ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ತರಾಟೆ

ನವದೆಹಲಿ: ಕೋವಿಡ್-19ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲು ವಿಫಲವಾದ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಕಾರಣ ಕೇಳಿ ನೋಟೀಸ್ಸು ನೀಡಿದೆ.

ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠವು ಕೋವಿಡ್‌ಗೆ ಬಲಿಯಾದವರ ಸಂಬಂಧಿಕರಿಗೆ ಪರಿಹಾರ ಪಾವತಿಸದಿರುವ ಸಂಬಂಧ ಆಂಧ್ರ ಪ್ರದೇಶ ಮತ್ತು ಬಿಹಾರದ ಮುಖ್ಯ ಕಾರ್ಯದರ್ಶಿಗಳು ವಿಚಾರಣಗೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್‌ ಸೂಚಿಸಿದೆ.

ರಾಜ್ಯಗಳಲ್ಲಿ ಕೋವಿಡ್-19ರ ಸಂತ್ರಸ್ತ ಕುಟುಂಬಗಳಿಗೆ 50,000 ರೂ.ಗಳ ತಾತ್ಕಾಲಿಕ ಪರಿಹಾರ ಧನವನ್ನು ನೀಡದೆ ಕಡಿಮೆ ಮೊತ್ತ ವಿತರಿಸಿರುವುದೇಕೆ ಎಂಬುದನ್ನು ವಿವರಿಸಬೇಕು. ಇದಕ್ಕಾಗಿ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಇಂದು ಮಧ್ಯಾಹ್ನ 2 ಗಂಟೆಗೆ ತನ್ನ ಮುಂದೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಕೋವಿಡ್‌ ರೋಗ ಮತ್ತು ಕೋವಿಡ್‌ ಸಂಕಷ್ಟಗಳಿಗೆ ಬಲಿಯಾದ ಕುಟುಂಬದ ಸದಸ್ಯರಿಗೆ ₹ 4 ಲಕ್ಷ ಪರಿಹಾರ ಒದಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ಜಾರಿ ಮಾಡಿದೆ.

ನ್ಯಾಯಪೀಠವು ಇಂದು ಮಧ್ಯಾಹ್ನ 2 ಗಂಟೆಗೆ ಆದೇಶ ನೀಡುವುದಾಗಿ ಮತ್ತು ರಾಜ್ಯ ಕಾನೂನು ಸೇವಾ ಪ್ರಾಕಾರಗಳು ಕೋವಿಡ್-19 ರಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ 2001ರ ಗುಜರಾತ್ ಭೂಕಂಪದ ಸಂದರ್ಭದಲ್ಲಿ ಮಾಡಿದಂತೆ ನೋಂದಣಿ ಮತ್ತು ಪರಿಹಾರ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದೆ.

ಬಿಹಾರ ನೀಡಿರುವ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಇವೆಲ್ಲವೂ ವಾಸ್ತವಿಕ ಅಂಕಿ-ಅಂಶಗಳಲ್ಲ ಎಂದು ಹೇಳಿದೆ.

ಕೋವಿಡ್‌ಗೆ ಬಲಿಯಾದವರಿಗೆ ಪರಿಹಾರ ಧನ ಒದಗಿಸಲು ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಈ ಹಿಂದೆ ಸೂಚಿಸಿದ್ದ ನ್ಯಾಯಾಲಯ ಪರಿಹಾರದ ಮೊತ್ತ ಎಷ್ಟೆಂಬುದನ್ನು ನಿರ್ಧರಿಸುವ ವಿಚಾರ ಪ್ರಾಧಿಕಾರಕ್ಕೆ ಬಿಟ್ಟದ್ದು ಎಂದು ತಿಳಿಸಿತ್ತು. ಪ್ರಾಧಿಕಾರದ ಶಿಫಾರಸಿನಂತೆ ಕೋವಿಡ್‌ನಿಂದ ಬಲಿಯಾದ ಪ್ರತಿ ವ್ಯಕ್ತಿಗೆ ₹ 50,000 ಪರಿಹಾರ ಧನ ವಿತರಿಸಲಾಗುವುದು ಎಂಬ ಕೇಂದ್ರದ ವಾದವನ್ನು ಕಳೆದ ವರ್ಷ ಸುಪ್ರೀಂಕೋರ್ಟ್‌ ಮನ್ನಿಸಿತ್ತು.

Donate Janashakthi Media

Leave a Reply

Your email address will not be published. Required fields are marked *