗಳ ಉಲ್ಲಂಘನೆ ಹೇಗಾಗುತ್ತೆ, ಶಿಕ್ಷಣದ ಹಕ್ಕು ಕಸಿದಂತೆ ಹೇಗಾಗುತ್ತದೆ? ಹೀಗೆ ಹಲವು ಪ್ರಶ್ನೆಗಳನ್ನು ಎತ್ತಿದರು.

ವಕೀಲ ಸಂಜಯ್ ಹೆಗಡೆ, ಹಿಜಬ್ ವಿಚಾರವಾಗಿ ಏಕಪಕ್ಷೀಯ ನಿರ್ಧಾರ ಮಾಡಲಾಗಿದೆ, ಶಾಲೆಯ ಸಮಿತಿಯಲ್ಲಿ ಸ್ಥಳೀಯ ಶಾಸಕರೇ ಅಧ್ಯಕ್ಷರು, ಅವರು ಹಿಜಬ್ ವಿರುದ್ಧವಾಗಿದ್ದಾರೆ. ಇಂತಹ ಶಾಸಕ ಅಧ್ಯಕ್ಷರಿಂದ ಪಾರದರ್ಶಕತೆ ಹೇಗೆ ಸಾಧ್ಯ.? ಹಿಜಬ್ ವಿರುದ್ಧ ಅಭಿಯಾನ ಆರಂಭದಲ್ಲಿ ವಿದ್ಯಾರ್ಥಿನೀಯರ ಬಳಿ ಒತ್ತಾಯವಾಗಿ ಹಿಜಬ್ ಧರಿಸಿ ಬರುವುದಿಲ್ಲ ಎಂದು ಸಹಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆಯೂ ವಿದ್ಯಾರ್ಥಿನೀಯರು ಹಿಜಬ್ ಧರಿಸುತ್ತಿದ್ದರು, ಅದಕ್ಕೆ ಬಹಳಷ್ಟು ದಾಖಲೆಗಳು, ಪುರಾವೆ ಇವೆ. ಆದರೆ ಏಕಾಏಕಿ ಹಿಜಬ್ ಧರಿಸದಂತೆ ಶಿಕ್ಷಕಿ ಸೂಚನೆ ನೀಡುತ್ತಾರೆ. ತರಗತಿಯಿಂದ ವಿದ್ಯಾರ್ಥಿನಿಯನ್ನು ಹೊರಕಳುಹಿಸಲಾಗುತ್ತೆ, ಶೋಷಣೆ ಮಾಡಲಾಗುತ್ತೆ, ಹೊರಗೆ ನಿಲ್ಲಿಸಿ ಗೇಲಿ ಮಾಡಲಾಗುತ್ತೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತು ಮಾತ್ರ ಸಮಸ್ಯೆಯಾಗಿದೆ, ಮುಸ್ಲಿಂ ವಿದ್ಯಾರ್ಥಿನೀಯರು ಶಿಸ್ತು ಅನುಸರಿಸಲು ಬಯಸುವುದಿಲ್ಲ ಎಂದರು. ಈ ವಾದ ಒಪ್ಪದ ನ್ಯಾಯಮೂರ್ತಿ ಹೇಮಂತ್ ಗುಪ್ತಾ, ಹಿಜಬ್ ಸಂಸ್ಥೆಯ ಶಿಸ್ತನ್ನು ಹೇಗೆ ಉಲ್ಲಂಘಿಸುತ್ತಿದೆ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಟರಾಜ್, ಧಾರ್ಮಿಕ ಹಕ್ಕುಗಳ ಧಮನದ ಹೆಸರಿನಲ್ಲಿ ಶಾಲಾ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವಂತಿಲ್ಲ ಎಂದರು.

ಕಡೆಯದಾಗಿ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಪಿ. ನಾವಡಗಿ, ನಾವು ಸಮವಸ್ತ್ರ ನಿರ್ಧರಿಸುವ ಅಧಿಕಾರ ಶಾಲಾ ಆಡಳಿತ ಮಂಡಳಿಗೆ ನೀಡಿದ್ದೇವೆ, ಕೆಲವು ಶಾಲೆಗಳು ಹಿಜಬ್ ಧರಿಸಲು ಅವಕಾಶ ನೀಡಿವೆ, ನಾವು ಅದನ್ನು ವಿರೋಧಿಸುವುದಿಲ್ಲ ಎಂದರು. ವಿಚಾರಣೆ ಬಳಿಕ ಪ್ರಕರಣದ ವಿಚಾರಣೆಯನ್ನು ಸೆಪ್ಟಂಬರ್‌ 07ರ ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು. ಇನ್ನು ಬುಧವಾರ ನಡೆಯಲಿರುವ ವಿಚಾರಣೆ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ.

Donate Janashakthi Media

Leave a Reply

Your email address will not be published. Required fields are marked *