ರದ್ದಾದ ಸೆಕ್ಷನ್‌ 66ಎ ಪ್ರಕರಣದಡಿ 1000 ಹೆಚ್ಚು ಮಂದಿ ಬಂಧನ: ಕೇಂದ್ರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಆನ್‌ಲೈನ್‌ನಲ್ಲಿ “ಆಕ್ರಮಣಕಾರಿ” ವಿಷಯವೆಂದು ಪೋಸ್ಟ್ ಮಾಡಿದ್ದರು ಎಂಬ ಕಾರಣವೊಡ್ಡಿ ಜನರನ್ನು ಬಂಧಿಸಲು ಪೊಲೀಸರಿಗೆ ಅವಕಾಶ ನೀಡುವ ʻಐಟಿ ಕಾಯ್ದೆಯ ಸೆಕ್ಷನ್ 66ಎʼ ಅನ್ನು 2015ರಲ್ಲೇ ರದ್ದು ಮಾಡಿದ್ದರೂ ಸಹ ಅದೇ ಕಾಯ್ದೆ ಅಡಿ 1,000 ಕ್ಕೂ ಹೆಚ್ಚು ಜನರನ್ನು ಪ್ರಕರಣದಲ್ಲಿ ಮೊಕದ್ದಮೆ ಹೂಡಿರುವುದರ ಬಗ್ಗೆ ತೀವ್ರವಾದ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಇಂದು ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸನ್ನು ನೀಡಿದೆ.

ಐಟಿ ಕಾಯ್ದೆಯ ಸೆಕ್ಷನ್ 66ಎ ಅನ್ನು ಮಾರ್ಚ್ 24, 2015 ರಂದು ನ್ಯಾಯಾಲಯವು ತನ್ನ ಮಹತ್ವದ ತೀರ್ಪಿನ್ನು ನೀಡಿತ್ತು. ಆದರೂ ಈ ಕಾನೂನನ್ನು ಬಳಸಿರುವುದನ್ನು ಸುಪ್ರೀಂ ಕೋರ್ಟ್ “ಅಸ್ಪಷ್ಟ”, “ಅಸಂವಿಧಾನಿಕ” ಮತ್ತು “ವಾಕ್‌ ಸ್ವಾತಂತ್ಯ್ರದ ಉಲ್ಲಂಘನೆ” ಎಂದು ಬಣ್ಣಿಸಿದೆ.

ಇದನ್ನು ಓದಿ: ಸುಪ್ರೀಂ ಕೋರ್ಟ್‌: ದೇಶದ್ರೋಹ ಕಾನೂನಿನ ವ್ಯಾಖ್ಯಾನ ಪರಿಶೀಲನೆಯ ಅಗತ್ಯವಿದೆ

ನ್ಯಾಯಮೂರ್ತಿಗಳಾದ ಆರ್. ನಾರಿಮನ್, ಕೆ.ಎಂ. ಜೋಸೆಫ್ ಮತ್ತು ಬಿ.ಆರ್. ಗವಾಯಿಯನ್ನು ಒಳಗೊಂಡ ತ್ರಿಸದಸ್ಯ ಪೀಠವು  “ಇದು ಆಘಾತಕಾರಿ, ನಾವು ನಿಮಗೆ ನೋಟಿಸ್ ನೀಡುತ್ತೇವೆ” ಎಂದು ಕೇಂದ್ರ ಸರಕಾರಕ್ಕೆ ತಿಳಿಸಿದೆ.

ರದ್ದಾದ ಐಟಿ ಕಾಯಿದೆಯ ಸೆಕ್ಷನ್ 66ಎ ಅಡಿ ಹೂಡಲಾದ ಮೊಕದ್ದಮೆಗಳು 2021ರ ಮಾರ್ಚ್ 10ರ ಹೊತ್ತಿಗೆ ಸುಮಾರು 745 ಪ್ರಕರಣಗಳು ಜಿಲ್ಲಾ ನ್ಯಾಯಾಲಯಗಳ ಮುಂದೆ ಬಾಕಿ ಉಳಿದಿದ್ದು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಕೇಂದ್ರಕ್ಕೆ ಸುಪ್ರೀಂ ಗಡುವು

ರದ್ದಾದ ಕಾಯ್ದೆಯಡಿ ಯಾರನ್ನೂ ಎಫ್‌ಐಆರ್‌ಗಳನ್ನು ನೋಂದಾಯಿಸುವಂತಿಲ್ಲ ಎಂದು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಎಂಬ ಎನ್‌ಜಿಒ ಸಂಘಟನೆಯೊಂದು ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಅವಧಿಯಲ್ಲಿ ಪ್ರತಿಕ್ರಿಯಿಸಬೇಕೆಂದು ಕೋರಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಂಜಯ್ ಪಾರಿಕ್‌ ಅವರು “ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮತ್ತು ಅದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರದ್ದು ಮಾಡಿದ ಕಾನೂನಿನಡಿಯಲ್ಲಿ ಎಫ್ಐಆರ್ ಮತ್ತು ಸಕ್ರಿಯ ತನಿಖೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಒತ್ತಾಯಿಸಿದರು. ಸೆಕ್ಷನ್ 66ಎ ರದ್ದುಗೊಳಿಸುವ ಮೊದಲು 11 ರಾಜ್ಯಗಳಲ್ಲಿ 229 ಪ್ರಕರಣಗಳು ದಾಖಲಾಗಿದ್ದವು. ಆದರೆ, ಸೆಕ್ಷನ್‌ 66ಎ ರದ್ದಾದ ಬಳಿಕ ದಾಖಲಾದ ಪ್ರಕರಣಗಳ ಒಟ್ಟು ಸಂಖ್ಯೆ 1,307ಕ್ಕೆ ಏರಿದೆ, ಅದರಲ್ಲಿ 570 ಇನ್ನೂ ಬಾಕಿ ಉಳಿದಿವೆʼʼ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಇದನ್ನು ಓದಿ: ರಾಷ್ಟ್ರದ್ರೋಹ ಕಾನೂನು ವಜಾಗೊಳಿಸುವ ಸುವರ್ಣಾವಕಾಶ ಕಳೆದುಕೊಂಡ ಸುಪ್ರೀಂ ಕೋರ್ಟ್‌: ನ್ಯಾ. ನಾಗಮೋಹನ್‌ ದಾಸ್‌

ಸೆಕ್ಷನ್‌ ಪಕ್ಕದಲ್ಲೇ ‘ರದ್ದು’ ಎಂದು ಉಲ್ಲೇಖ ಮಾಡಿ

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, “ಅದನ್ನು ವಿಭಾಗೀಯ ಪೀಠದಿಂದ ರದ್ದು ಮಾಡಲಾಗಿದ್ದರೂ, ಈ ಸೆಕ್ಷನ್ 66ಎ ಇನ್ನೂ ಇದೆ. ಪೊಲೀಸರು ಪ್ರಕರಣ ದಾಖಲಿಸಬೇಕಾದಾಗ ಅದು ಇನ್ನೂ ಇದೆ. ಆದರೆ ಸುಪ್ರೀಂ ಕೋರ್ಟ್ ಇದನ್ನು ರದ್ದು ಮಾಡಿದೆ ಎಂದು ಮಾತ್ರ ಉಲ್ಲೇಖ ಮಾಡಲಾಗಿದೆ. ಆ ಸೆಕ್ಷನ್‌ನ ಪಕ್ಕದಲ್ಲೇ ಬ್ರಾಕೆಟ್‌ನಲ್ಲಿ ರದ್ದು ಮಾಡಲಾಗಿದೆ ಎಂದು ಉಲ್ಲೇಖ ಮಾಡಬೇಕಾಗಿದೆ,” ಎಂದು ವಾದ ಮಂಡಿಸಿದರು.

ಸೆಕ್ಷನ್‌ ರದ್ದತಿಯ ಹಿಂದಿನ ಕಾರಣ

ಸೆಕ್ಷನ್‌ 66ಎ ಬಗ್ಗೆ ಕಾನೂನು ವಿದ್ಯಾರ್ಥಿಯಾದ ಶ್ರೇಯಾ ಸಿಂಘಾಲ್ ಎಂಬುವರು ಈ ಸೆಕ್ಷನ್‌ ಬಗ್ಗೆ ಸವಾಲು ಹಾಕಿದ್ದರು. ನಂತರ, ಶ್ರೇಯಾ ಸಿಂಘಾಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಮಾರ್ಚ್ 24, 2015 ರಂದು ಸೆಕ್ಷನ್‌ ಅನ್ನು ರದ್ದು ಮಾಡಲಾಯಿತು. ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಮರಣದ ನಂತರ ನಗರದಲ್ಲಿ ನಡೆದ ಒಟ್ಟು ಘಟನೆಯ ಬಗ್ಗೆ ಟೀಕಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಇಬ್ಬರು ಯುವತಿಯರನ್ನು 2012ರಲ್ಲಿ ಮುಂಬೈನಲ್ಲಿ ಬಂಧಿಸಲಾಗಿತ್ತು. ಇದರ ವಿಚಾರಣೆ ಪೂರ್ಣ ಗೊಳಿಸಿದ ಸರ್ವೋಚ್ಛ ನ್ಯಾಯಾಲಯವು 2015ರಲ್ಲಿ ಅಂತಿಮ ತೀರ್ಪು ನೀಡಿ ಸೆಕ್ಷನ್‌ 66ಎ ಅನ್ನು ರದ್ದು ಮಾಡಿತ್ತು.

ಸೆಕ್ಷನ್ 66ಎ “ಅಸ್ಪಷ್ಟವಾಗಿದೆ ಮತ್ತು ಪೊಲೀಸರಿಗೆ ಕಾನೂನಿನ ದುರುಪಯೋಗವನ್ನು ಮಾಡಲು ಅನುಮತಿಸುತ್ತದೆ” ಎಂಬುದು ಹೆಚ್ಚಿನ ಅರ್ಜಿದಾರರ ವಾದವಾಗಿತ್ತು. ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರ, ಅಂತರ್ಜಾಲದಲ್ಲಿ ನಿಂದನೆ ಮತ್ತು ಮಾನಹಾನಿಯನ್ನು ಎದುರಿಸಲು ಕಾನೂನು ಅಗತ್ಯ ಎಂದು ಹೇಳಿತ್ತು. ಬಿಜೆಪಿ ಸರ್ಕಾರ ಕೂಡ ನ್ಯಾಯಾಲಯದಲ್ಲಿ ಕಾನೂನನ್ನು ಸಮರ್ಥಿಸಿತ್ತು.

ಇದನ್ನು ಓದಿ: ಡಿಜಿಟಲ್ ಮಾಧ್ಯಮಗಳಿಗೆ ನಿರ್ಬಂಧ; ಸುಪ್ರೀಂಗೆ ಕೇಂದ್ರದ ಅಫಿಡವಿಟ್

ಶ್ರೇಯಾ ಸಿಂಘಾಲ್ ತೀರ್ಪಿನ ಪ್ರತಿಯನ್ನು ದೇಶದ ಪ್ರತಿ ಹೈಕೋರ್ಟ್‌ನಿಂದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ಕಳುಹಿಸಬೇಕೆಂದು ಸುಪ್ರೀಂಕೋರ್ಟ್ ಫೆಬ್ರವರಿ 15, 2019ರಲ್ಲಿ ಪ್ರಕರಣವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಸ್ಪಷ್ಟಪಡಿಸಿತ್ತು. ಅಲ್ಲದೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ತೀರ್ಪಿನ ಪ್ರತಿ ಒದಗಿಸುವಂತೆ ಕೇಂದ್ರಕ್ಕೆ ನಿರ್ದೇಶನವನ್ನು ನೀಡಿತ್ತು. ಪ್ರತಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ತೀರ್ಪಿನ ಪ್ರತಿಗಳನ್ನು ಕಳುಹಿಸುವ ಮೂಲಕ ಪೊಲೀಸ್ ಇಲಾಖೆಗಳನ್ನು ಜಾಗೃತಗೊಳಿಸುವಂತೆ ನ್ಯಾಯಾಲಯವು ಸೂಚನೆಗಳನ್ನು ನೀಡಿದ್ದವು.

Donate Janashakthi Media

Leave a Reply

Your email address will not be published. Required fields are marked *